varthabharthi


ಅನುಗಾಲ

ಬನ ಹುಣ್ಣಿಮೆಯ ಸೌರಭ

ವಾರ್ತಾ ಭಾರತಿ : 24 Jan, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕನ್ನಡದ ನೆಲದಲ್ಲಿ ಇಂತಹ ವ್ಯಕ್ತಿತ್ವಗಳು ಅಪರೂಪ. ಈ ಎಲ್ಲ ಪರಿಚಯಗಳ ನಡುವೆ ಅವರು ಹಿನ್ನೆಲೆಯಲ್ಲೇ ಉಳಿದದ್ದು ತಲೆಮಾರುಗಳ ಸಂಕಟವಾಗಿ ಉಳಿಯಬಹುದೆಂದು ಕಾಣಿಸುತ್ತದೆ. ಕಾಡಬೆಳದಿಂಗಳಿನಂತೆ ವಿಕಸಿಸಿದ ಅವರ ಪ್ರತಿಭೆಯೆಲ್ಲ ನೆಲದಡಿಯಲ್ಲೇ ಹರಿದಾಡಿ ಕಾಣಬೇಕಾದಷ್ಟು ಬೆಳಕನ್ನು ಕಾಣಲೇ ಇಲ್ಲ. ಬನಹುಣ್ಣಿಮೆಯಂದು ಅವರು ತಮ್ಮ ಬದುಕನ್ನು ಮುಗಿಸಿದ್ದು ಸಾಂಕೇತಿಕವೂ ಹೌದು; ಅರ್ಥಪೂರ್ಣವೂ ಹೌದು.


ಪ್ರಾರ್ಥನೆ
ಓ ತಂದೆ!
ದ್ವೇಷ ಮದ ಮಾತ್ಸರ್ಯ ಹೊಗೆಯಾಡುವೆಡೆಯಲ್ಲಿ
ಪ್ರೇಮ ಬೀಜವ ಬಿತ್ತಿ ಬೆಳೆಸಿ ಕಾಪಾಡು;
ನ್ಯಾಯ ನೀತಿಗಳನ್ನು ಮರೆತ ಮಾನವರೆಡೆಗೆ
ಕ್ಷಮೆಯೆಂಬ ಕುಡಿನೋಟ ಬೀರಿ ಸೊಗ ನೀಡು.
ಸಂಶಯದ ವಿಷದುರಿಯು ಉರಿವ ಎದೆ ಎದೆಯೊಳಗೆ
ನಂಬಿಕೆಯ ತಂಬೆಲರ ಬೀಸಿ ಉರಿ ತಣಿಸು;
ಆಶಾ ನಿರಾಶೆಗಳ ಹೊನಲೊಳಗೆ ಹೋಗುವಗೆ
ಭರವಸೆಯ ಕೈಗೋಲನಿತ್ತು ಭಯ ನೀಗು.
ಕತ್ತಲೆಯ ಪರಿಹರಿಸಿ ಜ್ಞ್ಞಾನ ದೀವಿಗೆಯುರಿಸಿ
ನಿತ್ಯ ದುಃಖಿಗಳೆದೆಗೆ ಸಂತಸವ ನೀಡು.

ಸಂತ ಫ್ರಾನ್ಸಿಸ್ ಅಸ್ಸಿಸಿಯೆಂಬ 13ನೇ ಶತಮಾನದ ಇಟಾಲಿಯನ್ ಪಾದ್ರಿಯ ಬರವಣಿಗೆಯನ್ನು ಆಧರಿಸಿ ಕನ್ನಡದಲ್ಲಿ ಈ ಪದ್ಯವನ್ನು ಬರೆದವರು ‘ಸೌರಭ’ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಆದರೆ ಕನ್ನಡ ಸಾಹಿತ್ಯದ ಮುಖ್ಯ ವಾಹಿನಿಯಲ್ಲಿ ಅಷ್ಟೇನೂ ಪ್ರಸಿದ್ಧಿಯನ್ನು ಕಾಣದೆ ಉಳಿದ, ವೃತ್ತಿಯಲ್ಲಿ ವಕೀಲರಾಗಿದ್ದ ಸರವು ರಾಮ ಭಟ್. (ಇಂತಹ ಅನೇಕ ಕವಿತೆಗಳು ಅವರ ಬತ್ತಳಿಕೆಯಲ್ಲಿದ್ದವು.)

ರಾಮ ಭಟ್ ದಿನಾಂಕ 03.03.1931ರಂದು ಜನಿಸಿ 21.01.2019 ರಂದು ಗತಿಸಿದವರು. ಇವರು ನನ್ನ ಹೆಣ್ಣು ಕೊಟ್ಟ ಮಾವನಾಗಿರುವುದು ನನ್ನ ಸುಯೋಗವಾದರೂ ಇಲ್ಲಿ ಪ್ರಾಸಂಗಿಕ ಮಾತ್ರ. ಸತ್ತ ನಂತರ ಉಳಿಯಬೇಕಾದರೆ ಏನನ್ನು ಮಾಡಬೇಕು? ಉಳಿಯುವಂತಹದ್ದನ್ನು ಬರೆಯಬೇಕು, ಇಲ್ಲವೇ ಇನ್ನೊಬ್ಬರು ಬರೆಯಬಹುದಾದ ಬದುಕನ್ನು ಬಾಳಬೇಕು. ಸಾಂಸ್ಕೃತಿಕ ಆಸಕ್ತಿಯನ್ನು ಕಾಪಾಡಿಕೊಂಡು ಬಂದು ಸಜ್ಜನ, ಸರಳ ಬದುಕನ್ನು ಬಾಳಿದ ಅನೇಕ ಶ್ರೀಸಾಮಾನ್ಯರಲ್ಲಿ ರಾಮ ಭಟ್ ಒಬ್ಬರು. ಡಾಂಭಿಕ, ಕೃತಕ ಬದುಕನ್ನು ಬಾಳಿದ ಆದರೆ ಒಳ್ಳೆಯ ಬರಹಗಳನ್ನು ನೀಡಿದ ಅಸಾಮಾನ್ಯರೊಂದಿಗೆ ಇಂತಹವರನ್ನು ಹೋಲಿಸಲು ಸಾಧ್ಯವಿಲ್ಲ. ಆದ್ದರಿಂದ ಅಪರೂಪದ ಈ ಬರಹವು ಅಪ್ಪಟ ಬಂಗಾರದಂತೆ ಕಾಣಿಸುತ್ತದೆ.

ರಾಮಭಟ್ ಬಂಟ್ವಾಳ ತಾಲೂಕು ಕೋಡಪದವು ಗ್ರಾಮದ ಅಷ್ಟೇನೂ ಅನುಕೂಲವಿಲ್ಲದಿದ್ದ ಹವ್ಯಕ ಬ್ರಾಹ್ಮಣ ಅವಿಭಕ್ತ ಕುಟುಂಬದಲ್ಲಿ ಹೆತ್ತವರ ಒಬ್ಬನೇ ಗಂಡುಮಗನಾಗಿ ಹುಟ್ಟಿದವರು. (ಅವರಿಗೆ ಮೂವರು ಸೋದರಿಯರು.) ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ. ಮುಗಿಸಿ ಮದ್ರಾಸ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಪುತ್ತೂರಿನಲ್ಲಿ ಕಾನೂನು ವೃತ್ತಿಯನ್ನು ಆರಂಭಿಸಿದರು. ಕುಟುಂಬದ ಮತ್ತು ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ಹೆಗಲು ಕೊಟ್ಟು ಮುಜುಗರವನ್ನನುಭವಿಸಿದರೂ ಸಾಮಾಜಿಕವಾಗಿ ಅತ್ಯಂತ ಗೌರವವನ್ನು ಪಡೆದೇ ಬದುಕಿದರು. ಕೆಲವು ವರ್ಷಗಳ ಬಳಿಕ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿಯೂ ವೃತ್ತಿಯನ್ನು ಮುಂದುವರಿಸಿದರು. ಅನಂತರ ಕೊಡಗು ಸಂಪಾಜೆಯ ಬಳಿಯಿದ್ದ ಒಂದು ಪುಟ್ಟ ಆಸ್ತಿಗೆ ತನ್ನ ಪತ್ನಿ ಮಕ್ಕಳ ಸಹಿತ ವಾಸವನ್ನು ವರ್ಗಾಯಿಸಿ ಸುಳ್ಯದಲ್ಲಿ ಕೆಲವು ಕಾಲ ವೃತ್ತಿಯನ್ನು ಮುಂದುವರಿಸಿದರು. ಸುಮಾರು ಆರಡಿ ಎತ್ತರದ, ಎಣ್ಣೆಗಪ್ಪಿನ ಮೈಬಣ್ಣದ ಗಂಭೀರ ಮತ್ತು ಸುಂದರ ಮೈಕಟ್ಟಿನ ಅವರು ಬಹಳ ಕಾಲ ಆರೋಗ್ಯವಾಗಿಯೇ ಇದ್ದರು. ವಯಸ್ಸಿನ ಕಾರಣದಿಂದ ವೃತ್ತಿಯಿಂದ ನಿವೃತ್ತಿಗೊಂಡು ಸಂಪಾಜೆಯಲ್ಲೇ ಕೊನೆಯ ತನಕವೂ ಬದುಕಿದರು. ತೀರಿಕೊಳ್ಳುವ ಪೂರ್ವದಲ್ಲಿ ಒಂದೆರಡು ವರ್ಷ ತೀವ್ರ ಅನಾರೋಗ್ಯದಿಂದ ಬಳಲಿದರು. (ತಮ್ಮ ಕಣ್ಣೆದುರೇ ಗತಿಸಿದ ಹಲವು ಹಿರಿ-ಕಿರಿ ಜೀವಗಳು ಅವರನ್ನು ಹಿಂಡಿಹಿಪ್ಪೆಯಾಗಿಸಿದವೆಂದು ಕಾಣುತ್ತದೆ.) ಇಚ್ಛಾಮರಣಿಯಂತೆ ಉತ್ತರಾಯಣಕ್ಕೆ ಕಾದು ಮಕರ ಸಂಕ್ರಾಂತಿಯ ಬಳಿಕ ಬನದ ಹುಣ್ಣಿಮೆಯ ಸೋಮವಾರ ಇಹಲೋಕವನ್ನು ತ್ಯಜಿಸಿದರು.

ಇವಿಷ್ಟೇ ದಿನಚರಿ ಎಲ್ಲರ ಬದುಕಿನಲ್ಲೂ ಇರುತ್ತವೆ. ಆದರೆ ಸೌರಭರಿಗಿದ್ದ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಸಕ್ತಿಗಳು ಅವರ ಚಿತ್ತವನ್ನು ಹುತ್ತಗಟ್ಟಿಸಿದವು. ತನ್ನ ಸಾಂಪ್ರದಾಯಿಕ ಪರಿಸರದ ನಡುವೆ (ಅವರ ಸರವು ಮನೆಯಲ್ಲಿ ಅವರ ಒಟ್ಟು ಕುಟುಂಬ ಬದುಕುತ್ತಿದೆ; ಅವರ ಮನೆಯಲ್ಲಿ ಇಂದಿಗೂ ದೈನಂದಿನ ಪೂಜೆ ನಡೆಯುತ್ತದೆ.) ಅವರು ಒಬ್ಬ ಕ್ರಾಂತಿಕಾರಿಯ ಹಾಗೆ ಅರಳಿದ್ದು ಒಂದು ಅಪೂರ್ವ ಆದರೆ ಯಾರೂ ಗಮನಿಸದ ಘಟನೆ. ಕಾಲೇಜು ದಿನಗಳಲ್ಲಿ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಬರಹಗಳ ನಿಷ್ಠಾವಂತ ಓದುಗರಾಗಿದ್ದರು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಅವರದ್ದು ಸುಂದರವಾದ ಕೈಬರಹ. ಅವರ ಮನೆಯಲ್ಲಿರುವ ಅಪೂರ್ವ ಗ್ರಂಥ ಭಂಡಾರ ಅವರ ಆಸಕ್ತಿಗಳ ನಿದರ್ಶನ. ವಿದ್ಯಾರ್ಥಿದೆಸೆಯಲ್ಲೇ ಅವರು ಕಥೆ, ಕವನ, ವಿಮರ್ಶೆಗಳನ್ನು ಬರೆಯುತ್ತಿದ್ದರು. ಅವು ಕನ್ನಡದ ಆಗಿನ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದಿವಂಗತ ಕೆ. ಶಿವಶಂಕರ ಭಟ್, ಮಂಗಳೂರಿನ ನ್ಯಾಯವಾದಿ ದಿವಂಗತ ಎ.ಪಿ.ಗೌರಿಶಂಕರ, ಕೊಡಗಿನ ಖ್ಯಾತ ನ್ಯಾಯವಾದಿ ಶ್ರೀ ಎನ್.ಜಿ.ವಾಸುದೇವ ಮುಂತಾದವರು ಕಾನೂನು ಕಾಲೇಜಿನಲ್ಲಿ ಅವರ ಸಮಕಾಲೀನರು.

ನವೋದಯದಿಂದ ಕನ್ನಡ ಸಾಹಿತ್ಯ ನವ್ಯಕ್ಕೆ ಹೊರಳುತ್ತಿದ್ದ ಕಾಲ ಅದು. ಇಂತಹ ಸಂದರ್ಭದಲ್ಲಿ ಅವರಿಗೆ ಕಾರಂತ, ಕಡೆಂಗೋಡ್ಲು, ಮುಳಿಯ, ಸೇಡಿಯಾಪು ಮುಂತಾದ ಕನ್ನಡದ ಹಿರಿಯ ಸಾಹಿತಿಗಳ ನಿಕಟ ಪರಿಚಯವಿತ್ತು. ಎಡಪಂಥೀಯ ಒಲವಿತ್ತು. ಮದ್ರಾಸಿನಲ್ಲಿ ಅವರು ಓದುತ್ತಿದ್ದ ದಿನಗಳಲ್ಲಿ ಅವರು ಮಾಡುತ್ತಿದ್ದ ಸಾಹಿತ್ಯದ ಹಾಗೂ ಎಡಪಂಥದ ಒಲವಿನ ನಿರರ್ಗಳ ಮತ್ತು ಸ್ವಲ್ಪ ಮಟ್ಟಿನ ಹಠಮಾರಿತನದ ವಾದಗಳ ಕುರಿತು ಅವರ ಸಹಪಾಠಿಗಳು ಬಹಳ ಕಾಲ ನೆನಪಿಸಿಕೊಳ್ಳುತ್ತಿದ್ದರು. ನಿಧಾನವಾಗಿ ಅವರು ಬರೆಯುವುದು ಕಡಿಮೆಯಾಯಿತು. ಆದರೆ ಓದು ಕಡಿಮೆಯಾದದ್ದು ಕೊನೆಯ ಕೆಲವು ವರ್ಷಗಳಲ್ಲಿ ಮಾತ್ರ. ತಾವು ಓದಿದ ಪುಸ್ತಕಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಟಿಪ್ಪಣಿ ಮಾಡುತ್ತಿದ್ದರು. ರಾಮಭಟ್ ಅವರು ಹಲವು ಒಳ್ಳೆಯ ಗುಣಗಳ ಗಣಿ. ತಮ್ಮ ಸಂಸಾರದ ಹೊಣೆ ಹೊತ್ತದ್ದು ಮಾತ್ರವಲ್ಲ, ತನ್ನೂರಿನ ಮತ್ತು ಸಂಬಂಧಿಕರ ಯೋಗಕ್ಷೇಮದಲ್ಲಿ ತೀವ್ರ ಆಸಕ್ತಿ. ತನ್ನ ಗೊತ್ತಿನಲ್ಲಿ ವೈವಾಹಿಕ ಸಂಬಂಧಗಳನ್ನು ಏರ್ಪಡಿಸುವಲ್ಲಿ ಅವರು ವೃತ್ತಿಪರ ದಲ್ಲಾಳಿಗಳನ್ನೂ ನಾಚಿಸುವಷ್ಟು ದಕ್ಷತೆ. ಆದರೆ ಒಬ್ಬರಿಂದ ಬಿಡಿಗಾಸನ್ನೂ ಅಪೇಕ್ಷಿಸದ, ಯಾಚಿಸದ ಮತ್ತು ಪಡೆಯದ ನೇರ ನಿಷ್ಠುರಿ. ಇನ್ನೊಬ್ಬರಿಗೆ ತನ್ನಿಂದ ಯಾವ ರೀತಿಯ ಸಹಾಯಕ್ಕೂ ಸದಾ ಸಿದ್ಧ. ಕಿರಿಯರನ್ನು ಗೌರವಿಸುವುದನ್ನು, ಮಾತನಾಡಿಸುವ ರೀತಿಯನ್ನು ಅವರಿಂದ ಕಲಿಯಬೇಕು. ಅಷ್ಟು ಸೌಜನ್ಯ. ನಾವೆಲ್ಲ ಚಿಕ್ಕವರಿದ್ದಾಗ ಅವರು ಮಾತನಾಡಿಸುತ್ತಾರೆಂದೇ ಅವರೆದುರು ಆಕಸ್ಮಿಕವಾಗಿ ಹೋಗುವವರಂತೆ ನಟಿಸುತ್ತಿದ್ದೆವು. ಹಿರಿಯ ಸಾಹಿತಿಗಳಿಗೆ ನೇರ ಪತ್ರ ಬರೆದು ತಮ್ಮ ಸಂಶಯ, ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಪತ್ರಿಕೆಗಳಲ್ಲಿ ಬಂದ ಯಾವುದೇ ಸುದ್ದಿಯನ್ನೂ ಗಮನ ಹರಿಸಿ ಓದಿ ಆ ಕುರಿತ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು.

ಒಳ್ಳೆಯ ಪುಸ್ತಕ ಎಲ್ಲೇ ಪ್ರಕಟವಾಗಲಿ, ಸಾದರ-ಸ್ವೀಕಾರದಲ್ಲೋ, ಪುಸ್ತಕ ಪರಿಚಯದಲ್ಲೋ ಅಥವಾ ಇನ್ನೆಲ್ಲೋ ಗೊತ್ತಾದರೆ ಅದರ ವಿಳಾಸ, ಬೆಲೆ, ಪ್ರಕಾಶನ ಮುಂತಾದವನ್ನು ಕಲೆ ಹಾಕಿ ಮುಂದಾಗಿ ಹಣ ಕಳುಹಿಸಿ ಪುಸ್ತಕವನ್ನು ತರಿಸಿಕೊಳ್ಳುತ್ತಿದ್ದರು. ಯಾರೇ ಆಗಲಿ, ವಿಶ್ವಾಸದಿಂದಲೋ ಗೌರವದಿಂದಲೋ ಪುಸ್ತಕಗಳನ್ನು ಕಳುಹಿಸಿದರೆ ತಕ್ಷಣ ಉತ್ತರಿಸುತ್ತಿದ್ದದ್ದು ಮಾತ್ರವಲ್ಲ, ಅದರ ಬಾಬ್ತು ಹಣ ಕಳುಹಿಸಿದ್ದು ಬೇಕಾದಷ್ಟಿದೆ. ಆರ್ಥಿಕ ಸಂಕಷ್ಟದಲ್ಲಿದ್ದಾಗಲೂ ಅವರಿಗಿದ್ದ ದುಶ್ಚಟವೆಂದರೆ ಈ ರೀತಿ ಪುಸ್ತಕಗಳನ್ನು ಖರೀದಿಸುವುದು. ವೃತ್ತಿಯ ಸಹಜ ಒತ್ತಡದಿಂದಾಗಿ ಅವರು ಸಾಹಿತ್ಯ ಸಮ್ಮೇಳನ, ಸಭೆ ಇತ್ಯಾದಿಗಳಲ್ಲಿ ಭಾಗವಹಿಸಲು ಕಷ್ಟವಾಗಿದ್ದರೂ ಮತ್ತು ಅದರಿಂದ ನಿರಾಶರಾದಾಗಲೂ ಅದನ್ನು ತೋರಗೊಡದೆ ಸಾಹಿತ್ಯದ ಕುರಿತ ಚರ್ಚೆಯನ್ನು ಪತ್ರದ ಮೂಲಕ, ಫೋನ್ ಸಂಭಾಷಣೆಯ ಮೂಲಕ ಮಾಡಿದ್ದಿದೆ. ಕುಮಾರವ್ಯಾಸ ಮುಂತಾದ ಹಳೆಯ ಕವಿಗಳಲ್ಲದೆ ಗೋವಿಂದ ಪೈ, ಡಿವಿಜಿ, ಮಾಸ್ತಿ, ಕಾರಂತ, ಕುವೆಂಪು, ಬೇಂದ್ರೆ, ಮುಂತಾದ ಸಾಹಿತಿಗಳ, ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಮುಂತಾದ ಸಂಗೀತ ವಿದ್ವನ್ಮಣಿಗಳ ಭಾವಚಿತ್ರವನ್ನು ಮತ್ತು ಮಂಕುತಿಮ್ಮನ ಕಗ್ಗದ ಹಲವಾರು ಪದ್ಯಗಳನ್ನು ಪತ್ರಿಕೆಯಿಂದಲೋ ಇತರ ಸ್ವಂತ ಮೂಲಗಳಿಂದಲೋ ಸಂಗ್ರಹಿಸಿ ಮನೆಯ ಗೋಡೆಗಳಲ್ಲಿ ಪ್ರದರ್ಶಿಸುತ್ತಿದ್ದರು. ಅವನ್ನು ಅತಿಥಿಗಳಿಗೆ ಭಾವಪೂರ್ವಕವಾಗಿ ಮತ್ತು ಕೆಲವೊಮ್ಮೆ ಭಾವಾವೇಶದಿಂದ ವರ್ಣಿಸುತ್ತಿದ್ದರು. ಸಂಗೀತದ ಕುರಿತು ಅವರಿಗೆ ಅಪಾರ ಆಸಕ್ತಿ. ತಲ್ಲೀನರಾದರೆ ಭಾವಲೋಕಕ್ಕೆ ತೆರಳುತ್ತಿದ್ದರು.

ರಾಮಭಟ್ ಪುತ್ತೂರಿನಲ್ಲಿದ್ದಾಗ ಕಾರಂತರನ್ನು ನಿಕಟವಾಗಿ ಬಲ್ಲವರು. ಅಷ್ಟೇ ಅಲ್ಲ, ವಕೀಲರಾಗಿದ್ದು ಕನ್ನಡದ ಒಳ್ಳೆಯ ಕಾದಂಬರಿಗಳನ್ನು ಬರೆದ ದಿವಂಗತ ಬೆಳ್ಳೆ ರಾಮಚಂದ್ರ ರಾಯರ ನೆರೆಕರೆ ಮತ್ತು ಆತ್ಮೀಯರು. ಎ.ಪಿ. ಸುಬ್ಬಯ್ಯ, ಸೇವ ನಮಿರಾಜ ಮಲ್ಲ ಮುಂತಾದವರ ನಿಕಟ ಸಂಪರ್ಕದಲ್ಲಿದ್ದರು. ಕಾರಂತರು ಅವರ ಮನೆಗೆ ಒಂದಕ್ಕಿಂತ ಹೆಚ್ಚು ಬಾರಿ ಬಂದಿದ್ದರು. ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎ.ಟಿ.ಭಟ್ ಅವರ ಭಾವ; ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ, ಅವರ ನಿಕಟ ಬಂಧು. ತಮ್ಮ ಪತ್ನಿಯನ್ನು ಅವರು ನಿರಾಡಂಬರವಾಗಿ ಮತ್ತು ಅತ್ಯಂತ ಭಾವುಕರಾಗಿ ಪ್ರೀತಿಸುತ್ತಿದ್ದರು. ಇದು ಎಷ್ಟಿತ್ತೆಂದರೆ ಎಲ್ಲಿ ತಮಗಿಂತ ಮೊದಲು ತಮ್ಮ ಪತ್ನಿ ಅಗಲುತ್ತಾರೋ ಎಂಬ ಭಯ ಅವರನ್ನು ವಿಹ್ವಲರಾಗಿಸಿದ್ದೂ ಇದೆ. ಜ್ಞಾನವೆಂದರೆ ವಿದ್ಯೆಯಲ್ಲ ಎಂಬ ಅವರ ನಿಲುವು ಎಲ್ಲರಿಂದಲೂ ಕಲಿಯಲು ಅವರಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ವಿದ್ಯೆಯ ಕುರಿತು ಅಪೂರ್ವವಾದ ಗೌರವ ಅವರಿಗೆ. ತಮ್ಮ ಆರ್ಥಿಕ ಮಿತಿಯ ನಡುವೆಯೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಅವರು ಕರ್ಪೂರದಂತೆ ಸವೆದರು; ಉರಿದರು. ಅವರ ಹಿರಿಯ ಮಗ ಎಸ್. ಆರ್. ವಿಜಯಶಂಕರ ಕನ್ನಡದ ಒಳ್ಳೆಯ ವಿಮರ್ಶಕರಲ್ಲೊಬ್ಬರು; (ವಿಜಯಶಂಕರ ನಿಮಿತ್ತವಾಗಿ ಅವರ ಮನೆಗೆ ಬಿ.ಜಿ.ಎಲ್. ಸ್ವಾಮಿ, ಯು.ಆರ್. ಅನಂತಮೂರ್ತಿ, ಜಿ.ಎಚ್.ನಾಯಕ ಮುಂತಾದ ಕನ್ನಡದ ಪ್ರಖ್ಯಾತರು ಬಂದಿದ್ದರು.) ಇನ್ನೊಬ್ಬ ಮಗ ರವಿಪ್ರಕಾಶ ಬೆಂಗಳೂರಿನಲ್ಲಿ ವಕೀಲರು; ಕೊನೆಯ ಮಗ ನರಹರಿ ಕಾಸರಗೋಡಿನಲ್ಲಿ ಖ್ಯಾತ ಚರ್ಮರೋಗ ತಜ್ಞ ಮಾತ್ರವಲ್ಲ ಶ್ರೇಷ್ಠ ಸಂಶೋಧಕ. ಮಕ್ಕಳಿಗೆ ಸಂಬಂಧ ಕುದುರಿಸುವಾಗಲೂ ಅವರು ಹಣ, ಆಸ್ತಿ ಇವುಗಳನ್ನು ಗಣಿಸಿದವರಲ್ಲ. ಬದಲಾಗಿ ಹಿನ್ನಲೆ, ಸಂಸ್ಕಾರ, ವಿದ್ಯೆ ಇವುಗಳನ್ನೇ ಮಾನದಂಡವನ್ನಾಗಿಸಿದವರು. ನನಗೆ ವೃತ್ತಿಯತ್ತ ಮಾರ್ಗದರ್ಶನ ನೀಡಿದವರು ಮತ್ತು ಹಲವು ವರ್ಷಗಳ ಬಳಿಕ ಕಣ್ಣುಕೊಟ್ಟವರು.

ಅನುಕಂಪವೇ ಅವರ ಸ್ಥಾಯೀ ನೆಲೆಯೆಂದು ನನಗನ್ನಿಸುತ್ತಿದೆ. ಪ್ರಾಯಃ ಅವರ ಎಲ್ಲ ಕೃತಿಗಳನ್ನು ಒಟ್ಟು ಮಾಡಿದರೆ ಬದುಕಿನ ಕುರಿತಂತೆ ಅವರ ಸಮಗ್ರ ಮಾನವೀಯ ದೃಷ್ಟಿಕೋನ ಕನ್ನಡದ ಜನರಿಗೆ ಪರಿಚಯವಾಗಬಹುದು. ಕನ್ನಡದ ನೆಲದಲ್ಲಿ ಇಂತಹ ವ್ಯಕ್ತಿತ್ವಗಳು ಅಪರೂಪ. ಈ ಎಲ್ಲ ಪರಿಚಯಗಳ ನಡುವೆ ಅವರು ಹಿನ್ನೆಲೆಯಲ್ಲೇ ಉಳಿದದ್ದು ತಲೆಮಾರುಗಳ ಸಂಕಟವಾಗಿ ಉಳಿಯಬಹುದೆಂದು ಕಾಣಿಸುತ್ತದೆ. ಕಾಡಬೆಳದಿಂಗಳಿನಂತೆ ವಿಕಸಿಸಿದ ಅವರ ಪ್ರತಿಭೆಯೆಲ್ಲ ನೆಲದಡಿಯಲ್ಲೇ ಹರಿದಾಡಿ ಕಾಣಬೇಕಾದಷ್ಟು ಬೆಳಕನ್ನು ಕಾಣಲೇ ಇಲ್ಲ. ಬನಹುಣ್ಣಿಮೆಯಂದು ಅವರು ತಮ್ಮ ಬದುಕನ್ನು ಮುಗಿಸಿದ್ದು ಸಾಂಕೇತಿಕವೂ ಹೌದು; ಅರ್ಥಪೂರ್ಣವೂ ಹೌದು. ನೀವೆಷ್ಟು ಪ್ರಸಿದ್ಧರೆಂಬುದರಿಂದ ನೀವು ದೊಡ್ಡವರಾಗುವುದಿಲ್ಲ; ಬದಲಾಗಿ ನಿಮ್ಮನ್ನು ಕಂಡ ಕೆಲವೇ ಮಂದಿಯ ನಡುವೆ ನೀವು ಎಷ್ಟು ಎತ್ತರದಲ್ಲಿ ಗೋಚರಿಸುತ್ತೀರೆಂಬುದರ ಮೇಲೆ ನಿಮ್ಮ ಭವಿಷ್ಯ ಉಳಿದಿದೆ ಎಂದೊಬ್ಬರು ಹೇಳಿದ್ದರು. ರಾಮ ಭಟ್ ಅವರ ಮಟ್ಟಿಗೆ ಇದು ಗುಣಗೋಚರ. ಹಿರಿಯ ಮತ್ತು ಪ್ರಸಿದ್ಧ ವ್ಯಕ್ತಿಗಳಿಗೆ ಕೊನೆಯವರೆಗೂ ಮುಗ್ಧತೆಯಿಂದ, ಮುಗುವಿನ ಮನಸ್ಸಿನೊಂದಿಗೆ ಬದುಕಿದ ರಾಮಭಟ್ ಅವರಂತಹವರು ಹೇಳಬಹುದಾದದ್ದು ಮತ್ತು ಹೇಳದೇ ಇದ್ದದ್ದು ಇದು: ‘‘ದೊಡ್ಡವರು ನೀವು. ನಾವೇನು ಕುಬ್ಜರಲ್ಲ.’’

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)