varthabharthi

ರಾಷ್ಟ್ರೀಯ

ಮೋದಿ ಪ್ರಧಾನಿಯಾದಂದಿನಿಂದ ಎನ್‍ ಡಿಎ ಮೈತ್ರಿ ತೊರೆದ 16 ಪಕ್ಷಗಳು

ವಾರ್ತಾ ಭಾರತಿ : 11 Jan, 2019

ಹೊಸದಿಲ್ಲಿ, ಜ.11: ಪ್ರಧಾನಿಯಾಗಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರ ವಹಿಸಿದಂದಿನಿಂದ ಒಟ್ಟು 16 ಪಕ್ಷಗಳು ಎನ್‍ಡಿಎ ಮೈತ್ರಿಕೂಟವನ್ನು ತೊರೆದಿವೆ. ಇತ್ತೀಚೆಗೆ ಪೌರತ್ವ (ತಿದ್ದುಪಡಿ)ಕಾಯ್ದೆಯನ್ನು ವಿರೋಧಿಸಿ ಎನ್‍ ಡಿಎ ಕೂಟದಿಂದ ಹೊರನಡೆದ ಅಸ್ಸಾಂ ಗಣ ಪರಿಷತ್ ಕೂಟ ತೊರೆದ 16ನೇ ಪಕ್ಷವಾಗಿದೆ.

ಎನ್‍ ಡಿಎ ಮೈತ್ರಿಕೂಟದಿಂದ  ಪಕ್ಷಗಳು ಹೊರ ನಡೆಯುವುದು 2014ರಲ್ಲಿಯೇ ಆರಂಭಗೊಂಡಿತ್ತು. ಲೋಕಸಭಾ ಚುನಾವಣೆಗಳು ನಡೆದ ಕೆಲವೇ ತಿಂಗಳುಗಳಲ್ಲಿ ಹರ್ಯಾಣ ಜನಹಿತ ಕಾಂಗ್ರೆಸ್ ಮೈತ್ರಿ ಕೂಟದಿಂದ ಹೊರನಡೆದಿತ್ತು. ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿನ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ ಎನ್‍ ಡಿಎ ಜತೆ ಮೈತ್ರಿ ಮುರಿದಿತ್ತು. ಬಿಜೆಪಿ ತಮಿಳರ ವಿರುದ್ಧ ಕಾರ್ಯಾಚರಿಸುತ್ತಿದೆ ಎಂದು ಪಕ್ಷದ ಮುಖ್ಯಸ್ಥ ವೈಕೊ ಆರೋಪಿಸಿದ್ದರು.

ವಿಜಯಕಾಂತ್ ಅವರ ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 14 ಸ್ಥಾನಗಳಲ್ಲೂ ಸೋತು ಬಹಳ ಬೇಗ ಮೈತ್ರಿ ಕೂಟ ತೊರೆದಿದ್ದರೆ, ರಾಮದೊಸ್ಸ್ ಅವರ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ)2016ರ ತಮಿಳುನಾಡು ಚುನಾವಣೆಗಿಂತ ಮುಂಚೆ ಮೈತ್ರಿ ಮುರಿದಿತ್ತು.

ಲೋಕಸಭಾ ಚುನಾವಣೆ ಸಂದರ್ಭ ಎನ್‍ ಡಿಎ ಪರ ಪ್ರಚಾರ ನಡೆಸಿದ್ದ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ನಂತರ ತಮ್ಮ ಜನ ಸೇನಾ ಪಕ್ಷವನ್ನು ಎನ್‍ ಡಿಎಯಿಂದ ಹೊರತಂದಿದ್ದರು. 2016ರಲ್ಲಿ ಕೇರಳದ ರಿವೊಲ್ಯೂಶನರಿ ಸೋಶಿಯಲಿಸ್ಟ್ ಪಾರ್ಟಿ (ಬೋಲ್ಶೆವಿಕ್) ಎನ್‍ ಡಿಎ ತೊರೆದಿದ್ದರೆ ಇತ್ತೀಚೆಗೆ  ಆದಿವಾಸಿ ನಾಯಕ ಸಿ ಕೆ ಜಾನು ಅವರ ಜನಾಧಿಪತ್ಯ ರಾಷ್ಟ್ರೀಯ ಸಭಾ ಕೂಡ ಮೈತ್ರಿ ಮುರಿದಿತ್ತು.

2017ರಲ್ಲಿ ಮಹಾರಾಷ್ಟ್ರದ ಸ್ವಾಭಿಮಾನಿ ಪಕ್ಷ ಎನ್‍ ಡಿಎ ತೊರೆದಿದ್ದರೆ ಕಳೆದ ವರ್ಷ ಬಿಹಾರದ ಹಿಂದುಸ್ತಾನ್ ಆವಾಮ್ ಮೋರ್ಚಾದ ಅಧ್ಯಕ್ಷ  ಜಿತನ್  ರಾಮ್ ಮಂಝಿಗೆ ರಾಜ್ಯಸಭಾ  ಸ್ಥಾನ ನೀಡದೇ ಇದ್ದಾಗ ಅವರು ಆರ್‍ ಜೆಡಿ ನಾಯಕತ್ವದ ವಿಪಕ್ಷ ಮೈತ್ರಿ ಕೂಟ ಸೇರಿದ್ದರು. ನಾಗಾಲ್ಯಾಂಡ್ ನಲ್ಲಿ ನಾಗಾ ಪೀಪಲ್ಸ್ ಫ್ರಂಟ್ ಎನ್‍ ಡಿಎ ಜತೆಗಿನ ತನ್ನ 15 ವರ್ಷದ ಮೈತ್ರಿ ಮುರಿದಿತ್ತು. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲ ಎಂದು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ,  ಪಶ್ಚಿಮ ಬಂಗಾಳದಲ್ಲಿ ಗೋರ್ಖಾ ಜನಮುಕ್ತಿ ಮೋರ್ಚಾ  ಬೆಂಬಲ ವಾಪಸ್ ಪಡೆದಿವೆ.

ಕರ್ನಾಟಕ ವಿಧಾನಸಭಾ ಚುನಾವಣೆ ನಂತರ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಬೆಂಬಲ ವಾಪಸ್ ಪಡೆದಿದ್ದರೆ ರಾಷ್ಟ್ರೀಯ ಲೋಕ ಸಮತಾ ಪಕ್ಷ ಹಾಗೂ ಬಿಹಾರದ ವಿಕಾಸಶೀಲ್ ಇನ್ಸಾನ್ ಪಾರ್ಟಿ ಕೂಡ ಎನ್‍ ಡಿಎ ಗೆ ಬೆಂಬಲ ವಾಪಸ್ ಪಡೆದಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)