varthabharthi

ಕರಾವಳಿ

ತಳಿರು ತೋರಣಗಳಿಂದ ಅಲಂಕೃತಗೊಂಡು ಆಕರ್ಷಿಸುತ್ತಿದೆ ಫಲ್ಗುಣಿ ನದಿ ತೀರ

ಮಂಗಳೂರು: ಎರಡು ದಿನಗಳ ನದಿ ಉತ್ಸವಕ್ಕೆ ಕ್ಷಣಗಣನೆ

ವಾರ್ತಾ ಭಾರತಿ : 11 Jan, 2019

ಮಂಗಳೂರು, ಜ.11: ಕೂಳೂರು ಸೇತುವೆ ಬಳಿ ಫಲ್ಗುಣಿ ನದಿ ತೀರ ಬಣ್ಣ ಬಣ್ಣದ ತಳಿರು ತೋರಣಗಳಿಂದ ಅಲಂಕೃತಗೊಂಡು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ನದಿಯ ಹಿನ್ನಿರಿನಲ್ಲಿ ಜೆಟ್‌ಸ್ಕೀ, ಫೆರ್ರಿಗಳು ಅಲಂಕೃತಗೊಂಡು ಓಡಾಡುತ್ತಿವೆ. ಜ.12 ಮತ್ತು 13ರಂದು ನಡೆಯಲಿರುವ ನದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. 

ಕೂಳೂರಿನಲ್ಲಿ ನದಿ ಉತ್ಸವ ಜ.12ರಂದು ಪೂರ್ವಾಹ್ನ 8:15ಕ್ಕೆ ಪಂಚವಾದ್ಯಗಳ ಮೇಳದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಂದ ಉದ್ಘಾಟನೆಗೊಳ್ಳಲಿದೆ. ನದಿ ತೀರದಲ್ಲಿ ಎರಡು ದಿನಗಳ ಕಾಲ ಸ್ಥಳೀಯ ಹಾಗೂ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದ ಕಲಾ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ.

ಕೂಳೂರಿನಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟನೆ ಬಳಿಕ ಪ್ರಮುಖ ಕಾರ್ಯಕ್ರಮಗಳು ಬಂಗ್ರ ಕೂಳೂರಿನಲ್ಲಿ ನಡೆಯಲಿದೆ. ಬಂಗ್ರ ಕೂಳೂರಿನ 23 ಎಕರೆ ಸರಕಾರಿ ಜಮೀನಿನಲ್ಲಿ ಫ್ಲೀ ಮಾರ್ಕೆಟ್, ಆಹಾರೋತ್ಸವ, ಕಲಾ ಕಾರ್ಯಕ್ರಮಗಳು ಹಾಗೂ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಗೆ ಅಂಗಣ ಸಿದ್ಧವಾಗಿದೆ.

ನದಿ ಪ್ರೇಮಿಗಳಿಗೆ, ಪ್ರಕೃತಿ ಪ್ರೇಮಿಗಳಿಗೆ ನದಿ ಬದಿಯ ಈ ಕಾರ್ಯಕ್ರಮ ಚೇತೋಹಾರಿಯಾಗಲಿದೆ. ಉತ್ಸವವನ್ನು ಜಿಲ್ಲಾಡಳಿತ ಶ್ರದ್ಧೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಿದೆ.

ಅಂತಿಮ ಕ್ಷಣದ ಸಿದ್ಧತೆಯ ಪರಿಶೀಲನೆಗಾಗಿ ಅಪರ ಜಿಲ್ಲಾಧಿಕಾರಿ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಉದಯ ಶೆಟ್ಟಿ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ, ಗೌರವ ಹೆಗ್ಡೆ, ಪರಿಸರ ಇಂಜಿನಿಯರ್ ಮಧು ಮನೋಹರ್, ಆಳ್ವಾಸ್‌ನ ವಿದ್ಯಾರ್ಥಿ ಸ್ವಯಂಸೇವಕರು ಹಾಗೂ ಕಾರ್ಯಕ್ರಮ ಆಯೋಜನೆಯಲ್ಲಿ ತೊಡಗಿಕೊಂಡ ಹಲವು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)