varthabharthi

ನಿಮ್ಮ ಅಂಕಣ

ಸಿಬಿಐ ಮೂಲಕ ಒಕ್ಕೂಟ ವ್ಯವಸ್ಥೆಯ ಮೇಲಿನ 'ದುರುದ್ದೇಶಪೂರಿತ' ದಾಳಿ

ವಾರ್ತಾ ಭಾರತಿ : 5 Feb, 2019
ಇಂದಿರಾ ಜೈಸಿಂಗ್

ಸಿಬಿಐಗೆ ಸಂವಿಧಾನದ ಒಕ್ಕೂಟ ಗುಣವನ್ನು ನಾಶಗೊಳಿಸುವ ಅಧಿಕಾರವಿದೆ ಎಂದು ಕೇಂದ್ರದ ಎನ್‌ಡಿಎ ಸರಕಾರ ಭಾವಿಸಿದೆ. ನ್ಯಾಯಾಧೀಶ ಲೋಧಾ ಒಂದೊಮ್ಮೆ ಸಿಬಿಐಯನ್ನು ಪಂಜರದ ಗಿಳಿಗೆ ಹೋಲಿಸಿದ್ದರು. ಆದರೆ ಪಂಜರದ ಈ ಗಿಳಿಯನ್ನು ಸ್ವತಂತ್ರಗೊಳಿಸಿದರೆ ಅದು ಸಂವಿಧಾನದ ಸಂಯುಕ್ತ ರಚನೆಯನ್ನೇ ನಾಶಗೊಳಿಸುತ್ತದೆ ಎಂದು ಅವರು ಊಹಿಸಿರಲಿಕ್ಕಿಲ್ಲ. 


ದಿಲ್ಲಿ ಸರಕಾರ ಸಂವಿಧಾನದ ಪ್ರಕಾರ ಆಡಳಿತ ನಡೆಸುವ ಅಧಿಕಾರದ ಮೇಲೆ ನಡೆದ ದಾಳಿಯಿಂದ ಆರಂಭವಾದ ಘಟನೆಗಳ ಸರಣಿ ಇದೀಗ ಪಶ್ಚಿಮ ಬಂಗಾಳ ಸರಕಾರ ಸಂವಿಧಾನದ ಪ್ರಕಾರ ಆಡಳಿತ ನಡೆಸುವುದರ ಮೇಲೆ ದಾಳಿ ನಡೆಸುವವರೆಗೆ ಬಂದು ತಲುಪಿದೆ. ಸಿಬಿಐಗೆ ಸಂವಿಧಾನದ ಒಕ್ಕೂಟ ಗುಣವನ್ನು ನಾಶಗೊಳಿಸುವ ಅಧಿಕಾರವಿದೆ ಎಂದು ಕೇಂದ್ರದ ಎನ್‌ಡಿಎ ಸರಕಾರ ಭಾವಿಸಿದೆ. ನ್ಯಾಯಾಧೀಶ ಲೋಧಾ ಒಂದೊಮ್ಮೆ ಸಿಬಿಐಯನ್ನು ಪಂಜರದ ಗಿಳಿಗೆ ಹೋಲಿಸಿದ್ದರು. ಆದರೆ ಪಂಜರದ ಈ ಗಿಳಿಯನ್ನು ಸ್ವತಂತ್ರಗೊಳಿಸಿದರೆ ಅದು ಸಂವಿಧಾನದ ಸಂಯುಕ್ತ ರಚನೆಯನ್ನೇ ನಾಶಗೊಳಿಸುತ್ತದೆ ಎಂದು ಅವರು ಊಹಿಸಿರಲಿಕ್ಕಿಲ್ಲ. ಭಾರತದಲ್ಲಿ ಒಕ್ಕೂಟ ಅಪರಾಧ ಎಂಬುದಿಲ್ಲ, ಇರುವುದು ಕೇವಲ ಒಕ್ಕೂಟ ತನಿಖಾ ಸಂಸ್ಥೆ ಮಾತ್ರ.

ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಅನುಮತಿ ನೀಡಿದ ಪ್ರಕರಣಗಳ ತನಿಖೆ ನಡೆಸುವುದಷ್ಟೇ ಅದಕ್ಕಿರುವ ಅಧಿಕಾರದ ಮಿತಿ. ಅಂತರ್‌ರಾಜ್ಯ ಅಪರಾಧ ನಡೆದ ಸಂದರ್ಭದಲ್ಲಿ ಅಪರಾಧಿಯ ಕಸ್ಟಡಿಯನ್ನು ಬಯಸುವ ರಾಜ್ಯದ ಪೊಲೀಸರು ಇನ್ನೊಂದು ರಾಜ್ಯದ ಪೊಲೀಸರಲ್ಲಿ ಸಹಾಯಕ್ಕೆ ಮನವಿ ಮಾಡಬೇಕಾಗುತ್ತದೆ ಮತ್ತು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದಿಂದ ವಾರಂಟ್ ಪಡೆದುಕೊಳ್ಳಬೇಕಾಗುತ್ತದೆ. ಒಂದು ಅಪರಾಧದ ತನಿಖೆ ನಡೆಸಲು ಸರಿಯಾದ ಕಾರಣಗಳಿವೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಕಂಡುಬಂದ ಸಂದರ್ಭದಲ್ಲಿ ಯಾವುದೇ ರಾಜ್ಯದಲ್ಲಿ ತನಿಖೆ ನಡೆಸುವ ಅನುಮತಿಯನ್ನು ಅದು ಸಿಬಿಐಗೆ ನೀಡಬಹುದು. ಆದರೆ ಶರದಾ ಚಿಟ್‌ಫಂಡ್ ಹಗರಣ ಪ್ರಕರಣದಲ್ಲಿ ತನಿಖೆ ನಡೆಸಲು ಸಿಬಿಐಗೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದ್ದರೂ ಶ್ರೇಷ್ಠ ನ್ಯಾಯಾಲಯದ ನಿಗಾವಣೆಯಲ್ಲಿ ಈ ತನಿಖೆ ನಡೆಯುತ್ತಿರಲಿಲ್ಲ ಮತ್ತು ಮುಂದಿನ ಎಲ್ಲ ಬೆಳವಣಿಗೆಗಳನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅದು ನಿರ್ದೇಶಿಸಿತ್ತು.

ಈ ನಿರ್ದೇಶನ ನೀಡುವಾಗ, ಎಲ್ಲ ರಾಜ್ಯಗಳು ಈ ತನಿಖೆಗೆ ಸಹಕಾರ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿತ್ತು. ತನಿಖೆಗೆ ರಾಜ್ಯಗಳು ಸ್ಪಂದಿಸಬೇಕು ಎಂಬ ಸಾಮಾನ್ಯ ಅರ್ಥದಲ್ಲಿ ನ್ಯಾಯಾಲಯ ಈ ಸೂಚನೆಯನ್ನು ನೀಡಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು. ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪಶ್ಚಿಮ ಬಂಗಾಳ ಪೊಲೀಸ್ ಸಿಬಿಐಗೆ ಪತ್ರ ಬರೆದಿತ್ತು. ಆದರೆ ಸಿಬಿಐ ಅಪರಾಧ ದಂಡಸಂಹಿತೆ ವಿಧಿ 60ರ ಅಡಿ ಸಮನ್ಸ್ ಜಾರಿ ಮಾಡಿತ್ತು. ತನ್ನ ಅಧಿಕಾರಿಗಳ ವಿರುದ್ಧ ಸಮನ್ಸ್ ಜಾರಿ ಮಾಡಿರುವುದನ್ನು ಸರಕಾರ ಕಲ್ಕತ್ತಾ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಈ ಸಮನ್ಸನ್ನು ಅಮಾನತಿನಲ್ಲಿಟ್ಟಿತು. ಕಲ್ಕತ್ತಾ ಉಚ್ಚ ನ್ಯಾಯಾಲಯ ಈ ಪ್ರಕರಣಕ್ಕೆ ತೆರೆಯೆಳೆದಿದ್ದರೆ ರವಿವಾರ ಸಂಜೆ ನಡೆದ ಕಾರ್ಯಾಚರಣೆಯಲ್ಲಿ ಸಿಬಿಐ ಯಾವುದೇ ಶೋಧ ವಾರಂಟ್ ಇಲ್ಲದೆ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಕಚೇರಿ ಮೇಲೆ ದಾಳಿ ನಡೆಸಿತು.

ಉಚ್ಚ ನ್ಯಾಯಾಲಯವು ಈ ಪ್ರಕರಣವನ್ನು ಮುಚ್ಚಿರುವಾಗ ಮತ್ತು ಕೋಲ್ಕತಾ ಪೊಲೀಸರ ವಿರುದ್ಧ ಸಿಬಿಐಯ ಸಮನ್ಸನ್ನು ಅಮಾನತುಗೊಳಿಸಿರುವಾಗ ಪ್ರಕರಣದ ತನಿಖೆಗೆ ಸಂಬಂಧಿಸಿ ಕೋಲ್ಕತಾ ಪೊಲೀಸ್ ಆಯುಕ್ತರ ಕಚೇರಿ ಮೇಲೆ ದಾಳಿ ನಡೆಸುವ ಯಾವುದೇ ಅಧಿಕಾರ ಸಿಬಿಐಗೆ ಇರುವುದಿಲ್ಲ. ಹಾಗಾಗಿ, ಪೊಲೀಸ್ ಆಯುಕ್ತರ ಬಂಧನ ಪ್ರಯತ್ನ ಕೇವಲ ಕಾನೂನುಬಾಹಿರ ಮಾತ್ರವಲ್ಲ ದುರುದ್ದೇಶಪೂರಿತವೂ ಆಗಿದೆ. ಸಂವಿಧಾನಕ್ಕೆ ಅನುಗುಣವಾಗಿ ಆಡಳಿತ ನಡೆಸುವ ಕರ್ತವ್ಯವನ್ನು ಹೊಂದಿರುವವರು ಈ ಕಾರ್ಯದಲ್ಲಿ ವಿಫಲವಾಗಿದ್ದಾರೆ. ಸಂಸತ್‌ನಲ್ಲಿ ಬಹುಮತವಿರುವ ಕಾರಣ ಜನರ ಆಶಯವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಭಾವಿಸಿರುವ ಸರಕಾರ, ತಾನು ಒಕ್ಕೂಟ ಸಂವಿಧಾನದ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದೇನೆ, ಇಲ್ಲಿ ಪ್ರತಿ ರಾಜ್ಯವೂ ಸ್ವಾಯತ್ತವಾಗಿದೆ ಎಂಬುದನ್ನು ಅರಿಯಲು ವಿಫಲವಾಗಿದೆ. ಇಂಥ ದಾಳಿ ಬಿಜೆಪಿ ಸರಕಾರವಿರುವ ರಾಜ್ಯದಲ್ಲಿ ನಡೆಯಲು ಸಾಧ್ಯವಿಲ್ಲ. ಪೊಲೀಸ್ ವ್ಯವಸ್ಥೆಯು ರಾಜಕೀಯ ಲಾಭಕ್ಕಾಗಿ ಕೆಲಸ ಮಾಡಿದಾಗ ನಾವು ಸರ್ವಾಧಿಕಾರಿ ಸರಕಾರದಿಂದ ಆಳಲ್ಪಡುತ್ತೇವೆ. ಆನಂದ್ ತೇಲ್ತುಂಬ್ಡೆಗೆ ಬಂಧನದ ವಿರುದ್ಧ ನಾಲ್ಕು ವಾರಗಳ ರಕ್ಷಣೆಯ ಆದೇಶವಿದ್ದರೂ ಅವರನ್ನು ಬಂಧಿಸಲಾಗಿದೆ ಎನ್ನುವುದರಲ್ಲಿ ಅಚ್ಚರಿಯೇನೂ ಇಲ್ಲ. ಅಸಮ್ಮತಿಯನ್ನು ನಿಗ್ರಹಿಸಲು ಸಿಬಿಐಯನ್ನು ಬಳಸಲಾಗುತ್ತಿದೆ ಎನ್ನುವುದರಲ್ಲಿ ಸಂಶಯವೂ ಇಲ್ಲ. ರಫೇಲ್ ಪ್ರಕರಣ, ಅಲೋಕ್ ವರ್ಮಾ ಪ್ರಕರಣ ಮತ್ತೀಗ ಪಶ್ಚಿಮ ಬಂಗಾಳ ಪ್ರಕರಣ ಹೀಗೆ ಭಾರತದ ಸರ್ವೋಚ್ಚ ನ್ಯಾಯಾಲಯ ಕೂಡಾ ಅನೇಕ ಬಾರಿ ಪರೀಕ್ಷೆಗೆ ಒಳಗಾಗಿದೆ. ಅದು ಸಂವಿಧಾನದ ರಕ್ಷಕನಾಗಿ ಹೊರಹೊಮ್ಮುವುದೇ? ಕಾದು ನೋಡೋಣ. ಚುನಾವಣೆ ಸಮೀಪಿಸುತ್ತಿರುವಂತೆ ನ್ಯಾಯಾಲಯಗಳು ಮತ್ತು ಸಂವಿಧಾನದ ಮೇಲೆ ಹೆಚ್ಚೆಚ್ಚು ದಾಳಿಯನ್ನು ನಾವು ನಿರೀಕ್ಷಿಸಬಹುದಾಗಿದೆ.


 ಕೃಪೆ: theleaflet.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)