varthabharthi

ನಿಮ್ಮ ಅಂಕಣ

ಭಾರತರತ್ನವೇಕೆ ಸಿದ್ಧಗಂಗಾ ಶ್ರೀಗಳಿಗಿಲ್ಲ..?

ವಾರ್ತಾ ಭಾರತಿ : 28 Jan, 2019
ಶಂಕರಗೌಡ ಬಿರಾದಾರ, ಮುಳಸಾವಳಗಿ

ಮಾನ್ಯರೇ,

ಗಣರಾಜ್ಯೋತ್ಸವ ದಿನಾಚರಣೆ ಹಿಂದಿನ ದಿನ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಈ ಬಾರಿಯಾದರೂ ಸಿದ್ದಗಂಗೆಯ ಸಂತ ಶಿವಕುಮಾರ ಸ್ವಾಮಿಗಳ ಸನ್ನಿಧಿ ಸೇರಿ ಪ್ರಶಸ್ತಿ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಡಾ. ಶಿವಕುಮಾರ ಸ್ವಾಮಿಗೆ ಭಾರತ ರತ್ನ ನೀಡದೇ ಇದ್ದರೂ ಅವರ ಘನತೆ ಭಾರತ ರತ್ನಕ್ಕಿಂತ ದೊಡ್ಡದು ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಮೋದಿ ಸರಕಾರಕ್ಕೆ ಭಾರತ ರತ್ನ ಪ್ರಶಸ್ತಿ ನೀಡುವಾಗ ಶಿವಕುಮಾರ ಸ್ವಾಮಿಗಳು ನೆನಪಾಗಲಿಲ್ಲವೇ, ಇದಕ್ಕೆ ಜನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಣವ್ ಮುಖರ್ಜಿ, ನಾನಾಜಿ ದೇಶ್‌ಮುಖ್ ಹಾಗೂ ಭೂಪೇನ್ ಹಜಾರಿಕಾ ಅವರಿಗೆ ಕೇಂದ್ರ ಸರಕಾರ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಇದರ ಜೊತೆಗೆ ಪದ್ಮ ಪ್ರಶಸ್ತಿಗಳನ್ನು ಕೂಡ ಕೇಂದ್ರ ಸರಕಾರ ನಿನ್ನೆ ಘೋಷಣೆ ಮಾಡಿತ್ತು. ಕರ್ನಾಟಕದ ಐವರು ಹೆಮ್ಮೆಯ ಸಾಧಕರಿಗೆ ಪದ್ಮ ಪ್ರಶಸ್ತಿಯೂ ಸಂದಿದೆ. ಆದರೆ ಶ್ರೀಗಳಿಗೆ ಭಾರತ ರತ್ನ ದೊರೆಯುತ್ತದೆ ಎನ್ನುವ ಅದಮ್ಯ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ತೀವ್ರ ನಿರಾಸೆಯಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)