varthabharthi

ನಿಮ್ಮ ಅಂಕಣ

ಕುಡಿಯುವ ನೀರಿನ ಘಟಕಕ್ಕೆ ಗ್ರಹಣ

ವಾರ್ತಾ ಭಾರತಿ : 6 Feb, 2019
-ಮಾರುತೇಶ್ ಕೆ. ಚಿಕ್ಕತೇಕಲವಟ್ಟಿ. ಹೊಸದುರ್ಗ

ಮಾನ್ಯರೇ,

 ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಹಾಗೂ ಸಹಕಾರಿ ಸಂಘಗಳು ರಾಜ್ಯದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿವೆ. ಆದರೆ ಕೆಲವೆಡೆ ಆ ಘಟಕಗಳನ್ನು ನಿರ್ವಹಣೆ ಮಾಡಬೇಕಾದವರು ಸಂಪೂರ್ಣವಾಗಿ ವಿಫಲರಾಗಿದ್ದಾರೆೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೊಡ್ಡತೇಕಲವಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಿಕ್ಕತೇಕಲವಟ್ಟಿ ಗ್ರಾಮ ದಲ್ಲಿ ಕೇವಲ ಹೆಸರಿಗೆ ಮಾತ್ರ ಶುದ್ಧ ನೀರಿನ ಘಟಕ ಇದೆ. ಉದ್ಘಾಟನೆಯಾದ ನಂತರ ಒಂದು ವಾರವೂ ಸರಿಯಾಗಿ ಕೆಲಸ ಮಾಡಿಲ್ಲ. ಪ್ರತೀ ವಾರವೂ ಸ್ಥಗಿತಗೊಳ್ಳುತ್ತಿರುತ್ತದೆ. ಹಾಳಾದ ಯಂತ್ರಗಳನ್ನು ದುರಸ್ತಿ ಮಾಡಲು ತಿಂಗಳುಗಳ ಕಾಲ ಸಮಯ ತೆಗೆದುಕೊಳ್ಳುವುದರಿಂದ ಘಟಕದ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಊರಿನ ಜನರೆಲ್ಲ ನೆರೆಯ ಗ್ರಾಮಗಳಿಗೆ ಹೋಗಿ ನೀರು ತರುವ ಸಂದರ್ಭ ತಪ್ಪಿದ್ದಲ್ಲ.

ಸಹಕಾರಿ ಸಂಘಗಳು ನಿರ್ಮಿಸಿ, ನಿರ್ವಹಣೆ ಮಾಡುತ್ತಿರುವ ಘಟಕಗಳಲ್ಲಿ ಅಷ್ಟೊಂದು ಸಮಸ್ಯೆ ಇಲ್ಲ. ಆದರೆ ಇತರ ಸರಕಾರಿ ಇಲಾಖೆಗಳು ನಿರ್ವಹಿಸುತ್ತಿರುವ ಘಟಕಗಳು ಜನರಿಗೆ ಸರಿಯಾದ ಸೇವೆ ನೀಡುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾವ ಕಾರಣಕ್ಕೆ ಘಟಕ ಸದಾ ಸ್ಥಗಿತಗೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳದೆ ಪ್ರತಿ ಸಲ ಕಳಪೆಯಾದ ಯಂತ್ರಗಳನ್ನು ಜೋಡಿಸಿ ರಿಪೇರಿ ಮಾಡಿಸುತ್ತಾರೆ. ಹಾಗಾಗಿ ಯಂತ್ರಗಳು ಸುಸ್ಥಿತಿಗೆ ಬರುತ್ತಿಲ್ಲ. ರಿಪೇರಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯವಾಗುತ್ತಿದೆ. ಆದರೆ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ, ಸದಸ್ಯರಾಗಲಿ ನಮಗೆ ಸಂಬಂಧ ಇಲ್ಲವೇನೋ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಸರಕಾರ, ಸಂಬಂಧಿತ ಇಲಾಖೆ ಈ ಘಟಕಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವಂತೆ ಇನ್ನಾದರೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)