varthabharthi


ಅನುಗಾಲ

2019ರ ಆದಿಯ ವೈರುಧ್ಯಗಳು

ವಾರ್ತಾ ಭಾರತಿ : 7 Feb, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸಂವಿಧಾನವನ್ನು ಅದರ ಪದದಿಂದ ಕೆಳಗಿಳಿಸಿ ಅಲ್ಲಿ ಮತಾಂಧತೆಯನ್ನು ಪ್ರತಿಷ್ಠಾಪಿಸುವ ನಿಶ್ಚಿತ ಕಾರ್ಯಕ್ರಮಕ್ಕೆ 2014ರಲ್ಲೇ ಸರಕಾರ ಅಸ್ಥಿಭಾರ ಹಾಕಿತ್ತು. ಅದೀಗ ಮೈದಳೆದಿದೆ. ಆದರೂ ಇವೆಲ್ಲ ಒಂದು ಗೌರವಾರ್ಹ ಮಟ್ಟದಲ್ಲಿ ನಡೆಯಬೇಕಿತ್ತು. ಆದರೆ ನಮ್ಮ ರಾಜಕಾರಣಿಗಳು ಆಡುವ ಭಾಷೆ, ನಡೆದುಕೊಳ್ಳುತ್ತಿರುವ ಅಸಭ್ಯತೆ, ಮಾಡುತ್ತಿರುವ ಅಪಾಯ ಇವು ಮುಂದೊಂದು ದಿನ ಅವರಿಗೇ ಎರವಾಗುತ್ತವೆಂಬ ಕನಿಷ್ಠ ಅರಿವೂ ಇಲ್ಲದೆ ಮುಂದುವರಿಯುತ್ತಿರುವುದನ್ನು ಗಮನಿಸಿದರೆ ಅವರ ಬಗ್ಗೆ ಅಲ್ಲ-ನಮ್ಮ ಮುಂದಿನ ತಲೆಮಾರಿನ ಭವಿಷ್ಯದ ಕುರಿತು ಅನುಕಂಪ ಹುಟ್ಟುತ್ತದೆ.

2019ರ ಆರಂಭದಲ್ಲೇ ಈ ದೇಶದಲ್ಲಿ ಕಾಲಕಾಲಕ್ಕೆ ಕಾಣಿಸುತ್ತಿರುವ ಕೆಲವು ವೈರುಧ್ಯಗಳನ್ನು ನೀವು ಗಮನಿಸಿರಬಹುದು: ಮುಸ್ಲಿಮ್ ರಾಷ್ಟ್ರವಾದ ಯುಎಇಯ ದುಬೈನ ಬುರ್ಜ್ ಖಲೀಫಾದಲ್ಲಿ ಮಹಾತ್ಮಾ ಗಾಂಧಿಯ ಚಿತ್ರ ಶೋಭಿಸಿದರೆ ಭಾರತದಲ್ಲಿ ಉತ್ತರಪ್ರದೇಶದ ಅಲಿಘಡದಲ್ಲಿ ಹಿಂದೂ ಮಹಾಸಭಾದ ವತಿಯಿಂದ ಗಾಂಧಿಯ ಪ್ರತಿಕೃತಿಗೆ ಗುಂಡು ಹೊಡೆದು ಅವಮಾನಿಸಿ ಗೋಡ್ಸೆಗೆ ಜೈಕಾರ ಹಾಕಿ ಕೇಕೆ ಹಾಕಲಾಗುತ್ತಿದೆ. ರಾಮಾಯಣದಂತಹ ಪುರಾಣಗಳಲ್ಲಿ ಋಷ್ಯಾಶ್ರಮಗಳಲ್ಲಿ ನಡೆಯುವ ಯಜ್ಞ ಯಾಗಾದಿಗಳ ಹೋಮಕುಂಡಕ್ಕೆ ರಕ್ಕಸರು ರಕ್ತಧಾರೆಯನ್ನೆರೆದು ವಿಘ್ನ ತರುವ ದೃಶ್ಯಕ್ಕೆ ಸರಿಸಾಟಿಯಾದ ದೃಶ್ಯವಿದು. ಇದನ್ನು ಭಾರತೀಯ ಅಥವಾ ಹಿಂದೂ ಸಂಸ್ಕೃತಿಯೆನ್ನಲಾಗುತ್ತಿದೆ. ಡಾ. ಆನಂದ ತೇಲ್ತುಂಬ್ಡೆಯೆಂಬ ಅಪಾರ ವಿದ್ವತ್ತಿನ ಪ್ರಸಿದ್ಧ ವಿದ್ವಾಂಸರನ್ನು ಅವರ ಎಡಪಂಥೀಯ ಒಲವಿನ ಕಾರಣದಲ್ಲಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯವು ಅವರನ್ನು ನಾಲ್ಕು ವಾರಗಳ ಕಾಲ ದಸ್ತಗಿರಿ ಮಾಡದಂತೆ ಮತ್ತು ಕೆಳ ನ್ಯಾಯಾಲಯಗಳಲ್ಲಿ ಅವರ ಬಂಧನ ಪೂರ್ವ/ನಿರೀಕ್ಷಣಾ ಜಾಮೀನಿನ ಆದೇಶವನ್ನು ಪರಿಗಣಿಸುವಂತೆ ಆದೇಶಿಸಿದರೂ (ತಾಂತ್ರಿಕ ಕಾರಣಗಳಿಗಾಗಿ ಒಮ್ಮೆ ಜಾಮೀನು ತಿರಸ್ಕೃತವಾದರೆ ಮತ್ತೆ ನಾಲ್ಕು ವಾರಗಳ ಕಾಲ ಕಾಯುವ ಅಗತ್ಯವಿಲ್ಲವೆನ್ನುವಂತೆ ಇರುವ) ಈ ಆದೇಶದ ಅಸ್ಪಷ್ಟತೆಯನ್ನು ದುರುಪಯೋಗಪಡಿಸಿಕೊಂಡು ತಕ್ಷಣವೇ ತೇಲ್ತುಂಬ್ಡೆ ಒಬ್ಬ ಜಾಗತಿಕ ಭಯೋತ್ಪಾದಕರೇನೋ ಎಂಬಂತೆ ನಸುಬೆಳಗಿನಲ್ಲಿ ಪುಣೆಯ ಪೊಲೀಸರು ಬಂಧಿಸಿದರು. ಅಲ್ಲಿನ ಸೆಷನ್ಸ್ ನ್ಯಾಯಾಲಯವೊಂದು ತಕ್ಷಣ ಈ ಪ್ರಕರಣವನ್ನು ವಿಚಾರಿಸಿ ಅವರನ್ನು ಬಿಡುಗಡೆಮಾಡಲು ಆದೇಶಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಈಗ ಪ್ರಕರಣವು ಉಚ್ಚ ನ್ಯಾಯಾಲಯದ ಮುಂದಿದೆ.

ಇನ್ನೊಂದೆಡೆ ಈಗಾಗಲೇ ತನ್ನ ತಪ್ಪುನಡೆಗಳಿಂದ ಮತ್ತು ಅಂತಃಕಲಹಗಳಿಂದಾಗಿ ಕುಖ್ಯಾತಿಯನ್ನು ಪಡೆದ ಕೇಂದ್ರೀಯ (ಈಗ ಕೇಂದ್ರ ಸರಕಾರದ!) ತನಿಖಾ ಮಂಡಳಿ ಸಿಬಿಐ ನಾಲ್ಕೈದು ವರ್ಷಗಳಿಂದ ಶೈತ್ಯಾಗಾರದಲ್ಲಿಟ್ಟಿದ್ದ ಪ್ರಕರಣವೊಂದರಲ್ಲಿ ಕೋಲ್ಕತಾದ ಪೊಲೀಸ್ ಮುಖ್ಯಸ್ಥರನ್ನು ವಿಚಾರಿಸಲು ಹೋಗಿ ಪ್ರತಿರೋಧವನ್ನೆದುರಿಸಿತು. ಪಶ್ಚಿಮ ಬಂಗಾಳದ ಸರಕಾರ ಸಿಬಿಐಯ ನಡೆಯನ್ನು ತಡೆಯಿತು. ಸ್ವತಃ ಮುಖ್ಯಮಂತ್ರಿಯೇ ಈ ನಡೆಯ ವಿರುದ್ಧ ಧರಣಿ ಹೂಡಿದರು. ತನ್ನ ತನಿಖೆಗೆ ಬೇಕಾದ ಅಂಶಗಳನ್ನು ಆ ಪೊಲೀಸ್ ಅಧಿಕಾರಿ ಹೊಂದಿದ್ದಾರೆಂಬುದು ಸಿಬಿಐಯ ವಾದ. ಈ ಪ್ರತಿರೋಧದ ಆನಂತರ ಸಿಬಿಐ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕುರಿತು ದೂರನ್ನು ಸಲ್ಲಿಸಿದಾಗ ನ್ಯಾಯಮೂರ್ತಿಗಳು ಅಂತಹ ಯಾವುದೇ ಸಾಕ್ಷ್ಯ ಈ ತನಕ ಕಂಡು ಬಂದಿರುವುದಿಲ್ಲವೆಂದು ಹೇಳಿ ಪ್ರಕರಣವನ್ನು ಒಂದು ದಿನಕ್ಕೆ ಮುಂದೂಡಿದರು.

ಆನಂತರ ಸರ್ವೋಚ್ಚ ನ್ಯಾಯಾಲಯವು ಈ ಪೊಲೀಸ್ ಅಧಿಕಾರಿ ಅಲಿಪ್ತ ಸ್ಥಳವಾದ ಶಿಲ್ಲೊಂಗ್‌ನಲ್ಲಿ ಹಾಜರಾಗಿ ಸಿಬಿಐಗೆ ತನಿಖೆಯಲ್ಲಿ ನೆರವು ನೀಡಬೇಕೆಂದು ಮತ್ತು ಸಿಬಿಐ ಅವರನ್ನು ಬಂಧಿಸಬಾರದೆಂದು ತಾಕೀತು ಮಾಡಿ ಆದೇಶಿಸಿತು. ಕೇಂದ್ರ ಸರಕಾರವು ಪಶ್ಚಿಮ ಬಂಗಾಳ ಸರಕಾರಕ್ಕೆ ಈ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಗೆದ್ದವರು ಯಾರೋ ಸೋತವರು ಯಾರೋ, ಯಾರು ಸರಿ ಯಾರು ತಪ್ಪುಎಂಬುದನ್ನು ಈಗಲೇ ಹೇಳುವುದು ಕಷ್ಟ. ಆದರೆ ಈ ದೇಶದ ಆಡಳಿತ ವ್ಯವಸ್ಥೆ, ಪ್ರಜಾಪ್ರಭುತ್ವ ಮತ್ತು ಜನತೆ ನಗೆಪಾಟಲಿಗೀಡಾಗಿದೆ ಮತ್ತು ಅವುಗಳ ಮಾನ ಹರಾಜಾಗಿದೆ.

ಇಂತಹ ದಸ್ತಗಿರಿ, ಬಂಧನ ಈ ಹಿಂದೆಯೂ ಕಳೆದ ಸರಿಸುಮಾರು ಐದು ವರ್ಷಗಳಲ್ಲಿ ನಡೆದಿದೆ. ಸುಧಾಭಾರದ್ವಾಜ್, ವರವರರಾವ್ ಮುಂತಾದ ಚಿಂತಕ-ಸಮಾಜಸೇವಕರನ್ನು, ಕನ್ಹಯ್ಯಾಕುಮಾರ್ ಮುಂತಾದ ವಿದ್ಯಾರ್ಥಿ ನಾಯಕರನ್ನು ಇತ್ತೀಚೆಗಷ್ಟೇ ಸರಕಾರ ಬಂಧಿಸಿ ಅವರ ವಿರುದ್ಧ ದೇಶದ್ರೋಹದ ಆರೋಪವನ್ನು ಸಲ್ಲಿಸಿತು. ಇದಕ್ಕೆ ಕೇಂದ್ರ ಸರಕಾರವು ನೀಡುವ ಕಾರಣ ಅಥವಾ ನೆಪವೆಂದರೆ ಇಂತಹ ಬಂಧನಗಳು ಈ ಹಿಂದೆಯೂ ನಡೆದಿವೆ ಮತ್ತು ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ನಡೆದಿವೆಯಾದ್ದರಿಂದ ಇದರಲ್ಲಿ ತಪ್ಪೇನಿಲ್ಲ ಎಂಬುದು. ಇಂತಹ ಪೊಳ್ಳು ಸಮರ್ಥನೆಗಳು ವಿದ್ಯಾವಂತರೂ ಸೇರಿದ ಒಂದು ಸಮುದಾಯವನ್ನು ಆಕರ್ಷಿಸಿದೆಯೆಂದರೆ ದೊಡ್ಡ ದುರಂತ. ಹೀಗಾದರೆ ಈಗಿನ ಸರಕಾರಕ್ಕೆ ಕಾಂಗ್ರೆಸ್ ಆಡಳಿತದ ದೋಷಗಳೇ ಸಂವಿಧಾನವಾದಂತಿದೆ.

ದೇಶದೊಳಗಣ ಈ ಬಂಧನಗಳು, ದುರಾಡಳಿತಗಳು ಎಗ್ಗಿಲ್ಲದೆ ಮುಂದುವರಿಯುತ್ತಿವೆಯದರೂ ಅಮೆರಿಕದಲ್ಲಿನ ವೀಸಾ ಹಗರಣದಲ್ಲಿ ಬಂಧಿತರಾದ 130 ವಿದ್ಯಾರ್ಥಿಗಳಲ್ಲಿ 129 ಮಂದಿಯೂ ಭಾರತೀಯರೇ ಆಗಿದ್ದು ಅವರ ಬಿಡುಗಡೆಗೆ ಭಾರತವು ದೂತಾವಾಸದ ಮೂಲಕ ಪ್ರಯತ್ನಿಸುತ್ತಿದೆ. ಅವರನ್ನು ಬಿಡಿಸುವುದಕ್ಕಾಗಿ ಮಾನವ ಹಕ್ಕುಗಳನ್ನು ಉಲ್ಲೇಖಿಸಿದೆ. ಈ ವಿದ್ಯಾರ್ಥಿಗಳು ಮುಗ್ಧರೆಂದು ಸಾಬೀತಾಗುವ ಮೊದಲೇ ಅವರ ಬಂಧನವನ್ನು ತಾನು ಪ್ರಶ್ನಿಸುತ್ತಿರುವ ವೇಳೆಗೆ ತನ್ನ ದೇಶದಲ್ಲೇ ಆಡಳಿತ ಯಂತ್ರವು ಲಜ್ಜಾಹೀನವಾಗಿ ದುರುಪಯೋಗವಾಗುವುದನ್ನು ಯಾರೂ ಗಮನಿಸುತ್ತಿಲ್ಲವೆಂದು ಸರಕಾರ ಭ್ರಮಿಸಿದೆ. ಅಮೆರಿಕ, ಉತ್ತರ ಕೊರಿಯಾ, ಚೀನಾ ಹೀಗೆ ಜಗತ್ತಿನ ಎಲ್ಲೆಡೆ ಮಾನವ ಹಕ್ಕುಗಳು ನಗೆಪಾಟಲಾಗುವ ಸಮಯದಲ್ಲಿ ಭಾರತವೂ ತಾನೇನು ಕಡಿಮೆಯಿಲ್ಲವೆಂಬಂತೆ ಈ ಮಾನವ ಹಕ್ಕುಗಳ ಉಲ್ಲಂಘನೆಯ ಅಭಿಯಾನವನ್ನು ಕೈಗೊಂಡಿದೆ. ಪಶ್ಚಿಮ ಬಂಗಾಳದ ಪ್ರಕರಣಕ್ಕೆ ಪ್ರಧಾನಿ ಮುನ್ನುಡಿಯನ್ನು ಹಾಡಿದ್ದರು. ಚುನಾವಣಾ ರ್ಯಾಲಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನು ಅವಹೇಳನ ಮಾಡಿದ್ದರು.

ಮೋದಿ ಎಂಬ ಒಬ್ಬ ವ್ಯಕ್ತಿ ಹೀಗೆ ಅವಮಾನಿಸಿದರೆ, ಅಸಭ್ಯವಾಗಿ ವರ್ತಿಸಿದರೆ ಯಾರು ಆಕ್ಷೇಪವನ್ನು ಮಾಡುವಂತಿರಲಿಲ್ಲ; ಚಾಯ್‌ವಾಲಾ ಕೂಡಾ ಒಬ್ಬ ಗೌರವಾನ್ವಿತ ವ್ಯಕ್ತಿಯಾದರೂ ಒಬ್ಬ ಚಾಯ್‌ವಾಲಾ ಹೀಗೆ ಮಾತನಾಡಿದ್ದರೆ ಅದು ಮಹತ್ವದ ವಿಚಾರವಾಗುತ್ತಿರಲಿಲ್ಲ. ಆದರೆ ದೇಶದ ದುರದೃಷ್ಟಕ್ಕೆ ಅವರು ಪ್ರಧಾನಿಯಾಗಿದ್ದಾರೆ. ಆ ಹುದ್ದೆಯನ್ನು ಗೌರವಿಸುವುದಕ್ಕಾದರೂ ಅವರು ಸಭ್ಯತೆಯಿಂದ, ಸೌಜನ್ಯದಿಂದ, ವಿನಯದಿಂದ ಮಾತನಾಡಬೇಕೆಂದು ಜನತೆ ಅಪೇಕ್ಷಿಸಿದರೆ ತಪ್ಪೇನಿಲ್ಲ. ಆದರೆ ಪ್ರಧಾನಿ ಮೋದಿ ಈ ಎಲ್ಲ ಶಿಷ್ಟಾಚಾರವನ್ನು ಗಾಳಿಗೆ ತೂರಿ ಪುರಾಣದ ರಕ್ಕಸ ಪಾತ್ರಗಳಂತೆ ಆರ್ಭಟಿಸಿದ್ದಾರೆ; ತಮ್ಮ ಎಂದಿನ ಉಗ್ರಸ್ವರೂಪದ ಭಾಷಣವನ್ನು ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಹೇಳಿದಂತೆ ಪ್ರಧಾನಿ ತಮ್ಮ ಹುದ್ದೆಗೆ ಅವಮಾನಮಾಡಿದ್ದಾರೆ. ಅಮಿತ್ ಶಾ ಎಂಬ ಇನ್ನೊಬ್ಬರು, ಯೋಗಿ ಆದಿತ್ಯನಾಥ್ ಎಂಬ ಮತ್ತೊಬ್ಬರು ಕೇಂದ್ರ ಸರಕಾರದ ಪರವಾಗಿ ತಾರಾ ಪ್ರಚಾರಕರಾಗಿ ಹೋದಲ್ಲೆಲ್ಲ ಮತಾಂಧತೆಯ ವಿಷಬೀಜವನ್ನು ಬಿತ್ತಿ ಹುಲುಸಾದ ಗೆಲುವಿನ ಬೆಳೆಯನ್ನು ಪಡೆಯುವ ಹುನ್ನಾರದಲ್ಲಿದ್ದಾರೆ. ಆದಿತ್ಯನಾಥ್ ಯೋಗಿಯೆನ್ನಿಸುವುದಾದರೆ ವಿಶ್ವದ ಎಲ್ಲ ಮತಾಂಧರೂ ಕೇಡಿಗರೂ ಯೋಗಿಗಳೆಂಬ ಅಭಿದಾನಕ್ಕೆ ಪಾತ್ರರಾಗಬಹುದು. ಸ್ಮತಿ ಇರಾನಿ, ಅರುಣ್ ಜೇಟ್ಲಿ ಮುಂತಾದ ರಾಜ್ಯಸಭೆಯೆಂಬ ಹಿಂಬಾಗಿಲಿನ ಸರದಾರರು ಒಂದೇ ರಾಗದಲ್ಲಿ ಹಾಡುತ್ತಾರಾದ್ದರಿಂದ ಆ ಮಾತುಗಳೀಗ ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿವೆೆ.

ಸಿಬಿಐ ಎಂಬ ಈ ಮುಖಹೀನ ಸಂಸ್ಥೆಯು ಇತ್ತೀಚೆಗೆ ಐಸಿಐಸಿಐ ಬ್ಯಾಂಕಿನ ಮುಖ್ಯಸ್ಥೆ ಚಂದಾ ಕೊಚ್ಚಾರ್ ಅವರ ವಿರುದ್ಧ ಪ್ರಥಮ ವರ್ತಮಾನ ದಾಖಲಿಸಿ ತನಿಖೆಗೆ ಮುಂದಾದಾಗ ಇದೇ ಅರುಣ್ ಜೇಟ್ಲಿ ತಾನು ದೇಶದ ವಿತ್ತ ಮಂತ್ರಿ ಮತ್ತು ಹಣಕಾಸಿನ ಏರುಪೇರುಗಳಿಗೂ, ವೈಪರೀತ್ಯಗಳಿಗೂ ಹೊಣೆಯೆಂಬುದನ್ನು ಹಾಗೂ ಜನರಿಗೆ ಉತ್ತರಿಸಬೇಕಾದ್ದು ತನ್ನ ಮತ್ತು ತಾನು ಪ್ರತಿನಿಧಿಸುವ ಸರಕಾರದ ಮತ್ತು ರಾಷ್ಟ್ರೀಯ ತನಿಖಾ ಮಂಡಳಿಯ ಕರ್ತವ್ಯವೆಂಬುದನ್ನು ಮರೆತು ಇಂತಹ ಸಾಹಸಕ್ಕೆ ಕೈಹಾಕದಿರಿ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಕೇಂದ್ರ ತನಿಖಾ ಮಂಡಳಿಯ ಶೈತ್ಯಾಗಾರ ಸಾಕಷ್ಟು ದೊಡ್ಡದಿರುವುದರಿಂದ ಅವರು ಇದನ್ನು ಅಲ್ಲಿ (ಅರೋಪಿತರ ಅನುಕೂಲಕ್ಕಾಗಿ) ಸುರಕ್ಷಿತವಾಗಿಡಬಹುದು. ಇಂತಹ ನೂರಾರು ಪ್ರಕರಣಗಳು ಧೂಳುಬಿದ್ದಿವೆ.
ಕರ್ನಾಟಕದಲ್ಲಿ ಮಾಮೂಲಾಗಿ ಕಿರಿಚಾಡುವ ಶೋಭಾ ಕರಂದ್ಲಾಜೆ ಮುಂತಾದವರು ಯಾಕೋ ಸುಮ್ಮನಿದ್ದಾರೆ. ಇವರೆಲ್ಲರ ಮೌನವನ್ನು ಧಿಕ್ಕರಿಸುವಂತೆ ಅನಂತಕುಮಾರ ಹೆಗಡೆಯೆಂಬ ಕೇಂದ್ರ ಮಂತ್ರಿ ಅಸಭ್ಯತೆಯ ಹೊಸ ಶಕೆಯನ್ನೇ ಆರಂಭಿಸಿದ್ದಾರೆ. ತನಗೆ ಜನಪ್ರಿಯತೆಯನ್ನು ಅರ್ಬನ್ ನಕ್ಸಲರು ನೀಡಿದ್ದಾರೆಂಬ ಹುಂಬತನದ ವಾದವನ್ನೂ ಮಂಡಿಸುತ್ತಿದ್ದಾರೆ. ಹಿಂದೂ ಮಹಿಳೆಯರನ್ನು ಮುಟ್ಟಿದವರ ಕೈ ಕತ್ತರಿಸಬೇಕೆಂಬ ಹೊಸ ಮನುಸ್ಮತಿಯನ್ನು ಆಡಿದ್ದಾರೆ. ಹೀಗಾದರೆ ಕೇಂದ್ರ ಮಂತ್ರಿಗಳಾದ ಮುಖ್ತಾರ್ ಅಬ್ಬಾಸ್‌ನಖ್ವಿ, ಶಾನವಾಝ್ ಹುಸೈನ್ ಮುಂತಾದವರೆಲ್ಲ ಎಂದೋ ತಮ್ಮ ಕೈಗಳನ್ನು ಕಳೆದುಕೊಳ್ಳಬೇಕಾಗಿತ್ತು! ದೇಶದ ಇಳಿಜಾರಿಗೆ ಇಂತಹ ಅಮೂಲ್ಯ ರತ್ನಗಳು ಜ್ವಲಂತ ಸಾಕ್ಷಿಯಾಗಿವೆ.

ಇದರಲ್ಲಿ ಅಧಿಕಾರಿಗಳ ಪಾಲೂ ಸಾಕಷ್ಟಿದೆ. ಅವರು ಭ್ರಷ್ಟರು ಮಾತ್ರವಲ್ಲ, ರಾಜಕಾರಣಿಗಳ ದಾಳಕ್ಕೆ ತಕ್ಕ ತಾಳ ಹಾಕುವುದಕ್ಕೂ ಕುಣಿಯುವುದಕ್ಕೂ ಸದಾ ಸಿದ್ಧರಂತಿದ್ದಾರೆ. ಹಿಡಿಯುವ ಕೈಗೆ ಹರಿತವಾದ ಕತ್ತಿಯಿದ್ದರೆ ಮಾತ್ರ ಅದು ಏನಾದರೂ ಮಾಡೀತು. ಸರಕಾರಿ ಸೇವೆಯೆಂದರೆ ವಿವೇಚನೆಯಿಲ್ಲದೆ ರಾಜಕಾರಣಿಗಳು ಹೇಳಿದಂತೆ ನಡೆಯುವ ಅವಿವೇಕವೆಂದೇ ಅಧಿಕಾರಿಗಳು ಭಾವಿಸಿದ್ದಾರೆ. ಇದಕ್ಕೆ ಆಡಳಿತ ಸೇವೆಯೆಂಬ ಹಣೆಪಟ್ಟಿ ಬೇರೆ ಕೇಡು!

ಇವೆಲ್ಲ ಒಂದು ಯೋಜಿತ ಕಾರ್ಯಸೂಚಿಯನ್ವಯ ನಡೆಯುತ್ತಿವೆ ಯೆಂಬುದು ಸ್ಪಷ್ಟವಾಗುತ್ತಿದೆ. 2019ರ ಚುನಾವಣೆಗೆ ಮೊದಲು ಕೇಂದ್ರ ಸರಕಾರವು ತನ್ನ ಎದುರಾಳಿಗಳನ್ನು ಸದೆಬಡಿಯುವ, ಮಣಿಸುವ ನಿರ್ಧಾರವನ್ನು ಮಾಡಿರುವುದು ಸ್ಪಷ್ಟವಾಗಿದೆ. ಸಿಬಿಐ, ಆರ್‌ಬಿಐ ಮಾತ್ರವಲ್ಲ, ದೇಶದ ಬಹುತೇಕ ಎಲ್ಲ ರಾಷ್ಟ್ರೀಯ ಸಂಸ್ಥೆಗಳೂ ತಮ್ಮ ಸ್ವಾಯತ್ತೆಯನ್ನು, ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ. ಸಂವಿಧಾನವನ್ನು ಅದರ ಪದದಿಂದ ಕೆಳಗಿಳಿಸಿ ಅಲ್ಲಿ ಮತಾಂಧತೆಯನ್ನು ಪ್ರತಿಷ್ಠಾಪಿಸುವ ನಿಶ್ಚಿತ ಕಾರ್ಯಕ್ರಮಕ್ಕೆ 2014ರಲ್ಲೇ ಸರಕಾರ ಅಸ್ಥಿಭಾರ ಹಾಕಿತ್ತು. ಅದೀಗ ಮೈದಳೆದಿದೆ. ಆದರೂ ಇವೆಲ್ಲ ಒಂದು ಗೌರವಾರ್ಹ ಮಟ್ಟದಲ್ಲಿ ನಡೆಯಬೇಕಿತ್ತು.

ಆದರೆ ನಮ್ಮ ರಾಜಕಾರಣಿಗಳು ಆಡುವ ಭಾಷೆ, ನಡೆದುಕೊಳ್ಳುತ್ತಿರುವ ಅಸಭ್ಯತೆ, ಮಾಡುತ್ತಿರುವ ಅಪಾಯ ಇವು ಮುಂದೊಂದು ದಿನ ಅವರಿಗೇ ಎರವಾಗುತ್ತವೆಂಬ ಕನಿಷ್ಠ ಅರಿವೂ ಇಲ್ಲದೆ ಮುಂದುವರಿಯುತ್ತಿರುವುದನ್ನು ಗಮನಿಸಿದರೆ ಅವರ ಬಗ್ಗೆ ಅಲ್ಲ-ನಮ್ಮ ಮುಂದಿನ ತಲೆಮಾರಿನ ಭವಿಷ್ಯದ ಕುರಿತು ಅನುಕಂಪ ಹುಟ್ಟುತ್ತದೆ. ಪ್ರಾಯಃ 1977ರಂತೆ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಬಹುದೆಂದು ಮತ್ತು ಸಾಕ್ಷಿಯಾಗಬೇಕೆಂದು ನಿರೀಕ್ಷಿಸಲಾಗಿದೆ. ಅಧಿಕಾರಕ್ಕಾಗಿ ನಡೆಯುವ ಚುನಾವಣೆಯೆಂಬ ಮಹಾಯಜ್ಞದಲ್ಲಿ ಉರಿಯುವವರು ಜನರೇ ಹೊರತು ರಾಜಕಾರಣಿಗಳಲ್ಲ; ಅಧಿಕಾರಿಗಳೂ ಅಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇಂದಿನ ರಾಜಕಾರಣದಲ್ಲಿ ಜನರು ಬಲಿಪಶುಗಳಾಗುತ್ತಾರೆಯೇ ವಿನಾ ಇನ್ನೇನೂ ಆಗಲಾರರು. ಕಳೆದ ಮಹಾ ಚುನಾವಣೆಯ ಸಮೀಪದಲ್ಲಿ ಎಷ್ಟೊಂದು ರಾಜಕಾರಣಿಗಳು ಜ್ಞಾನೋದಯವಾದವರಂತೆ ಈಗಿನ ಆಡಳಿತ ಪಕ್ಷವನ್ನು ಸೇರಿದರೆಂಬುದರ ಲೆಕ್ಕ ಸಿಗುತ್ತಿಲ್ಲ. ದೇಶದ ಆಯ-ವ್ಯಯ ಪಟ್ಟಿಯಲ್ಲಿ, ರಫ್ತು-ಆಮದಿನ ಅಂಕಿ-ಅಂಶಗಳಲ್ಲಿ ರಾಜಕಾರಣಿಗಳ ವಲಸೆಯ ಪಟ್ಟಿ ಅವಶ್ಯಕವಾಗಿ ಸೇರಬೇಕು. ನೆಹರೂ ಕುಟುಂಬದ ವಂಶ ಪಾರಂಪರ್ಯ ಆಡಳಿತವನ್ನು ಟೀಕಿಸುವ ಮಂದಿಗೆ ಮೇನಕಾ ಗಾಂಧಿ, ವರುಣ್ ಗಾಂಧಿ ನೆನಪಾಗುವುದೇ ಇಲ್ಲ.

2014ರಲ್ಲಿ ಆಯ್ಕೆಯಾದಾಗ ಮಾಡಿದ ಘೋಷಣೆಗಳನ್ವಯ ನಮ್ಮ ಬಹುಪಾಲು ಪ್ರತಿಪಕ್ಷಗಳ ನಾಯಕರು ಜೈಲು ಸೇರಬೇಕಾಗಿತ್ತು. ಆದರೆ ಇವರೆಲ್ಲರೂ ಯಾವ ಎಗ್ಗಿಲ್ಲದೆ ಆಳುವವರೊಂದಿಗೆ ಜಗಳದ ಪ್ರಹಸನದಲ್ಲಿ ಭಾಗಿಯಾಗಿದ್ದಾರೆ. ಮಹಾಘಟಬಂಧನವೆಂಬ ಧ್ರುವೀಕರಣದಲ್ಲಿ ತಾವು, ತಮ್ಮ ಪಕ್ಷ ಎಲ್ಲಿ ಸುರಕ್ಷಿತವಾಗಿರಬಲ್ಲೆವೆಂಬ ಅಡಗುತಾಣಗಳ ಬಗ್ಗೆ ಗಮನವಿದೆಯೇ ಹೊರತು ಜಯಪ್ರಕಾಶ ನಾರಾಯಣರಂತೆ ಸಾಮಾಜಿಕ, ರಾಜಕೀಯ ಆಂದೋಲನದ ಸೃಷ್ಟಿಯ ಕಡೆಗೆ ಗಮನವಿಲ್ಲ. ನಿಶ್ಚಿತವಾದ ಧ್ಯೇಯ, ಧೋರಣೆಗಳಿರುವ ರಾಜಕಾರಣಿ ತಣ್ಣಗೆ ತನ್ನ ವ್ಯೆಹರಚನೆಯಲ್ಲಿ ತೊಡಗುತ್ತಾನೆಯೇ ಹೊರತು ಕ್ಷುಲ್ಲಕ ಆಕ್ಷೇಪ-ಆರೋಪಗಳಲ್ಲಲ್ಲ. ಅವು ಅಸ್ತ್ರ-ಪ್ರತಿಅಸ್ತ್ರಗಳಂತೆ ಮಾಧ್ಯಮಗಳಿಗೆ ಗ್ರಾಸವಾಗುತ್ತವೆಯೇ ಹೊರತು ಜನಮನ್ನಣೆಯನ್ನಾಗಲೀ ಜನಹಿತವನ್ನಾಗಲೀ ಸಾಧಿಸುವುದಿಲ್ಲ. ಆದ್ದರಿಂದ ಬಹಳಷ್ಟನ್ನು 2019ರಲ್ಲಿ ನಿರೀಕ್ಷಿಸುವಂತಿಲ್ಲ. ಒಂದು ವೇಳೆ ಈಗಿನ ಆಡಳಿತ ವ್ಯವಸ್ಥೆಯ ಗೊಣಸು ಮುರಿದರೂ ಹೊಸ ಶಕೆಯಲ್ಲಿ ಮತ್ತದೇ ವಿಕಾರಿಗಳು ವಿಜೃಂಭಿಸಿದರೆ ಅಚ್ಚರಿಯಿಲ್ಲ. ಇಷ್ಟಕ್ಕೂ ರಾಜಕಾರಣಿಗಳಿಗೂ ಜನ್ಮವೆಂದರೆ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಯ ವರೆಗೆ ಮಾತ್ರ; ಆನಂತರ ಅದು ಮರುಜನ್ಮ! ಮತ್ತೆ ಮತ್ತೆ ಸಾಯುವುದೂ ಹೊಸಹುಟ್ಟಿಗೆ ಸಂಕೇತವೆಂಬ ಪ್ರಾಜ್ಞರ ನುಡಿಯನ್ನು ಅತ್ಯಂತ ವ್ಯಂಗ್ಯದಲ್ಲಿ ಬಳಸುವವರು ರಾಜಕಾರಣಿಗಳು ಮಾತ್ರವೆಂದು ಕಾಣುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)