varthabharthi

ಸಿನಿಮಾ

ಬೀರಬಲ್ ಸಸ್ಪೆನ್ಸ್ ಮತ್ತು ಥ್ರಿಲ್ಲರ್‌ಗೆ ಕೊರತೆಯಿಲ್ಲದ ಚಿತ್ರ

ವಾರ್ತಾ ಭಾರತಿ : 20 Jan, 2019

ಬೀರಬಲ್ ಎನ್ನುವ ಹೆಸರನ್ನು ಅಕ್ಬರ್ ಮಹಾರಾಜನ ಜೊತೆಗೆ ಕೇಳಿರುತ್ತೇವೆ. ಆತನ ಹಾಸ್ಯ ತುಂಬಿದ ಬುದ್ಧಿವಂತಿಕೆಯ ಕತೆಗಳನ್ನು ಬಹಳಷ್ಟು ಓದಿರುತ್ತೇವೆ. ಅದೇ ರೀತಿಯ ನಿರೀಕ್ಷೆಯಿಂದ ಚಿತ್ರ ನೋಡಲು ಹೋದರೆ ನಿರಾಶೆ ಖಚಿತ. ಯಾಕೆಂದರೆ ಇಲ್ಲಿ ತಮಾಷೆಗಿಂತ ಹೆಚ್ಚು ಚಾಣಾಕ್ಷತೆಗೆ ಮಾತ್ರ ಜಾಗ.

ಎಂಟು ವರ್ಷಗಳ ಹಿಂದೆ ನಡೆದಿರುವ ಕೊಲೆಯೊಂದರಲ್ಲಿ ನಿರಪರಾಧಿಗೆ ಶಿಕ್ಷೆಯಾಗಿರುತ್ತದೆ. ಆತ ಜೀವಾವಧಿ ಶಿಕ್ಷೆಯ ಮಧ್ಯೆ ತಾತ್ಕಾಲಿಕ ಬಿಡುಗಡೆ ಪಡೆದು ಮನೆಗೆ ಮರಳಿರುತ್ತಾನೆ. ಅದೇ ವೇಳೆ ಆತನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಮಹೇಶ್ ದಾಸ್ ಎನ್ನುವ ವಕೀಲನೊಬ್ಬ ಮುಂದೆ ಬರುತ್ತಾನೆ. ವಿಶೇಷವೇನೆಂದರೆ ಅದಕ್ಕಾಗಿ ಆತ ಫೀಸ್ ಪಡೆಯದೆ ಕೂಡ ಹೋರಾಡಲು ಸಿದ್ಧನಿರುತ್ತಾನೆ. ಆತನ ಈ ಹೋರಾಟ ನಿರಪರಾಧಿಗೆ ನ್ಯಾಯ ದೊರಕಿಸಿಕೊಡುತ್ತದಾ? ವಕೀಲನ ಹೋರಾಟ ಯಾವ ರೀತಿಯಲ್ಲಿರುತ್ತದೆ? ಎನ್ನುವ ಎಲ್ಲ ವಿಚಾರಗಳಿಗೆ ಚಿತ್ರದ ಕ್ಲೈಮ್ಯಾಕ್ಸ್ ಸ್ಪಷ್ಟವಾದ ಉತ್ತರ ನೀಡುತ್ತದೆ. ಆದರೆ ಅದಕ್ಕಾಗಿ ಎರಡೂ ಮುಕ್ಕಾಲು ಗಂಟೆ ಕಾಯಬೇಕಾಗುತ್ತದೆ. ಹೌದು ಇದು ತುಸು ದೊಡ್ಡ ಚಿತ್ರವೇ ಹೌದು. ಅದರಲ್ಲಿಯೂ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾಗಳೆಂದರೆ ನಮಗೆ ಬೇಗ ಮುಗಿದಷ್ಟು ಆಸಕ್ತಿ. ಆದರೆ ಇಲ್ಲಿ ಮೊಗೆದಷ್ಟು ಮುಗಿಯದ ಸಮಸ್ಯೆ.

 ಚಿತ್ರದಲ್ಲಿ ಮಹೇಶ್‌ದಾಸ್ ಎನ್ನುವ ವಕೀಲನಾಗಿ ಎಂ.ಬಿ. ಶ್ರೀನಿವಾಸ್ ನಟನೆ ಚೆನ್ನಾಗಿದೆ. ಚಿತ್ರವನ್ನು ಸ್ವತಃ ನಿರ್ದೇಶಿಸಿದ್ದರೂ ಕೂಡ ತಮ್ಮ ಪಾತ್ರಕ್ಕೆ ಯಾವುದೇ ಅನಗತ್ಯ ಬಿಲ್ಡಪ್‌ಗಳಿಲ್ಲದೆ ಸಹಜತೆ ನೀಡುವಲ್ಲಿ ಶ್ರೀನಿವಾಸ್ ಗೆದ್ದಿದ್ದಾರೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ಕೂಡ ಅಷ್ಟೇ, ಜಾಹ್ನವಿ ಪಾತ್ರವನ್ನು ಊಟಕ್ಕೆ ಉಪ್ಪಿನ ಕಾಯಿಯಂತೆ ಅವರ ಗುಣಗಳನ್ನು ತೋರಿಸುವುದಕ್ಕೆ ಮಾತ್ರ ಬಳಸಲಾಗಿದೆ. ಇವರಿಬ್ಬರ ಜೋಡಿಗೆ ಒಂದು ಹಾಡು ಇದೆಯಾದರೂ, ಕ್ಲೈಮ್ಯಾಕ್ಸ್ ನ ತಾರ್ಕಿಕ ವಿವರಣೆಯ ಪ್ರಕಾರ ಅದು ಕೂಡ ಅಗತ್ಯ ಇರಲಿಲ್ಲ ಎನಿಸುತ್ತದೆ!

ಸಾಮಾನ್ಯವಾಗಿ ಸಸ್ಪೆನ್ಸ್ ಚಿತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಸಂದೇಹಾಸ್ಪದ ವ್ಯಕ್ತಿಗಳನ್ನು ಸೃಷ್ಟಿಸಿ ಕೊನೆಗೆ ಕತೆಯಲ್ಲಿ ತೋರಿಸಿಯೇ ಇರದ ಮತ್ತೊಬ್ಬನನ್ನು ಹೊಸದಾಗಿ ತಂದು ಕೂರಿಸುವ ಕೆಟ್ಟ ಗುಣ ಕೆಲವರಲ್ಲಿರುತ್ತದೆ. ಆದರೆ ಇಲ್ಲಿ ಹಾಗಿಲ್ಲ. ಯಾಕೆಂದರೆ ನಮಗೆ ತೋರಿಸಿರುವ ಪಾತ್ರಗಳಲ್ಲಿ ಒಬ್ಬನೇ ಕೊಲೆಗಾರನಾಗಿರುತ್ತಾನೆ. ಆದರೆ ಕೊಲೆಗಾರನ ಬಗ್ಗೆಯಾಗಲೀ, ವಕೀಲನ ಹಿನ್ನೆಲೆಯ ಬಗ್ಗೆಯಾಗಲೀ ಯಾವ ಸಂದೇಹವೂ ಮೂಡದ ರೀತಿಯಲ್ಲಿ ಚಿತ್ರಕತೆ ತಯಾರಿಸಲಾಗಿದೆ. ಈ ಪ್ರಯತ್ನದಲ್ಲಿ ಒಂದು ಕೊಲೆ ನಡೆದ ವಿಧಾನವನ್ನು ಹಲವು ಬಾರಿ ಮರುಕಳಿಸುವ ಮಾದರಿಯಲ್ಲಿ ವಿವರಿಸುತ್ತಾರೆ. ಈ ವಿವರಣೆ ಧಾರಾವಾಹಿಗಳಲ್ಲಿ ಎಳೆದಾಡುವ ಕೋರ್ಟ್ ಪ್ರಕರಣಗಳಂತೆ ಭಾಸವಾಗುತ್ತದೆ. ಆದರೆ ಅದೆಲ್ಲವನ್ನು ಸಹಿಸುವಂತೆ ಮಾಡುವಲ್ಲಿ ಕಲಾವಿದರ ನೈಜ ಅಭಿನಯ ಮತ್ತು ಕೆಲವೊಂದೆಡೆ ಆಳವಾಗಿ ಚಿಂತಿಸುವಂತೆ ಮಾಡುವ ಸಂಭಾಷಣೆಗಳು ಕೂಡ ಕಾರಣವಾಗಿರುತ್ತವೆ. ಜೊತೆಗೆ ಸೌರಭ್ ವೈಭವ್ ಮತ್ತು ಸೌರಭ್ ಲೋಖಂಡೆ ನೀಡಿರುವ ಹಿನ್ನೆಲೆ ಸಂಗೀತ ಆಕರ್ಷಕವಾಗಿದೆ. ಸುಜಯ್ ಶಾಸ್ತ್ರಿ, ವಿನೀತ್, ಅರುಣಾ ಬಾಲರಾಜ್ ಮತ್ತು ಮಧುಸೂದನ್, ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಅಭಿನಯ ನೀಡಿದ್ದಾರೆ. ರವಿಭಟ್ ಮತ್ತು ಸುರೇಶ್ ಹೆಬ್ಳೀಕರ್ ಪಾತ್ರಗಳಿಗೆ ದೊಡ್ಡ ಅವಕಾಶಗಳಿಲ್ಲವಾದರೂ ಪಾತ್ರಗಳು ನೆನಪಲ್ಲಿ ಉಳಿಯುತ್ತವೆ. ಒಟ್ಟಿನಲ್ಲಿ ನಿರ್ದೇಶಕರು ಸಂಕಲನಕಾರರಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸದಿರದು. ಆದರೆ ಟ್ರೆಂಡ್‌ಗೆ ತಕ್ಕಂತೆ ಬರುವ ಚಿತ್ರಗಳ ನಡುವೆ ಒಂದು ವಿಭಿನ್ನ ಸ್ಥಾನ ಪಡೆಯುವಲ್ಲಿ ‘ಬೀರಬಲ್’ ಯಶಸ್ವಿಯಾಗಿದೆ.

ತಾರಾಗಣ: ಎಂ.ಬಿ. ಶ್ರೀನಿವಾಸ್, ರುಕ್ಮಿಣಿ ವಸಂತ್
ನಿರ್ದೇಶಕ: ಎಂ.ಬಿ. ಶ್ರೀನಿವಾಸ್
ನಿರ್ಮಾಪಕ: ಟಿ. ಆರ್. ಚಂದ್ರಶೇಖರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)