varthabharthi

ಕರಾವಳಿ

ಮಂಗಳೂರು: ಸಿಪಿಐ ರಾಜ್ಯ ಮಂಡಳಿಯ ಎರಡನೆ ಸಭೆಯ ಬಹಿರಂಗ ಸಭೆ

ಸಂವಿಧಾನ ಮೌಲ್ಯಗಳ ರಕ್ಷಣೆಗೆ ‘ಮೋದಿ ಹಟಾವೋ... ದೇಶ್ ಬಚಾವೋ’ ಹೋರಾಟ: ಬಿನೊಯ್ ವಿಶ್ವಂ

ವಾರ್ತಾ ಭಾರತಿ : 11 Jan, 2019

ಮಂಗಳೂರು, ಜ.11: ಸಂವಿಧಾನದ ಮೌಲ್ಯಗಳ ರಕ್ಷಣೆಗೆ ‘ಮೋದಿ ಹಟಾವೋ... ದೇಶ್ ಬಚಾವೋ’ ಘೋಷಣೆಯೊಂದಿಗೆ ದೇಶಾದ್ಯಂತ ಜಾತ್ಯತೀತ ಪಕ್ಷಗಳ, ಸಂಘಟನೆಗಳ ಸಾಮೂಹಿಕ ಹೋರಾಟ ಅನಿವಾರ್ಯ ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿನೊಯ್ ವಿಶ್ವಂ ಹೇಳಿದ್ದಾರೆ.
ನಗರದ ಬಿಜೈ ಕರ್ಣಾಟಕ ಬ್ಯಾಂಕ್ ನೌಕರರ ಸಂಘದ ಸಭಾ ಭವನದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಸಿಪಿಐ ರಾಜ್ಯ ಮಂಡಳಿಯ ಎರಡನೆ ಸಭೆಯ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕಾರ್ಮಿಕ ವಿರೋಧಿ, ಫ್ಯಾಶಿಸ್ಟ್ ಧೋರಣೆಯ ಸರಕಾರ ಆಡಳಿತ ನಡೆಸುತ್ತಿದೆ. ಪರಿಣಾಮವಾಗಿ ದೇಶದ ಸಂವಿಧಾನದ ವೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ. ಪ್ರಜಾಪ್ರಭುತ್ವದ ನೆಲೆಗಟ್ಟಿಗೆ ಅಪಾಯ ಒದಗಿ ಬಂದಿದೆ. ಇಂತಹ ಸನ್ನಿವೇಶದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಿರುವ ಜಾತ್ಯತೀತ ನಿಲುವಿನ ಪಕ್ಷಗಳು ಒಂದುಗೂಡುತ್ತಿರುವುದು, ಇತ್ತೀಚೆಗೆ ನಡೆದ ಪಂಚ ರಾಜ್ಯದ ಚುನಾವಣೆಯಲ್ಲಿ ಜನತೆ ಬಿಜೆಪಿಯ ವಿರುದ್ಧ ಮತ ಚಲಾಯಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ ಪ್ರಜಾಪ್ರಭುತ್ವದ ಉಳಿವಿಗೆ ಮೋದಿ ನೇತೃತ್ವದ ಸರಕಾರವನ್ನು ಅಧಿಕಾರವನ್ನು ಕೆಳಗಿಳಿಸುವುದು ಅನಿವಾರ್ಯ ಎಂದು ಬಿನೊಯ್ ವಿಶ್ವ ಹೇಳಿದರು.

ಕೇಂದ್ರ ಸರಕಾರ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿಯನ್ನು ಘೋಷಿಸುವ ಮೂಲಕ ಮತ್ತೊಮ್ಮೆ ದೇಶದ ಜನತೆಯನ್ನು ವಂಚಿಸಲು ಹೊರಟಿದೆ. ಬಡವರ ಪರ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಮೋದಿಯವರ ಪ್ರಕಾರ ವಾರ್ಷಿಕ 8 ಲಕ್ಷ ರೂ. ವೇತನ ಅಂದರೆ ತಿಂಗಳಿಗೆ 66,600 ರೂ. ಆದಾಯ ಹೊಂದಿರುವವನು ಬಡವ. ಅಂತಹ ‘ಬಡವ’ರಿಗೆ ಶೇ.10 ಮೀಸಲಾತಿ ನೀಡಲು ಹೊರಟಿದ್ದಾರೆ. ಆದರೆ ಕಾರ್ಮಿಕರು ತಿಂಗಳಿಗೆ ಕನಿಷ್ಠ ಕೂಲಿ 18,000 ರೂ. ನೀಡಬೇಕು ಎಂದು ದೇಶಾದ್ಯಂತ ಮುಷ್ಕರ ಮಾಡಿದರೂ ಅದನ್ನು ಅವರು ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿಯವರ ಸ್ವರಾಜ್ಯದ ಕಲ್ಪನೆಯೆಂದರೆ ದೇಶದ ಎಲ್ಲಾ ಜನರಿಗೂ ಆಹಾರ, ವಸತಿ, ಶಿಕ್ಷಣ ಎಂದಿದ್ದರು. 70 ವರ್ಷ ಕಳೆದರೂ ಈ ಆಶಯ ಇನ್ನೂ ಈಡೇರಿಲ್ಲ. ಇದನ್ನು ಗಮನಿಸುವಾಗ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಎನ್ನುವ ಮೋದಿ ‘ಅಂಬಾನಿ, ಅದಾನಿ ಕಾ ಸಾಥ್’ ಇದ್ದಾರೆ. ಬಡವರ ಜೊತೆ ಇಲ್ಲ ಎಂದು ಬಿನೊಯ್ ಟೀಕಿಸಿದರು.

ಮಂಗಳೂರಿನ ಶಾಂತಾರಾಮ ಪೈ, ಬಿ.ವಿ.ಕಕ್ಕಿಲ್ಲಾಯ, ಸುಬ್ಬರಾವ್ ಮೊದಲಾದ ಹಿರಿಯರು ದೇಶದಲ್ಲಿ ಸಿಪಿಐ ಮೂಲಕ ಸಾಕಷ್ಟು ಕೊಡುಗೆ ನೀಡಿದ ನೇತಾರರು ಎಂದು ಅವರನ್ನು ಬಿನೋಯ್ ಸ್ಮರಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್, ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ ಮುಖಂಡರಾದ ಅನಂತ ಸುಬ್ಬರಾವ್, ವಿಜಯ ಭಾಸ್ಕರ್, ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಸೀತಾರಾಮ ಬೇರಿಂಜೆ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)