varthabharthi

ನಿಮ್ಮ ಅಂಕಣ

ಇಂದು ಜಿ. ಎಸ್. ಶಿವರುದ್ರಪ್ಪ ಅವರ ಜನ್ಮದಿನ

ಜಿಎಸ್‌ಎಸ್ ಕಾವ್ಯದ ಪ್ರಧಾನ ಆಶಯಗಳು

ವಾರ್ತಾ ಭಾರತಿ : 7 Feb, 2019
ಡಾ. ಎಚ್. ಎಸ್. ವೆಂಕಟೇಶಮೂರ್ತಿ

ಜಿಎಸ್‌ಎಸ್‌ರವರು ಜೀವನವನ್ನು ಮಾತ್ರವಲ್ಲ, ಪ್ರಕೃತಿಯನ್ನೂ ಈ ಸೃಷ್ಟಿಶೀಲತೆಯ ಆಡಂಬೊಲವಾಗಿಯೇ ಪ್ರೀತಿಸುತ್ತಾರೆ. ಕುವೆಂಪು, ಬೇಂದ್ರೆ ಮೊದಲಾದ ಹಿರೀಕರು ಪ್ರಕೃತಿಯನ್ನು ನೋಡುವ ಕ್ರಮಕ್ಕೂ ಜಿಎಸ್‌ಎಸ್ ಪ್ರಕೃತಿಯನ್ನು ನೋಡುವ ಕ್ರಮಕ್ಕೂ ವ್ಯತ್ಯಾಸವಿದೆ. ಪ್ರಕೃತಿ ಜಿಎಸ್‌ಎಸ್‌ರವರಲ್ಲಿ ಆಧ್ಯಾತ್ಮಿಕ ತುಡಿತವನ್ನೂ, ಭಕ್ತಿಭಾವವನ್ನೂ, ಚಿಂತನಶೀಲತೆಯನ್ನೂ ಕೆರಳಿಸುವುದಿಲ್ಲ. ಪ್ರಕೃತಿಸೌಂದರ್ಯ ಸೃಷ್ಟಿಶೀಲತೆಯ ಕಾರಣದಿಂದ ಅವರಿಗೆ ಪ್ರಿಯವಾಗುತ್ತದೆಯೇ ಹೊರತಾಗಿ ಆಧ್ಯಾತ್ಮಿಕಭಾವಕ್ಕೆ ಅವರನ್ನು ಎಳೆದೊಯ್ಯುವುದಿಲ್ಲ.


ಜಿಎಸ್‌ಎಸ್ ಕಾವ್ಯರಚನೆ ಪ್ರಾರಂಭಿಸಿದ ಸಂದರ್ಭ ಒಂದು ಸಂಧಿಕಾಲ. 1951ರಲ್ಲಿ ಅವರ ‘ಸಾಮಗಾನ’ ಬಂದದ್ದು. ದೇಶದ ಹಿತದಲ್ಲಿ ಹುರಿಗಟ್ಟಿಕೊಂಡು, ಮಿಂಚಿನ ಚಾಟಿ ಆಡಿಸಿದ್ದ ಸಮಾಜ, ಎಳೆಬಿಡಿಸಿಕೊಂಡು ಸ್ವಹಿತದ ಕಡೆ ಹೊರಳಿಕೊಳ್ಳುತ್ತಿದ್ದ ಸಂಧಿಸಮಯ. ಇಡೀ ಇಂಡಿಯಾ ಒಂದು ಎನ್ನುವಂತಿದ್ದದ್ದು, ಸ್ವಾತಂತ್ರ ಬಂದಮೇಲೆ ಎಲ್ಲರೂ ಬೇರೆ ಬೇರೆ ಅನ್ನುವ ಹಾಗೆ ಆಯಿತು. ಆದ್ದರಿಂದ ಇಂಡಿಯಾದ ಉತ್ಸಾಹದ ಭೂಮಿಕೆಯ ಮನಸ್ಸು ವಿಷಾದದ ಭೂಮಿಕೆಗೆ ಅನಿವಾರ್ಯವಾಗಿ ಜರುಗತೊಡಗಿತು.

ಸಾಹಿತ್ಯದಲ್ಲಿ ಈ ಸಂವೇದನೆಯ ಗುರುತು ಸ್ಪಷ್ಟವಾಗಿ ಕಾಣಿಸತೊಡಗಿತು. ನವೋದಯದ ಉತ್ಸಾಹಪರ್ವ ಮುಗಿದು ನವ್ಯದ ವಿಷಾದಪರ್ವ, ಅಶಾಂತಿಪರ್ವ ಪ್ರಾರಂಭವಾದ ಸಮಯ. ಅದೇ ಹೊತ್ತಿನಲ್ಲಿ ಭೌತಿಕವಾಗಿ ಹಡಗುಹತ್ತಿದ ವಸಾಹತುಶಾಹಿ ನಿರ್ದೇಹಿಯಾಗಿ ಇಂಡಿಯಾವನ್ನು ಹಿಡಿದು ಕಾಡತೊಡಗಿದ ಸಂಧಿ ಸಮಯ ಅದು. ಒಂದೇ ಒಂದು ಉದಾಹರಣೆಯಿಂದ ಇದನ್ನು ಸೂಚಿಸಿ ಮುಂದೆ ಹೋಗುತ್ತೇನೆ. ಸ್ವಾತಂತ್ರಪೂರ್ವದಲ್ಲಿ ರಾಷ್ಟ್ರೀಯ ಶಾಲೆಗಳನ್ನು ಪ್ರಾರಂಭಿಸುವ ವಿದ್ಯಮಾನ ಒಂದು ಚಳವಳಿಯಂತೆ ಭಾರತದ ಮೂಲೆ ಮೂಲೆಗಳಲ್ಲಿ ನಡೆಯಿತು. ಸ್ವಾತಂತ್ರೋತ್ತರ ಭಾರತದಲ್ಲಿ ಈ ರಾಷ್ಟ್ರೀಯ ಶಾಲೆಗಳು ಅರಾಷ್ಟ್ರೀಯ ಶಾಲೆಗಳಾಗಿ ಪರಿವರ್ತಿತವಾಗಿರುವುದೇ ಮುಖ್ಯ ವಿದ್ಯಮಾನ. ಹಳ್ಳಿಹಳ್ಳಿಗಳಲ್ಲಿ ಈಗ convent ಚಳವಳಿ.

ಜಿಎಸ್‌ಎಸ್ ಕಾವ್ಯಕ್ರಿಯೆಗೆ ತೊಡಗಿದ್ದು ಇಂತಹ ಸಂದರ್ಭದಲ್ಲಿ. ಆದ್ದರಿಂದಲೇ ಅಡಿಗರಂತೆ, ವಿಷಾದ ಮತ್ತು ವಿಡಂಬನೆ ಅವರ ಕಾವ್ಯದಲ್ಲೂ ಪ್ರಧಾನ ಅಂಶವಾಗಿದೆ. ಮುಖ್ಯ ವ್ಯತ್ಯಾಸವೆಂದರೆ ಇಂತಹ ವಿಷಮಕಾಲದಲ್ಲಿಯೂ ಜಿಎಸ್‌ಎಸ್ ತಮ್ಮ ಕತ್ತಲ ಯಾನವನ್ನು, ನವೋದಯದ ಹಿರಿಯರಿಂದ ಪಡೆದಿದ್ದ ಆದರ್ಶ ಮತ್ತು ಕನಸುಗಾರಿಕೆಯ ದೊಂದಿ ಹಿಡಿದು ಮುಂದುವರಿಸಿದರು. ಆದರೆ ಸ್ವಾತಂತ್ರೋತ್ತರದ ಎಲ್ಲ ಕವಿಗಳಂತೆ ಜಿಎಸ್‌ಎಸ್‌ರವರದ್ದೂ ವ್ಯಷ್ಟಿಯ ದನಿ, ವೈಯಕ್ತಿಕ ವ್ಯಕ್ತಿಯ ದನಿ. ನವೋದಯದಂತೆ ಸಮಷ್ಟಿಯ ದನಿಯಾಗುವ ಭಾಗ್ಯವನ್ನು ಕಳೆದುಕೊಂಡವರು ನಾವು. ಇದು ಪ್ರವಾಹದ ವಿರುದ್ಧ ಈಜುವ ಸಾಹಸ. ತೀವ್ರವಾದ ವಾಸ್ತವಿಕ ಅರಿವು ಮತ್ತು ಕನಸುಕಾಣುವ ಹುಚ್ಚು ಎರಡೂ ಏಕತ್ರ ಮುಖಾಮುಖಿಯಾಗುವ ವಿಶಿಷ್ಟ ಮನಃಸ್ಥಿತಿಯಲ್ಲಿ ಕಾವ್ಯರಚಿಸುತ್ತ ಜಿಎಸ್‌ಎಸ್ ನವೋದಯದಿಂದ ಮಾತ್ರವಲ್ಲ, ನವ್ಯದಿಂದಲೂ ತಮ್ಮನ್ನು ಪ್ರತ್ಯೇಕಿಸಿಕೊಂಡರು. ಅವರು ನವೋದಯದಿಂದಲೂ ಭಿನ್ನರಾಗಿದ್ದರು. ಹಾಗೇ ನವ್ಯದಿಂದಲೂ ಭಿನ್ನರಾಗಿದ್ದು ಒಂದು ವೈಯಕ್ತಿಕದನಿಯನ್ನು ಎತ್ತಲಿಕ್ಕೆ ಜಿಎಸ್‌ಎಸ್‌ರವರಾಗಲೀ ಕಣವಿಯವರಾಗಲೀ ಪ್ರಯತ್ನಿಸಿದರು. ಇದು ಇಡೀ ಅವರ ಕಾವ್ಯದ ಚರಿತ್ರೆ ಮತ್ತು ಸ್ವರೂಪವನ್ನು ಹೇಳುತ್ತದೆ.

ಜಿಎಸ್‌ಎಸ್ ಅವರದ್ದು ಪ್ರಧಾನವಾಗಿ ಇಹನಿಷ್ಠ ಮನೋಧರ್ಮ. ನೆಲವೇ ನನ್ನ ವಾಹನ ಎನ್ನುವ ಕಾವ್ಯ ಅವರದ್ದು. ಆಕಾಶಯಾನಕ್ಕೆ ಅವರ ಕಾವ್ಯ ವಿಮುಖವಾಗಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ದೊಡ್ಡ ದೊಡ್ಡ ಮಾತನಾಡುತ್ತ ದಿನದಿನದ ಸರಳ ಸಾಧಾರಣ ಬದುಕಿಗೆ ಅವಮಾನ ಮಾಡುವವರನ್ನು ಕಂಡರೆ ಅವರಿಗೆ ಆಗುವುದಿಲ್ಲ. ಈ ನೆಲೆಯಲ್ಲಿ ನಿಜಕ್ಕೂ ಅವರು ಸಾಧಾರಣತೆಯ ಆರಾಧಕರು. ಪ್ರಜಾಪ್ರಭುತ್ವಕ್ಕೆ ಕಡೆದುಮಾಡಿಸಿದ ಮನಃಸ್ಥಿತಿ ಇದು. ವ್ಯಕ್ತಿ ಒಬ್ಬನೇ ಆದಾಗ ಸಿನಕನಾಗಬೇಕು ಅಥವಾ ವಿನಯಶಾಲಿ ಆಗಬೇಕು. ಜಿಎಸ್‌ಎಸ್ ಕಾವ್ಯವ್ಯಕ್ತಿತ್ವ ಹೀಗೆ ವಿನಯದಲ್ಲಿ ರೂಪಿಸಿಕೊಂಡ ಕಾವ್ಯ ವ್ಯಕ್ತಿತ್ವ.

ಹೇಗೋ ನನ್ನ ಪಾಡಿಗೆ ನಾನು ಬದುಕುತ್ತೇನೆ
ಇದಷ್ಟು ನೆಲವ ಉತ್ತಿಬಿತ್ತಿ ನೀರೆರೆದು
ಮಲಗಿರುವ ಬೀಜಗಳ ಕಣ್ಣು ತೆರೆಸುತ್ತೇನೆ.

ನಾಳೆ ಈ ಸಸಿಗಳೆಲ್ಲ ವಟವೃಕ್ಷಗಳಾಗಿ
ಸಾವಿರ ಜನಕ್ಕೆ ನೆರಳಾಗಲೆಂಬ
ಮಹದಾಸೆ ಇರದಿದ್ದರೂ
ಒಂದೆರಡಾದರೂ ಬೀಜವಾಗುವ
ಹಣ್ಣು ಬಿಟ್ಟಾವೆಂದು ಕಾಯುತ್ತೇನೆ.

ಹೀಗೆ ಉತ್ತು ಬಿತ್ತಿ ಮಲಗಿರುವ ಬೀಜದ ಕಣ್ಣು ತೆರೆಸುವ ಕಾರ್ಯವನ್ನು ಜಿಎಸ್‌ಎಸ್ ತಮ್ಮ ಕಾವ್ಯದಲ್ಲೂ ಬದುಕಿನಲ್ಲೂ ಮಾಡಿಕೊಂಡು ಬಂದಿದ್ದಾರೆ. ನಾಶದ ಪ್ರಜ್ಞೆ ಅವರನ್ನು ತೀವ್ರವಾಗಿ ಕಾಡಿದೆ ನಿಜ. ಆದರೆ ನಾಶ ಅನಿವಾರ್ಯ ಎಂಬ ದಾರುಣ ಅರಿವಿನಲ್ಲಿ ಸೃಷ್ಟಿಶೀಲವಾಗಿರುವ ಮನಸ್ಸು ಅವರದ್ದು. ಈ ನಾಶವನ್ನು ಎದುರಿಸುವ ಏಕೈಕ ಉಪಾಯ ಸೃಷ್ಟಿಕ್ರಿಯೆ ಎಂದವರು ನಂಬಿದ್ದಾರೆ. ಈ ದೃಷ್ಟಿಯಿಂದ ‘ಅಸ್ತಮಾನ’ ಕವನ ತುಂಬಾ ಅರ್ಥಪೂರ್ಣವಾದುದು. ಅಸಾಮಾನ್ಯ ಪುರುಷನಾದ ಕೃಷ್ಣನ ಸಾವನ್ನು ಆ ಕವಿತೆ ಹೇಳುತ್ತಿದೆ. ಆ ಯುಗಪುರುಷನ ದಾರುಣ ಸಾವಿನ ಪರಿಣಾಮ ಭೂಮಿ-ವ್ಯೋಮಗಳನ್ನು ವ್ಯಾಪಿಸುವಂಥದ್ದು. ಅಂತಹ ವಿಷಾದದ ಭೂಮಿಕೆಯಲ್ಲೂ ಒಂದು ಆಸೆಯ ಬೀಜವನ್ನು ಬಿತ್ತುವುದನ್ನು ಅವರ ಕವಿತೆ ಮರೆಯುವುದಿಲ್ಲ. ಜಿಎಸ್‌ಎಸ್‌ರವರು ಜೀವನವನ್ನು ಮಾತ್ರವಲ್ಲ, ಪ್ರಕೃತಿಯನ್ನೂ ಈ ಸೃಷ್ಟಿಶೀಲತೆಯ ಆಡಂಬೊಲವಾಗಿಯೇ ಪ್ರೀತಿಸುತ್ತಾರೆ.

ಕುವೆಂಪು, ಬೇಂದ್ರೆ ಮೊದಲಾದ ಹಿರೀಕರು ಪ್ರಕೃತಿಯನ್ನು ನೋಡುವ ಕ್ರಮಕ್ಕೂ ಜಿಎಸ್‌ಎಸ್ ಪ್ರಕೃತಿಯನ್ನು ನೋಡುವ ಕ್ರಮಕ್ಕೂ ವ್ಯತ್ಯಾಸವಿದೆ. ಪ್ರಕೃತಿ ಜಿಎಸ್‌ಎಸ್‌ರವರಲ್ಲಿ ಆಧ್ಯಾತ್ಮಿಕ ತುಡಿತವನ್ನೂ, ಭಕ್ತಿಭಾವವನ್ನೂ, ಚಿಂತನಶೀಲತೆಯನ್ನೂ ಕೆರಳಿಸುವುದಿಲ್ಲ. ಪ್ರಕೃತಿಸೌಂದರ್ಯ ಸೃಷ್ಟಿಶೀಲತೆಯ ಕಾರಣದಿಂದ ಅವರಿಗೆ ಪ್ರಿಯವಾಗುತ್ತದೆಯೇ ಹೊರತಾಗಿ ಆಧ್ಯಾತ್ಮಿಕಭಾವಕ್ಕೆ ಅವರನ್ನು ಎಳೆದೊಯ್ಯುವುದಿಲ್ಲ. ‘ಬಿತ್ತು’ ಮತ್ತು ‘ಬಿತ್ತುವಿಕೆ’ ಜಿಎಸ್‌ಎಸ್ ಕಾವ್ಯದ ಪ್ರಧಾನ ಕಾಳಜಿಗಳಲ್ಲೊಂದು. ಮರುಭೂಮಿಯನ್ನು ಫಲವತ್ತಾಗಿಸುವ ಏಕಮೇವ ಉಪಾಯ ಅದು ಎಂದು ಅವರು ನಂಬಿದ್ದಾರೆ. ಪ್ರಕೃತಿ ಮತ್ತು ಮನುಷ್ಯನ ಅಂತರಂಗ ಈ ಎರಡೂ ಭೂಮಿಕೆಯಲ್ಲಿ ಬಂಜರನ್ನು ಹಸಿರುಗೊಳಿಸುವ ಯತ್ನ ನಡೆಯಬೇಕಾಗಿದೆ. ಈ ಸೃಷ್ಟಿಶೀಲತೆಗೆ ಪ್ರೀತಿ ಒಂದೇ ಮಾರ್ಗ ಎಂದು ನಂಬಿದ್ದಾರೆ.

ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು

ಮರುಭೂಮಿಯಾಗದ ಹಾಗೆ ತಡೆಗಟ್ಟುವುದು ಹೇಗೆ?

ಜಿಎಸ್‌ಎಸ್‌ರವರ ಈ ಪ್ರೀತಿಯ ಕಲ್ಪನೆ ವಿಶ್ವವಿಶಾಲ, ಮನುಷ್ಯ ಮನುಷ್ಯರ ನಡುವಿನ ಗೋಡೆಗಳೆಲ್ಲ ಬಿದ್ದು ಅವರು ಒಂದಾಗುವ ದಿನವನ್ನು ಅವರ ಕಾವ್ಯ ಹಂಬಲಿಸುತ್ತದೆ. ಇದು ವ್ಯಷ್ಟಿ ಕಾಣುವ ಸಮಷ್ಟಿಯ ಕನಸು. ಆ ಕನಸು ಬಹಳ ಆರ್ತವಾಗಿದೆ, ದೀನವಾಗಿದೆ.
ಆದರೂ ಉರಿಯದ ಹಠವನ್ನು ಉರಿಯುವ ಹಠವನ್ನಾಗಿಸುವ ಪ್ರಯತ್ನವನ್ನು ಬಿಟ್ಟುಕೊಟ್ಟಿಲ್ಲ. ಆಧುನಿಕ ಸಮಾಜದ ಅಬ್ಬರದ ನಡುವೆ, ಒಂದು ಹೃದಯವಿದ್ರಾವಕವಾದ ಕ್ಷೀಣದನಿ, ಸಾಮಾನ್ಯವಾಗಿ ಎಲ್ಲ ಕವಿಗಳಿಗೆ ಕೇಳಿಸುವಂತೆ ಜಿಎಸ್‌ಎಸ್ ರವರಿಗೂ ಕೇಳಿಸುತ್ತಲೇ ಇದೆ. ಅದು ಪುತಿನರಿಗೆ ಕೇಳಿಸುವ ಕೊಳಲದನಿಯಲ್ಲ, ಬೇಂದ್ರೆಯವರಿಗೆ ಜೋಗಿ ಪದ್ಯದಲ್ಲಿ ಕೇಳಿಸುವ ಕೋಗಿಲೆಯ ಕೂಗೂ ಅಲ್ಲ. ಅಡಿಗರಿಗೆ ಕೇಳುವ ಮೋಹನಮುರಳಿಯೂ ಅಲ್ಲ. ಜಿಎಸ್‌ಎಸ್‌ರವರನ್ನು ಕಾಡುತ್ತಿರುವ ಧ್ವನಿ ಯಾವುದೆಂದರೆ ‘ ಎಲ್ಲೋ ಮಗು ಅಳುತ್ತಿರುವ ಹೃದಯ ಹಿಂಡುವ ನೀಳದನಿ.’

ಮಗು ಅಳುತಾ ಇದೆ ಎಲ್ಲೋ
ಒಂದೇ ಸಮನೆ
ಶತಶತಮಾನದ ಬೆವರಿನ ತೆನೆಗಳ
ನೆತ್ತಿದೆ ಹೊಲ-ಗದ್ದೆಗಳಲ್ಲಿ
ಕವಿ-ವಿಜ್ಞಾನಿಯ-ಕ್ರಾಂತಿಕಾರಿಗಳ
ಸಾಧನೆ-ಅನ್ವೇಷಣೆಗಳ ಹಾದಿಯಲ್ಲಿ
ಬಿರುಗಣ್ಣುರಿಯಲಿ ಕಮರುವ ಕನಸಿನ
 ಚಿತೆಯ ಜ್ವಾಲೆಗಳ ಧೂಮದಲಿ
ಚರಿತ್ರೆಯುದ್ದಕ್ಕು ಕೆನೆವ ಕುದುರೆಗಳ
ರಥ ಚಕ್ರದ ಕೆಂಧೂಳಿಯಲಿ
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ.

ಅನಾಥವಾದ ಮಾನವತೆಯ ಈ ಆರ್ತದನಿ ಜಿಎಸ್‌ಎಸ್ ಕಾವ್ಯದುದ್ದಕ್ಕೂ ಇರುವ ಅಖಂಡ ಶೃತಿ. ಆಳದಲ್ಲಿ ಅವರಿಗೆ ಮಗುವಿನ ಅಳುವೇ ಪ್ರಧಾನವಾಗಿ ಕೇಳಿಸುತ್ತಾ ಇದೆ. ಇದು ಮಾನವತೆಯ ದೀನ ಅಳು. ಮನುಷ್ಯ ಹೀಗಾದನಲ್ಲ ಅನ್ನುವ ನೋವು ದುಃಖ, ವಿಷಾದ, ಅದನ್ನು ಸರಿಪಡಿಸಲಾಗದ ಕೈಮೀರಿದ ಸ್ಥಿತಿ. ಈ ನೆಲೆ ಯಲ್ಲಿನ ಜಿಎಸ್‌ಎಸ್ ಕಾವ್ಯ ಪ್ರಮುಖವಾದುದು.


ಕೃಪೆ: ಹಣತೆ-ಜಿಎಸ್‌ಎಸ್ ಅಭಿನಂದನ ಗ್ರಂಥ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)