varthabharthi

ನಿಮ್ಮ ಅಂಕಣ

ದೇಶಪ್ರೇಮವೆಂದರೇನೆಂಬುದನ್ನು ಇವರಿಗೆ ತಿಳಿಸಬೇಕಾಗಿದೆ!

ವಾರ್ತಾ ಭಾರತಿ : 1 Feb, 2019
ಶ್ರೀನಿವಾಸ್ ಕೆ., ನಾಗರಬಾವಿ, ಬೆಂಗಳೂರು

ಕೆಲವೇ ದಿನಗಳ ಹಿಂದೆಯಷ್ಟೇ ನಾವು 70ನೇ ಗಣರಾಜ್ಯೋತ್ಸವವನ್ನು ಆಚರಿಸಿದ್ದೇವೆ. ಈ ದೇಶದ ಸರ್ವಶ್ರೇಷ್ಠ ಗ್ರಂಥ ಸಂವಿಧಾನದ ಪ್ರಸ್ತಾವನೆಯು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನಂಬಿಕೆ, ಭಕ್ತಿ, ಆಚಾರ-ವಿಚಾರಗಳಲ್ಲಿ ಅವರ ಆಶೋತ್ತರಗಳಿಗೆ ಚ್ಯುತಿಯಾಗದಂತೆ ಬದುಕುವ ಸ್ವಾತಂತ್ರ್ಯವನ್ನು ಒದಗಿಸಿದೆ. ಆದರೆ ಆಡಳಿತರೂಢ ಕೇಸರಿವಾದಿ ಸರಕಾರದಲ್ಲಿನ ಕೆಲವು ಶಾಸಕರು ಹಾಗೂ ಸಂಸದರು ಈ ದೇಶದ ಜನರ ಭಾವನೆಗಳಿಗೆ ಧಕ್ಕೆಯಾಗುವಂತಹ, ಜನಾಂಗಗಳ ನಡುವೆ ದ್ವೇಷವನ್ನು ಬಿತ್ತುವ ಹೇಳಿಕೆಗಳನ್ನು ಕೊಡುವ ಮೂಲಕ ತಮ್ಮ ವಿಕೃತ ಮನಸ್ಥಿತಿಯನ್ನು ಅನಾವರಣ ಮಾಡಿದ್ದಾರೆ. ದೇಶದ ದಲಿತರನ್ನು, ಮುಸ್ಲಿಮರನ್ನು ತಮ್ಮ ವೈರಿಗಳೆಂಬಂತೆ ಪ್ರತಿನಿತ್ಯವು ಒಂದಲ್ಲ ಒಂದು ದ್ವೇಷದ ಹೇಳಿಕೆಗಳನ್ನು ನೀಡುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದಾರೆ. ಹಾಗಾಗಿ ದಲಿತರು ಮತ್ತು ಅಲ್ಪಸಂಖ್ಯಾತರು ಮುಂಬರುವ ಚುನಾವಣೆಯ ಸಂದರ್ಭದಲ್ಲಿ ಈ ಪಕ್ಷಗಳ ಬಗ್ಗೆ ಖಚಿತ ನಿಲುವು ತಾಳುವ ಮೂಲಕ ಇವರಿಗೆ ಸಂದೇಶವನ್ನು ರವಾನಿಸುವ ಅನಿವಾರ್ಯವಿದೆ.

ಆಡಳಿತರೂಢ ಪ್ರಧಾನಿ ಮೋದಿ ಸರಕಾರದಲ್ಲಿ ಸುಮಾರು ಶೇ. 31 ಶಾಸಕರು, ಸಂಸದರ ವಿರುದ್ಧ ರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಇಂತಹ ನಾಯಕರಿಂದ ಎಷ್ಟರಮಟ್ಟಿಗೆ ಸಮಾಜದ ಒಳಿತನ್ನು ನಿರೀಕ್ಷಿಸಲು ಸಾಧ್ಯ?. ಕೇಸರಿ ಪಕ್ಷ ಅಧಿಕಾರದಲ್ಲಿರುವ ಪ್ರತೀ ರಾಜ್ಯದಲ್ಲೂ ದಿನನಿತ್ಯವೂ ದಲಿತರು ಮತ್ತು ಮುಸ್ಲಿಮರ ಮಾನ-ಪ್ರಾಣವನ್ನು ಧರ್ಮ ರಕ್ಷಕರ, ಗೋರಕ್ಷಕರ ಮುಖವಾಡ ಧರಿಸಿ ದೋಚಲಾಗುತ್ತಿದೆ.

ಭಾರತ ಸರಕಾರದ ಗೃಹ ವ್ಯವಹಾರಗಳ ಸಚಿವಾಲಯದ ಮಾಹಿತಿಯ ಪ್ರಕಾರ 2014-2015ರಲ್ಲಿ 1,395 ಕೋಮು ಗಲಭೆಗಳು ಜರುಗಿದ್ದು 192 ಜನರು ಪ್ರಾಣ ಕಳೆದುಕೊಂಡಿದ್ದಾರೆ, 4,185ಕ್ಕೂ ಅಧಿಕ ಜನರು ಗಾಯಾಳುಗಳಾಗಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ರಾಷ್ಟ್ರದ ಜನರು ಸಾವುನೋವುಗಳಲ್ಲಿ ಸೊರಗಿಹೋಗುತ್ತಿದ್ದಾರೆ. ಇದು ಸಾಲದೆಂಬಂತೆ ಸಹರಾನ್ಪುರ್ ಗಲಭೆ, ಕಾಲಿಯಾಚಕ್ ಗಲಭೆ, ದೊಲಾಗರ್ ಗಲಭೆ, ಬಡುರಿಯಾ ಗಲಭೆ, ಕರ್ನಾಟಕ ಟಿಪ್ಪುಜಯಂತಿ ಮೊದಲಾದ ಕೋಮುಗಲಭೆಗಳಲ್ಲಿ ಹಲವಾರು ಮುಸ್ಲಿಮರು ಗಾಯಾಳುಗಳಾಗಿದ್ದಾರೆ. ಹಾಗೆಯೇ ರಾಜಸ್ಥಾನ ಗಲಭೆ, ಜಾಟ್-ದಲಿತರ ಗಲಭೆ, ರೋಹಿತ್ ವೇಮುಲಾ ಪ್ರಕರಣ; ಸಮಾರು-ಜೊಧ್ಪುರ್ ಗಲಭೆ... ಹೀಗೆ ದೇಶದ ನಾನಾ ಭಾಗಗಳಲ್ಲಿ ಹಲವಾರು ದಲಿತರನ್ನು ಕೊಲ್ಲಲಾಯಿತು. ಈ ಎಲ್ಲಾ ಪ್ರಕರಣಗಳಲ್ಲಿ ಆಡಳಿತರೂಢ ಕೇಸರಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದು ಕಾಣಬಹುದು.

ಪ್ರಧಾನಿ ಮೋದಿಯವರ ಸಂಪುಟದಲ್ಲಿ ಹಾಗೂ ಅವರ ಪಕ್ಷದಲ್ಲಿರುವ ಕೆಲವು ಸಂಸದರು ಹಾಗೂ ಶಾಸಕರು ಸಮಾಜದಲ್ಲಿ ಅಶಾಂತಿಯನ್ನುಂಟುಮಾಡಲು ಕಾಲ ಕಾಲಕ್ಕೆ ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಇವೆಲ್ಲವನ್ನು ಪ್ರಧಾನಿ ಮೋದಿಯವರು ಗಮನಿಸಿಯೂ ಮೌನಕ್ಕೆ ಜಾರುವುದು ಅವರ ಆಡಳಿತದ ನೀತಿಯನ್ನು ತಿಳಿಸುತ್ತದೆ. ಸಂಸದರೊಬ್ಬರು ‘‘ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ’’, ‘‘ಜಾತ್ಯತೀತರೆಲ್ಲ ಒಬ್ಬ ಅಪ್ಪನಿಗೆ ಹುಟ್ಟಿಲ್ಲ’’ ‘‘ನಮಗೆ ಮುಸ್ಲಿಮರ ಮತ್ತು ದಲಿತರ ಮತಗಳು ಬೇಕಿಲ್ಲ’’ ಇವೇ ಮೊದಲಾದ ಹೇಳಿಕೆಗಳನ್ನು ನೀಡುವ ಮೂಲಕ ಬಹುಸಂಖ್ಯಾತ ದಲಿತ ಮತ್ತು ಮುಸ್ಲಿಮರ ಆತ್ಮಗೌರವಕ್ಕೆ ಧಕ್ಕೆಯುಂಟುಮಾಡಿದ್ದಾರೆ. ಇವರಿಂದ ದಲಿತರು ಮತ್ತು ಮುಸ್ಲಿಮರ ವಿರುದ್ಧ ಪ್ರತಿನಿತ್ಯ ದ್ವೇಷದ ಹೇಳಿಕೆಗಳು ಬರುತ್ತಲೇ ಇವೆ. ಮತ್ತೊಬ್ಬ ಸಂಸದರು ‘‘ಟಿಪ್ಪುಒಬ್ಬ ದೇಶದ್ರೋಹಿ, ಅವರ ಜಯಂತಿಯನ್ನು ಆಚರಿಸುವುದು ನಮಗೆ ಅವಮಾನ’’ ಎಂಬ ಹೇಳಿಕೆ ನೀಡಿ ರಾಜ್ಯಾದ್ಯಂತ ಸೂಕ್ಷ್ಮ ಪರಿಸ್ಥಿತಿ ಸೃಷ್ಟಿಯಾಗಲು ತಮ್ಮ ಕೊಡುಗೆ ನೀಡಿದ್ದರು. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದಿರುವ ಯೋಗಿ ಆದಿತ್ಯನಾಥ್, ಸಂಸದರಾದ ಸಾಕ್ಷಿ ಮಹಾರಾಜ್, ಇನ್ನೋರ್ವ ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿಯಂತಹವರು ದಲಿತರು ಮತ್ತು ಮುಸ್ಲಿಮರ ವಿರುದ್ಧ ಪ್ರತಿದಿನ ದ್ವೇಷ ಕಾರುವ ಹೇಳಿಕೆಗಳನ್ನು ನೀಡುವ ಮೂಲಕ ಅಸಂಖ್ಯಾತ ದಲಿತ ಮತ್ತು ಮುಸ್ಲಿಮರ ಆತ್ಮಗೌರವಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ.

ದೇಶದ ಅಭಿವೃದ್ಧಿ, ಜನರ ಆಶೋತ್ತರಗಳನ್ನು ಈಡೇರಿಸುವುದಾಗಿ ಅಧಿಕಾರಕ್ಕೆ ಬಂದ ಕೇಸರಿವಾದಿಗಳು ಕಾಲದಿಂದ ಕಾಲಕ್ಕೆ ಬಹುಸಂಖ್ಯಾತ ದಲಿತ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಗಲಭೆಗಳನ್ನು ಸೃಷ್ಟಿಸಿ ಹಲವರ ಪ್ರಾಣ ತೆಗೆದಿದ್ದಾರೆ. ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ತಿರುಚುತ್ತಾ ಬಹುಸಂಖ್ಯಾತರಿಗೆ ದೊರಕಬೇಕಿದ್ದ ಸವಲತ್ತುಗಳನ್ನು ಕಸಿದುಕೊಂಡು ನಿರ್ಗತಿಕರನ್ನಾಗಿ ಮಾಡುವುದನ್ನೇ ತಮ್ಮ ಉದ್ದೇಶವೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ದೇಶದ ದಲಿತ, ಮುಸ್ಲಿಮರು ತಮಗೆ ಬಂದೊದಗಬಹುದಾದ ಸಮಸ್ಯೆಗಳನ್ನು ಅರಿತು ಇಂತಹ ಕೋಮುವಾದಿ ಪಟ್ಟಭದ್ರ ಹಿತಾಸಕ್ತಿಗಳಿಗೆ ತಕ್ಕ ಉತ್ತರ ನೀಡುವ ಮೂಲಕ ‘‘ದೇಶಪ್ರೇಮವೆಂದರೆ ಭಾರತವನ್ನು ಹಿಂದೂ ರಾಷ್ಟ್ರವಾಗಿಸುವುದಲ್ಲ, ಬದಲಿಗೆ ಸಂವಿಧಾನದ ಆಶಯಗಳಿಗನುಗುಣವಾಗಿ ಭಾವೈಕ್ಯದಿಂದ ಬದುಕುವುದು, ಒಬ್ಬರು ಮತ್ತೊಬ್ಬರನ್ನು ಗೌರವಿಸುತ್ತಾ ಯಾರ ಹಿತಾಸಕ್ತಿಗೂ ಧಕ್ಕೆ ಬಾರದಂತೆ ನಡೆದುಕೊಳ್ಳುವುದು’’ ಎಂಬ ಸಂದೇಶವನ್ನು ನೀಡಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)