varthabharthi

ನಿಮ್ಮ ಅಂಕಣ

ತೇಲ್ತುಂಬ್ಡೆಯ ಬಂಧನ ಹಿಂದೆ ವ್ಯವಸ್ಥಿತ ಸಂಚು

ವಾರ್ತಾ ಭಾರತಿ : 3 Feb, 2019
ಜಿಗ್ನೇಶ್ ಮೇವಾನಿ, ಶಾಸಕ, ಸಾಮಾಜಿಕ ಹೋರಾಟಗಾರ

ಖ್ಯಾತ ಮಾನವಹಕ್ಕುಗಳ ಹೋರಾಟಗಾರ, ದಲಿತ ಚಿಂತಕ ಆನಂದ್ ತೇಲ್ತುಂಬ್ಡೆ ಅವರನ್ನು ಭೀಮಾಕೋರೆಗಾಂವ್ ಹಿಂಸಾಚಾರ ಘಟನೆಗೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸರು ಶನಿವಾರ ಬಂಧಿಸಿದ ಘಟನೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆನಂತರ ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯವು ಬಿಡುಗಡೆಗೊಳಿಸಿದೆ. ಆನಂದ್ ತೇಲ್ತುಂಬ್ಡೆ ಬಂಧನವು ದಲಿತ ಚಳವಳಿಯನ್ನು ಹತ್ತಿಕ್ಕಲು ಸಂಘಪರಿವಾರ ಹಾಗೂ ಬಿಜೆಪಿ ನಡೆಸುತ್ತಿರುವ ಸಂಚಿನ ಒಂದು ಭಾಗವಾಗಿದೆಯೆಂದು ಶಾಸಕ ಹಾಗೂ ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ಈ ಸಂದರ್ಭದಲ್ಲಿ ಬರೆದ ಈ ಲೇಖನದಲ್ಲಿ ತಿಳಿಸಿದ್ದಾರೆ.


ಇದು ನಮ್ಮ ಪ್ರಜಾಪ್ರಭುತ್ವದ ಕಪ್ಪು ದಿನವಾಗಿದೆ. ಶನಿವಾರ ಮುಂಜಾನೆ 3:30ರ ವೇಳೆಗೆ ಮಾನವಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಅವರನ್ನು ಪುಣೆ ಪೊಲೀಸರು ಬಂಧಿಸಿದ ಕ್ರಮವು ಅಸಾಂವಿಧಾನಿಕವಾದುದೇ ಹೊರತು ಇನ್ನೇನೂ ಅಲ್ಲ. ಪೊಲೀಸರ ಹತಾಶ ಮನೋಭಾವವನ್ನು ಇದು ಪ್ರತಿಬಿಂಬಿಸುತ್ತದೆ.

ತೇಲ್ತುಂಬ್ಡೆಯವರನ್ನು ಪೊಲೀಸರು ಬಂಧಿಸಿ ಸಮಯವೂ ಕಾರ್ಯತಂತ್ರದಿಂದ ಕೂಡಿದ್ದಾಗಿತ್ತು. ಆಗ ಇಡೀ ದೇಶದ ಗಮನ ಮೋದಿ ಸರಕಾರದ ಮಧ್ಯಂತರ ಬಜೆಟ್‌ನೆಡೆಗೆ ಹರಿದಿತ್ತು ಹಾಗೂ ಭೀಮಾ ಕೋರೆಗಾಂವ್ ಘಟನೆಗೆ ಸಂಬಂಧಿಸಿ ಬಂಧಿತರಾದ ಹೋರಾಟಗಾರರ ದುರವಸ್ಥೆಯನ್ನು ಸಾಮಾಜಿಕ ಮಾಧ್ಯಮಗಳು ಮರೆತುಬಿಟ್ಟಿದ್ದವು.

ಇಸ್ಪ್ಸೆಪೆಕ್ಟರ್ ಇಂದುಲ್ಕರ್ ನೇತೃತ್ವದ ತಂಡವು, ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕಡೆಗಣಿಸಿ, ಮುಂಬೈಯ ವಿಮಾನನಿಲ್ದಾಣದಲ್ಲಿ ತೇಲ್ತುಂಬ್ಡೆಯವರನ್ನು ಕಸ್ಟಡಿಗೆ ತೆಗೆದುಕೊಂಡಿತು. ತೇಲ್ತುಂಬ್ಡೆಯವರನ್ನು ನಾಲ್ಕು ವಾರಗಳವರೆಗೆ ಬಂಧಿಸದಂತೆ ಸುಪ್ರೀಂಕೋರ್ಟ್ ಜನವರಿ 11ರಂದು ನೀಡಿದ ಆದೇಶವನ್ನು ಪುಣೆ ಪೊಲೀಸರು ಸಂಪೂರ್ಣವಾಗಿ ಅಗೌರವಿಸಿರುವುದಕ್ಕೆ ಇದೊಂದು ನಿದರ್ಶನವಾಗಿದೆ.

ಆನಂದ್ ತೇಲ್ತುಂಬ್ಡೆ ಅವರು ಜಾತಿವಾದವನ್ನು ಪ್ರಬಲವಾಗಿ ವಿರೋಧಿಸುತ್ತಿರುವಂತಹ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಚಿಂತಕರಾಗಿದ್ದಾರೆ. ಐಐಎಂ ಹಾಗೂ ಐಐಟಿಯಲ್ಲಿ ಅಧ್ಯಯನ ನಡೆಸಿರುವ ಅವರು ಭಾರತೀಯ ಪೆಟ್ರೋಲಿಯಂನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರು ಜಾತಿ ಸಂಬಂಧಿತ ವಿಷಯಗಳ ತಜ್ಞರೂ ಆಗಿದ್ದಾರೆ. ಕಾರ್ಪೊರೇಟ್ ಕಂಪೆನಿಗಳಿಗಾಗಿ ಕೆಲಸ ಮಾಡುತ್ತಿರುವ ಸಮಯದಲ್ಲಿ ತೇಲ್ತುಂಬ್ಡೆ ಅವರು ಹಲವಾರು ಸಂಶೋಧನಾ ಪ್ರಬಂಧಗಳು, ಪುಸ್ತಕಗಳನ್ನು ಬರೆದಿದ್ದರು ಹಾಗೂ ಅನೇಕ ಪುರಸ್ಕಾರಗಳನ್ನು ಪಡೆದಿದ್ದರು. ಜಾತಿ ಆಧಾರಿತ ತಾರತಮ್ಯ ಹಾಗೂ ಮಾನವಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಹೋರಾಡುವ ಮೂಲಕ ಅವರು ಸಮಾಜದ ಋಣವನ್ನು ತೀರಿಸುತ್ತಿದ್ದಾರೆ. ‘ಇಕನಾಮಿಕ್ ಆ್ಯಂಡ್ ಪಾಲಿಟಿಕಲ್ ವೀಕ್ಲಿ’ ಪತ್ರಿಕೆಗೆ ಆನಂದ್ ತೇಲ್ತುಂಬ್ಡೆ ಅವರು ಬರೆಯುವ ಅಂಕಣವು ಅತ್ಯಂತ ಜನಪ್ರಿಯವಾಗಿದೆ.

ನಾನು ಭೇಟಿಯಾದ ಅತ್ಯಂತ ಅಮೂಲ್ಯ ವ್ಯಕ್ತಿಗಳಲ್ಲಿ ಅವರೊಬ್ಬರಾಗಿದ್ದರು. ಇಂತಹ ವ್ಯಕ್ತಿಗೆ ‘ ನಗರ ನಕ್ಸಲ್’ ಎಂಬ ಹಣೆಪಟ್ಟಿಕಟ್ಟಿರುವುದು ಬಿಜೆಪಿ ಹಾಗೂ ಆರೆಸ್ಸೆಸ್‌ನ ಸಂಚಲ್ಲದೆ ಮತ್ತೆನೂ ಅಲ್ಲ. ಪೊಲೀಸರ ಈ ಕೃತ್ಯದ ಬಗ್ಗೆ ತನಿಖೆಯ ಅಗತ್ಯವಿದೆ ಹಾಗೂ ಅವರ ವಿರುದ್ಧ ಅಪರಾಧ ಪ್ರಕರಣವನ್ನು ದಾಖಲಿಸಬೇಕಾಗಿದೆಯೆಂದು ನ್ಯಾಯವಾದಿಯಾಗಿ ನಾನು ಹೇಳಬಲ್ಲೆ. ದಲಿತರು ಹಾಗೂ ಆದಿವಾಸಿಗಳ ವಿರುದ್ಧ ದಲಿತೇತರರು, ಆದಿವಾಸಿಯೇತರರು ಸುಳ್ಳು ಹಾಗೂ ಆಧಾರರಹಿತ ಪ್ರಕರಣಗಳನ್ನು ದಾಖಲಿ ಸುವುದರ ವಿರುದ್ಧ ಕ್ರಮವನ್ನು ಕೈಗೊಳ್ಳುವುದಕ್ಕೆ ಎಸ್ಸಿ/ ಎಸ್ಟಿ(ದೌರ್ಜನ್ಯ ತಡೆ) ಕಾಯ್ದೆಯಲ್ಲಿ ಅವಕಾಶವಿದೆ.
ಕಳೆದ ಕೆಲವು ವರ್ಷಗಳಿಂದ ಸರಕಾರದ ಸೈದ್ಧಾಂತಿಕ ಚಿಂತನೆಯನ್ನು ವಿರೋಧಿಸುವವರನ್ನು ಬೆದರಿಸಲಾಗುತ್ತದೆ ಹಾಗೂ ಅವರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗುತ್ತಿದೆ.

ಈ ಪ್ರವೃತ್ತಿಯನ್ನು ಮೊದಲು ನಾವು ಗುಜರಾತ್‌ನಲ್ಲಿ ಕಂಡಿದ್ದೇವೆ. ಮೊದಲಿಗೆ ನರೇಂದ್ರ ಮೋದಿಯವರ ಪ್ರಾಣಕ್ಕೆ ಅಪಾಯವಿದೆಯೆಂಬಂತಹ ಸುಳ್ಳು ವದಂತಿಗಳನ್ನು ಹರಡಲಾಗುತ್ತದೆ. ಎರಡನೆ ಮಾಧ್ಯಮಗಳ ಮೂಲಕ ಅಂತಹ ಸುದ್ದಿಗಳಿಗೆ ವಿಪರೀತ ಪ್ರಚಾರ ನೀಡಲಾಗುತ್ತದೆ. ಭಿನ್ನಭಿಪ್ರಾಯವನ್ನು ವ್ಯಕ್ತಪಡಿಸುವವರ ವಿರುದ್ಧ ದ್ವೇಷದ ವಾತಾವರಣವನ್ನು ಹಾಗೂ ಮೋದಿಯವರಂತಹ ರಾಜಕಾರಣಿಗಳ ಬಗ್ಗೆ ಅನುಕಂಪದ ವಾತಾವರಣವನ್ನು ಈ ಮೂಲಕ ಸೃಷ್ಟಿಸಲಾಗುತ್ತದೆ. ಮೂರನೆಯದಾಗಿ ವಿರೋಧದ ಧ್ವನಿಯೆತ್ತುವವರನ್ನು ಬಂಧಿಸಲಾಗುತ್ತದೆ. ಆನಂದ್ ತೇಲ್ತುಂಬ್ಡೆಯವರ ಬಂಧನ ಕೂಡಾ ಇದೇ ರೀತಿಯದ್ದಾಗಿದೆ.

ಜನರ ಮನೆಗಳಿಂದ ಕಂಪ್ಯೂಟರ್‌ಗಳನ್ನು ಕಸಿದುಕೊಳ್ಳುವುದು ಹಾಗೂ ಅವುಗಳಲ್ಲಿ ಸಂದೇಹಾಸ್ಪದವಾದ ಪತ್ರಗಳಿವೆ ಎಂಬ ಆರೋಪವೇ ಪಕ್ಕಾ ಶಂಕಾಸ್ಪದವಾದುದಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯು ಭಿನ್ನಮತದ ಧ್ವನಿಗಳನ್ನು ಹತ್ತಿಕ್ಕಲು ಬಳಸಲಾಗುವ ಒಂದು ಕರಾಳ ಕಾನೂನಾಗಿದೆ.

ಒಂದು ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಇಂದು ಬದುಕಿರುತ್ತಿದ್ದಲ್ಲಿ ಅವರು ತೇಲ್ತುಂಬ್ಡೆ ಹಾಗೂ ಅವರ ಕೆಲಸವನ್ನು ನಿಜಕ್ಕೂ ಶ್ಲಾಘಿಸುತ್ತಿದ್ದರು. ಅವರ ಬಗ್ಗೆ ಅಂಬೇಡ್ಕರ್ ಹೆಮ್ಮೆ ಪಡುತ್ತಿದ್ದರು. ಯಾಕೆಂದರೆ ತೇಲ್ತುಂಬ್ಡೆ ಅಷ್ಟೊಂದು ಪ್ರತಿಭಾವಂತ ವ್ಯಕ್ತಿಯಾಗಿದ್ದಾರೆ. ಇದೀಗ 2019ರ ಲೋಕಸಭಾ ಚುನಾವಣೆಗೆ ಮುನ್ನ ದಲಿತ ಚಳವಳಿಯು ತೇಲ್ತುಂಬ್ಡೆ ಬಂಧನ ಘಟನೆಯನ್ನು ತನ್ನ ಹೋರಾಟದ ಮುಖ್ಯ ಕಾರ್ಯಸೂಚಿಯನ್ನಾಗಿ ಮಾಡಿಕೊಳ್ಳಲಿದೆ. ಭೀಮಾ ಕೋರೆಗಾಂವ್ ಘಟನೆಯ ಹಿನ್ನೆಲೆಯಲ್ಲಿ ಬಂಧಿತರಾದ ಎಲ್ಲಾ ಚಿಂತಕರು ಹಾಗೂ ಹೋರಾಟಗಾರರ ಬಂಧನದ ವಿರುದ್ಧ ನಾವು ಹೋರಾಡಲಿದ್ದೇವೆ. ಸ್ಥಾಪಿತ ಹಿತಾಸಕ್ತಿಗಳು ಹುಟ್ಟುಹಾಕಿರುವ ಕಪೋಲಕಲ್ಪಿತವಾದ ನಿರೂಪಣೆಗಳ ವಿರುದ್ಧವೂ ನಾವು ಹೋರಾಡಲಿದ್ದೇವೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಹಾಗೂ ಭೀಮಾಕೋರೆಗಾಂವ್ ಘಟನೆಯ ಹಿನ್ನೆಲೆಯಲ್ಲಿ ಬಂಧಿತರಾದವರ ಬಿಡುಗಡೆಗೆ ಆಗ್ರಹಿಸಿ ನಾವು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನಡೆಸಲಿದ್ದೇವೆ.

‘‘ಜಾತಿ ವ್ಯವಸ್ಥೆಯೆಂಬುದು ದೇಶವಿರೋಧಿ. ಜಾತಿ ಪದ್ಧತಿಯನ್ನು ನಿರ್ಮೂಲನೆಗೊಳಿಸುವುದನ್ನು ನವಭಾರತವು ಬಯಸುತ್ತಿದೆ’ ಎಬುದಾಗಿ ಅಂಬೇಡ್ಕರ್ ಒಂದೊಮ್ಮೆ ಹೇಳಿದ್ದರು. ಆನಂದ್ ತೇಲ್ತುಂಬ್ಡೆ ಅದನ್ನಷ್ಟೇ ಮಾಡಹೊರಟಿದ್ದಾರೆ.

 ಕೃಪೆ: ದಿ ಪ್ರಿಂಟ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)