varthabharthi

ನಿಮ್ಮ ಅಂಕಣ

ಮುಸ್ಲಿಮರ ಸ್ಥಿತಿಗೆ ಯಾರನ್ನು ದೂರುವುದು?

ವಾರ್ತಾ ಭಾರತಿ : 3 Feb, 2019
ರಾಮ್ ಪುನಿಯಾನಿ

ಕರವಾನೆ ಮೊಹಬ್ಬತ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಹತ್ಯೆಯ ಕುರಿತು ನಾಸಿರುದ್ದೀನ್ ಶಾ ತನ್ನ ದುಃಖ ಮತ್ತು ಸಿಟ್ಟನ್ನು ವ್ಯಕ್ತಪಡಿಸಿದ್ದರು. ಅವರ ಸಂದರ್ಶನವು ಭಾರತದಲ್ಲಿ ನಿರ್ದಿಷ್ಟವಾಗಿ, ಧಾರ್ಮಿಕ ಅಲ್ಪ ಸಂಖ್ಯಾತರ ಅಭದ್ರತೆಯ ವಿಷಯವನ್ನು ಪ್ರಸ್ತಾಪಿಸಿತ್ತು. ಅವರ ಸಂದರ್ಶನದ ಬಗ್ಗೆ ಸಮಾಜದ ಕೆಲವು ಅಸಹನೆಯ ವಲಯಗಳಿಂದ ಟೀಕೆ ವ್ಯಕ್ತವಾಯಿತಲ್ಲದೆ ಅವರನ್ನು ಬೈದು ಸಾಮಾಜಿಕ ಮಾಧ್ಯಮಗಳಲ್ಲಿ ಅವಮಾನಿಸಲಾಯಿತು.

ಅದೇ ವೇಳೆ, ಆರೆಸ್ಸೆಸ್‌ನ ಮುಖವಾಣಿ ಪತ್ರಿಕೆ ಆರ್ಗನೈಸರ್ ಶಾ ಅವರ ಸಂಬಂಧಿ ಸೈಯದ್ ರಿಝ್ವ್ವಿನ್ ಅಹಮದ್ ಅವರ ಸಂದರ್ಶನವೊಂದನ್ನು ಪ್ರಕಟಿಸಿತು. ಅದರಲ್ಲಿ ಓರ್ವ ಇಸ್ಲಾಮಿಕ್ ವಿದ್ವಾಂಸರೆಂದು ಪರಿಚಯಿಸಲಾಗಿರುವ ಅಹಮದ್, ಮುಸ್ಲಿಮರು ಬಹುಸಂಖ್ಯಾತರಾಗಿರುವ ರಾಷ್ಟ್ರಗಳಲ್ಲಿ ಮಾತ್ರ ಸುರಕ್ಷಿತರಾಗಿಲ್ಲ ಮತ್ತು ಭಾರತದಲ್ಲಿ ಇತರ ಧರ್ಮೀಯರೊಂದಿಗೆ ಶಾಂತಿಯಿಂದ ಸಹಬಾಳ್ವೆ ನಡೆಸಲು ಮುಸ್ಲಿಮರು ವಿಫಲರಾಗಿರುವುದೇ ಇಲ್ಲಿ ಅಸಹನೆಗೆ ಕಾರಣ ಎನ್ನುತ್ತಾರೆ.
   
ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಮಟ್ಟಿಗೆ ಹೇಳುವುದಾದರೆ, ಅವರ ಸ್ಥಿತಿಗತಿಯ ಬಗ್ಗೆ ಆತ್ಮನಿರೀಕ್ಷಣೆ ಮಾಡಿಕೊಳ್ಳುವುದು ಒಳ್ಳೆಯದೇ. ಆದರೆ ಕೇವಲ ಮುಸ್ಲಿಮರನ್ನು ದೂರುವುದರಿಂದ ನಾವು ವಿಸ್ತಾರವಾದ ಜಾಗತಿಕ ರಾಜಕೀಯ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲುಸಾಧ್ಯವೇ? ಪಶ್ಚಿಮ ಏಶ್ಯಾದಲ್ಲಿ ಮುಸ್ಲಿಂ ಬಹುಸಂಖ್ಯಾತರಿರುವ ದೇಶಗಳಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಿರುವ ದೇಶಗಳಲ್ಲಿ ಇರುವುದಕ್ಕಿಂತ ಹೆಚ್ಚು ಅಭದ್ರತೆ ಇದೆ ಮತ್ತು ಹೆಚ್ಚು ಅಂತರ್ಯುದ್ಧಗಳು(ಸಿವಿಲ್ ವಾರ್ಸ್‌)ನಡೆಯುತ್ತಿವೆ ಎಂಬುದು ಜಾಗತಿಕವಾಗಿ ಸತ್ಯ. ಭಯೋತ್ಪಾದಕ ಕೃತ್ಯಗಳಿಗೆ ನಾವು, ಭಾರತದ ಕಡೆಯಿಂದ ಪಾಕಿಸ್ತಾನವನ್ನು ದೂರುತ್ತೇವೆ; ಆದರೆ ಮುಗ್ಧ ನಾಗರಿಕರ ಹತ್ಯೆಗಳ ಸಂಖ್ಯೆ ಭಾರತಕ್ಕಿಂತ ಪಾಕಿಸ್ತಾನದಲ್ಲೇ ಹಲವು ಪಾಲು ಹೆಚ್ಚು ಇದೆ ಮತ್ತು ಪಾಕಿಸ್ತಾನವು ತನ್ನ ಪ್ರಧಾನಿ ಬೆನಝಿರ್ ಭುಟ್ಟೊ ಅವರನ್ನು ಭಯೋತ್ಪಾದಕ ದಾಳಿಯೊಂದರಲ್ಲಿ ಕಳೆದುಕೊಂಡಿತೆಂಬುದನ್ನು ನಾವು ಮರೆಯಬಾರದು. ಅಲ್ಲದೆ ಅಂತರ್ಯುದ್ಧಗಳು ಯುದ್ಧಗಳು, ಮತ್ತು ಭಯೋತ್ಪಾದಕ ದಾಳಿಗಳು ತೈಲ ಶ್ರೀಮಂತ ವಲಯದಲ್ಲೇ ಹೆಚ್ಚು ಎಂಬುದು ಕೂಡ ಗಮನಾರ್ಹ. ಆ ವಲಯದಲ್ಲಿ ಮುಜಾಹಿದೀನ್, ಅಲ್ ಖಾಯಿದಾ ಮತ್ತು ತಾಲಿಬಾನ್ ಅಸ್ತಿತ್ವಕ್ಕೆ ಬಂದ ಬಳಿಕ ಅಲ್ಲಿ ಭಯೋತ್ಪಾದಕ ಕೃತ್ಯಗಳು ಮತ್ತು ಹಿಂಸೆ ಆರಂಭವಾಯಿತು. ಇದು ಇಸ್ಲಾಮ್‌ನಿಂದಾಗಿ ಆದದ್ದೇ? ಇದು ಶೀತಲ ಸಮರದ ಅವಧಿಯಲ್ಲಿ ಅಥವಾ ಅದಕ್ಕೂ ಮೊದಲು ಯಾಕೆ ಅಲ್ಲಿ ಇರಲಿಲ್ಲ?

ಪಶ್ಚಿಮ ಏಶ್ಯಾದಲ್ಲಿ ಹಿಂಸೆಗೆ ಮುಖ್ಯಕಾರಣ:
ತೈಲಸಂಪತ್ತನ್ನು ನಿಯಂತ್ರಿಸುವ ಅಮೆರಿಕದ ನೀತಿ. ಅಘ್ಘ್ಘಾನಿಸ್ತಾನದಲ್ಲಿ ರಶ್ಯಾದ ಪ್ರವೇಶವಾದ ಬಳಿಕ, ತನ್ನದೇ ಸೇನೆಯನ್ನು ಕಳುಹಿಸಿ ರಶ್ಯಾಕ್ಕೆ ಪ್ರತಿರೋಧ ಒಡ್ಡಲು ಅಮೆರಿಕ ಅಸಮರ್ಥವಾಯಿತು. ಯಾಕೆಂದರೆ ವಿಯಟ್ನಾಂನಲ್ಲಿ ಅದಕ್ಕೆ ಆದ ಹೀನಾಯ ಸೋಲಿನಿಂದಾಗಿ ಅದು ತನ್ನ ಸೇನೆಯ ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿತ್ತು.
     
ಹಾಗಾಗಿ ಆಗ ಅಮೆರಿಕ ಆ ಪ್ರದೇಶಗಳಲ್ಲಿ ಮೂಲಭೂತವಾದಿ ಗುಂಪುಗಳಿಗೆ ಪ್ರೋತ್ಸಾಹ, ಪ್ರಾಯೋಜಕತ್ವ ನೀಡಲಾರಂಭಿಸಿತು. ಪಾಕಿಸ್ತಾನದ ಕೆಲವು ಮದ್ರಸಾಗಳಲ್ಲಿ ಅದು ಮುಸ್ಲಿಂ ಯುವಕರ ಮಿದುಳು ತೊಳೆತಕ್ಕೆ(ಬ್ರೆಯನ್ ವಾಶಿಂಗ್) ಪ್ರೋತ್ಸಾಹ, ನೆರವುನೀಡಲಾರಂಭಿಸಿತು ಮತ್ತು ಭಾರೀ ಧನ ಸಹಾಯ ನೀಡಿತು (ಎಂಟು ಸಾವಿರ ಮಿಲಿಯ ಡಾಲರ್)ಮತ್ತು ಭಾರೀ ಪ್ರಮಾಣದ ಮಿಲಿಟರಿ ಸಾಮಗ್ರಿಗಳನ್ನು ಪೂರೈಸಿತು. (ಏಳು ಸಾವಿರ ಟನ್‌ಗಳಷ್ಟು ಶಸ್ತ್ರಾಸ್ತ್ರಗಳು ಹಾಗೂ ಅತ್ಯಾಧುನಿಕ ಅಸ್ತ್ರಗಳು). ಈ ಎಲ್ಲ ನೆರವಿನಿಂದಾಗಿ ಆ ಭಯೋತ್ಪಾದಕ ಗುಂಪುಗಳು ಬಲಯುತವಾದವು. ಇದು ಆ ಪ್ರದೇಶದಲ್ಲಿ ಹಿಂಸೆ, ಭಯೋತ್ಪಾದನೆಯ ಬೀಜಗಳನ್ನು ಬಿತ್ತಿ ಅಭದ್ರತೆಗೆ ಕಾರಣವಾಯಿತು. ಸೂಪರ್ ಪವರ್ ಆಗಿರುವ ಅಮೆರಿಕ ಭಯೋತ್ಪಾದಕ ಗುಂಪುಗಳನ್ನು ಹುಟ್ಟುಹಾಕಲು ಬಳಸಿದ ಕಾರ್ಯ ವಿಧಾನದ ಸ್ಪಷ್ಟವಾದ ಹಾಗೂ ಖಚಿತವಾದ ವಿವರಗಳನ್ನು ಮಹಮೂದ್ ಮಮ್ದಾನಿಯ ‘‘ ಗುಡ್ ಮುಸ್ಲಿಮ್- ಬ್ಯಾಡ್ ಮುಸ್ಲಿಮ್’’ ಪುಸ್ತಕ ದಾಖಲಿಸಿದೆ.

ಗಾಯಕ್ಕೆ ಉಪ್ಪು ಸವರಿದಂತೆ, 9/11, 2001ರ ಅವಳಿ ಗೋಪುರಗಳ ಮೇಲೆ ನಡೆದ ದಾಳಿಯ ಬಳಿಕ ಅಮೆರಿಕನ್ ಮಾಧ್ಯಮಗಳು ‘‘ಇಸ್ಲಾಮಿಕ್ ಭಯೋತ್ಪಾದನೆ’’ ಎಂಬ ನುಡಿಗಟ್ಟನ್ನು ಜನಪ್ರಿಯಗೊಳಿಸಿ, ಜಾಗತಿಕ ಇಸ್ಲಾಮೊ ಫೋಬಿಯಾಕ್ಕೆ ಶಂಕು ಸ್ಥಾಪನೆ ಮಾಡಿದವು. ಮುಸ್ಲಿಮ್ ಬಹು ಸಂಖ್ಯಾತರಿರುವ ದೇಶಗಳ ಸಂಪತ್ತು ಅಂದರೆ ತೈಲದ ಮೇಲೆಯೇ ಅಮೆರಿಕದ ದೃಷ್ಟಿ ನೆಟ್ಟಿತ್ತು.

ಭಾರತಕ್ಕೆ ಇಸ್ಲಾಮ್ ಅರಬ್ ವ್ಯಾಪಾರಿಗಳ ಜತೆ ಬಂತು. ಬಳಿಕ ವಿಶೇಷವಾಗಿ ಜಾತಿ ಪದ್ಧತಿಯ ದಬ್ಬಾಳಿಕೆಯಿಂದ ಪಾರಾಗಲು ಹಲವರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಅಕ್ಬರ್ ನಂತಹ ಮುಸ್ಲಿಮ್ ದೊರೆಗಳು ಅಂತರ್ ಧಾರ್ಮಿಕ ಸಂವಹನ, ಸಾಮರಸ್ಯವನ್ನು ಪ್ರೋತ್ಸಾಹಿಸಿದರು. ಅತ್ಯಂತ ದೂಷಣೆಗೆ ಒಳಗಾಗಿರುವ ಔರಂಗಜೇಬನ ಹಲವು ಉನ್ನತ ಅಧಿಕಾರಿಗಳು ಕೂಡಾ ಹಿಂದೂಗಳಾಗಿದ್ದರು. ಭಾರತದ ಸ್ವಾತಂತ್ರ ಚಳವಳಿಯ ವೇಳೆ ಮುಸ್ಲಿಮರಲ್ಲಿ ಬಹುಸಂಖ್ಯಾತರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜೊತೆಗಿದ್ದರು. ಮೌಲಾನ ಅಬುಲ್ ಕಲಮ್ ಅಝಾದ್, ಖಾನ್ ಅಬ್ದುಲ್ ಗಫ್ಫಾರ್‌ಖಾನ್ ಮತ್ತು ರಫಿ ಅಹ್ಮದ್ ಕಿದ್ವಾಯಿಯಂತಹ ಮುಸ್ಲಿಮ್ ಸ್ವಾತಂತ್ರ ಹೋರಾಟಗಾರರು ಸ್ವಾತಂತ್ರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
  ಸ್ವಾತಂತ್ರಾನಂತರ ಈ ದೇಶದಲ್ಲಿ ಮುಸ್ಲಿಮ್ ಲೀಗ್, ಹಿಂದೂ ಮಹಾಸಭಾ, ಮತ್ತು ಆರೆಸ್ಸೆಸ್ ನಂತಹ ಕೋಮುವಾದಿ ಸಂಘಟನೆಗಳು ಕೋಮುವಾದಿ ವಿಷ ಹರಡಿದವು. ಆರೆಸ್ಸೆಸ್ ಹರಡಿದ ಕೋಮು ವಿಷದಿಂದಾಗಿಯೇ ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಕೊಲೆ ನಡೆಯುವಂತಾಯಿತು ಎಂದು ಹೇಳುವ ಹಂತಕ್ಕೂ ಸರ್ದಾರ್ ಪಟೇಲ್ ಹೋಗಿದ್ದಾರೆ. ಹೆಚ್ಚುತ್ತಿರುವ ಕೋಮು ಹಿಂಸೆ, ತರುವಾಯ ಭಯೋತ್ಪಾದಕ ಕೃತ್ಯಗಳ ನೆಪದಲ್ಲಿ ಮುಗ್ಧ ಮುಸ್ಲಿಮ್ ಯುವಕರ ಬಂಧನ, ಗೋ ಮಾಂಸದ ಹೆಸರಿನಲ್ಲಿ ಮುಸ್ಲಿಮರ ಗುಂಪು ಥಳಿತ- ಇವೆಲ್ಲ ಭಾರತದಲ್ಲಿ ಭಾರೀ ಅಭದ್ರತೆಯನ್ನು ಸೃಷ್ಟಿಸಿವೆ.
   ಮುಸ್ಲಿಮರ ಕಡೆಯಿಂದ ಯಾವುದೇ ತಪ್ಪುಗಳುನಡೆದಿಲ್ಲವೆಂದು ಯಾರೂ ಹೇಳುತ್ತಿಲ್ಲ. ಶಾ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ತೀರ್ಪನ್ನು ವಿರೋಧಿಸಿದ ಮುಸ್ಲಿಮರ ಒಂದು ವರ್ಗ ಇಡೀ ಮುಸ್ಲಿಮ್ ಸಮುದಾಯವನ್ನು ಹಿಂದಕ್ಕೆ ತಳ್ಳಿತು. ಬಾಬರಿ ಮಸೀದಿ ವಿಷಯದಲ್ಲಿ ಅದು ಶ್ರೀರಾಮನ ಜನ್ಮಸ್ಥಳವೆಂದು ತೋರಿಸುವ ಹುನ್ನಾರ ನಡೆದಿದೆ. ಆದರೂ ಮುಸ್ಲಿಂ ನಾಯಕತ್ವವು ಈ ಅಸ್ಮಿತೆಯ ವಿಷಯಗಳಿಗಿಂತ ಹೆಚ್ಚಾಗಿ ಮುಸ್ಲಿಮರ ಜೀವನೋಪಾಯಕ್ಕೆ, ವಾಸ್ತವದ ಬದುಕಿಗೆ ಹೆಚ್ಚು ಮಹತ್ವ ನೀಡಬೇಕಾಗಿದೆ. ತಥಾಕಥಿತ ಇಸ್ಲಾಮಿಕ್ ವಿದ್ವಾಂಸ ಸೈಯದ್ ರಿಝ್ವ್ವಾನ್ ಅಹಮದ್ ಮುಸ್ಲಿಮ್ ಸಮುದಾಯದ ಎಲ್ಲ ಸಮಸ್ಯೆಗೂ ಅವರೇ ಕಾರಣ ಎನ್ನುತ್ತಿದ್ದಾರೆ! ಇದಕ್ಕಿಂತ ಸತ್ಯ ದೂರವಾದ ಮಾತು ಬೇರೊಂದಿರಲಾರದು! ಇದು ಬಲಿಪಶುವನ್ನೇ ಅಪರಾಧಿ ಎಂದ ಹಾಗೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)