varthabharthi

ಸಿನಿಮಾ

ಎನ್‌ಟಿಆರ್: ಕಥಾನಾಯಕುಡು

ಎನ್‌ಟಿಆರ್ ಬದುಕಿನ ಅನಾವರಣದ ಪ್ರಯತ್ನ

ವಾರ್ತಾ ಭಾರತಿ : 13 Jan, 2019

‘‘ನೀನು ನಾವು ಕರೆದ ತಕ್ಷಣ ಬಂದಿದ್ದರೆ ಸಿನೆಮಾದಲ್ಲಿ ಅವಕಾಶವಿತ್ತು. ಆದರೆ ಈಗ ನಿನಗೆ ಅದೃಷ್ಟ ಇಲ್ಲ’’ ಎನ್ನುತ್ತಾರೆ ನಿರ್ದೇಶಕರು.

‘‘ಆದರೆ ನಾನು ಸಿನೆಮಾದಲ್ಲಿ ಅದೃಷ್ಟವನ್ನು ನಂಬಿಕೊಂಡು ಬಂದಿಲ್ಲ. ಪರಿಶ್ರಮವನ್ನು ನಂಬಿ ಬಂದಿದ್ದೇನೆ. ಪ್ರಯತ್ನಿಸುತ್ತೇನೆ’’ ಎನ್ನುತ್ತಾನೆ ನಟಿಸಲು ಬಂದಾತ. ಚಿತ್ರರಂಗದಲ್ಲಿ ಅದೃಷ್ಟವೊಂದೇ ಅಂತಿಮ ಎಂದು ಅದೃಷ್ಟವನ್ನು ಹಳಿದು ಕೈಕಟ್ಟಿ ಕುಳಿತವರನ್ನು ಎಚ್ಚರಿಸುವಂಥ ಸಂಭಾಷಣೆ ಎನ್‌ಟಿಆರ್ ಕಥಾನಾಯಕುಡು ಚಿತ್ರದ್ದು. ಎನ್‌ಟಿಆರ್ ಎಂದರೆ ನಂದಮೂರಿ ತಾರಕ ರಾಮರಾವು. ತೆಲುಗಿನ ಮೊದಲ ಸ್ಟಾರ್‌ನಟರಾಗಿ, ಬಳಿಕ ಮುಖ್ಯಮಂತ್ರಿಯಾಗಿಯೂ ಗುರುತಿಸಿಕೊಂಡ ಎನ್‌ಟಿಆರ್ ಅವರ ನಿಜ ಬದುಕಿನ ಜೀವನ ಚಿತ್ರವೇ ಎನ್‌ಟಿಆರ್.

ಚಿತ್ರದಲ್ಲಿ ಎನ್‌ಟಿಆರ್ ಅವರ ಪಾತ್ರವನ್ನು ಅವರ ಪುತ್ರ ಬಾಲಕೃಷ್ಣ ನಿರ್ವಹಿಸಿರುವುದು ಚಿತ್ರದ ವಿಶೇಷ. ‘ಮಹಾನಟಿ’ ಅದ್ಭುತ ಬಯೋಪಿಕ್ ನಿರ್ದೇಶಿಸಿದವರೇ ಈ ಚಿತ್ರವನ್ನು ಕೂಡ ನೀಡಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯ ಕೆಲಸಲ್ಲಿ ಲಂಚ ಪಡೆದು ಕೆಲಸ ಮಾಡಬೇಕಾದ ಪರಿಸ್ಥಿತಿಯನ್ನು ವಿರೋಧಿಸಿ ವೃತ್ತಿಗೆ ರಾಜೀನಾಮೆ ಕೊಡುವ ಯುವಕ ಎನ್‌ಟಿಆರ್‌ನನ್ನು ತೋರಿಸುವ ಮೂಲಕ ಚಿತ್ರ ಆರಂಭವಾಗುತ್ತದೆ. ರಂಗಭೂಮಿ ಕಲಾವಿದನಾಗಿದ್ದ ತಮ್ಮನ್ನು ಸಿನೆಮಾರಂಗಕ್ಕೆ ಆಹ್ವಾನಿಸಿದ್ದ ಖ್ಯಾತ ನಿರ್ದೇಶಕ ಎಲ್.ವಿ. ಪ್ರಸಾದ್ ಅವರನ್ನು ನೆನಪಿಸಿಕೊಳ್ಳುವ ಎನ್‌ಟಿಆರ್ ಮದರಾಸಿಗೆ ಹೊರಡುತ್ತಾರೆ. ಅಲ್ಲಿ ಅವರನ್ನು ಭೇಟಿಯಾದಾಗ ನಡೆಯುವ ಸಂಭಾಷಣೆಯೇ ಆರಂಭದಲ್ಲೇ ನೀಡಲಾಗಿರುವ ಉತ್ಸಾಹದ ವಾಕ್ಯಗಳು. ಚಿತ್ರದಲ್ಲಿ ‘ಮನದೇಸಂ’ ಎಂಬ ಎನ್‌ಟಿಆರ್ ಅವರ ನಟನೆಯ ಮೊದಲ ಚಿತ್ರದಿಂದ ರಾಜಕೀಯ ರಂಗಕ್ಕೆ ಎಂಟ್ರಿ ಕೊಡುವವರೆಗಿನ ಜೀವನವನ್ನು ಆಕರ್ಷಕವಾಗಿ ತೆರೆದಿಡಲಾಗಿದೆ.

ಎನ್‌ಟಿಆರ್ ಅವರು ಆರಂಭದಿಂದಲೇ ಯಶಸ್ಸು ಕಂಡರೂ ಕೂಡ ತಮ್ಮ ಪಾತ್ರಗಳ ಮೂಲಕ ಎಷ್ಟೊಂದು ವೈವಿಧ್ಯಮಯ ಪಾತ್ರಗಳ ಪ್ರಯೋಗ ನಿರ್ವಹಿಸಿದರೆಂದು ಚಿತ್ರ ತಿಳಿಸುತ್ತದೆ. ದೇವರ ಪಾತ್ರಗಳ ಮೂಲಕ ದೇವರಂತೆ ಜನರಿಂದ ಬಿಂಬಿಸಿಕೊಳ್ಳುತ್ತಿದ್ದ ಸಂದರ್ಭದಲ್ಲೇ ರಾವಣನಾಗಿ ಬಳಿಕ ಶಿಖಂಡಿಯಾಗಿಯೂ ನಟಿಸುವ ಧೈರ್ಯ ಅವರಲ್ಲಿತ್ತು ಎನ್ನುವುದು ನಿಜ. ಆ ಕಾಲದಲ್ಲಿ ರಾವಣನಾಗಿ ನಟಿಸುವಾಗ ಹತ್ತು ತಲೆ ತೋರಿಸಲು ಎಷ್ಟು ಕಷ್ಟ ಪಡಬೇಕಾಗಿತ್ತು ಎನ್ನುವುದನ್ನು ಸಹ ಚಿತ್ರ ತೋರಿಸುತ್ತದೆ. ಅದರಲ್ಲಿಯೂ ಹಿರಿಯ ಮಗ ರಾಮಕೃಷ್ಣನ ಸಾವಿನ ಸುದ್ದಿ ಚಿತ್ರೀಕರಣದ ವೇಳೆ ಅರಿತರೂ ಕೂಡ ಪೂರ್ತಿ ಚಿತ್ರೀಕರಣ ಮುಗಿಸಿಯೇ ಮನೆಗೆ ಹೊರಡುವ ಅವರ ಕರ್ತವ್ಯ ಬದ್ಧತೆಯನ್ನು ಚಿತ್ರದಲ್ಲಿ ಹಿಡಿದಿಡಲಾಗಿದೆ.

ಆ ಸಂದರ್ಭದಲ್ಲಿ ಅವರ ಜೋಡಿಯಾಗಿ ನಟಿಸಿದ್ದ ಕೃಷ್ಣಕುಮಾರಿಯ ಪಾತ್ರವನ್ನು ಪ್ರಣೀತಾ ಸುಭಾಷ್ ನಿರ್ವಹಿಸಿದ್ದಾರೆ. ಎನ್‌ಟಿಆರ್ ಎಂಬ ತಂದೆಯ ಪಾತ್ರದಲ್ಲಿ ಬಾಲಕೃಷ್ಣ ಅವರು ತಂದೆಯಷ್ಟೇ ಗಂಭೀರವಾಗಿ ಕಾಣಿಸಿಕೊಳ್ಳುವುದು ವಿಶೇಷ. ಅದರಲ್ಲಿಯೂ ಪದ್ಮಶ್ರೀ ಪ್ರಶಸ್ತಿ ಪಡೆದು ಹಿಂದಿರುಗಿದ ಬಳಿಕದ ದೃಶ್ಯಗಳಲ್ಲಿ ಎನ್‌ಟಿಆರ್ ಪಡಿಯಚ್ಚಿನಂತೆ ಕಾಣಿಸುತ್ತಾರೆ. ಎನ್‌ಟಿಆರ್ ಪತ್ನಿ ಬಸವ ತಾರಕಂ ಪಾತ್ರದಲ್ಲಿ ವಿದ್ಯಾಬಾಲನ್ ಮೊದಲ ದೃಶ್ಯದಲ್ಲೇ ವಯಸ್ಸಾದ ಪತ್ನಿಯಾಗಿ ಸಹಜ ನಟನೆಯಿಂದ ಗಮನ ಸೆಳೆಯುತ್ತಾರೆ. ಆದರೆ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಕಾಣಿಸುವ ವಿದ್ಯಾಬಾಲನ್ ಪದೇ ಪದೇ ಮಗುವಿಗೆ ಜನ್ಮ ನಿಡುವ ತಾಯಾಗಿ ಸೀಮಿತವಾಗುತ್ತಿದ್ದಾರೆ ಎನಿಸಿಬಿಡುತ್ತದೆ. ಆದರೆ ಹಿರಿಯ ಪುತ್ರ ರಾಮಕೃಷ್ಣನ ನಿಧನದ ವೇಳೆ ಪ್ರತಿಕ್ರಿಯಿಸುವ ರೀತಿ ಮನೋಜ್ಞವೆನಿಸುತ್ತದೆ. ಅದೇ ರೀತಿ ಬಾಲಕೃಷ್ಣ ಅವರು ಎನ್‌ಟಿಆರ್ ಪಾತ್ರವನ್ನು ಮಾಡುತ್ತಾರೆ ಎಂದಾದಾಗ ತಂದೆಯ ಗಂಭೀರ ಕಂಠಕ್ಕೆ ಬಾಲಯ್ಯನ ವೇಗದ ಮಾತುಗಳು ಎಷ್ಟು ಹೊಂದಬಹುದು ಎನ್ನುವ ಸಂದೇಹಗಳಿತ್ತು. ಅಚ್ಚರಿಯೆಂಬಂತೆ ಬಾಲಯ್ಯ ನಿಧಾನವಾಗಿ ಮಾತನಾಡಿದ್ದಾರೆ. ಜೊತೆಗೆ ಎನ್‌ಟಿಆರ್ ಅವರ ಹಳೆಯ ಚಿತ್ರಗಳ ಸನ್ನಿವೇಶವನ್ನು ನವೀಕರಿಸುವ ಸಂದರ್ಭಗಳಲ್ಲಿ ಒಂದೆರಡು ಕಡೆ ಮೂಲ ಎನ್‌ಟಿಆರ್ ಧ್ವನಿಯನ್ನೇ ಉಳಿಸಿರುವುದು ಅದ್ಭುತ ಪ್ರಯೋಗವೆನಿಸುತ್ತದೆ.

ಎನ್‌ಟಿಆರ್ ಜೊತೆಯಲ್ಲೇ ಆತ್ಮೀಯ ಸ್ನೇಹಿತನಾಗಿ ಕಾಣಿಸಿಕೊಳ್ಳುವ ಅಕ್ಕಿನೇನಿ ನಾಗೇಶ್ವರರಾವ್ ಅವರ ಪಾತ್ರದಲ್ಲಿ ಎಎನ್‌ಆರ್ ಮೊಮ್ಮಗ ಸುಮಂತ್ ಅಸಲು ತಾತನಂತೆಯೇ ಕಾಣಿಸುತ್ತಾರೆ. ಇದೇ ವೇಳೆ ಎನ್‌ಟಿಆರ್ ಅವರ ಪುತ್ರ ಇತ್ತೀಚೆಗಷ್ಟೇ ಅಗಲಿದ ಹರಿಕೃಷ್ಣರನ್ನು ಅವರ ಪುತ್ರ ನಂದಮೂರಿ ಕಲ್ಯಾಣ್‌ರಾಮ್ ನಿರ್ವಹಿಸಿರುವುದು ವಿಶೇಷ. ತಂದೆಯ ಚಿತ್ರವನ್ನು ಮಗನೇ ನಟಿಸಿರುವುದು ಮತ್ತು ಚಿತ್ರದ ನಿರ್ಮಾಪಕರಲ್ಲೊಬ್ಬನಾಗಿರುವುದು ಈ ಎಲ್ಲ ವಿಚಾರಗಳನ್ನು ಗಮನಿಸಿದರೆ ಚಿತ್ರ ಪಾಸಿಟಿವ್ ಆಗಿ ಮಾತ್ರ ಇರುವುದೆಂದು ನಿರೀಕ್ಷಿಸುವುದು ಸಹಜ.

ಜೊತೆಗೆ ಎನ್‌ಟಿಆರ್ ಅವರ ಸಿನೆಮಾ ಜೀವನದಲ್ಲಿ ಅಂಥ ವಿವಾದಗಳು ಇರಲಿಲ್ಲ ಎಂದೂ ಹೇಳಲಾಗುತ್ತದೆ. ಉಳಿದಂತೆ ಶ್ರೀದೇವಿಯಂಥ ಸಣ್ಣ ವಯಸ್ಸಿನ ಹುಡುಗಿಗೆ ನಾಯಕರಾದ ಬಗ್ಗೆ ಎನ್‌ಟಿಆರ್ ಮನೆಯವರ ಅಭಿಪ್ರಾಯ ಏನಿತ್ತು? ಅವರ ರಾಜಕೀಯ ಪ್ರವೇಶ ಅಗತ್ಯವಿತ್ತೇ? ಮೊದಲಾದ ಪ್ರಶ್ನೆಗಳಿಗೆ ಕೂಡ ಚಿತ್ರದಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ. ವಿವಾದಗಳಿಂದ ಕೂಡಿದೆ ಎನ್ನಲಾಗುವ ರಾಜಕೀಯ ಬದುಕನ್ನು ಚಿತ್ರದ ಎರಡನೇ ಭಾಗ ಎನ್‌ಟಿಆರ್ ಮಹಾನಾಯಕುಡು ಚಿತ್ರದಲ್ಲಿ ತೋರಿಸುವುದಾಗಿ ಹೇಳಲಾಗಿದೆ. ಅದನ್ನು ಮಾತ್ರ ನೋಡುವ ಆಸಕ್ತಿ ಇರುವವರು ಕೂಡ ಬೇಸಿಕ್‌ಗಾಗಿ ಈ ಚಿತ್ರವನ್ನು ನೋಡಬಹುದು.

ಎನ್‌ಟಿಆರ್ ಅಭಿಮಾನಿಗಳಲ್ಲದ ಸಿನೆಮಾ ಪ್ರಿಯರು ಕೂಡ ಚಿತ್ರದ ಮೇಕಿಂಗ್‌ಗಾಗಿಯೇ ಈ ಸಿನೆಮಾವನ್ನು ನೋಡಬಹುದು. ಮುಖ್ಯವಾಗಿ ಹಳೆಯ ದೃಶ್ಯಗಳನ್ನು ಮತ್ತೆ ಸೃಷ್ಟಿಸಿರುವ ರೀತಿ ಮತ್ತು ಅದಕ್ಕೆ ತಕ್ಕಂತೆ ಕೀರವಾಣಿಯವರು ನೀಡಿರುವ ಹಿನ್ನೆಲೆ ಸಂಗೀತ, ಕಲಾ ನಿರ್ದೇಶನ, ಗಾನ ಶೇಖರ್ ಛಾಯಾಗ್ರಹಣ ಚಿತ್ರದ ಪ್ರಧಾನ ಆಕರ್ಷಣೆಯೆನಿಸುತ್ತದೆ. ಜೊತೆಗೆ ನಿತ್ಯಾಮೆನನ್ ಸೇರಿದಂತೆ ಸಾಕಷ್ಟು ಯುವಕಲಾವಿದರು ಹಿಂದಿನ ತಾರೆಗಳಾಗಿ ರೂಪ ಪಡೆದಿರುವುದು ಕೂಡ ಆಸಕ್ತಿ ಮೂಡಿಸುತ್ತದೆ. ಚಿತ್ರ ತೆಲುಗು ಚಿತ್ರರಂಗದ ಒಂದು ಕಾಲಘಟ್ಟವನ್ನು ನೆನಪಿಸುವುದು ಮಾತ್ರ ಸತ್ಯ.


ತಾರಾಗಣ: ನಂದಮೂರಿ ಬಾಲಕೃಷ್ಣ, ವಿದ್ಯಾಬಾಲನ್
ನಿರ್ದೇಶಕರು: ಕೃಷ್ಣ ಜಗರ್ಲಮುಡಿ
ನಿರ್ಮಾಪಕರು: ಸಾಯಿ ಕೊರ್ರಪಟಿ ಮತ್ತಿತರರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)