varthabharthi

ನಿಮ್ಮ ಅಂಕಣ

ಇಂದು ಮಹಾತ್ಮಾ ಗಾಂಧೀಜಿ ಪುಣ್ಯತಿಥಿ

ಗಾಂಧೀಜಿಯನ್ನು ನವಪೀಳಿಗೆಗೆ ಪರಿಚಯಿಸುವ ಅನಿವಾರ್ಯತೆ ಮತ್ತು ಸವಾಲು

ವಾರ್ತಾ ಭಾರತಿ : 30 Jan, 2019
ಅಬ್ದುಲ್ ರಝಾಕ್, ಅನಂತಾಡಿ

ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ ಮಾತು ನೆನಪಾಗುತ್ತಿದೆ: ‘‘ರಕ್ತ ಮಾಂಸ ಎಲುಬುಗಳಿಂದ ಕೂಡಿದ ಇಂತಹ ಓರ್ವ ವ್ಯಕ್ತಿ ಈ ಭೂಮಿಯ ಮೇಲೆ ನಡೆದಾಡಿದ್ದನೆಂಬುದನ್ನು ಮುಂಬರುವ ಪೀಳಿಗೆ ನಂಬುವುದು ಕಷ್ಟ’’ ಎಂದು. ಅದನ್ನು ನಂಬಿಸಬೇಕಾದ ಸವಾಲು ಮುಂದಿದೆ. ಅದು ಅನಿವಾರ್ಯವೂ ಹೌದು. ಗಾಂಧೀಜಿ ಅಂಬೇಡ್ಕರರನ್ನು ವಿರುದ್ಧ ಗುರಿಯೆಡೆಗೆ ಪರಸ್ಪರ ಅಭಿಮುಖವಾಗಿ ಸಾಗುವ ದ್ವಿಪಥವಾಗಿ ತೋರಿಸದೆ ಒಂದೇ ಗುರಿಯೆಡೆಗೆ ಸಾಗುವ ಎರಡು ಹೆದ್ದಾರಿಗಳಾಗಿ ತೋರಿಸಬೇಕಿದೆ. ಗಾಂಧಿ ಬಗೆಗಿನ ಶತ್ರುತ್ವ, ದ್ವೇಷ ಭಾವನೆ ಚಿಂತನೆಗಳು ನಮ್ಮ ಮುಂದಿರುವ ಪೀಳಿಗೆಗೆ ತಾಕದಂತೆ, ತಾಕಿದರೂ ಅದು ಗಟ್ಟಿಯಾಗದಂತೆ ನೋಡಿಕೊಳ್ಳುವ ಹೊಣೆ ಎಲ್ಲಾ ಹಿರಿಯರ ಮೇಲಿದೆ.

ದೃಶ್ಯಮಾಧ್ಯಮದ ವಾಹಿನಿಯೊಂದರ ವರದಿಗಾರರು ಯುವ ವಿದ್ಯಾರ್ಥಿಗಳಿಗೆ ಗಾಂಧಿ ಜಯಂತಿ ದಿನ ‘‘ಗಾಂಧೀಜಿ ಎಂದರೆ ಯಾರು? ಅವರು ಏನಾಗಿದ್ದರು? ಅವರನ್ನು ಏನೆಂದು ಗುರುತಿಸುತ್ತೇವೆ?’’ ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಿರುವ ತುಣುಕು ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಹರಿದಾಡಿತು. ಇದನ್ನು ವೀಕ್ಷಿಸಿದ ಜನ ಬಹುತೇಕ ಚಕಿತಗೊಂಡದ್ದು ದಿಟ. ಪಿಯುಸಿ, ಪದವಿ ಮತ್ತಿತರ ಕೋರ್ಸ್‌ಗಳನ್ನು ಓದುತ್ತಿರುವ ಯುವಕ-ಯುವತಿಯರು ‘‘ಗಾಂಧೀಜಿ ಅಂದರೆ ಗೊತ್ತಿಲ್ಲ’’, ‘‘ಅವರು ಪ್ರಧಾನಿಯಾಗಿದ್ದರು’’, ‘‘ಅವರ ತತ್ವದ ಅರಿವಿಲ್ಲ’’ ಎಂಬಿತ್ಯಾದಿ ಅಸಂಬದ್ಧ ಉತ್ತರಗಳನ್ನು ನೀಡುತ್ತಿದ್ದರು. ಒಬ್ಬ ವಿದ್ಯಾರ್ಥಿಯಂತೂ ‘‘ಅವರನ್ನು ರಾಷ್ಟ್ರಪಿತ ಅಂತ ಕರೆಯುವುದೇ ತಪ್ಪು, ನಾನಾಗಿದ್ದರೆ ಹಿಟ್ಲರನನ್ನೋ ಮತ್ಯಾರನ್ನೋ ರಾಷ್ಟ್ರಪಿತ ಎಂದು ಕರೆಯುತ್ತಿದ್ದೆ’’ ಎಂಬ ಉಗ್ರ ಉತ್ತರವನ್ನೇ ನೀಡುತ್ತಾನೆ. ಈ ಉತ್ತರವನ್ನು ಕೇಳಿದ ಸುತ್ತಮುತ್ತಲ ಆತನ ಸ್ನೇಹಿತರು ನಗುವುದು ಕಂಡು ಬರುತ್ತದೆ. ಆದರೆ ಈ ಉತ್ತರವನ್ನು ತಮಾಷೆ ಎಂದು ಕಡೆಗಣಿಸಲಾಗದು. ಆತನ ಮನಸ್ಸಿನಲ್ಲಿ ಹುದುಗಿರುವ ಹಿಟ್ಲರ್‌ನ ಬಗೆಗಿನ ಅಭಿಮಾನ ಮತ್ತು ಗಾಂಧೀಜಿ ಬಗೆಗಿನ ತಿರಸ್ಕಾರದ ಭಾವನೆಯನ್ನು ಹೋಗಲಾಡಿಸುವ ಸವಾಲು ಇಂದು ನಮ್ಮ ಮುಂದಿದೆ. ಆತ ಒಬ್ಬನೇ ಅಲ್ಲ, ಇದೇ ಮನಸ್ಥಿತಿಯ ಅಗಾಧ ಸಂಖ್ಯೆಯ ಯುವ ಸಮೂಹ ಶಾಲಾ-ಕಾಲೇಜುಗಳಿಂದ ನಿರ್ದಿಷ್ಟ ವಿದ್ಯಾರ್ಹತೆಯ ಪ್ರಮಾಣ ಪತ್ರವನ್ನು ಪಡೆದ ಹೊರತಾಗಿಯೂ ಕನಿಷ್ಠ ಗಾಂಧೀಜಿ ಬಗೆಗಿನ ಪರಿಚಯವನ್ನು ಮನವರಿಕೆ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಇದಕ್ಕಾಗಿ ಪಠ್ಯವನ್ನು ದೂರಲಾದೀತೇ? ಪ್ರಾಥಮಿಕ ಹಂತದಿಂದ ಪದವಿಯವರೆಗಿನ ಭಾಷೆ ಅಥವಾ ಸಮಾಜ ವಿಜ್ಞಾನ ವಿಷಯಗಳಲ್ಲಿ ಗಾಂಧೀಜಿ ಕುರಿತಾದ ಪಾಠಗಳು ಹಲವು ತರಗತಿಗಳಲ್ಲಿ ಇದ್ದೇ ಇವೆ. ಪ್ರಾಥಮಿಕ ಹಂತದಲ್ಲಿ ಗಾಂಧೀಜಿ ವ್ಯಕ್ತಿ ಪರಿಚಯ ಇದ್ದರೆ, ಪ್ರೌಢಶಾಲಾ ಹಂತದಲ್ಲಿ ಗಾಂಧಿ ಯುಗದ ಕುರಿತಾದ ಪಾಠ, ಪದವಿಪೂರ್ವ, ಪದವಿ ಹಂತಗಳಲ್ಲಿ ಗಾಂಧಿ ಯುಗದ ವಿಸ್ತೃತ ಅಧ್ಯಯನಕ್ಕೆ ಪ್ರೇರಣೆ ನೀಡುವ ಪಾಠಗಳಿವೆ ಆದರೆ ಆ ಪ್ರೇರಣೆ ಯಾರಿಂದ ಆಗಬೇಕು? ಜಡವಾದ ಪಠ್ಯದಿಂದಲೇ, ಪಠ್ಯಕ್ಕೆ ಜೀವ ತುಂಬಬೇಕಾದ ಬೋಧಕರಿಂದಲೇ?

ನಾನು ಸ್ನಾತಕ ಪದವಿ ಓದುತ್ತಿದ್ದ ಮಹಾವಿದ್ಯಾಲಯದಲ್ಲಿ ನಮಗೆ ಕನ್ನಡ ಭಾಷೆಯನ್ನು ಬೋಧಿಸುತ್ತಿದ್ದ ಪ್ರಾಧ್ಯಾಪಕರೊಬ್ಬರು ತರಗತಿಯಲ್ಲಿ ಗಾಂಧೀಜಿ ಕುರಿತ ಪಾಠದುದ್ದಕ್ಕೂ ಗಾಂಧೀಜಿಯನ್ನು ಏಕವಚನದಲ್ಲೇ ಸಂಬೋಧಿಸುತ್ತಿದ್ದರು. ತಪ್ಪಿಯೂ ಗಾಂಧೀಜಿ ಕುರಿತು ಬಹುವಚನ ಪ್ರಯೋಗಿಸುತ್ತಿರಲಿಲ್ಲ. ಗಾಂಧೀಜಿ ಬಗ್ಗೆ ನಮಗೆ ಅವರು ಸಕಾರಾತ್ಮಕವಾಗಿ ಹೇಳಿದ್ದಕ್ಕಿಂತ ನಕಾರಾತ್ಮಕವಾಗಿ ಹೇಳಿದ್ದೇ ಹೆಚ್ಚು. ನಾನು ಮತ್ತು ನನ್ನ ಕೆಲವು ಸ್ನೇಹಿತರು ಈ ಪರಿಯಾಗಿ ಗಾಂಧೀಜಿಯನ್ನು ಇವರು ಏಕೆ ಟೀಕಿಸುತ್ತಿದ್ದಾರೆ ಎಂಬುದನ್ನು ಚರ್ಚಿಸುತ್ತಿದ್ದೆವು. ಆದಾಗ್ಯೂ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ನನ್ನ ಶಿಕ್ಷಕರು ಗಾಂಧೀಜಿ ಕುರಿತು ಮೂಡಿಸಿದ್ದ ಗೌರವದ ಅಸ್ಮಿತೆೆ ಮಾಸಿರಲಿಲ್ಲ. ಅಂದು ಏಳನೇ ತರಗತಿಯ ಹಿಂದಿ ಪಾಠದಲ್ಲಿದ್ದ ಗಾಂಧೀಜಿ ಕುರಿತ ಉಕ್ತಲೇಖನ, ಶಾಲಾ ತಪಾಸಣಾಧಿಕಾರಿಯ ಭೇಟಿ ಹಾಗೂ ತರಗತಿ ಶಿಕ್ಷಕರ ಕುರಿತ ಪ್ರಾಮಾಣಿಕತೆಯ ಪಾಠವೊಂದು ಗಾಂಧಿ ಎಂದರೆ ಪ್ರಾಮಾಣಿಕ, ಶಿಕ್ಷಕರು ಸುಳ್ಳು ಹೇಳಲು ಅಥವಾ ಪರೀಕ್ಷೆಯಲ್ಲಿ ನಕಲು ಮಾಡಲು ಹೇಳಿದರೂ ಗಟ್ಟಿಯಾಗಿ ಸತ್ಯದ ಕಡೆಗೆ ಮುಖ ಮಾಡುತ್ತಿದ್ದ ವ್ಯಕ್ತಿ ಎಂಬುದು ಆ ಪಾಠದಿಂದ ಮತ್ತು ಅದನ್ನು ಬೋಧಿಸಿದ ಶಿಕ್ಷಕರಿಂದ ಮನವರಿಕೆಯಾಗಿತ್ತು. ಇದು ನನ್ನ ಪದವಿಯ ಪ್ರಾಧ್ಯಾಪಕರ ಬಗೆಗೆ ಅತೃಪ್ತಿ ಮೂಡಿಸಿತೇ ಹೊರತು ಗಾಂಧೀಜಿ ಬಗ್ಗೆ ಅಗೌರವದ ಭಾವನೆ ಮೂಡಿಸಲಿಲ್ಲ. ಶಿಕ್ಷಕರ ತರಬೇತಿ ಕಮ್ಮಟವೊಂದರಲ್ಲಿ ಒಬ್ಬರು ಶಿಕ್ಷಕರು ಸಂಪನ್ಮೂಲ ವ್ಯಕ್ತಿಯೊಂದಿಗೆ ಗಾಂಧೀಜಿ ಕುರಿತು ಅಸಹನೆ ವ್ಯಕ್ತ ಪಡಿಸಿ ವಾಗ್ವಾದ ಮಾಡಿದ್ದನ್ನು ಗಮನಿಸಿದೆ. ಅವರು ಪ್ರಖರ ಅಂಬೇಡ್ಕರ್‌ವಾದಿಯೂ ಆಗಿದ್ದು, ಗಾಂಧೀಜಿಯ ಯಾವ ಮೌಲ್ಯವನ್ನು ಒಪ್ಪಿಕೊಳ್ಳಲೂ ಅವರು ತಯಾರಿರಲಿಲ್ಲ. ಕೊನೆಗೂ ಸಂಪನ್ಮೂಲ ವ್ಯಕ್ತಿಯೇ ತನ್ನ ವಾದದಿಂದ ಹಿಂದೆ ಸರಿಯಬೇಕಾಯಿತು. ಇವರ ವಾಗ್ವಾದ ಮುಗಿದ ಮೇಲೆ ಹಲವು ಶಿಕ್ಷಕರು ಸಂಪನ್ಮೂಲ ವ್ಯಕ್ತಿಯ ವಾದಕ್ಕೆ ಬೆಂಬಲ ನೀಡಿ ಪರಸ್ಪರ ಮಾತನಾಡಿದ್ದನ್ನು ಗಮನಿಸಿದೆ. ಗಾಂಧೀಜಿ ಕುರಿತು ಈ ಪರಿಯ ಅಸಹನೆಯನ್ನು ಹೃದಯದಲ್ಲಿ ತುಂಬಿರುವ ಜನ ತಮ್ಮ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಗಾಂಧಿ ತತ್ವವನ್ನು ಸಕಾರಾತ್ಮಕವಾಗಿ ವರ್ಗಾಯಿಸಲು ಸಾಧ್ಯವೇ?

ಗಾಂಧಿ ಕುರಿತ ಅಭಿಮಾನ ಗೌರವ ಎಂದರೆ ಅದು ಅಂಬೇಡ್ಕರ್ ಕುರಿತು ಅಗೌರವವಲ್ಲ. ಅಂಬೇಡ್ಕರ್ ಬಗೆಗಿನ ಅಭಿಮಾನ, ನಿಷ್ಠೆ ಎಂದರೆ ಅದು ಗಾಂಧಿ ಬಗೆಗಿನ ದ್ವೇಷವೂ ಅಲ್ಲ. ಗಾಂಧಿ ಮತ್ತು ಅಂಬೇಡ್ಕರ್ ಒಂದಾಗಬೇಕಾದ ಕಾಲ ಇದೀಗ ಬಂದಿದೆ. ಅಂಬೇಡ್ಕರ್ ಚಿಂತನೆಗಳು ಮತ್ತು ಗಾಂಧೀಜಿಯ ಪ್ರಯೋಗಗಳು ಸಮ್ಮಿಳಿತವಾಗಬೇಕಾದ ಕಾಲ ಇದು. ನಮ್ಮ ಮುಂದಿರುವ ಮಕ್ಕಳು-ವಿದ್ಯಾರ್ಥಿಗಳಲ್ಲಿ ಸಾಮರಸ್ಯ, ಸಹಿಷ್ಣುತೆಯ ಗುಣವನ್ನು ಬೆಳೆಸಬೇಕಾದರೆ ಗಾಂಧಿ ಮತ್ತು ಅಂಬೇಡ್ಕರನ್ನು ಎರಡೂ ಅಂಗೈಯಲ್ಲಿಟ್ಟು ತೂಗುವ ಕೈಗಳನ್ನು ಹತ್ತಿರಕ್ಕೆ ತಂದು ಬೆಸೆಯುವ ಕೆಲಸ ಮಾಡಬೇಕು. ಗಾಂಧೀಜಿಯ ಪ್ರಾಮಾಣಿಕತೆ ಸತ್ಯಸಂಧತೆ, ಹಿಂಸೆಯ ಬಗೆಗಿನ ತೀವ್ರ ವಿರೋಧ, ಎಲ್ಲಾ ವರ್ಗದ ಶ್ರೇಯೋಭಿವೃದ್ಧಿ ಕನಸನ್ನು ಗಾಂಧಿ ಹುಟ್ಟಿದ ಒಂದೂವರೆ ಶತಮಾನದ ಬಳಿಕ ಈಗಿನ ಪೀಳಿಗೆಗೆ ದಾಟಿಸುವುದು ಸುಲಭದ ವಿಚಾರವಲ್ಲ. ಇಂದಿನ ವಿದ್ಯಾರ್ಥಿಗಳ ಮುಂದೆ ಮೂರು-ನಾಲ್ಕು ಮಾದರಿಗಳು ಇವೆ. ಗಾಂಧೀಜಿಯನ್ನು ಮನಸಾರೆ ಗೌರವಿಸುವ ಮಂದಿ, ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರನ್ನು ಗೌರವಿಸುವ, ಒಪ್ಪುವ ಅವರ ಕೊಡುಗೆಗಳನ್ನು ಕೊಂಡಾಡುವ ಮಂದಿ, ಗಾಂಧಿ ಬಗ್ಗೆ ಅಸಹನೆಯೂ ಅಂಬೇಡ್ಕರ್ ಬಗ್ಗೆ ಅಭಿಮಾನವೂ ಉಳ್ಳ ಮಂದಿ, ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರನ್ನು ಮನಸಾರೆ ಒಪ್ಪದ ಮಂದಿ. ಈ ಎಲ್ಲಾ ಮಾದರಿಗಳು ಸಮಾಜದೊಂದಿಗೆ ವಿದ್ಯಾರ್ಥಿಗಳೊಂದಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮುಖಾಮುಖಿಯಾಗುತ್ತಲೇ ಇವೆ. ಅವರ ಚಿಂತನೆ ಅಭಿಪ್ರಾಯಗಳು ವಿವಿಧ ಮೂಲಗಳಿಂದ ಹರಡುತ್ತಲೇ ಇವೆ. ತರಗತಿಗಳು ಯಾವುದೇ ಇರಲಿ ವಿಷಯ-ಭಾಷೆಗಳು ಯಾವುದೇ ಇರಲಿ, ಗಾಂಧೀಜಿ-ಅಂಬೇಡ್ಕರ್ ಕುರಿತು ಸಮತೋಲಿತ, ಸಂತುಲಿತವಾಗಿ ವಿಚಾರವನ್ನು ವರ್ಗಾಯಿಸಬೇಕಾದ ಬೋಧಕ ವರ್ಗದಲ್ಲೂ ಈ ಮೇಲಿನ ಮಾದರಿಗಳನ್ನು ಕಾಣಬಹುದು. ಆದುದರಿಂದಲೇ ಶಾಲಾ-ಕಾಲೇಜಿನಿಂದ ಹೊರಬರುವ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಗಾಂಧೀಜಿ ರಾಷ್ಟ್ರಪಿತನಾಗಿ ಕಂಡರೆ ಕೆಲವರಿಗೆ ಅವರ ಜಾಗದಲ್ಲಿ ಇನ್ಯಾರನ್ನೋ ಕೂರಿಸಬೇಕು ಎಂದೆನಿಸುತ್ತದೆ. ಇನ್ನು ಕೆಲವರಿಗೆ ಅವರು ಕೊನೆಯವರೆಗೂ ತಮಾಷೆಯ ವಸ್ತುವಾಗಿಯೇ ಕಾಣುತ್ತಾರೆ. ಗಾಂಧೀಜಿಯನ್ನು ಸರ್ವತಾ ಒಪ್ಪಲು ಸಾಧ್ಯವಿಲ್ಲದ ಮಂದಿ ತಮ್ಮ ಚಿಂತನೆಗಳನ್ನು ಶಾಲಾ-ಕಾಲೇಜಿನ ಹೊರಗೆ ವಿದ್ಯಾರ್ಥಿಗಳನ್ನು ಸಂಘಟಿಸಿ ಅಲ್ಲಿ ಏನು ವರ್ಗಾಯಿಸಬೇಕೋ ಅದನ್ನು ಯಶಸ್ವಿಯಾಗಿ ವರ್ಗಾಯಿಸುವಲ್ಲಿ ಮತ್ತು ಅದು ಗಟ್ಟಿಯಾಗಲು ಏನೆಲ್ಲ ಉಪಕ್ರಮಗಳು ಬೇಕೋ ಅದನ್ನು ಮಾಡುತ್ತಿದ್ದಾರೆ. ಗಾಂಧೀಜಿಯ ಮೌಲ್ಯಗಳನ್ನು ಅಪಮೌಲ್ಯವಾಗಿ ಕಂಡ ಜನ, ಪರಸ್ಪರ ತಮಾಷೆಯ ಗುರುತಾಗಿ ಪರಿಚಯಿಸಿಕೊಂಡ ಜನ ಇಂದು ದೊಡ್ಡವರಾಗಿ ಗಾಂಧಿ ಪ್ರತಿಮೆಯಿಂದ ಕನ್ನಡಕವನ್ನು ಕಿತ್ತೆಗೆಯುವ, ಕೋಲನ್ನು ಬೇರ್ಪಡಿಸುವ, ಪ್ರತಿಮೆಗೆ ಅಗೌರವ ತೋರುವ ಕೆಲಸವನ್ನು ಆಗಾಗ್ಗೆ ಮಾಡುತ್ತಿದ್ದಾರೆ. ತಮಾಷೆ, ಹಾಸ್ಯ ವ್ಯಂಗ್ಯವನ್ನು ಹೆಚ್ಚು ಇಷ್ಟಪಡುವ ಬಾಲ್ಯ, ತಾರುಣ್ಯದ ವಿದ್ಯಾರ್ಥಿಗಳಲ್ಲಿ ತಮಾಷೆ-ವ್ಯಂಗ್ಯದಿಂದಾಚೆಗೆ ಒಂದು ಗಟ್ಟಿಯಾದ ಗಾಂಧಿ ಮೌಲ್ಯವನ್ನು, ಅವರ ವ್ಯಕ್ತಿ ಚಿತ್ರವನ್ನು ಮನಸ್ಸಿನಲ್ಲಿ ಮೂಡಿಸಬೇಕಾದ ಜವಾಬ್ದಾರಿ ಪಠ್ಯ ಹಾಗೂ ಬೋಧಕರ ಮೇಲಿದೆ. ಬೋಧಕರಲ್ಲಿನ ಅಭಿಪ್ರಾಯ ಬೇಧಗಳು ಏನೇ ಇರಬಹುದು ಆದರೆ ಗಾಂಧೀಜಿಯನ್ನು ಪರಿಚಯಿಸುವಾಗ ಅತ್ಯಂತ ದೃಢವಾಗಿ, ಅಚಲವಾಗಿ ಪರಿಚಯಿಸಬೇಕಾದುದು ಇಂದಿನ ಅಗತ್ಯವೂ ಹೌದು. ಗಾಂಧೀಜಿ-ಅಂಬೇಡ್ಕರ್ ಅವರು ಪರಸ್ಪರ ಶತ್ರುಗಳಾಗಿರಲಿಲ್ಲ. ಅವರು ಸರ್ವ ಭಾರತೀಯರ, ಭಾರತದ ಶೋಷಿತರ ನಮ್ಮೆಲ್ಲರ ಏಳಿಗೆಯನ್ನು ಕಾಣ ಬಯಸಿದ್ದರು ಎಂಬ ವಾಸ್ತವಿಕತೆಯನ್ನು ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಈ ವಿಚಾರದಲ್ಲಿ ಅವರಿಗಿದ್ದ ಪ್ರಬಲ ತುಡಿತವೇ ಅವರನ್ನು ಭಿನ್ನ ಮಾರ್ಗದಲ್ಲಿ ಹಾದುಹೋಗುವಂತೆ ಮಾಡಿದವು ಎಂಬುದನ್ನು ನಾವು ಈಗ ಮನವರಿಕೆ ಮಾಡಿಕೊಡದೇ ಹೋದಲ್ಲಿ ಒಂದು ಅನಿವಾರ್ಯ ವರ್ಗಾವಣೆಯ ಹಂತದಲ್ಲಿ ಅಂತರ ಉಂಟಾಗಿ ಆ ಅಂತರವನ್ನು ಗಾಂಧಿ-ಅಂಬೇಡ್ಕರ್ ವಿರೋಧಿಗಳು ತುಂಬುವುದು ನಿಶ್ಚಿತ ಮಾತ್ರವಲ್ಲ ಈಗಾಗಲೇ ತುಂಬುವ ಕಾರ್ಯ ಯಶಸ್ವಿಯಾಗಿದೆ.

ಇನ್ನು ಗಾಂಧೀಜಿಯನ್ನು ದ್ವೇಷಿಸುತ್ತಿದ್ದಂತಹ ವರ್ಗ ತಮ್ಮ ಅಸಹನೆಯನ್ನು ಬಹಿರಂಗವಾಗಿ ತೋರ್ಪಡಿಸಲು ಒಂದಷ್ಟು ಸಮಯ ಹಿಂಜರಿಯುತ್ತಿದ್ದರೂ ಗಾಂಧಿ ಹಂತಕನ ಪರ ಮಾತನಾಡಲು ಅಂತರಾತ್ಮ ಹೇಳುತ್ತಿದ್ದರೂ ಬಹಿರಂಗವಾಗಿ ಹೇಳಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ನಮ್ಮ ಮಕ್ಕಳಿಗೆ ಹೊಸದೊಂದು ಮಾದರಿ ಕಣ್ಣ ಮುಂದೆ ಕಾಣುತ್ತಿದೆ. ಅದು ಗಾಂಧೀಜಿಯನ್ನು ದ್ವೇಷಿಸುವ ಮಂದಿಗಿಂತಲೂ ಗಾಂಧೀ ಹಂತಕನನ್ನು ಪ್ತೀತಿಸುವ ಮಂದಿ, ಆತನನ್ನು ನಾಯಕನನ್ನಾಗಿ ಕಾಣುವ ಮಂದಿ. ರಾಷ್ಟ್ರಪಿತನ ಹಂತಕನ ವಾದವನ್ನು ಒಪ್ಪುವ ಈ ಮಂದಿ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ಹರಿಯಬಿಡುತ್ತಿದ್ದಾರೆ. ಆತ ಏಕೆ ಕೊಂದ ಎಂಬುದಕ್ಕೆ ಸಮರ್ಥನೆಗಳನ್ನು ಆ ಪಾಪವನ್ನು ಪುಣ್ಯಕಾರ್ಯವಾಗಿ ಮಾರ್ಪಡಿಸುವ ಕೆಲಸ ಆಗಾಗ್ಗೆ ನಡೆಯುತ್ತದೆ. ಇದನ್ನು ಮಾಧ್ಯಮಗಳಲ್ಲಿ ಕೇಳಿ ನೋಡಿದ ಮುಗ್ಧ ಮಕ್ಕಳು ಒಮ್ಮೆ ಹೌಹಾರುತ್ತಾರೆ. ಕ್ರಮೇಣ ತಮ್ಮ ಎಳೆಯ ಮನಸ್ಸನ್ನು ಆ ವಾದದ ಕಡೆಗೂ ಸರಿಸುತ್ತಿದ್ದಾರೆ. ಗಾಂಧಿ ಎಂದರೆ ಸಹನೆ ಸಹಿಷ್ಣುತೆಯ ಕೇಂದ್ರ ಬಿಂದು. ಗಾಂಧಿ ಹಂತಕ ಗೋಡ್ಸೆ ಎಂದರೆ ಅಸಹಿಷ್ಣುತೆಯ ಕೇಂದ್ರ ಬಿಂದು. ಸಹನೆ ಸಹಿಷ್ಣುತೆ ಮೌಲ್ಯ ಕಳೆದುಕೊಳ್ಳ ಬಾರದೆಂದರೆ ಗಾಂಧೀಜಿ ಕುರಿತ ಮೌಲ್ಯಗಳು ಕರಗಬಾರದು. ಹಿರಿಯರಲ್ಲಿ ಶಿಕ್ಷಕವರ್ಗದಲ್ಲಿ ಪೋಷಕ ವರ್ಗದಲ್ಲಿ ಗಾಂಧಿ ಕುರಿತ ವ್ಯಕ್ತಿ ಚಿತ್ರಣ-ನುಡಿ ಚಿತ್ರಣ ಗಟ್ಟಿಯಾಗಿ ಉಳಿದರೆ ಅದು ರಕ್ತಗತವಾಗಿಯೂ ವ್ಯಕ್ತಿಗತವಾಗಿಯೂ ಹೊಸ ಏಳಿಗೆಗೆ ಹರಿಯಬಹುದು.

ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ ಮಾತು ನೆನಪಾಗುತ್ತಿದೆ: ‘‘ರಕ್ತ ಮಾಂಸ ಎಲುಬುಗಳಿಂದ ಕೂಡಿದ ಇಂತಹ ಓರ್ವ ವ್ಯಕ್ತಿ ಈ ಭೂಮಿಯ ಮೇಲೆ ನಡೆದಾಡಿದ್ದನೆಂಬುದನ್ನು ಮುಂಬರುವ ಪೀಳಿಗೆ ನಂಬುವುದು ಕಷ್ಟ’’ ಎಂದು. ಅದನ್ನು ನಂಬಿಸಬೇಕಾದ ಸವಾಲು ಮುಂದಿದೆ. ಅದು ಅನಿವಾರ್ಯವೂ ಹೌದು. ಗಾಂಧೀಜಿ ಅಂಬೇಡ್ಕರರನ್ನು ವಿರುದ್ಧ ಗುರಿಯೆಡೆಗೆ ಪರಸ್ಪರ ಅಭಿಮುಖವಾಗಿ ಸಾಗುವ ದ್ವಿಪಥವಾಗಿ ತೋರಿಸದೆ ಒಂದೇ ಗುರಿಯೆಡೆಗೆ ಸಾಗುವ ಎರಡು ಹೆದ್ದಾರಿಗಳಾಗಿ ತೋರಿಸಬೇಕಿದೆ. ಗಾಂಧಿ ಬಗೆಗಿನ ಶತ್ರುತ್ವ, ದ್ವೇಷ ಭಾವನೆ ಚಿಂತನೆಗಳು ನಮ್ಮ ಮುಂದಿರುವ ಪೀಳಿಗೆಗೆ ತಾಕದಂತೆ ತಾಕಿದರೂ ಅದು ಗಟ್ಟಯಾಗದಂತೆ ನೋಡಿಕೊಳ್ಳುವ ಹೊಣೆ ಎಲ್ಲಾ ಹಿರಿಯರ ಮೇಲಿದೆ. ಗಾಂಧಿ ಚಿಂತನೆಯೂ ಭಾಷಣ, ಅಭಿಯಾನಗಳಿಗೆ ಸೀಮಿತವಾಗದೆ ಅಳಿವಿನ ಹಾದಿ ಹಿಡಿದಿರುವ ಈ ದೇಶದ ಮರ-ಗಿಡ ನೆಲ-ಜಲದ ಉಳಿವಿಗೂ ಅಗತ್ಯ. ಭಾರತದ ಗಾಂಧೀಜಿಯ ಹೆಗ್ಗುರುತನ್ನು ಮಾಸದಂತೆ ಉಳಿಸುವ ಹೊಣೆ ನಮ್ಮದು ನಮ್ಮೆಲ್ಲರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)