varthabharthi

ನಿಮ್ಮ ಅಂಕಣ

ಕಾಡ್ಗಿಚ್ಚಿನಿಂದ ಅರಣ್ಯ ಸಂಪತ್ತು ನಾಶ

ವಾರ್ತಾ ಭಾರತಿ : 6 Feb, 2019
-ಗೌರೀಶ್ ಟಿ.ಎಸ್. ತಿಪ್ಪೇನಹಳ್ಳಿ

ಮಾನ್ಯರೇ,

 ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಅತ್ಯಧಿಕ ಕಾಡ್ಗಿಚ್ಚು ಸಂಭವಿಸಿದರ ಪರಿಣಾಮ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ. ರಾಜ್ಯದ ಬಹುತೇಕ ಅರಣ್ಯ ಭಾಗಗಳಲ್ಲಿ ಬೇಸಿಗೆ ಬಂತೆಂದರೆ ಸಾಕು ಕಾಡ್ಗಿಚ್ಚು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಕಷ್ಟು ನಿಯಂತ್ರಣ ಕ್ರಮಗಳ ಹೊರತಾಗಿಯೂ ಅಗ್ನಿ ಅವಘಡ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಕಿಡಿಗೇಡಿಗಳ ಕೃತ್ಯದಿಂದಲೋ ಅಥವಾ ಅರಣ್ಯಅಧಿಕಾರಿಗಳ ನಿರ್ಲಕ್ಷದಿಂದಲೋ ಹೆಚ್ಚಿನ ಬೆಲೆ ಬಾಳುವ ಔಷಧೀಯ ಸಸ್ಯಗಳು, ಶ್ರೀಗಂಧ ಸಸ್ಯಗಳು ಬೆಂಕಿಗಾಹುತಿಯಾಗುತ್ತಿವೆ. ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗುತ್ತಿರುವ ಈ ಅಪಾರ ಮರಮಟ್ಟುಗಳಿಂದ ಅರಣ್ಯ ಇಲಾಖೆಗೆ ಸಾಕಷ್ಟು ನಷ್ಟವಾಗಿದೆ.

ಇಪ್ಪತ್ತು ವರ್ಷಗಳಿಗೆ ಹೋಲಿಸಿದರೆ ಕಳೆದ ಆರೇಳು ವರ್ಷದಿಂದ ಇದುವರೆಗೆ ಅತೀ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ನಡೆದಿದ್ದು, ಅಪಾರ ಪ್ರಮಾಣದ ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿರುವುದು ವಿಪರ್ಯಾಸವೇ ಸರಿ. ಅಮೆರಿಕದ ನಾಸಾ ಉಪಗ್ರಹದಿಂದ ಕಾಡ್ಗಿಚ್ಚು ಕಾಣಿಸುವ ಬಗ್ಗೆ ಮುನ್ನೆಚ್ಚರಿಕೆ ಸಂದೇಶ ರವಾನೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೂ ಬೆಂಕಿ ಅವಘಡ ಮರುಕಳಿಸುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ದಾರಿ ಮಾಡಿಕೊಟ್ಟಿದೆ.

ನಮ್ಮ ರಾಜ್ಯದಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿಯೇ ಇದ್ದು, ಸಾಲು ಸಾಲು ಬೆಟ್ಟ ಗುಡ್ಡಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಆದರೆ ಬೇಸಿಗೆ ಹತ್ತಿರ ಬರುತ್ತಿರುವಂತೆ ಈ ಬೆಟ್ಟದಲ್ಲಿರುವ ಗಿಡ ಮರಗಳನ್ನು ಬೆಂಕಿಯಿಂದ ಹೇಗೆ ಕಾಪಾಡುವುದು ಎನ್ನುವ ಚಿಂತೆ ಅರಣ್ಯ ಇಲಾಖೆಗೆ ಸಹಜ. ಬೇಸಿಗೆ ಸಮೀಪಿಸುತ್ತಿದ್ದಂತೆ ಅರಣ್ಯ ಇಲಾಖೆ ಅತ್ಯಂತ ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಇಲಾಖೆ ಸ್ವಲ್ಪಎಚ್ಚರಿಕೆ ತಪ್ಪಿದರೂ ಭಾರೀ ಪ್ರಮಾಣದ ಮರ ಗಿಡ, ಅರಣ್ಯ ಸಂಪತ್ತು ನಾಶವಾಗುವುದು ಖಂಡಿತ. ರಾಜ್ಯ ಸರಕಾರ ಕಾಡ್ಗಿಚ್ಚು ಪ್ರಕರಣಗಳನ್ನು ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)