varthabharthi

ನಿಮ್ಮ ಅಂಕಣ

ಝಮೀರ್ ಅಹ್ಮದ್ ಅವರೇ, ಯಾವ ಅಮಲಿನಲ್ಲಿ ಈ ಹೇಳಿಕೆ ನೀಡಿದಿರಿ ನೀವು?

ವಾರ್ತಾ ಭಾರತಿ : 4 Feb, 2019
ಶಂಸುದ್ದೀನ್ ಎಚ್., ಪುತ್ತೂರು

ಸಂಪುಟ ದರ್ಜೆಯ ಸಚಿವರು, ಅದರಲ್ಲೂ ಎರಡು ಮೂರು ಬಾರಿ ಸಚಿವರಾದವರು ಎಂದರೆ ಅವರ ಮಾತಿಗೆ ಅದರದ್ದೇ ಆದ ಒಂದು ತೂಕವಿರುತ್ತದೆ. ಅವರು ಏನು ಹೇಳುತ್ತಾರೆ ಎಂದು ಕೇಳಲು ದೊಡ್ಡ ಸಂಖ್ಯೆಯಲ್ಲಿ ಜನರು ಕಾದಿರುತ್ತಾರೆ. ಅವರು ಹೇಳಿದ ಮೇಲೆ ಅದನ್ನು ಒಪ್ಪುವವರು, ಬೆಂಬಲಿಸುವವರು, ವಿರೋಧಿಸುವವರು - ಹೀಗೆ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುವವರು ಇರುತ್ತಾರೆ. ಆದರೆ ಸಚಿವ ಝಮೀರ್ ಅಹ್ಮದ್ ಖಾನ್ ಹಾಗಲ್ಲ. ಹಿರಿಯ ಸಚಿವ, ಅನುಭವಿ ರಾಜಕಾರಣಿ ಆಗಿದ್ದರೂ ಆವರಿಂದ ಸಾಮಾನ್ಯವಾಗಿ ಯಾರೂ ಗಂಭೀರ ನಡವಳಿಕೆಯನ್ನು ನಿರೀಕ್ಷಿಸುವುದಿಲ್ಲ. ಇದಕ್ಕೆ ಕಾರಣವೂ ಇದೆ. ರಾಜಕೀಯಕ್ಕೆ ಬಂದಂದಿನಿಂದ ಇಂದಿನವರೆಗೂ ಅವರ ಹಾವಭಾವ, ವರ್ತನೆ, ಮಾತು, ಆಡಳಿತ - ಎಲ್ಲವೂ ಅದೇ ಧಾಟಿಯಲ್ಲಿವೆ. ಹಾಗಾಗಿಯೇ, ಯಾವುದೇ ಮಹತ್ವದ ವಿಷಯದ ಬಗ್ಗೆ ಝಮೀರ್ ಅವರ ಅಭಿಪ್ರಾಯ ಏನು ಎಂದು ಯಾರಾದರೂ ಚರ್ಚೆ ಮಾಡುವುದನ್ನು ನೀವು ನೋಡಿದ್ದೀರಾ ?  ಆದರೆ ಜನರ ಈ ಉದಾಸೀನವೇ ಅವರಿಗೆ ವರವಾಗಿಬಿಟ್ಟಿದೆ. ತನ್ನ ಮಾತನ್ನು ಯಾರೂ ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂಬುದನ್ನು ಅವರು ತಾನು ಏನು ಬೇಕಾದರೂ ಹೇಳಿ ಬಿಡಬಹುದು ಎಂದು ತಪ್ಪು ತಿಳಿದುಕೊಂಡುಬಿಟ್ಟಿದ್ದಾರೆ.  ಹಾಗಾಗಿಯೇ ಕನಿಷ್ಠ ತನ್ನ ಸ್ಥಾನದ ಘನತೆಯನ್ನು ಪರಿಗಣಿಸದೆ ರವಿವಾರ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ “ಬಿಜೆಪಿಗೆ ಮುಸ್ಲಿಮರು ಮತ ಹಾಕುವುದಿಲ್ಲ. ಹಾಗೆ ಮತ ಹಾಕಿದರೆ ಅವರು ಮುಸ್ಲಿಮರೇ ಅಲ್ಲ” ಎಂದು ಹೇಳಿ ಬಿಟ್ಟಿದ್ದಾರೆ. 

ಅವರ ಈ ಹೇಳಿಕೆ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ. ಇಸ್ಲಾಂ ಧರ್ಮದ ನೀತಿ ನಿಯಮಗಳಿಗೆ ವಿರುದ್ಧವಾಗಿದೆ.  ಆತ್ಮ ಗೌರವ ಇರುವ, ಯಾವುದೇ ಪಕ್ಷದಲ್ಲಿರುವ ಪ್ರತಿಯೊಬ್ಬ ಮುಸ್ಲಿಮರೂ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ. ಝಮೀರ್ ಅಹ್ಮದ್ ರ ಈ ಅತ್ಯಂತ ಬೇಜವಾಬ್ದಾರಿಯುತ ಹಾಗು ಕೀಳು ಮಟ್ಟದ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಬೇಕಾಗಿದೆ. ಝಮೀರ್ ಅಹ್ಮದ್ ತನ್ನ ಈ ಹೇಳಿಕೆಯಿಂದ ಮುಸ್ಲಿಂ ಸಮುದಾಯಕ್ಕೆ ಅತಿದೊಡ್ಡ ನಷ್ಟ ಉಂಟುಮಾಡಿದ್ದಾರೆ. ರಾಜ್ಯದ ಎಲ್ಲ ಮುಸ್ಲಿಮರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಈ ಮಾತನ್ನು ಅವರು ವಾಪಸ್ ಪಡೆದು ಕ್ಷಮೆ ಕೋರುವವರೆಗೆ ಈ ದೇಶದ ಪ್ರಜೆಯಾಗಿ, ಪ್ರಜ್ಞಾವಂತ ಮತದಾರನಾಗಿ ನಾನು ಅವರನ್ನು ಕ್ಷಮಿಸುವುದಿಲ್ಲ. ರಾಜ್ಯದ ಪ್ರಮುಖ ಸಮುದಾಯವೊಂದರ ಬಗ್ಗೆ ಈ ರೀತಿಯ ಸಡಿಲ ಹೇಳಿಕೆ ನೀಡಿದ್ದಕ್ಕಾಗಿ ಝಮೀರ್ ಅಹ್ಮದ್ ವಿಷಾದಿಸಬೇಕು ಮತ್ತು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ತಮ್ಮ ಹೇಳಿಕೆಯ ಮೂಲಕ ಆ ಮಹತ್ವದ ಸ್ಥಾನಕ್ಕೆ ಅಗೌರವ ತಂದಿದ್ದಾರೆ. 

ಯಾರು ಮುಸ್ಲಿಂ ? ಯಾರು ಮುಸ್ಲಿಂ ಅಲ್ಲ ? ಎಂದು ತೀರ್ಮಾನಿಸುವ ಅಧಿಕಾರವನ್ನು ಝಮೀರ್ ಅಹ್ಮದ್ ಅವರಿಗೆ ಕೊಟ್ಟವರು ಯಾರು ? ಯಾವ ಪಕ್ಷಕ್ಕೆ ಮತ ನೀಡಿದ್ದಾರೆ  ಎಂಬುದರ ಮೇಲೆ ಮುಸಲ್ಮಾನರ ಧಾರ್ಮಿಕತೆ ಅವಲಂಬಿಸಿದೆ ಎಂದು ಕುರ್ ಆನ್ ನಲ್ಲಿ , ಹದೀಸ್ ಗಳಲ್ಲಿ ಎಲ್ಲಿ ಹೇಳಿದೆ ? ಈವರೆಗೆ ಯಾವುದಾದರೂ ಖಾಝಿಗಳು ಇಂತಹದೊಂದು ಫತ್ವಾ ನೀಡಿದ್ದಾರೆಯೇ ? ಅಥವಾ ಇಂತಹ ಫತ್ವಾ ನೀಡುವ ಅಧಿಕಾರ ಯಾರಿಗಾದರೂ ನಮ್ಮ ದೇಶದಲ್ಲಿ ಇದೆಯೇ ? ಹಾಗಾದರೆ ಇಷ್ಟು ದೊಡ್ಡ ಹೇಳಿಕೆ ನೀಡುವ ಅಧಿಕಾರವನ್ನು ಸಮಸ್ತ ಮುಸಲ್ಮಾನರ ಪರವಾಗಿ ಝಮೀರ್ ಅಹ್ಮದ್ ಅವರಿಗೆ ನೀಡಿದ್ದು ಯಾರು? 

ಈ ದೇಶದ ಪ್ರಜೆಯಾಗಿ ಸಂವಿಧಾನ ನನಗೆ ನೀಡಿರುವ ಪರಮ ಅಧಿಕಾರ ಮತ ಚಲಾವಣೆ ಮಾಡುವ ಅಧಿಕಾರ. ಯಾವ ಅಭ್ಯರ್ಥಿಗೆ , ಯಾವ ಪಕ್ಷಕ್ಕೆ ಮತ ನೀಡಬೇಕು ಎಂದು ಮತಯಂತ್ರದ ಮುಂದೆ ನಿಂತು ನಿರ್ಧರಿಸುವ ಅಧಿಕಾರ ಇರುವುದು ನನಗೆ ಮಾತ್ರ. ನನ್ನ ತಂದೆ, ತಾಯಿಗೆ, ಮನೆಯವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ, ಬಡಾವಣೆಯವರಿಗೆ, ಸಮುದಾಯದವರಿಗೆ ಯಾರಿಗೂ ನನ್ನ ಮತ ಯಾರಿಗೆ ನೀಡಬೇಕು ಎಂದು ನಿರ್ಧರಿಸುವ ಅಧಿಕಾರವಿಲ್ಲ. ಅದು ನನ್ನ ಪರಮ ಅಧಿಕಾರ. ನಾನೇ ಅದನ್ನು ನಿರ್ಧರಿಸುತ್ತೇನೆ. ಝಮೀರ್ ಅಹ್ಮದ್ ಅಲ್ಲ ಪ್ರಧಾನಿ ಮೋದಿ ಅವರಿಗೂ ಅದನ್ನು ನಿರ್ಧರಿಸುವ ಅಧಿಕಾರವನ್ನು ನಾನು ಬಿಟ್ಟು ಕೊಟ್ಟಿಲ್ಲ. ಹೀಗಿರುವಾಗ ಇಡೀ ಮುಸ್ಲಿಂ ಸಮುದಾಯ ಇಂತಹ ಪಕ್ಷಕ್ಕೆ ಮತ ನೀಡಬಾರದು ಎಂದು ಝಮೀರ್ ಅಹ್ಮದ್ ಹೇಳಿಕೆ ನೀಡಿದ್ದು ಯಾವ ಅಮಲಿನಲ್ಲಿ ? 

ಪರಮ ಭ್ರಷ್ಟರನ್ನು , ವಕ್ಫ್ ಆಸ್ತಿಯನ್ನೇ ನುಂಗಿ ನೀರು ಕುಡಿದವರನ್ನು, ಮಹಾ ಕುಡುಕರನ್ನು, ಜನತೆಗೆ ದ್ರೋಹ ಎಸಗಿದವರನ್ನು, ಕಚ್ಚೆ ಹರುಕರನ್ನು ಮುಸ್ಲಿಂ ಸಮುದಾಯ ಸಹಿಸಿಕೊಂಡಿದೆ. ಇಸ್ಲಾಂ ನಲ್ಲಿ ಸ್ಪಷ್ಟವಾಗಿ ನಿಷೇಧ ಹೇರಲಾಗಿರುವ ಇವೆಲ್ಲವನ್ನೂ ಮಾಡುವವರ ವಿರುದ್ಧ ಸಿಟ್ಟು ತೋರಿಸಿದೆ, ಟೀಕಿಸಿದೆ, ಕೊನೆಗೆ ಅವರನ್ನು ಸೋಲಿಸಿದೆ. ಆದರೆ ಎಂದೂ ಅವರನ್ನು ನೀವು ಮುಸಲ್ಮಾನರೇ ಅಲ್ಲ ಎಂದು ಈ ಸಮುದಾಯ ಹೇಳಿಲ್ಲ. ಆದರೆ ಇನ್ನೊಂದು ಪಕ್ಷಕ್ಕೆ ಮತ ನೀಡುವವರು ಮುಸ್ಲಿಮರೇ ಅಲ್ಲ ಎನ್ನುವ ದಾರ್ಷ್ಟ್ಯವನ್ನು ತೋರಿದ್ದಾರೆ ಝಮೀರ್ ಅಹ್ಮದ್. 

ಅಧಿಕಾರದ ಅಮಲು ಅತ್ಯಂತ ಅಪಾಯಕಾರಿಯಾದದ್ದು. ಅದನ್ನು ತಕ್ಷಣ ನಿಯಂತ್ರಿಸದಿದ್ದರೆ ಅದು ಮಾಡುವ ಅನಾಹುತದ ಪ್ರಮಾಣ ನಿರೀಕ್ಷಿಸಲೂ ಸಾಧ್ಯವಿಲ್ಲ. ಅದೂ ನಾಲಗೆ ಸಡಿಲ ಇರುವವರಿಗೆ ಈ ಅಮಲು ಬಂದು ಬಿಟ್ಟರೆ ಅದರಿಂದ ಎಲ್ಲರಿಗೂ ಅಪಾಯ. ಹಾಗಾಗಿ ಅಂತಹವರನ್ನು ಹದ್ದುಬಸ್ತಿನಲ್ಲಿಡಲು ಮೊದಲು ಮಾಡಬೇಕಾದ್ದು ಅವರ ಅಮಲು ಇಳಿಸುವ ಕೆಲಸ. ಅವರನ್ನು ಅಧಿಕಾರದಿಂದ ಇಳಿಸಿದರೆ ಆ ಅಮಲು ಬಹುತೇಕ ನಿಯಂತ್ರಣಕ್ಕೆ ಬರುತ್ತದೆ. ಇಲ್ಲದಿದ್ದರೆ ಆ ಅಮಲು ಅವರನ್ನು ಆಯ್ಕೆ ಮಾಡಿ ಅಧಿಕಾರ ಅವರ ಕೈಗೆ ಕೊಟ್ಟ ಜನರ ಅಧಿಕಾರವನ್ನೇ ಕಿತ್ತುಕೊಳ್ಳಲು ಅವರನ್ನು ಪ್ರೇರೇಪಿಸುತ್ತದೆ. ಅದು ಪ್ರಜಾಪ್ರಭುತ್ವಕ್ಕೆ ಮಾರಕ. 

ರಾಜ್ಯದ ಪ್ರತಿಯೊಬ್ಬ ಮುಸ್ಲಿಮನೂ ಧ್ವನಿ ಎತ್ತಿ ಝಮೀರ್ ಅಹ್ಮದ್ ರ ಅವಿವೇಕಿ ಹೇಳಿಕೆಯನ್ನು ಪ್ರತಿಭಟಿಸಬೇಕಾದ ಸಮಯ ಇದು. ನಮಗೆ ಮತ ಕೊಡಿ ಎಂದು ಕೈಮುಗಿದು ವಿನಂತಿಸಬೇಕಾದವರು "ನೀವು ಇಂತಹವರಿಗೆ ಮತ ನೀಡಿದರೆ ನೀವು ನಿಮ್ಮ ಧರ್ಮದಲ್ಲೇ ಉಳಿಯುವುದಿಲ್ಲ" ಎಂದು ಫರ್ಮಾನು ಹೊರಡಿಸುವುದು ಅವರ ಅಮಲು ಅಪಾಯದ ಮಿತಿ ಮೀರಿದೆ ಎಂಬುದರ ಸ್ಪಷ್ಟ ಸಂಕೇತ. ತಕ್ಷಣ ತಣ್ಣೀರು ಹಾಕಿ ಆ ಅಮಲನ್ನು ಇಳಿಸದಿದ್ದರೆ ಇವರು ನಮ್ಮ ಮತದಾನದ ಹಕ್ಕಿಗೇ ಸಂಚಕಾರ ತರುತ್ತಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)