varthabharthiಅನುಗಾಲ

ರಾಜಕೀಯದ ಅನ್ಯ ಮಾರ್ಗಗಳು

ವಾರ್ತಾ ಭಾರತಿ : 17 Jan, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪ್ರಾಯಃ ಜನರನ್ನು ಮರುಳುಮಾಡುವ ಯಾವುದೇ ಕಾಯಕವು ಪ್ರಜಾಪ್ರಭುತ್ವವೆಂದು ಪರಿಗಣಿಸಲ್ಪಡುವ ಪ್ರಸ್ತುತ ಸ್ಥಿತಿಯಲ್ಲಿ ಎಲ್ಲವೂ ಸರಿಯೇ. ಚಾಣಕ್ಯ-ಅಮಾತ್ಯ ರಾಕ್ಷಸರು ಬಿಡಿ, ರಾಬರ್ಟ್ ಕ್ಲೈವ್‌ನಂತಹ ಧೂರ್ತ ಮುತ್ಸದ್ದಿಯೂ ಈಗ ಭಾರತದಲ್ಲಿ ನಡೆದಾಡಿದರೆ ಅವರ ಬೆರಳು ಮೂಗಿನ ಮೇಲೇರುವುದು ಖಂಡಿತ. ಏಕೆಂದರೆ ಅವರಿಗಾರಿಗೂ ತಿಳಿಯದ ಅನ್ಯಮಾರ್ಗಗಳು ಭಾರತೀಯ ಪರಂಪರೆಯ ವೈಭವವೆನ್ನಿಸಿದೆ. 


ಸಂಸತ್‌ನ ಚುನಾವಣೆಗಳು ಹತ್ತಿರಾಗುತ್ತಿರುವ ಕಾಲದಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಕೆಲವರಿಗೆ ಆತಂಕವನ್ನು, ಇನ್ನು ಕೆಲವರಿಗೆ ರೋಮಾಂಚನವನ್ನು ಸೃಷ್ಟಿಸಿದೆ. ಇಬ್ಬರು ಪಕ್ಷೇತರ ಶಾಸಕರು ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆ ಪಡೆದು ಭಾಜಪವನ್ನು ಬೆಂಬಲಿಸಿದ್ದಾರೆ. ಇನ್ನೂ ಕೆಲವರು ಈ ಹಾದಿಯಲ್ಲಿದ್ದಾರೆಂಬ ಗುಮಾನಿಯಿದೆ. ಮಾಧ್ಯಮ ವರದಿಗಳನ್ನು ನಂಬುವುದಾದರೆ- ಏಕೆಂದರೆ ಮಾಧ್ಯಮಗಳ ವಿಶ್ವಾಸಾರ್ಹತೆಯು ಈ ದೇಶದ ಪ್ರಮುಖ ಸಮಸ್ಯೆಗಳಲ್ಲೊಂದು! ಅವುಗಳಿಗೆ ಉತ್ತರದಾಯಿತ್ವವನ್ನು ಯಾರೂ ನಿರ್ಣಯಿಸಿಲ್ಲ, ಅವರು ಹೇಗೆ ಬೇಕಾದರೂ ನುಣುಚಿಕೊಳ್ಳಬಹುದಾದ ಪರಿಸ್ಥಿತಿಯಿದೆ- ಸಿ.ಟಿ.ರವಿಯೆಂಬವರು ‘ನಾವೇನೂ ಸನ್ಯಾಸಿಗಳಲ್ಲ’ ಎಂದಿದ್ದಾರೆ. ಸನ್ಯಾಸಿಗಳೇ ‘ನಾವೇನೂ ಸನ್ಯಾಸಿಗಳಲ್ಲ’ ಎಂದು ಸೂಚಿಸುವ ಈ ಕಾಲದಲ್ಲಿ ಶಾಸಕರು ಹೀಗೆ ಹೇಳಿದರೆ ತಪ್ಪಿಲ್ಲ; ಇನ್ನೊಂದೆಡೆ ಸಂಸದ ಪ್ರತಾಪಸಿಂಹ ಎಂಬವರು ‘‘ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿಸಲು ಭಾಜಪವು ಈ ಅನ್ಯಮಾರ್ಗವನ್ನು ಬಳಸಿದರೆ ತಪ್ಪಿಲ್ಲ’’ ಎಂದಿದ್ದಾರೆ. ಈ ಮತ್ತು ಇಂತಹ ಸಪ್ತರ್ಷಿಗಳ ಪಲ್ಲಕ್ಕಿಯಲ್ಲಿ ವಿರಾಜಮಾನರಾದ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗುವ ರಾಜಕಾರಣಸಹಜ ಕನಸಿಗೆ ಮೈಯೊಡ್ಡಿ ಮಲಗಿದ್ದಾರೆ. ಆಧುನಿಕ ಮಹಾಭಾರತದಲ್ಲಿ ಆದಿಯಿಂದ ಆರಂಭವಾಗುವ, ಸ್ವರ್ಗಾರೋಹಣದೊಂದಿಗೆ ಅಂತ್ಯವಾಗುವ ಪರ್ವಗಳಿಲ್ಲ; ಅಲ್ಲಿ ಒಂದೇ ಪರ್ವ: ಪಕ್ಷಾಂತರ ಪರ್ವ; ಅಧಿಕಾರಾರೋಹಣ ಪರ್ವ.

ಒಂದು ಕಾಲದಲ್ಲಿ ಅಂದರೆ ವಿರೋಧ ಪಕ್ಷವಾಗಿರುವಾಗ ಮತ್ತು ಸ್ಪರ್ಧಿಸಿದರೆ ಠೇವಣಿಯೂ ಸಿಗದ ಕಾಲದಲ್ಲಿ ನಿಜಕ್ಕೂ ಅನೇಕ ರಾಜಕಾರಣಿಗಳು ಸನ್ಯಾಸಿಗಳಂತೆ ಬದುಕುತ್ತಿದ್ದರು. (ಆಗ ಸನ್ಯಾಸಿಗಳೂ ಸನ್ಯಾಸಿಗಳಂತೆ ಬದುಕುತ್ತಿದ್ದರು!) ಆದರೆ ಅಭಾವ ವೈರಾಗ್ಯದ ಕಾಲ ಕಳೆದು ಯಾವಾಗ ಕೆಂಪುಹಾಸು ಕಾಲಡಿಗೆ ಬಿಚ್ಚಿಕೊಂಡಿತೋ ಆಗ ಬಹುಪಾಲು ಸನ್ಯಾಸಿಗಳಿಗೆ ಪೂರ್ವಾಶ್ರಮ ಮರೆತು ಹೋಯಿತು. ರಾಜಕಾರಣದಲ್ಲಿ ಎಲ್ಲವೂ ಸರಿಯೆಂಬ ಒಂದೇ ತರ್ಕ ಸಾಧುವಾಯಿತು. ಆಗ ವಸುಮತೀಶರ ಅನೀತಿ ಎಲ್ಲ ಅನೀತಿಗಳ ತವರುಮನೆಯಾಯಿತು.

 ಈ ಅನ್ಯಮಾರ್ಗಗಳು ರತಿಪ್ರೀತಿಯ ಸಂಕೇತವಾದ ಕೆಂಪುದೀಪದ ರಸ್ತೆಗಿಂತಲೂ ಹೊಲಸು ಎಂಬುದರಿಂದಾಗಿ ಇದು ರಾಜಕಾರಣಿಗಳಿಗೆ ಬಹು ಪ್ರೀತಿಯ ಮಾರ್ಗ. ಈ ಅನೈತಿಕತೆಗೆ ಅವರು ನೀಡುವ ಸಮರ್ಥನೆಯೆಂದರೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅನೈತಿಕ ಮೈತ್ರಿ. ಯಾರು ಹೇಗೇ ಬದುಕಲಿ, ತಾನು ಸರಿಯಾಗಿರುತ್ತೇನೆ ಎಂಬ ಬದುಕಿನ ಹಾದಿ ನಮ್ಮ ರಾಜಕಾರಣಿಗಳಿಗೆ ಎಂದೋ ಅಪಥ್ಯವಾಗಿ ಈಗ ಅತ್ಯಂತ ಅನೈತಿಕತೆಯ ಹಾದಿಯೇ ಸುಗಮದ ಹಾದಿಯೆಂಬುದು ರಾಜಮಾರ್ಗವಾಗಿದೆ. ಬಿಸಜನಾಭನಿಗರ್ಪಿಸಬೇಕಾದ ಕಮಲವು ಕೆಸರಿನಿಂದ ಮೇಲೆದ್ದು ಅರಳುವ ಸಹಜ ದಾರಿಗೆ ಪ್ರಯತ್ನಕ್ಕೆ ವಿಮುಖವಾಗಿ ಕೆಸರಿನೊಳಗೆ ಹುದುಗಿಕೊಳ್ಳುವ ಹೊಸ ರೂಪಕ ಸೃಷ್ಟಿಯಾಗುತ್ತಿದೆ. ಯಾವ ಸೂರ್ಯನೂ ಈ ದುರಂತವನ್ನು ತಪ್ಪಿಸಲಾರನೆಂದು ಸದ್ಯಕ್ಕೆ ಅನ್ನಿಸುತ್ತದೆ. ಮಕರಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಉತ್ತರಾಯಣದ ಪರ್ವಕಾಲದಲ್ಲಿ, ಬದುಕು ಉನ್ನತಿಯತ್ತ ಹೊರಳುವ ಸಂಕ್ರಮಣಕಾಲದಲ್ಲಿ, ಕರ್ನಾಟಕದ ಭಾಜಪ ಶಾಸಕರು ಕಾಲಿಗೆ ಸಂಕಲೆ ಬಿಗಿದುಕೊಂಡು ದಿಲ್ಲಿಯ ಸಮೀಪದ ಗುರುಗ್ರಾಮ (ಗೋರೆಗಾಂವ್ ಈಗ ಮರುನಾಮಕರಣಗೊಂಡು ಗುರುಗ್ರಾಮವಾದರೂ ನಮ್ಮ ರಾಜಕಾರಣಿಗಳು ಅದು ಗುರುತ್ವಕ್ಕೂ ಗ್ರಾಮೀಣ ಸರಳತೆಗೂ ಅಪಚಾರವಾಗುವಂತೆ ವರ್ತಿಸುತ್ತಿದ್ದಾರೆಂಬುದು ಪ್ರತ್ಯೇಕ!) ದ ಪಂಚತಾರಾ ಹೊಟೇಲ್‌ನಲ್ಲಿ ಬಂಧಿಗಳಾಗಿದ್ದಾರೆಂದು ಹೇಳಲಾಗಿದೆ. ಇದು ಗೃಹಬಂಧನಕ್ಕಿಂತ ಹೆಚ್ಚು ಆಕರ್ಷಕವಾದ್ದರಿಂದ ಸಹಜವಾಗಿಯೇ ಶಾಸಕರು ತಮ್ಮ ಕುಟುಂಬವನ್ನು ಮರೆತು ಸುಖಿಸಬಹುದು.

ಕಳೆದ ಕೆಲವು ವರ್ಷಗಳಲ್ಲಿ ಎಲ್ಲ ಪಕ್ಷಗಳಲ್ಲೂ ನಡೆದಿರಬಹುದಾದ ಈ ‘ಸಾರ್ಥ’ಗಳು ರಾಜಕೀಯದ ಕುಸಿತಕ್ಕೆ ಹೊಸ ಆಯಾಮವನ್ನು ನೀಡಿವೆ. ಮತದಾರರು ತಮ್ಮ ಮತವನ್ನು ಐದು ವರ್ಷಕ್ಕೆ ಒತ್ತೆಯಿಟ್ಟಿದ್ದರೆ ಈ ಶಾಸಕರು ತಮ್ಮ ಸ್ಥಾನವನ್ನು ಅಮೂಲ್ಯವಾದ ಸೌಕರ್ಯಗಳಿಗೆ, ನಗದಿಗೆ, ಸ್ಥಾನ-ಸವಲತ್ತುಗಳಿಗೆ ಒತ್ತೆಯಿಟ್ಟಿದ್ದಾರಾದ್ದರಿಂದ ಇವರನ್ನು ಆರಿಸಿದ ಜನರು ಬಿಡಿ, ಅವರವರ ‘ಮಾತೃ’ ಪಕ್ಷಗಳೇ ನಂಬುವ ಸ್ಥಿತಿಯಿಲ್ಲ. ತಾಯಿಯೇ ನಂಬದ ಮಕ್ಕಳ ಉದಾಹರಣೆಗೆ ನಮ್ಮ ಶಾಸಕರಿಗಿಂತ ಒಳ್ಳೆಯ ಉದಾಹರಣೆಯಿಲ್ಲ.

ಭಾಜಪದ ಧೋರಣೆಗಳು ಒಂದು ಬೃಹತ್ ಸಂಶೋಧನೆಗೆ ಅರ್ಹ. ಅವರು ಬೇಕೆಂದಲ್ಲಿ -ತ್ರಿವಳಿ ತಲಾಕ್, ನಮಾಝ್‌ನ ಜಾಗ, ಮತಾಂತರದಂತಹ ಪ್ರಸಂಗಗಳಲ್ಲಿ- ನ್ಯಾಯಾಂಗದ, ಸಂವಿಧಾನದ, ಪರವಾಗಿರುತ್ತಾರೆ; ಅನುಕೂಲವಾಗದಿದ್ದರೆ- ಶಬರಿಮಲೆಯಂತಹ ಪ್ರಸಂಗಗಳಲ್ಲಿ- ನ್ಯಾಯಾಂಗಕ್ಕೆ, ಸಂವಿಧಾನಕ್ಕೆ ಸೆಡ್ಡುಹೊಡೆಯುತ್ತಾರೆ. ಪ್ರಾಯಃ ಜನರನ್ನು ಮರುಳುಮಾಡುವ ಯಾವುದೇ ಕಾಯಕವು ಪ್ರಜಾಪ್ರಭುತ್ವವೆಂದು ಪರಿಗಣಿಸಲ್ಪಡುವ ಪ್ರಸ್ತುತ ಸ್ಥಿತಿಯಲ್ಲಿ ಎಲ್ಲವೂ ಸರಿಯೇ. ಚಾಣಕ್ಯ-ಅಮಾತ್ಯ ರಾಕ್ಷಸರು ಬಿಡಿ, ರಾಬರ್ಟ್ ಕ್ಲೈವ್‌ನಂತಹ ಧೂರ್ತ ಮುತ್ಸದ್ದಿಯೂ ಈಗ ಭಾರತದಲ್ಲಿ ನಡೆದಾಡಿದರೆ ಅವರ ಬೆರಳು ಮೂಗಿನ ಮೇಲೇರುವುದು ಖಂಡಿತ. ಏಕೆಂದರೆ ಅವರಿಗಾರಿಗೂ ತಿಳಿಯದ ಅನ್ಯಮಾರ್ಗಗಳು ಭಾರತೀಯ ಪರಂಪರೆಯ ವೈಭವವೆನ್ನಿಸಿದೆ. ಅನ್ಯಮಾರ್ಗಗಳು ಭಾರತದ ಡಿಎನ್‌ಎಯಲ್ಲಿದೆಯೆನ್ನಿಸುತ್ತದೆ. ಹಿಂದಿನಿಂದಲೂ ಭಾರತದ ಇತಿಹಾಸವನ್ನು ಗಮನಿಸಿದರೆ ಯಾವೊಬ್ಬ ದೇಶೀ ಆಳರಸನೂ ತನ್ನ ಅನುಯಾಯಿಗಳ ದ್ರೋಹದ ಹೊರತಾಗಿ ಸೋತಕಥೆಯಿಲ್ಲ.

ಪ್ರತಿಯೊಬ್ಬ ಪೃಥ್ವಿರಾಜನ ಹಿಂದೆಯೂ ಒಬ್ಬ ಜಯಚಂದನಿದ್ದ. ನಿಜವಾದ ದೇಶದ್ರೋಹವೆಂದರೆ ಪಕ್ಷಾಂತರ. ಅದನ್ನು ಇನ್ನೂ ಶಿಕ್ಷಾರ್ಹ ಅಪರಾಧವಾಗಿ ಮಾಡಿಲ್ಲದೆ ಇರುವುದು ನಮ್ಮ ರಾಜಕಾರಣದ ಪಟ್ಟಭದ್ರ ಸುವ್ಯವಸ್ಥೆಯನ್ನು ಸೂಚಿಸುತ್ತದೆ. ನಾವು ಯಾವ ಪಕ್ಷದಲ್ಲಿದ್ದೇವೆಂಬುದರ ಆಧಾರದಲ್ಲಿ ಈ ಪಕ್ಷಾಂತರವು ತಪ್ಪೋ ಸರಿಯೋ ಎಂದು ನಿರ್ಣಯವಾಗುತ್ತದೆ. ‘‘ಮಗಳು ಹೇಳಿದಂತೆ ಅಳಿಯ ಕೇಳಿದರೆ ಅವನು ಒಳ್ಳೆಯವನು; ಸೊಸೆ ಹೇಳಿದಂತೆ ಮಗನು ಕೇಳಿದರೆ ಅವನು ಕೆಟ್ಟವನು’’ ಎಂಬ ರೂಢಿಯ ಕೌಟುಂಬಿಕ ತರ್ಕ ನಮ್ಮ ಪಕ್ಷಾಂತರ ಪರ್ವಗಳಿಗೆ ಸರಿಯಾಗಿ ಅನ್ವಯಿಸುತ್ತದೆ. ಇನ್ನೊಂದು ಪಕ್ಷದವನು ನಮ್ಮ ಪಕ್ಷಕ್ಕೆ ಬಂದರೆ ಅವನಿಗೆ ಜ್ಞಾನೋದಯವಾಗಿದೆಯೆಂದು ಹೇಳುತ್ತೇವೆ; ಅದೇ ರೀತಿ ನಮ್ಮ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋದವನನ್ನು ‘ಪಕ್ಷದ್ರೋಹಿ’ ಮಾತ್ರವಲ್ಲ, ‘ದೇಶದ್ರೋಹಿ’ ಎಂದು ಟೀಕಿಸುವ ಮಟ್ಟಕ್ಕೂ ಹೋಗುತ್ತೇವೆ. ಎಲ್ಲ ಅನ್ಯಮಾರ್ಗಗಳ ಪಿತೃಪಕ್ಷ ಕಾಂಗ್ರೆಸ್. ಸರ್ವಾಧಿಕಾರ, ಭ್ರಷ್ಟಾಚಾರ, ದಮನ ನೀತಿ, ತಮಗೆ ಬೇಕಾದಂತೆ ಕಾನೂನನ್ನು ಮಾರ್ಪಡಿಸುವುದು, ಜನರನ್ನು ವಿವಿಧ ಭಂಗಿಗಳಲ್ಲಿ ನಿಂತು ಮರುಳುಮಾಡುವುದು ಇವೆಲ್ಲ ಸ್ವಾತಂತ್ರ್ಯೋತ್ತರ ಕಾಂಗ್ರೆಸ್ ಕುಸಿಯಲಾರಂಭಿಸಿದ ಮೇಲೆ ಅದರಲ್ಲೂ ಇಂದಿರಾ ಪರ್ವದಲ್ಲಿ ಆರಂಭಗೊಂಡ ಕಾಯಿಲೆಗಳು. ಇವೆಲ್ಲದರ ನಡುವೆಯೂ ಅಭಿವೃದ್ಧಿ ಆಗಿದೆ.

ಆದರೆ ಬಡತನ, ಅನಕ್ಷರತೆ, ಅನಾರೋಗ್ಯ ಮತ್ತು ಭ್ರಷ್ಟಾಚಾರ ಮುಗಿಲು ಮುಟ್ಟಿದವು. ಅವುಗಳ ಕುರಿತಂತೆ ಭ್ರಮನಿರಸನ ಹೊಂದಿದ ಜನರಿಗೆ ಆಶಾಕಿರಣವಾಗಬಲ್ಲ ಒಂದು ಪರ್ಯಾಯ ಪಕ್ಷ ಬೇಕೆನಿಸಿದರೆ ತಪ್ಪಿಲ್ಲ. ಇತರ ಅನೇಕ ಎಡ-ಬಲ ಪಕ್ಷಗಳಿದ್ದರೂ ತನ್ನ ಕಡು ಶಿಸ್ತಿನ ಮೂಲಕ ಮತ್ತು ಬಹುಮತೀಯತೆಯ ಹೊರತಾಗಿಯೂ ಒಂದು ಸಾಂಸ್ಕೃತಿಕ ಪರಿವರ್ತನೆಯನ್ನು ಹುಟ್ಟುಹಾಕುತ್ತದೆಯೆಂಬ ಅಭಿಪ್ರಾಯವನ್ನು ಹುಟ್ಟಿಸಿದ ಪಕ್ಷ ಭಾಜಪ. ಅದು ಈ ಸಂದರ್ಭವನ್ನು ಸರಿಯಾಗಿಯೇ ದುರುಪಯೋಗಪಡಿಸಿಕೊಂಡಿತು. ಜನರಿಗೆ ಕೋಮುವಾದ ಮತ್ತು ಭ್ರಷ್ಟಾಚಾರದ ನಡುವೆ ಅಭಿವೃದ್ಧಿ ಯಾರಿಂದ ಸಾಧ್ಯ ಎಂಬ ನಾಣ್ಯಚಿಮ್ಮುವಿಕೆಯಲ್ಲಿ ಕಾಂಗ್ರೆಸ್‌ನ್ನು ಭಾಜಪ ಸೋಲಿಸಿತು. ಇತರ ಅನೇಕ ಪಕ್ಷಗಳು ಪ್ರಾದೇಶಿಕವೆಂಬ ನೆಲೆಯಲ್ಲೋ, ಭಾರತದ ಮಣ್ಣಿಗೆ ಹೊಂದಿಕೆಯಾಗುವುದಿಲ್ಲವೆಂಬ ಕಾರಣವಾಗಿಯೋ ನೇಪಥ್ಯಕ್ಕೆ ಸರಿದು ತಮಗೆ ಅನುಕೂಲವಾದ ಮಳೆಗೆ ಚಿಗುರುವ ಸನ್ನ್ನಾಹ ಮಾಡಿದವು. ಎಡಪಕ್ಷಗಳಂತೂ ಇಡೀ ವಿಶ್ವದಲ್ಲಿ ಕೇರಳದಲ್ಲಿ ಮಾತ್ರವೇ ಅದೂ ಬಹು ಕಷ್ಟದಲ್ಲಿ ಬದುಕನ್ನು ಕಂಡವು.

ದೇಶದ ಎಲ್ಲ ರಾಜಕೀಯ ತಂತ್ರಗಾರಿಕೆಗೆ ಮತ್ತು ಘೋಷಣೆಗೆ ಕಾಂಗ್ರೆಸ್ ತಾಯಿಯಂತಿದೆ; ಅಥವಾ ಗುರುವಿನಂತಿದೆ. ಕೆಲವರು ಅರ್ಜುನರಂತೆ ಅದರ ಖಾಸಾ ಶಿಷ್ಯರಂತಿದ್ದರೆ ಭಾಜಪದಂತಹ ಪಕ್ಷಗಳು ಏಕಲವ್ಯರಂತೆ ಅದನ್ನು ಗುರುವಿನಂತೆ ಮಾನ್ಯಮಾಡಿ ತಮ್ಮ ಯಾವುದೇ ಲೋಪಕ್ಕೂ ಕಾಂಗ್ರೆಸನ್ನು ಹೊಣೆಮಾಡುತ್ತಿವೆ. ಕಳೆದ ನಾಲ್ಕೂವರೆಗೂ ಮಿಕ್ಕಿ ವರ್ಷಗಳಲ್ಲಿ ತಂದ ಬಹುಪಾಲು ಅಕ್ರಮ ಕಾನೂನುಗಳಿಗೆ ಬೇರಿರುವುದು ಕಾಂಗ್ರೆಸ್ ಆಡಳಿತದಲ್ಲಿ. ಜಿಎಸ್‌ಟಿ ಕಾನೂನು 2008ರಲ್ಲಿ ಕಾಂಗ್ರೆಸ್ ಆರಂಭಿಸಿದ್ದು. ಈಚೆಗೆ ಕೇಂದ್ರ ಸರಕಾರ ಆರಿಸಿದ ಹತ್ತು ಸರಕಾರಿ ಸಂಸ್ಥೆಗಳು ಯಾರ ಮಾಹಿತಿಯನ್ನಾದರೂ ಪಡೆಯಬಹುದೆಂಬ ಕಾನೂನಿಗೆ ಸಾಕಷ್ಟು ಪ್ರತಿರೋಧ ಕಾಂಗ್ರೆಸಿನಿಂದಲೂ ಉಂಟಾಯಿತು. ಆದರೆ ಈ ಕಾನೂನಿನ ತಾಯಿಬೇರನ್ನು ಕಾಂಗ್ರೆಸ್ ಸರಕಾರ ತನ್ನ ಆಡಳಿತದಲ್ಲಿ ನೆಟ್ಟಿತ್ತು ಎಂಬುದು ಆನಂತರ ಬಹಿರಂಗವಾಯಿತು. ರಫೇಲ್ (ಅ)ವ್ಯವಹಾರದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕಾಂಗ್ರೆಸ್ ಪ್ರಧಾನಿಯವರ ಮತ್ತು ಜನರ ಮುಂದಿಟ್ಟಿತು. ಪ್ರತಿಷ್ಠಿತ ಭಾರತೀಯ ಸಂಸ್ಥೆಯಾದ ಎಚ್‌ಎಎಲ್ ಸಂಸ್ಥೆಗೆ ಪೂರೈಕೆಯ ಬೇಡಿಕೆಯನ್ನು ನೀಡದೆ ಫ್ರೆಂಚ್ ಸಂಸ್ಥೆಗೆ ಭ್ರಷ್ಟ ಕಾರಣಗಳಿಗಾಗಿ ನೀಡಿದೆಯೆಂದು ಆರೋಪಿಸಿತು. ಆದರೆ ಕಾಂಗ್ರೆಸ್ ಸರಕಾರ ತನ್ನ ಆಡಳಿತದಲ್ಲೂ ಇದನ್ನೇ ಮಾಡಿತ್ತೆಂದು ಭಾಜಪವು ನೆನಪಿಸಿತು. ಹೋಗಲಿ, ಇಂತಹ ಗತಕಾಲದ ಸಂಗತಿಗಳು ಅಕ್ರಮವಾಗಿದ್ದರೆ ಅವನ್ನು ವಿರೋಧಿಸಿದ ಪಕ್ಷವು ಅದನ್ನನುಸರಿಸಬೇಕೆಂಬ ಧೋರಣೆ ತಪ್ಪುಎಂಬ ನೆಪದಲ್ಲಿ ಜನರಾದರೂ ಭಾಜಪದ ಧೋರಣೆಯನ್ನು ವಿರೋಧಿಸಬಹುದು.

ಆದರೆ ಇತ್ತೀಚೆಗಷ್ಟೇ ಹೊರಬಿದ್ದ ಸರ್ವೋಚ್ಚ ನ್ಯಾಯಾಲಯದ ಶಬರಿಮಲೆ ತೀರ್ಪಿನ ವಿರುದ್ಧ ಈ ಎರಡೂ ಪಕ್ಷಗಳು ಸಂವಿಧಾನವನ್ನೂ, ಕಾನೂನನ್ನೂ, ನ್ಯಾಯವನ್ನೂ, ಕೊನೆಗೆ ಸಾರ್ವಜನಿಕ ವ್ಯವಸ್ಥೆಯನ್ನೂ ಮಣ್ಣುಪಾಲು ಮಾಡಿದವು. ಮಹಿಳಾ ಮೀಸಲಾತಿ ಕಾನೂನು ಸಂಸತ್ತಿನಲ್ಲಿ ಧೂಳು ಹಿಡಿದು ಕುಳಿತರೆ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸುವಲ್ಲಿ ಈ ಎರಡೂ ಪಕ್ಷಗಳು ಪೈಪೋಟಿಗಿಳಿದಿವೆ. ಇಂತಹ ಒಳದಾರಿಗಳನ್ನು ಅನುದಿನವೂ ಅನುಸರಿಸುವ ಈ ಎರಡೂ ಪಕ್ಷಗಳು ಶ್ರೀಸಾಮಾನ್ಯನಿಗೆ ನಿಜಕ್ಕೂ ಯಾವ ರೀತಿಯ ಪರಿಹಾರವನ್ನು ನೀಡಬಲ್ಲವು ಎಂದು ಊಹಿಸುವುದೇ ತಪ್ಪು. ತಮ್ಮ ಹಸಿವು-ಬಾಯಾರಿಕೆಗಳನ್ನು ಇಂಗಿಸದೆ ಇವು ದೇಶಕ್ಕಾಗಲೀ ಜನರಿಗಾಗಲೀ ಯಾವುದೇ ನೆರವನ್ನು ನೀಡವು. ಇವುಗಳಿಗೆ ಜನಸೇವೆಯೆಂದರೆ ಅಧಿಕಾರಕ್ಕೇರುವುದು; ಅಧಿಕಾರದ ಹೆಸರಿನಲ್ಲಿ ಸ್ವಜಾತಿ ಮತ್ತಿತರ ಸ್ವಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವುದು; ಅರ್ಹರಿಗೆ ಅವಕಾಶ ತಪ್ಪಿಸುವುದು; ಜನರನ್ನು ದಿಕ್ಕುಗೆಡಿಸುವುದು. ಕಾಂಗ್ರೆಸ್ ಭಾಜಪವನ್ನು ಮತೀಯ, ಕೋಮುವಾದಿಯೆಂದು ಹಳಿದರೆೆ ಭಾಜಪವು ಕಾಂಗ್ರೆಸ್‌ನ್ನು ಭ್ರಷ್ಟ, ವಂಶಾಡಳಿತದ ಪಕ್ಷವೆಂದು ಹಳಿಯುತ್ತದೆ. ಇವುಗಳಲ್ಲಿ ಯಾವೊಂದನ್ನು ನಂಬಿದರೂ ನಮ್ಮ ಪ್ರಜ್ಞೆಯೇ ಹಳಿತಪ್ಪುವ ಸಾಧ್ಯತೆಯಿದೆ. ಪರಿಸ್ಥಿತಿ ಹೀಗಿರುವಾಗ ಯಾರು ಹಿತವರು ಈ ಇಬ್ಬರೊಳಗೆ ಎಂದು ತೀರ್ಮಾನಿಸುವುದು ಸಾಮಾನ್ಯರಿಗೂ ಕಷ್ಟ. ಎರಡು ಆಯ್ಕೆಗಳಲ್ಲದೆ ಬೇರೆ ಆಯ್ಕೆ ಸದ್ಯಕ್ಕಿಲ್ಲ. ಆದರೆ ಈಗಿನ ಬೆಳವಣಿಗೆಯಲ್ಲಿ ಮೂರನೇ ಶಕ್ತಿಯೊಂದು ಉದ್ಭವಿಸಬಹುದಾದರೆ ನಿಜಕ್ಕೂ ಸ್ವಾಗತಾರ್ಹ. ಇಂದು ಮತದಾರನಿಗೆ ‘ಧನಾತ್ಮಕ’ (ಈ ಪದದ ರಾಜಕೀಯ ವ್ಯಂಗ್ಯದೊಂದಿಗೂ!) ಆಯ್ಕೆಗಳಿಲ್ಲ. ಜಾತ್ಯತೀತನಾದರೆ ಕೋಮುವಾದವನ್ನು, ಪ್ರಾಮಾಣಿಕನಾದರೆ ಭ್ರಷ್ಟರನ್ನು ತಿರಸ್ಕರಿಸಬೇಕು, ಈ ಎರಡನ್ನೂ ತಿರಸ್ಕರಿಸುವವರು ದೇಶದ ಭಾಗ್ಯವನ್ನು ಕೊಂಡಾಡುತ್ತ ಮನೆಸೇರಬೇಕು, ಅಷ್ಟೇ.

ಈ ದೃಷ್ಟಿಯಿಂದ ತಮ್ಮ ಅಸ್ತಿತ್ವವೇ ನಂದಿಹೋಗುವ ಅಪಾಯವಿದ್ದರೂ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಆ ಮೂಲಕ ಸಂವಿಧಾನದ ಮೌಲ್ಯಗಳನ್ನು ಗೌರವಿಸಿದ ಕೇರಳ ಸರಕಾರವನ್ನು ಮತ್ತು ಅದನ್ನು ಬೆಂಬಲಿಸುತ್ತಲೇ ಬಂದ ಎಡ ಪಕ್ಷಗಳನ್ನು ಅಭಿನಂದಿಸಲೇಬೇಕು.
ಇವೆಲ್ಲ ಮೇಲ್ನೋಟಕ್ಕೆ ಕಾಣುವ ರಾಜಕಾರಣದ ಅನ್ಯಮಾರ್ಗಗಳು. ಇಂತಹ ಹಾದಿಯಲ್ಲಿ ಹೋಗುವುದೇ ರಾಜಕಾರಣವಾಗಿರುವಾಗ ಉಳಿದವೆಲ್ಲ ಹಾಳೂರಾದರೆ, ಉಳಿದವರೆಲ್ಲ ಹಾಳೂರಿನಲ್ಲಿ ಉಳಿಯುವ ಗೌಡರಾಗುತ್ತಾರೆ; ಸಿನಿಕತನದ ಭ್ರಮೆಗಳಾಗುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)