varthabharthi

ಬೆಂಗಳೂರು

ಜನರ ಧ್ವನಿಯಾಗಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಪ್ರಕಾಶ್ ರೈ

ವಾರ್ತಾ ಭಾರತಿ : 11 Jan, 2019

ಬೆಂಗಳೂರು, ಜ.11: ಜನರ ಧ್ವನಿಯಾಗಬೇಕೆಂಬ ಏಕೈಕ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆಂದು ಬಹುಭಾಷಾ ನಟ ಪ್ರಕಾಶ್ ರೈ ತಿಳಿಸಿದರು.

ಶುಕ್ರವಾರ ಬೆಂಗಳೂರು ಜನಜಾಗೃತಿ ಸಾಮಾಜಿಕ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಛಾಯಾಗ್ರಾಹಕ ಸುಧೀರ್ ಶೆಟ್ಟಿಯವರ ‘ಆಯೋಧ್ಯೆಯ ಹಿಂದೂ ಮುಸಲ್ಮಾನರ ಭಾವೈಕ್ಯತೆ ನೋಡ ಬನ್ನಿ’ ಎಂಬ ಶೀರ್ಷಿಕೆಯಡಿ ಆಯೋಜಿಸಿರುವ ಆಯೋಧ್ಯೆಗೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಿರುವ ರಾಜಕೀಯ ಪಕ್ಷಗಳಿಗೆ ಜನರ ಹಿತಾಸಕ್ತಿಗಿಂತ ತಮ್ಮ ಪಕ್ಷ ಹಾಗೂ ವೈಯಕ್ತಿಕ ಸ್ವಾರ್ಥವೆ ಮುಖ್ಯವಾಗಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ಆಶಯಗಳನ್ನು ಸಂಸತ್‌ನಲ್ಲಿ ಮಂಡಿಸುವಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿದೆ. ಅದರ ಭಾಗವಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶ ಮಾಡುತ್ತಿದ್ದೇನೆಂದು ಅವರು ಹೇಳಿದರು.

ನನ್ನ ಚುನಾವಣಾ ಪ್ರಣಾಳಿಕೆಯನ್ನು ಶೀಘ್ರವೆ ಪ್ರಕಟಿಸುತ್ತೇನೆ. ಈಗಾಗಲೆ ಆಮ್‌ಆದ್ಮಿ ನನ್ನನ್ನು ಬೆಂಬಲಿಸಿ ಹೇಳಿಕೆ ನೀಡಿದೆ. ಇದರ ಜತೆಗೆ ಜನಪರ ಸಂಘಟನೆಗಳು ನನ್ನನ್ನು ಬೆಂಬಲಿಸಲಿದ್ದಾರೆ. ಇವರೆಲ್ಲರ ಒಟ್ಟಾರೆ ಬೆಂಬಲ ಹಾಗೂ ಜನತೆಯ ಆಶೀರ್ವಾದದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆಂದು ಅವರು ಹೇಳಿದರು.

ಹಿರಿಯ ಸಾಹಿತಿ ಜಿ.ಕೆ.ಗೋವಿಂದರಾವ್ ಮಾತನಾಡಿ, ಸಂಘ ಪರಿವಾರ ಆಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡುವ ಮೂಲಕ ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ದ್ವೇಷ, ಸಂಶಯ ಮೂಡುವಂತೆ ಮಾಡಿದೆ. ಇಂತಹ ವಾತಾವರಣವನ್ನು ಸೃಷ್ಟಿಸಿ ರಾಜಕೀಯ ಅಧಿಕಾರ ಹಿಡಿಯುವುದು ಬಿಜೆಪಿಯ ಜಾಯಮಾನವಾಗಿದೆ ಎಂದು ಕಿಡಿಕಾರಿದರು.

ಬಹುಭಾಷೆ, ಬಹುಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಜನಸಾಮಾನ್ಯರು ಸಾವಿರಾರು ವರ್ಷಗಳಿಂದ ಅನ್ಯೋನ್ಯತೆಯಿಂದ ಬದುಕನ್ನು ಸಾಗಿಸುತ್ತಿದ್ದಾರೆ. ಆದರೆ, ಸಂಘಪರವಾರ ಜನತೆಯ ಶಾಂತಿಯನ್ನು ಕದಡುವಂತಹ ಕೆಲಸದಲ್ಲಿ ನಿರಂತರವಾಗಿ ತೊಡಗಿದೆ. ಹೀಗಾಗಿ ಜನಪರ ಸಂಘ, ಸಂಸ್ಥೆಗಳು ಆರೆಸ್ಸೆಸ್‌ನ ಜನವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಈ ವೇಳೆ ಛಾಯಾಗ್ರಾಹಕ ಸುಧೀರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಮತ್ತಿತರರಿದ್ದರು.

ದೇಶದಲ್ಲಿರುವುದು ಎರಡೆ ಜಾತಿ. ಒಂದು ಹಣ ಇರುವವರು, ಮತ್ತೊಂದು ಹಣ ಇಲ್ಲದವರು. ಹೀಗಾಗಿ ಕೇಂದ್ರ ಸರಕಾರ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ಜಾರಿ ಮಾಡಲು ಹೊರಟಿರುವುದು ಒಳ್ಳೆಯ ವಿಚಾರವೆ. ಆದರೆ, ಪ್ರಧಾನಿ ನರೇಂದ್ರ ಮೋದಿಯ ಸಾಲು ಸಾಲು ಸುಳ್ಳುಗಳಲ್ಲಿ ಇದು ಒಂದು ಆಗದಿರಲಿ.

ಪ್ರಕಾಶ್ ರೈ, ಬಹುಭಾಷಾ ನಟ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)