varthabharthi

ನಿಮ್ಮ ಅಂಕಣ

ನೀರು ಶುದ್ಧೀಕರಿಸಿ ಕೆರೆ ತುಂಬಿಸಿ

ವಾರ್ತಾ ಭಾರತಿ : 1 Feb, 2019
-ಗೌರೀಶ್ ಟಿ. ಎಸ್., ತಿಪ್ಪೇನಹಳ್ಳಿ

ಮಾನ್ಯರೇ,

ರಾಜ್ಯದ ಬಯಲು ಸೀಮೆ ಪ್ರದೇಶಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಅನಾವೃಷ್ಟಿ ಮತ್ತು ಬರದಿಂದ ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಕೃಷಿ ನೀರಿನ ಸಮಸ್ಯೆಯಿಂದ ಜಿಲ್ಲೆಗಳ ರೈತರು ಕಂಗಾಲಾಗಿದ್ದಾರೆ. ಅವಿಭಜಿತ ಜಿಲ್ಲೆಗಳಾದ ಕೋಲಾರ-ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದ 191 ಕೆರೆಗಳಿಗೆ ನೀರನ್ನು ಹರಿಸುವ ಉದ್ದೇಶದಿಂದ ಸಿಲಿಕಾನ್ ಸಿಟಿಯ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಅದನ್ನು ಈ ಭಾಗದ ಕೆರೆಗಳಿಗೆ ತುಂಬಿಸಲು ಕೆ.ಸಿ. ವ್ಯಾಲಿ ಯೋಜನೆಯನ್ನು ಅಳವಡಿಸಲಾಗಿದೆ. ಈಗಾಗಲೇ ಕೋಲಾರ ಜಿಲ್ಲೆಯ ಹತ್ತಾರು ಕೆರೆಗಳಿಗೆ ಶುದ್ಧೀಕರಿಸಿದ ನೀರನ್ನು ಹರಿಸಲಾಗಿದೆ. ನೀರಿನ ಅಭಾವದಿಂದ ಕಂಗೆಟ್ಪಇಲ್ಲಿನ ಜನತೆಗೆ ಕೆರೆಗಳಲ್ಲಿನ ನೀರನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ನೀರಿನಲ್ಲಿ ಅಪಾಯಕಾರಿ ಲೋಹ ಅಂಶಗಳು ಕಂಡುಬಂದಿದೆಯೆಂದು ವರದಿಯಾಗಿದೆ.

ಹೀಗಾಗಿ ಈ ನೀರು ಬಳಸುವುದರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು ಖಂಡಿತ. ಈ ಭಾಗದ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ತಲುಪಿದೆ. ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಅಂತರ್ಜಲ ಪಾತಾಳಕ್ಕೆ ತಲುಪಿರುವುದು ಬಯಲುಸೀಮೆಯ ಪ್ರದೇಶದಲ್ಲಿ ಮಾತ್ರ. ಇಲ್ಲಿನ ಕೆರೆಕುಂಟೆಗಳೆಲ್ಲಾ ಬತ್ತಿಹೋಗಿದೆ. ಕೊಳವೆ ಬಾವಿಗಳ ಸ್ಥಿತಿ ಹೇಳತೀರದಾಗಿದೆ. 1,500 ಅಡಿಗಳಷ್ಟು ಆಳಕ್ಕೆ ಬೋರ್‌ವೆಲ್ ಕೊರೆಸಿದರೂ ಇಲ್ಲಿ ನೀರು ಸಿಗುತ್ತಿಲ್ಲ. ಹಾಗಾಗಿ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗೆ ತುಂಬುವ ಯೋಜನೆ ಹಮ್ಮಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾದುದು ಅಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)