varthabharthi

ನಿಮ್ಮ ಅಂಕಣ

ಶಾಲಾ ವಾಹನಗಳಲ್ಲಿ ಸುರಕ್ಷತೆಯಿರಲಿ

ವಾರ್ತಾ ಭಾರತಿ : 30 Jan, 2019
-ಮಾಹಾಂತೇಶ ಎನ್. ನೂಲಾನವರ, ಸಿಂದಗಿ.

ಮಾನ್ಯರೇ,

ರಾಜ್ಯದ ಬಹುತೇಕ ಶಾಲೆಗಳಲ್ಲಿನ ಶಾಲಾ ವಾಹನಗಳಲ್ಲಿ ಸುರಕ್ಷತೆಯ ನಿಯಮ ಪಾಲನೆಯಾಗುತ್ತಿಲ್ಲ. ಚಾಲನೆ ಅನುಭವವಿಲ್ಲದವರು, ಹಾಡಹಗಲಲ್ಲೇ ಕುಡಿಯುವವರು ವಾಹನ ಚಲಾಯಿಸುತ್ತಾರೆ. ಇಂತಹ ಚಾಲಕರ ಕೈಯಲ್ಲಿ ನಮ್ಮ ಮಕ್ಕಳನ್ನು ಕೊಡುತ್ತಿದ್ದೇವೆ. ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕುರಿಗಳ ಹಿಂಡಿನ ಹಾಗೆ ಬಾಗಿಲವರೆಗೂ ತುಂಬಿರುತ್ತಾರೆ. ಇನ್ನು ಕೆಲವು ಶಾಲೆಗಳಲ್ಲಿ ಸ್ವಂತ ವಾಹನವಿಲ್ಲದ ಕಾರಣ ಆಟೊ ರಿಕ್ಷಾಗಳನ್ನು ಬಾಡಿಗೆ ಪಡೆದುಕೊಂಡು ಅವುಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲಾಗುತ್ತಿದೆ. ಅದರಲ್ಲಿ 15 ರಿಂದ 20 ಜನ ಮಕ್ಕಳನ್ನು ಅವರ ಬ್ಯಾಗ್ ಸಮೇತ ತುಂಬಲಾಗುತ್ತಿದೆ. ಇಂತಹ ವಾಹನಗಳಲ್ಲಿ ಮಕ್ಕಳ ಉಸಿರಾಟಕ್ಕೂ ಸರಿಯಾದ ಅವಕಾಶವಿರುವುದಿಲ್ಲ.
ಮಕ್ಕಳೆಂದರೆ ಈ ವಾಹನಗಳ ಚಾಲಕರು ಮತ್ತು ಶಾಲೆಯ ಮುಖ್ಯಸ್ಥರು ಕುರಿಯ ಹಿಂಡಿನಂತೆ ಕಾಣುತ್ತಾರೆ. ವಾಹನದ ಸಾಮರ್ಥ್ಯಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಮಕ್ಕಳನ್ನು ಆಟೊ ಮತ್ತು ಒಮ್ನಿಯಲ್ಲಿ ತುಂಬಲಾಗುತ್ತಿದೆ. ಸರಕಾರ ಮತ್ತು ಇಲಾಖೆಗಳು ಇನ್ನಾದರೂ ಈ ಸಮಸ್ಯೆಯ ಬಗ್ಗೆ ಗಮನಹರಿಸಬೇಕಾಗಿದೆ.
ವಿದ್ಯಾಸಂಸ್ಥೆಗಳು ಮಕ್ಕಳನ್ನು ಶಾಲೆಗೆ ಕರೆತರಲು ಮೂಲಭೂತ ಸೌಕರ್ಯಗಳಿರುವ ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕು. ಏಕೆಂದರೆ ಸುರಕ್ಷತೆ ಇಲ್ಲದ ವಾಹನಗಳಿಂದ ಮಕ್ಕಳ ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಇಂತಹ ಕೆಲವು ವಾಹನಗಳ ಮೇಲೆ ಹೆಸರೂ ಇರುವುದಿಲ್ಲ, ದೂರವಾಣಿ ಸಂಖ್ಯೆಯೂ ಇರುವುದಿಲ್ಲ. ಶಾಲಾ ವಾಹನಗಳಲ್ಲಿ ಮಕ್ಕಳಿಗೆ ಬ್ಯಾಗ್ ಇಡುವ ವ್ಯವಸ್ಥೆ ಇತ್ಯಾದಿಗಳು ಇರಬೇಕು ಎನ್ನುವುದು ಸುಪ್ರೀಂಕೋರ್ಟ್ ನ ಅದೇಶವಾಗಿದೆ. ಆದರೂ ನಿಯಮಗಳು ಪಾಲನೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಇನ್ನಾದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಕ್ಕಳ ಸಂರಕ್ಷಣೆಗೆ ಮುಂದಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)