varthabharthi

ಬೆಂಗಳೂರು

ಇಷ್ಟದಂತೆ ಬದುಕುವ ಅವಕಾಶ ಸಿಗುವಂತಾಗಬೇಕು: ಡಾ.ಕೆ.ವೈ.ನಾರಾಯಣಸ್ವಾಮಿ

ವಾರ್ತಾ ಭಾರತಿ : 11 Jan, 2019

ಬೆಂಗಳೂರು, ಜ.11: ರಾಜ್ಯದಲ್ಲಿ ಹಲವಾರು ಆಯೋಗಗಳು ರಚನೆಯಾಗಿದ್ದರೂ ಪರಿಣಾಮಕಾರಿಯಾದ ಬದಲಾವಣೆ ಕಂಡಿಲ್ಲ. ಹೀಗಾಗಿ, ಯುವಜನರಿಗೆ ತಮ್ಮಿಷ್ಟದಂತೆ ಬದುಕುವ ಅವಕಾಶ ಸಿಗುವಂತಾಗಬೇಕು ಎಂದು ಕವಿ ಹಾಗೂ ಬೆಂಗಳೂರು ಕೇಂದ್ರ ವಿವಿ ಕಲಾ ವಿಭಾಗದ ಮುಖ್ಯಸ್ಥ ಡಾ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಕೇಂದ್ರ ವಿವಿ ರಾಜ್ಯಶಾಸ್ತ್ರ ವಿಭಾಗದ ರಾಮನ್ ಸಭಾಂಗಣದಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರ, ಯುವಮುನ್ನಡೆ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಯುವಜನ ಆಯೋಗಕ್ಕಾಗಿ ಯುವಾಂದೋಲನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಆಯೋಗ, ಮಹಿಳಾ ಆಯೋಗ, ಮಕ್ಕಳ ಆಯೋಗ ಸೇರಿದಂತೆ ಹಲವಾರು ಆಯೋಗಗಳು ಕೆಲಸ ಮಾಡುತ್ತಿವೆ. ಆದರೆ, ಈ ಆಯೋಗಗಳು ರಚನೆಯಾಗಿದ್ದರೂ ಅನ್ಯಾಯಗಳ ಪ್ರಮಾಣ ಕಡಿಮೆಯಾಗಿಲ್ಲ. ಹೀಗಾಗಿ, ಇವೆಲ್ಲವೂ ವ್ಯರ್ಥ ಎಂದು ಅವರು ಹೇಳಿದರು. ಇಂದಿನ ಸಂದರ್ಭದಲ್ಲಿ ಯುವ ಸಮುದಾಯ ಅತ್ಯಂತ ಸಂಕಷ್ಟದಲ್ಲಿದೆ. ಹೀಗಾಗಿ, ಮನುಷ್ಯ ಬದುಕುವ ಮತ್ತು ಬದುಕಿಸುವ ಹಕ್ಕು ಬೇಕಿದೆ. ಯುವ ಸಮುದಾಯ ತಮ್ಮಿಷ್ಟದಂತೆ ಬದುಕುವ ಅವಕಾಶಗಳು ಸಿಗುವಂತಾಗಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ನಮಗೂ ಒಂದು ಕನಸಿದೆ ಎಂದು ಯೋಚಿಸುವುದನ್ನೇ ಮರೆತಿದ್ದಾರೆ. ಕನಸನ್ನು ಕಳೆದುಕೊಂಡ ಯುವ ಸಮುದಾಯ ಅನಾಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ತನ್ನನ್ನು ಪ್ರೀತಿಸುವವರು, ಇನ್ನೊಬ್ಬರನ್ನು ಪ್ರೀತಿಸುತ್ತಾರೆ ಎಂಬ ಮಾದರಿ ಶಿಕ್ಷಣ ಸಿಗದಂತೆ ಮಾಡಿದೆ. ನಾನು ನನ್ನ ಇಷ್ಟದಂತೆ ಬದುಕಿದ್ದೇನೆ ಎಂದು ತೋರಿಸುವುದೇ ನಿಜವಾದ ಬದುಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಇಷ್ಟದಂತೆ ಬದುಕಲು ಮುಂದಾಗಬೇಕು ಹಾಗೂ ಅದಕ್ಕೆ ಅಗತ್ಯವಾದ ಮಾರ್ಗದರ್ಶನ ಮತ್ತು ದಾರಿಗಳು ಸಿಗುವಂತಾಗಬೇಕು ಎಂದು ತಿಳಿಸಿದರು.

ದೇಶದಲ್ಲಿನ ಪರೀಕ್ಷಾ ಕ್ರಮವೇ ಅವೈಜ್ಞಾನಿಕವಾದುದಾಗಿದೆ. ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ಕಲಿಯುವುದನ್ನು ಸ್ವತಂತ್ರವಾಗಿ ಆಲೋಚನೆ ಮಾಡಿ ಪರೀಕ್ಷೆಗಳಲ್ಲಿ ಉತ್ತರ ಬರೆಯುವ ಅವಕಾಶವಿಲ್ಲದಂತಾಗಿದೆ. ವಿಶ್ವವಿದ್ಯಾಲಯಗಳು ನೀಡುವ ಪಠ್ಯಕ್ರಮಗಳಲ್ಲಿ ಇರುವುದನ್ನೇ ಬರೆಯಬೇಕು. ಈ ರೀತಿಯಾಗಿ ತಯಾರಾಗುವ ಯುವಜನರಿಂದ ಉತ್ತಮ ರೀತಿಯಾಗಿ ಬೆಳವಣಿಗೆ ಕಾಣಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬರಹಗಾರ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕಿರಣ ಗಾಜನೂರು ಮಾತನಾಡಿ, ಯುವ ಸಮುದಾಯ ತಮಗೆ ಸಿಗಬೇಕಾದ ಮುಖ್ಯವಾದ ಹಲವು ಹಕ್ಕುಗಳಿಂದ ವಂಚಿತರಾಗಿದ್ದಾರೆ. ಅಲ್ಲದೆ, ಯುವಜನರು ಹೇಗೆ ಯೋಚಿಸಬೇಕು ಎಂದು ರಾಜಕೀಯ ವ್ಯವಸ್ಥೆ ತೀರ್ಮಾನ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನೈಜ ಹಕ್ಕುಗಳ ಕುರಿತು ಯುವಜನರು ಧ್ವನಿ ಎತ್ತಬೇಕು ಎಂದರು.

ಯುವಜನರನ್ನು ತಮ್ಮ ಹಕ್ಕುಗಳನ್ನು ಪ್ರಶ್ನಿಸದಂತೆ ಬೆಳೆಸಲಾಗುತ್ತಿದ್ದು, ಅದರಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಪಾಲು ಅಪಾರವಾಗಿದೆ. ಹೀಗಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈಜ ಹಕ್ಕುಗಳು ಯಾವುದು ನಮಗೆ ಸಿಗಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಪ್ರಭುತ್ವ ಹೇಗೆ ನಮ್ಮ ಹಕ್ಕುಗಳು ಸಿಗದಂತೆ ತಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ಸಂವಾದ ಸಂಸ್ಥೆಯ ನಿರ್ದೇಶಕಿ ಅನಿತಾ ರತ್ನಂ, ಯುವ ಸಂಪನ್ಮೂಲ ಕೇಂದ್ರದ ಸಂಚಾಲಕರಾದ ರಾಮಕ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇಂದಿನ ಸಂದರ್ಭದಲ್ಲಿ ಯುವತಿಯರು ತಮಗೆ ಇಷ್ಟದಂತೆ ಬದುಕಲು ಸಾಧ್ಯವಾಗುತ್ತಿಲ್ಲ. ನಮಗೆ ಇಷ್ಟವಾದ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲದರಿಂದಲೂ ವಂಚಿತರಾಗುತ್ತಿದ್ದೇವೆ. ನಮ್ಮ ಕನಸಿನ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಈ ಸಂದರ್ಭದಲ್ಲಿ ಯುವಜನರಿಗಾಗಿ ಒಂದು ಆಯೋಗದ ಅಗತ್ಯವಿದೆ.

ಜನನಿ ವತ್ಸಲ, ಬೆಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)