varthabharthi

ನಿಮ್ಮ ಅಂಕಣ

ಮದ್ಯೋದ್ಯಮ, ಬಂಡವಾಳಿಗರು ಮತ್ತು ಮಹಿಳಾ ಹೋರಾಟ

ವಾರ್ತಾ ಭಾರತಿ : 6 Feb, 2019

ಮದ್ಯೋದ್ಯಮವು ತನ್ನ ಉತ್ಪನ್ನಗಳ ನೇರ ಬಳಕೆದಾರರನ್ನು ಮಾತ್ರ ಕಷ್ಟಕ್ಕೀಡುಮಾಡುವುದಿಲ್ಲ. ಕುಟುಂಬದ ಸದಸ್ಯರ ನಿರ್ವಹಣೆಯ ಜವಾಬ್ದಾರಿ ಮದ್ಯದ ಬಳಕೆದಾರನ ಮೇಲಿದ್ದಾಗಲಂತೂ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿ ನರಳುತ್ತದೆ. ಕುಟುಂಬದ ನಿರ್ವಹಣೆಗೆ ಅವಶ್ಯವಾದ ಜೀವನಾಧಾರಸಾಧನಗಳನ್ನು ಹೊಂದಿಸಿಕೊಳ್ಳಲು ಸಂಪನ್ಮೂಲದ ಕೊರತೆ ಕಾಡುತ್ತದೆ. ಕುಡಿತದ ಖರ್ಚು ಹೆಚ್ಚಿದಂತೆಲ್ಲಾ ಅಸಹನೆ, ಅಶಾಂತಿ, ಮನಸ್ತಾಪ, ಜಗಳಗಳು ಸಾಮಾನ್ಯವಾಗುತ್ತದೆ. ಮನೆ ಎಂಬುದು ನೆಮ್ಮದಿ-ಭದ್ರತೆಗಳ ತಾಣವಾಗಿರುವ ಬದಲು ನಿತ್ಯನರಕದ ಗೂಡಾಗುತ್ತದೆ. ಅದರ ನೇರ ಪರಿಣಾಮ ತಾಯಿ ಅಥವಾ ಹೆಂಡತಿಯ ಮೇಲಾಗುತ್ತದೆ.


ದೇವರ ಮೇಲಿನ ಶ್ರದ್ಧೆ-ನಂಬಿಕೆಗಳಿಗೂ ಮದ್ಯಸೇವನೆ-ವ್ಯಸನಗಳಿಗೂ ತುಂಬಾ ಹತ್ತಿರದ ಸಾಮ್ಯತೆಗಳಿವೆ. ಸಂದರ್ಭಾನುಸಾರವಾಗಿ ಎರಡೂ ಮಾನಸಿಕವಾಗಿ ಸಾವಿನಭಯ ಮತ್ತು ಸೋಲಿನಭಯದ ವಿರುದ್ಧ ಭ್ರಾಮಕ ನೆಲೆಯಲ್ಲಿ ರಕ್ಷಣೆಯನ್ನು ಕೊಡುತ್ತವೆ. ನೊಂದ ಮನಸ್ಸುಗಳಿಗೆ ಹತಾಶ ಸ್ಥಿತಿಯಲ್ಲಿ ಆಸರೆಯಾಗಿ ಬಳಕೆಯಾಗುತ್ತವೆ. ಮೈಮರೆಸುವ ಸಾಧನಗಳಾಗಿ ಭ್ರಾಮಕ ಸುಖ-ಸಂತೋಷಗಳನ್ನು ಕೊಡುತ್ತವೆ. ಬಡತನಮೂಲದ ಕಷ್ಟ-ಕೋಟಲೆಗಳನ್ನು ತಾತ್ಕಾಲಿವಾಗಿ ಮರೆಮಾಡುವ ಉಪಾಯಗಳಾಗಿ ಜನಪ್ರಿಯವಾಗಿವೆ. ಸಾಮಾಜಿಕವಾಗಿ ಮನರಂಜನೆ ಮತ್ತು ವಿನೋದಗಳನ್ನೊದಗಿಸುವ ಕಾಲಕ್ಷೇಪದ ವ್ಯವಸ್ಥೆಗಳಾಗಿವೆ. ಆರ್ಥಿಕವಾಗಿ ಉದ್ಯಮ ಮತ್ತು ಜೀವನೋಪಾಯ ಸಾಧನಗಳಾಗಿ ಆದಾಯದ ಮೂಲಗಳಾಗಿವೆ. ಕಪ್ಪುಹಣದ ಸಂಗ್ರಹಣೆ ಮತ್ತು ವಾಹಕಗಳಾಗಿವೆ. ರಾಜಕೀಯವಾಗಿ ಜನಸಮುದಾಯದ ಸಂಕೀರ್ಣ ನಿಯಂತ್ರಕಗಳಾಗಿವೆ. ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ದೇವರು ಮತ್ತು ಮದ್ಯಗಳಿಗೆ ವಿಶಿಷ್ಟ ಸ್ಥಾನವಿದೆ. ಇವೆರಡಕ್ಕೂ ಇರುವ ಪ್ರಮುಖ ವ್ಯತ್ಯಾಸವೆಂದರೆ, ಯಾವುದೇ ವ್ಯಕ್ತಿಗೆ ದೇವರ ಬಗೆಗಿನ ಶ್ರದ್ಧೆ-ನಂಬಿಕೆಗಳು ಅತಿರೇಕಕ್ಕೆ ಹೋದರೆ ಅಂಥವ್ಯಕ್ತಿಯ ಕೌಟುಂಬಿಕ ಸಂಬಂಧಗಳು ಶಿಥಿಲಗೊಂಡರೂ ಸಾಧು, ಸನ್ಯಾಸಿ-ಸಂತ-ಮಹಾತ್ಮರೆನಿಸಿ ‘ಪೂಜ್ಯ’ರಾಗುತ್ತಾರೆ. ಸಾಂಸ್ಥಿಕರೂಪದಲ್ಲಿ ದೇವಸ್ಥಾನ, ಮಠ-ಮಾನ್ಯಗಳ ಕೇಂದ್ರವ್ಯಕ್ತಿಗಳಾಗಿ, ಇಲ್ಲವೆ ಮುಖ್ಯಸ್ಥರಾಗಿ ಧರ್ಮಗುರು, ಮಠಾಧಿಪತಿಗಳಾಗಿ ಜನರನ್ನು ನಿಯಂತ್ರಿಸುತ್ತಾರೆ. ಈ ಕಾರಣಕ್ಕಾಗಿ ರಾಜಕಾರಣಿಗಳಿಗೆ ಹತ್ತಿರ ವಾಗುತ್ತಾರೆ. ಹೀಗೆ ರಾಜಕೀಯ ಶಕ್ತಿಕೇಂದ್ರಗಳ ದಲ್ಲಾಳಿಗಳಾಗಿರುತ್ತಾರೆ.

ಮದ್ಯಸೇವನೆ ಮತ್ತು ವ್ಯಸನಗಳ ಅತಿರೇಕವನ್ನು ಮುಟ್ಟಿದ ವ್ಯಕ್ತಿಗಳಲ್ಲೂ ಸಹ ಸಾಧು-ಸಂತ-ಸನ್ಯಾಸಿ-ಮಹಾತ್ಮರ ಜೀವನ ದಲ್ಲಾಗುವಂತೆ ಕೌಟುಂಬಿಕ ಸಂಬಂಧಗಳು ಶಿಥಿಲವಾಗುತ್ತವೆ. ಆದರೆ ಅಂಥ ವ್ಯಕ್ತಿಗಳು ಆರ್ಥಿಕವಾಗಿ ಜರ್ಜರಿತರಾಗಿ, ನೈತಿಕವಾಗಿ ಭ್ರಷ್ಟರು, ಸುಳ್ಳುಗಾರರು, ಒಟ್ಟಿನಲ್ಲಿ ಕುಡುಕರೆಂದು ಅವಹೇಳನೆಗೊಳಗಾಗುತ್ತಾರೆಯೇ ಹೊರತು ಎಂದಿಗೂ ಪೂಜ್ಯರಾಗುವುದಿಲ್ಲ. ಆದರೆ ಮದ್ಯದ ಬಳಕೆದಾರರಾಗಿ, ಅತ್ಯಂತ ಲಾಭದಾಯಕವಾದ, ರಾಕ್ಷಸ ಉದ್ಯಮವೆನ್ನ ಬಹುದಾದ ಮದ್ಯೋದ್ಯಮದ ಆಧಾರಸ್ತಂಭಗಳಾಗಿರುತ್ತಾರೆ. ಬಂಡವಾಳಶಾಹಿ ಸರಕಾರಗಳ ತೆರಿಗೆ ಮೂಲದ ಸಂಪನ್ಮೂಲ ಸಂಗ್ರಹಣೆಯಲ್ಲಿ ಅತ್ಯಂತ ಹೆಚ್ಚಿನ ‘ಆದಾಯ’ವನ್ನು ತರುವ ಬಲಿಪಶುಗಳಾಗುತ್ತಾರೆ.

ಈ ಕಾರಣಗಳಿಗಾಗಿಯೇ ಎಲ್ಲ ಸರಕಾರಗಳೂ ಪಕ್ಷಭೇದವಿಲ್ಲದೆ ಒಂದಲ್ಲ ಒಂದು ಕಾರಣವನ್ನೊಡ್ಡಿ ಮದ್ಯತಯಾರಿಕೆಯನ್ನು ಸಮರ್ಥಿಸುವ ಮೂಲಕ ಮದ್ಯೋದ್ಯಮದ ಬಂಡವಾಳಿಗರನ್ನು ರಕ್ಷಿಸುತ್ತಾರೆ. ಇದೇ ಕಾರಣಕ್ಕಾಗಿಯೇ ಬಂಡವಾಳಶಾಹಿ ವ್ಯವಸ್ಥೆಯ ಫಲಾನುಭವಿಗಳೂ, ಬಂಡವಾಳಿಗರ ವರ್ಗಬಂಧುಗಳೂ ಆದ ಮಠಾಧೀಶರು ಮತ್ತು ಧರ್ಮಗುರುಗಳು ಮದ್ಯತಯಾರಿಕೆಯ ವಿರುದ್ಧ, ಮದ್ಯದ ಬಳಕೆಯ ವಿರುದ್ಧ ಸೊಲ್ಲೆತ್ತದೆ ಚತುರ ಮೌನಿಗಳಾಗಿದ್ದುಬಿಡುತ್ತಾರೆ. ಹೆಚ್ಚೆಂದರೆ ‘ಮದ್ಯಪಾನ ಆತ್ಮವನ್ನು ನಾಶಮಾಡುತ್ತದೆ’ ಎಂಬಂಥ ಯಾರಿಗೂ ತಗಲದ ಉಪದೇಶ ಬಾಣಗಳನ್ನು ಮದ್ಯದ ವಿರುದ್ಧ ಆಕಾಶಕ್ಕೆಸೆಯುತ್ತಾ ಜಯಂತಿ, ವರ್ಧಂತಿ, ಪುಣ್ಯತಿಥಿ, ಉತ್ಸವ, ಮಸ್ತಕಾಭಿಷೇಕಗಳಲ್ಲಿ ಮುಖ ಮರೆಸಿಕೊಳ್ಳುತ್ತಾರೆ. ಆತ್ಮದ ಅವಿನಾಶತ್ವದ ಬಗ್ಗೆ ಅವರೇ ಹೇಳಿಕೊಳ್ಳುವ ‘ನೈನಂ ಛಿದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ...’ ಇತ್ಯಾದಿ ಮಾತುಗಳೆಲ್ಲಾ ಅವರಿಗೆ ಆಗ ಮರೆತೇಹೋಗಿರುತ್ತವೆ.

ಇನ್ನು, ಬಂಡವಾಳ ಸಂಚಯದ ‘ರಹಸ್ಯ’ವನ್ನು ಭೇದಿಸಲು, ಬಡತನದ ಮೂಲವನ್ನು ಅರ್ಥಮಾಡಿಕೊಳ್ಳಲು ಹಿಂದೆಗೆಯುವ, ಆದರೆ ಬಡವರ ಕ್ರೋಧವನ್ನು ಸಾಂತ್ವನಗೊಳಿಸಿ ವ್ಯವಸ್ಥೆಯನ್ನು ಸಮಾಜವಾದದಿಂದ ರಕ್ಷಿಸುವ ಕೆಲಸವನ್ನೇ ತಮ್ಮ ಉದ್ಯೋಗವನ್ನಾಗಿಸಿಕೊಳ್ಳುವ ಸರಕಾರೇತರ ಸೇವಾ ಸಂಸ್ಥೆಗಳು ಮದ್ಯ ಮತ್ತಿತರ ಅಮಲುಕಾರಕಗಳ ಸಂತ್ರಸ್ತರಿಗೆ ಸಣ್ಣ ಪುಟ್ಟ ಸಹಾಯಮಾಡುತ್ತಾರೆಯೇ ಹೊರತು ಮದ್ಯತಯಾರಿಕೆಯ ವಿರುದ್ಧ ಬಂಡೇಳುವ ಜನಾಂದೋಲನಗಳಲ್ಲಿ ಭಾಗಿಗಳಾಗುವುದಿಲ್ಲ. ಮದ್ಯದ ‘ಮಿತಪಾನದಿಂದ ತೊಂದರೆಯಿಲ್ಲ’, ‘ಸಾಮಾಜಿಕಪಾನ ಒಳ್ಳೆಯದು’, ‘ಮದ್ಯಸಂಯಮ ಸಾಧ್ಯ’, ‘ಸಂಪೂರ್ಣ ವರ್ಜನೆ ಅಸಾಧ್ಯ’, ‘ವಿವೇಕಯುತ ಬಳಕೆ ಬೇಕು’, ‘ಆರೋಗ್ಯವರ್ಧನೆಗೆ ಸಹಾಯಕ’, ‘ಇತರ ಅಮಲುಕಾರಕ ವಸ್ತುಗಳಿಂದ ರಕ್ಷಣೆಗಾಗಿ ಮದ್ಯಪಾನ ಅಗತ್ಯ’ ‘ಮದ್ಯೋದ್ಯಮದ ಉದ್ಯೋಗಿಗಳ ಹಿತರಕ್ಷಣೆಯೂ ಮುಖ್ಯ’, ‘ಸರಕಾರದ ಮುಖ್ಯ ಆದಾಯ ಮೂಲವಾಗಿ ಅನಿವಾರ್ಯ’ ಮುಂತಾದ ಕಾರಣಗಳಿಗಾಗಿ ಮದ್ಯತಯಾರಿಕೆ ಬೇಕೆನ್ನುವವರು, ತಿಳಿದೋ, ತಿಳಿಯದೆಯೋ ಮದ್ಯೋದ್ಯಮದ ಸಮರ್ಥಕರೇ ಆಗಿಬಿಡುತ್ತಾರೆ.

ನಮ್ಮ ಸಂವಿಧಾನವು ಜನರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ಕೊಟ್ಟಿದೆಯಾದ್ದರಿಂದ ಪ್ರಜಾತಾಂತ್ರಿಕವಾಗಿ ಮದ್ಯೋದ್ಯಮವನ್ನು ಮುಚ್ಚಲಾಗದು ಎನ್ನುವ ಪ್ರಜಾಪ್ರಭುತ್ವವಾದಿಗಳು ‘ಮದ್ಯವು’ ಒಂದು ವಿಷವಸ್ತು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ ವೈದ್ಯ-ವಿಜ್ಞಾನಿಗಳ ಖಚಿತ ಅಭಿಪ್ರಾಯವನ್ನು ಮರೆತು ಮಾತನಾಡುತ್ತಾರೆ. ವ್ಯಕ್ತಿಗಳ ಮಟ್ಟದಲ್ಲಿ, ವೈದ್ಯರು, ವಿಜ್ಞಾನಿಗಳು, ತಂತ್ರಜ್ಞರು, ಕಲಾವಿದರು, ಶಿಕ್ಷಣತಜ್ಞರು, ಶಿಕ್ಷಕರು, ನ್ಯಾಯವಾದಿಗಳು, ನ್ಯಾಯಾಧೀಶರು, ಮುಂತಾದ ಕಸುಬುದಾರ-ಉದ್ಯೋಗಿಗಳನ್ನು ಒಳಗೊಂಡು, ಎಡಪಕ್ಷ, ಬಲಪಕ್ಷ, ನಡುಪಕ್ಷ, ಮುಂತಾದ ಪಕ್ಷಭೇದಗಳನ್ನು ದಾಟಿದ ರಾಜಕೀಯ ಪಕ್ಷಗಳ ಸದಸ್ಯ -ಸಮರ್ಥಕರಿರುವುದರಿಂದಲೇ ಮದ್ಯೋದ್ಯಮವನ್ನು ಕೇವಲ ಆರ್ಥಿಕ ಚಟುವಟಿಕೆಯೆಂದು, ವ್ಯಕ್ತಿಮಟ್ಟದ ನೈತಿಕ, ಪ್ರಜಾತಾಂತ್ರಿಕ ಆಯ್ಕೆಯೆಂದು ನೋಡದೆ ಬಂಡವಾಳಶಾಹಿಯ ಕೈಯಲ್ಲಿರುವ ಸಂಕೀರ್ಣ ಶೋಷಣಾ ಸಾಧನವೆಂದು ಪರಿಗಣಿಸಬೇಕಾಗುತ್ತದೆ. ಶ್ರೀಮಂತ-ಬಡವ, ಕೈಗಾರಿಕೋದ್ಯಮಿ-ಶ್ರಮಿಕ ಎಂಬ ವರ್ಗಭೇದಕ್ಕೆ ಕುರುಡಾಗಿ ಬಡವರು ಮದ್ಯಸೇವನೆಯಿಂದ ಹಾಳಾಗುತ್ತಾರೆ, ಆದ್ದರಿಂದ ಬಡವರು ಕುಡಿಯಬಾರದೇ ಹೊರತು ಶ್ರೀಮಂತರು ಕುಡಿಯಲು ಸ್ವತಂತ್ರರು ಎಂದು ಹೇಳುವವರಿದ್ದಾರೆ.

ಮದ್ಯಸೇವಿಸುವ ಬಡವರು ಹಾಳಾಗುವುದು ಮದ್ಯಸೇವನೆಯಿಂದಲ್ಲ, ಬಡವರಾಗಿರುವುದರಿಂದ. ಅಂದರೆ ಮದ್ಯದ ಬಳಕೆಯಿಂದ ಆಗುವ ತೊಂದರೆಯನ್ನು ಎದುರಿಸುವ ಆರ್ಥಿಕಬಲವಿಲ್ಲದ್ದರಿಂದ. ದೀರ್ಘಕಾಲೀನ ಮದ್ಯಸೇವನೆಯ ತೀವ್ರ ಪರಿಣಾಮಗಳಾದ ಯಕೃತ್ತಿನ ಕಾಯಿಲೆ, ಮೂತ್ರಪಿಂಡಗಳ ವೈಫಲ್ಯ ಮುಂತಾದ ತೊಂದರೆಗಳು ಬಡವ-ಶ್ರೀಮಂತ ಇಬ್ಬರಿಗೂ ಆಗಿಯೇ ಆಗುತ್ತವೆ, ಶ್ರೀಮಂತರಿಗೆ ಹಣದ ಬಲದಿಂದಾಗಿ ದೇಶೀಯವಾಗಿ ಅಥವಾ ವಿದೇಶೀಯವಾಗಿ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಸಹಾಯವನ್ನು ಪಡೆದು ಗುಣಮುಖರಾಗುವುದು ಅಥವಾ ನರಳುತ್ತಲೇ ಸಾವನ್ನು ಮುಂದೂಡುವುದು ಸಾಧ್ಯ. ಬಡವರಿಗೆ ಹಣದ ಬಲವಿಲ್ಲದ್ದರಿಂದ ಗುಣಮುಖರಾಗುವುದು ಅಥವಾ ನರಳುತ್ತಲಾದರೂ ಸಾವನ್ನು ಮುಂದೂಡುವುದು ಅಸಾಧ್ಯ. ಸಾಲದ ಹೊರೆಗೆ ಸಿಲುಕಿದರೆ ಕಷ್ಟಸಾಧ್ಯ. ಹೀಗಾಗಿ ದೀರ್ಘನರಳಿಕೆ ಅಥವಾ ಅನಿವಾರ್ಯ ಮರಣವಲ್ಲದೆ, ಕುಟುಂಬದ ಇತರ ಸದಸ್ಯರ ತಲೆಯ ಮೇಲೆ ಹೆಚ್ಚುವ ಸಾಲದ ಹೊರೆಯು ಹೆಚ್ಚುವರಿಯಾಗಿ ಬರುವ ಕಷ್ಟ.

ಮದ್ಯೋದ್ಯಮವು ತನ್ನ ಉತ್ಪನ್ನಗಳ ನೇರ ಬಳಕೆದಾರರನ್ನು ಮಾತ್ರ ಕಷ್ಟಕ್ಕೀಡುಮಾಡುವುದಿಲ್ಲ. ಕುಟುಂಬದ ಸದಸ್ಯರ ನಿರ್ವಹಣೆಯ ಜವಾಬ್ದಾರಿ ಮದ್ಯದ ಬಳಕೆದಾರನ ಮೇಲಿದ್ದಾಗಲಂತೂ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿ ನರಳುತ್ತದೆ. ಕುಟುಂಬದ ನಿರ್ವಹಣೆಗೆ ಅವಶ್ಯವಾದ ಜೀವನಾಧಾರಸಾಧನಗಳನ್ನು ಹೊಂದಿಸಿಕೊಳ್ಳಲು ಸಂಪನ್ಮೂಲದ ಕೊರತೆ ಕಾಡುತ್ತದೆ. ಕುಡಿತದ ಖರ್ಚು ಹೆಚ್ಚಿದಂತೆಲ್ಲಾ ಅಸಹನೆ, ಅಶಾಂತಿ, ಮನಸ್ತಾಪ, ಜಗಳಗಳು ಸಾಮಾನ್ಯವಾಗುತ್ತದೆ. ಮನೆ ಎಂಬುದು ನೆಮ್ಮದಿ-ಭದ್ರತೆಗಳ ತಾಣವಾಗಿರುವ ಬದಲು ನಿತ್ಯನರಕದ ಗೂಡಾಗುತ್ತದೆ. ಅದರ ನೇರ ಪರಿಣಾಮ ತಾಯಿ ಅಥವಾ ಹೆಂಡತಿಯ ಮೇಲಾಗುತ್ತದೆ. ಮದ್ಯವ್ಯಸನಿಗೆ ತನ್ನ ನಿತ್ಯದ ಮದ್ಯಕ್ಕಾಗಿ ಹಣ ಹೊಂಚುವುದು ಆದ್ಯತೆಯ ಪ್ರಶ್ನೆಯಾದಾಗ ಕುಟುಂಬವು ಛಿದ್ರವಾಗುತ್ತದೆ. ಕೌಟುಂಬಿಕ ಕ್ರೌರ್ಯ, ಪೀಡನೆ, ಕೊಲೆಗಳನ್ನು ತಾಂತ್ರಿಕವಾಗಿ ಅಪರಾಧವನ್ನಾಗಿ ನೋಡುವವರಿಗೆ ಮದ್ಯದ ಮೂಲಕ ಹೆಚ್ಚುವ ಬಡತನವು ಸಮಸ್ಯೆಯ ಮೂಲವಾಗಿ ಕಾಣಿಸುವುದಿಲ್ಲ. ದೇವರ ಪಟಗಳಿಂದ ರಾರಾಜಿಸುವ ಮದ್ಯದಂಗಡಿಗಳ ಮುಂದೆ, ಮಿಣುಕು ದೀಪದ ಬಾರ್‌ಗಳಲ್ಲಿ, ಗುಂಡಿ-ಗೊಟರುಗಳು, ಕತ್ತಲೆ ತುಂಬಿದ ರಸ್ತೆ, ಫುಟ್‌ಪಾತ್, ಪಾರ್ಕುಗಳು- ಎಲ್ಲೆಂದರಲ್ಲಿ ಕಾಣಸಿಗುವ ‘ಕೊಳಕು ವ್ಯಕ್ತಿತ್ವದ ಬೇಜವಾಬ್ದಾರಿಯ, ನತದೃಷ್ಟ ಕುಡುಕರು’ ಶುಭ್ರ ವ್ಯಕ್ತಿತ್ವದ ನೈತಿಕತೆಯ ಬೆಳಕಿನಲ್ಲಿ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಸಿನೆಮಾ, ಟಿವಿ ಶೋ, ನಾಟಕಗಳಲ್ಲಿ ನೋಡುವವರನ್ನು ರಂಜಿಸುವ ಪಾತ್ರಗಳಿಗೆ ಈ ಕುಡುಕರೇ ಸ್ಫೂರ್ತಿ.

 ಅಲ್ಲದೆ ಕುಡಿದು ವಾಹನ ಚಾಲನೆಮಾಡಿ ಅಪಘಾತಗಳಿಗೆ ಕಾರಣವಾಗುವ ಚಾಲಕರ ಚಾಲನ ಶಕ್ತಿಯಾಗಿ, ಮೋಜಿಗೆಂದು ಕುಡಿದು ನೀರಲ್ಲಿ ಮುಳುಗಿ ಸಾಯುವ ಯುವಕ-ಯುವತಿಯರ ಮೋಜಿನ ಜೀವನೋತ್ಸಾಹವಾಗಿ, ರಸ್ತೆಗಳಲ್ಲೇ ಹೊಡೆದಾಡಿ ಪ್ರಾಣ ತೆಗೆಯುವ ರೌಡಿಗಳ ಕ್ರೋಧವಾಗಿ, ಅವಕಾಶ ಸಿಕ್ಕಿದಾಗಲೆಲ್ಲಾ ಯಾರದ್ಯಾರದೋ ಖರ್ಚಿನಲ್ಲ್ಲಿ ಪಾರ್ಟಿಮಾಡಿ ತಲೆ ಹಗುರಮಾಡಿಕೊಳ್ಳುವ ಉದ್ಯಮಿ, ಪುಢಾರಿ, ಪತ್ರಕರ್ತ, ಕಲಾವಿದ, ಕ್ರೀಡಾಪಟು, ಸಾಹಿತಿ, ಬುದ್ಧಿಜೀವಿ, ನೌಕರ, ಸಾಮಾನ್ಯರ ಜೀವಶಕ್ತಿಯಾಗಿರುವ ಮದ್ಯದ ಬಗ್ಗೆ ಮದ್ಯೋದ್ಯಮವಾಗಲಿ, ಆಳುವವರಾಗಲಿ ಒಂದಿಷ್ಟೂ ತಲೆಕೆಡಿಸಿಕೊಂಡಿದ್ದು ಎಲ್ಲೂ ಕಾಣುವುದಿಲ್ಲ. ಇಷ್ಟೊಂದು ಬಹುಪಯೋಗಿ ಮತ್ತು ವರ್ಣರಂಜಿತ ವಸ್ತುವಾದ ಮದ್ಯದ ತಯಾರಿಕೆಯನ್ನು ನಿಲ್ಲಿಸುವುದಕ್ಕೆ ಆಳುವವರ್ಗದ ಯಾರಿಗೇ ಆಗಲಿ ಹೇಗೆ ಮನಸ್ಸು ಬರಲು ಸಾಧ್ಯ?

ಈ ಮೌಢ್ಯ-ಬೆವರು-ವ್ಯಸನಗ್ರಸ್ತ ‘ನತದೃಷ್ಟ ಕೊಳಕು ಕುಡುಕರ’ ಕೊಳಕು ಹಣವು, ಇದರ ಇನ್ನೊಂದು ಕೊನೆಯಲ್ಲಿ ಮದ್ಯವ್ಯಾಪಾರದ ನೇರ ಫಲಾನುಭವಿಗಳಾದ ಮದ್ಯೋದ್ಯಮದ ಒಡೆಯರು, ಮದ್ಯದಂಗಡಿ ಮತ್ತು ಬಾರ್‌ಗಳ ಮಾಲಕರು ಮತ್ತು ಅವರ ಮನೆಜನರ ಶ್ರೀಮಂತಿಕೆಯಲ್ಲಿ, ಅವರ ಜೀವನಶೈಲಿಯ ಝಗಮಗದ ಒಡವೆ-ವಸ್ತ್ರಗಳಲ್ಲಿ ಗುರುತೇ ಸಿಗದಷ್ಟು ಪ್ರಖರವಾಗಿ ಹೊಳೆಯುತ್ತವೆ. ಮುಂದೆ ಸಾಗಿದಂತೆ ಭ್ರಷ್ಟ ಅಧಿಕಾರಿಗಳ ಲಂಚವಾಗಿ, ಸಂಚಯಗೊಂಡು ಪುಢಾರಿ-ರಾಜಕಾರಣಿ-ಪಕ್ಷಗಳ ವಂತಿಗೆಯಾಗಿ ಗೌರವ ರೂಪವನ್ನು ಪಡೆಯುತ್ತವೆ. ವಸೂಲಿಗೆ ಬರುವ ಪೊಲೀಸರ, ರೌಡಿಗಳ ಕೈಗೆ ದಾಟಿಸುವ ಮಾಮೂಲಿ ಹಫ್ತಾ ಆಗುತ್ತದೆ.

 ಅಲ್ಲಿ ಬಿದ್ದು, ಇಲ್ಲಿ ಸುತ್ತಿ, ಬಗೆ ಬಗೆಯ ವ್ಯಾಪಾರಿಗಳ ಕೈಗಳನ್ನು ಮುಟ್ಟಿ ಕೂಲಿ, ಸಂಬಳ, ಚೀಟಿಹಣ, ಕೈಸಾಲ, ಮೀಟರ್‌ಬಡ್ಡಿಗಳ ರೂಪದಲ್ಲಿ ಕುಡುಕರ ಸೇವನೆಗೆ ಅಂದರೆ, ಮದ್ಯೋದ್ಯಮಿಗಳ ಸೇವೆಗೆ ಸೇರಲು ಮತ್ತೆ ಸಜ್ಜಾಗುತ್ತದೆ.

ಮದ್ಯೋದ್ಯಮವು ಜನರ ಆರೋಗ್ಯಕ್ಕೆ ತೀವ್ರವಾಗಿ ಧಕ್ಕೆತರುವಂಥ ರಾಕ್ಷಸೀ ಉದ್ಯಮ ಎಂಬುದನ್ನು ಬಹುಜನರು ಬಲ್ಲರು. ಈ ಉದ್ಯಮದ ಮಾಲಕರಾಗಲಿ, ನೌಕರರಾಗಲಿ, ತಾವು ತಯಾರಿಸಿ ಮಾರಾಟಮಾಡುವ ಉತ್ಪನ್ನವು ಅಂತಿಮವಾಗಿ ಯಾರನ್ನು ತಲುಪುತ್ತದೆ ಎಂಬುದನ್ನು ಅರಿಯದವರೇನಲ್ಲ. ಚುನಾವಣೆಗಳಲ್ಲಿ ಆರಿಸಿ ಬರುವಾಗ ಬಡಜನರ ಕಡೆಗೆ ಮದ್ಯದ ಹೊಳೆಯನ್ನೇ ಹರಿಸಿ ಅಧಿಕಾರಕ್ಕೆ ಬರುವ ಚುನಾಯಿತ ಸರಕಾರಗಳು ಮದ್ಯೋದ್ಯಮವನ್ನು ಪರವಾನಿಗೆಯ ಮೂಲಕ ನಿಯಂತ್ರಿಸಿ, ಅಗಾಧ ಪ್ರಮಾಣದ ಹಣವನ್ನು ತನ್ನ ಖಜಾನೆಗೆ ಸೇರಿಸಿಕೊಳ್ಳುತ್ತವೆ. ಜನರ ಕಲ್ಯಾಣಕ್ಕಾಗಿ ಆ ಹಣವನ್ನು ಬಳಸುತ್ತೇವೆಂದು ಹೇಳಿಕೊಳ್ಳುತ್ತವೆ. ಹಾಗಿದ್ದರೆ ಇವರ್ಯಾರಿಗೂ ಸಂವೇದನೆ ಎಂಬುದು ಇಲ್ಲವೇ? ಉತ್ತರ ಕಷ್ಟವೇನಲ್ಲ. ಖಾಸಗಿ ವ್ಯಕ್ತಿಗಳಾಗಿ ಸಂವೇದನೆ ಇದೆ. ಆದರೆ ಆಳುವ ಸಂಸ್ಥೆಗಳಾಗಿ ಯಾವ ಸಂವೇದನೆಯೂ ಇರುವುದಿಲ್ಲ.

ಮದ್ಯಪಾನಾಸಕ್ತರು ಮತ್ತು ವ್ಯಸನಿಗಳು ಮೂಲತಃ ಸ್ವಕೇಂದ್ರಿತ ಹಿತಾಸಕ್ತಿಯ ಬಲಿಪಶುಗಳು. ಹೀಗಾಗಿ ಅವರ್ಯಾರೂ ಮದ್ಯೋದ್ಯಮದ ವಿರೋಧಿಗಳಲ್ಲ. ಇನ್ನುಳಿದಿರುವುದು ಮದ್ಯೋದ್ಯಮದಿಂದಾಗಿ ಹೇಳತೀರದ ಸಂಕಷ್ಟಗಳಿಗೆ ಒಳಗಾಗುವ ಬಡಮಹಿಳೆಯರು ಮತ್ತು ಅಸಹಾಯಕ ಮಕ್ಕಳು. ಮದ್ಯಸೇವನೆಯ ನಿಜವಾದ ಸಂತ್ರಸ್ತರು ಇವರೇ. ಮದ್ಯಪಾನವನ್ನು ಸಮರ್ಥಿಸುವವರಿಗೆ ವ್ಯಸನಿಗಳು ಕಣ್ಣಿಗೆ ಬೀಳುತ್ತಾರೆಯೇ ಹೊರತು ಈ ನಿಜವಾದ ಸಂತ್ರಸ್ತರು ಕಣ್ಣಿಗೆ ಬೀಳುವುದಿಲ್ಲ. ಗ್ರಂಥಗಳಲ್ಲಿರುವ ಎಂತಹ ಕ್ರಾಂತಿಕಾರಕ ಆಲೋಚನೆಯಾಗಲಿ, ಘೋಷಣಾಫಲಕ- ಭಿತ್ತ್ತಿಪತ್ರಗಳಲ್ಲಿ ಕಾಣಿಸುವ ಕಷ್ಟ, ಬೇಡಿಕೆ, ಆಗ್ರಹಗಳಾಗಲಿ, ಸಾಮಾಜಿಕವಾಗಿ ವ್ಯಕ್ತಿಗಳ ರೂಪದಲ್ಲಿ ಅಭಿವ್ಯಕ್ತಗೊಳ್ಳದಿದ್ದರೆ ಅವಕ್ಕೆ ಜೀವವಿಲ್ಲ. ಸಂಘಟನೆಯ ರೂಪ ತಾಳದಿದ್ದರೆ ಅವಕ್ಕೆ ರಾಜಕೀಯ ಶಕ್ತಿಯಿಲ್ಲ. ಆಳುವವರ ಅಸ್ತಿತ್ವನ್ನೇ ಅಲುಗಾಡಿಸದಿದ್ದರೆ ಅವರ ನೀತಿಗಳು ಬದಲಾಗುವುದಿಲ್ಲ. ನೀತಿ ಬದಲಾಗುವ ಭೀತಿ ಎದುರಾಯಿತೆಂದರೆ ಪೊಲೀಸರ ಆಗಮನವಾಗುತ್ತದೆ. ಆಳುವವರ್ಗದ ನಿಜವಾದ ಶಕ್ತಿಯ ಪರಿಚಯ ಅಲ್ಲಿಂದ ಮೊದಲಾಗುತ್ತದೆ.

ಚಿತ್ರದುರ್ಗದಿಂದ ಹೊರಟ ಮದ್ಯಪಾನ ಸಂತ್ರಸ್ತ ಮಹಿಳೆಯರು, ಕಾಲ್ನಡಿಗೆಯ 10 ದಿನಗಳ ಪ್ರಯಾಸಕರ ಜಾಥಾ ನಡೆಸಿ ರಾಜ್ಯದ ರಾಜಧಾನಿಯನ್ನು ತಲುಪಿ, ಮುಖ್ಯಮಂತ್ರಿಗಳಿಂದ ‘‘ಸರಕಾರಕ್ಕೆ ಅತ್ಯಧಿಕ ಆದಾಯ ತರುವ ಮದ್ಯದ ನಿಷೇಧ ಸಾಧ್ಯವಿಲ್ಲ’’ ಎಂಬ ಖಚಿತ ಉತ್ತರ ಪಡೆದು ಅವರವರ ಊರಿಗೆ ವಾಪಸಾಗಿದ್ದಾರೆ. ತಮ್ಮ ಊರಿನ ಅಂಗಡಿಗಳ ಮುಂದೆ ಪ್ರತಿಭಟಿಸುತ್ತೇವೆ ಎಂಬ ನಿರ್ಧಾರ ಅವರದ್ದು. ವಿವಿಧ ಉದ್ಯಮಗಳ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು, ಬ್ಯಾಂಕ್-ಎಲೈಸಿ-ಅಂಚೆ ನೌಕರರು ಸಂಬಳ ಕಳೆದುಕೊಂಡು ಕಾರ್ಮಿಕವಿರೋಧಿ ನೀತಿಗಳ ವಿರುದ್ಧ ಮಾಡಿದ ಎರಡು ದಿನದ ಪ್ರತಿಭಟನೆ ಸರಕಾರದ ನೀತಿಗಳನ್ನು ಅಲ್ಲಾಡಿಸಿತೆ? ಹಾಗಿದ್ದರೆ ಅವೆಲ್ಲಾ ವ್ಯರ್ಥವೇ? ಸ್ವಯಂಸ್ಫೂರ್ತಿಯಿಂದ ಸಂಘಟಿತಗೊಂಡು ಒಂದು ಸಣ್ಣ ಆರ್ಥಿಕ ಹಕ್ಕಿಗಾಗಿ ಕೇವಲ ಎರಡೇ ದಿನ ನಡೆದರೂ ಕೇಂದ್ರಸರಕಾರವು ತನ್ನ ನೀತಿಯನ್ನು ಹಿಂದೆೆಗೆದುಕೊಳ್ಳುವಂತೆ ಮಾಡಿದ ಬೀದಿ ಹೋರಾಟದ ಶಕ್ತಿ ಎಲ್ಲಿಂದ ಬಂದಿತು?

ಮುಂದಿನ ದಿನಗಳ ಹೋರಾಟಗಳ ಸೂಚನೆಗಳು ಈ ವಿದ್ಯಮಾನಗಳಲ್ಲಿವೆಯೇ? ಜಾಗತಿಕ ಬಂಡವಾಳವು ಸರಕು ಬಂಡವಾಳದಿಂದ, ಸೇವೆಗಳ ಬಂಡವಾಳ, ಹಣಕಾಸು ಬಂಡವಾಳ, ಡಿಜಿಟಲ್ ಬಂಡವಾಳ ಹೀಗೆ ತನ್ನ ಉಳಿವಿಗಾಗಿ ವೇಷಬದಲಾಯಿಸುತ್ತಾ, ಫ್ಯಾಶೀವಾದದ ಕಡೆಗೆ ಸಾಗುತ್ತಿರುವಾಗ ಶ್ರಮಿಕರ ಸಂಘಟನಾ ಸ್ವರೂಪಗಳು, ಹೋರಾಟದ ವಿಧಾನಗಳು ಬದಲಾಗುತ್ತಾ ರೈತ ಹೋರಾಟ, ದಲಿತಹೋರಾಟಗಳಾಗಿ, ಶ್ರಮದ ಸ್ತ್ರೀಕರಣವು ಹೆಚ್ಚು ಹೆಚ್ಚು ವ್ಯಾಪಕವಾಗುತ್ತಾ, ಮಹಿಳಾ ಹೋರಾಟಗಳಾಗಿ, ಕುಟುಂಬಗಳ ಸಾತ್ವಿಕ ಸಿಟ್ಟಿನ ಮಹಿಳೆಯರಲ್ಲಿ ಸುಪ್ತವಾಗಿರುವ ಹೋರಾಟದ ಕೆಚ್ಚನ್ನು ಬಡಿದೆಬ್ಬಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಮದ್ಯದ ನಿಷೇಧಕ್ಕಾಗಿ ಜಾಥಾ ನಡೆಸಿದ ಮಹಿಳೆಯರ ಸಂಘಟನೆಯು ಎತ್ತುತ್ತಿದೆ. ಜನಸಮುದಾಯದ ಪಾಲಿಗೆ ಇದು ಖಂಡಿತವಾಗಿಯೂ ಒಂದು ಆಶಾದಾಯಕ ಬೆಳವಣಿಗೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)