varthabharthi

ನಿಮ್ಮ ಅಂಕಣ

ಕುಡಿತದ ಅಪರಾಧಗಳು

ವಾರ್ತಾ ಭಾರತಿ : 7 Feb, 2019
-ರಿಯಾಝ್ ಅಹ್ಮದ್, ರೋಣ

ಮಾನ್ಯರೇ,

ಇತ್ತೀಚೆಗೆ ತುಮಕೂರಿನಲ್ಲಿ ಪಿಎಸ್ಸೈ ಒಬ್ಬರ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ನಿಜಕ್ಕೂ ಖಂಡನೀಯ. ಸಾರ್ವಜನಿಕರಿಗೆ ರಕ್ಷಣೆ ಒದಗಿಸುವ ಪೊಲೀಸರೇ ಇಂದು ಕ್ರಿಮಿನಲ್ಸ್‌ಗಳಿಂದ ದಾಳಿಗೆ ಒಳಗಾಗುತ್ತಿರುವಾಗ ಜನಸಾಮಾನ್ಯರನ್ನು ರಕ್ಷಿಸುವವರು ಯಾರು?. ಈ ಹಿಂದೆಯೂ ಅನೇಕ ಬಾರಿ ಪೊಲೀಸರು ಇಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟಗೊಂಡಂತೆ ಪಿಎಸ್ಸೈ ಅವರ ಮೇಲೆ ದಾಳಿ ನಡೆಸಿದವರು ಕುಡಿದು ವಾಹನವನ್ನು ಚಲಾಯಿಸುತ್ತಿದ್ದರು. ಶ್ರೀಮಂತ ವರ್ಗಕ್ಕೆ ಸೇರಿದ ಇವರಿಗೆ ಕಾನೂನಿನ ಯಾವ ಭಯವೂ ಇರುವುದಿಲ್ಲ, ಪೊಲೀಸ್ ಕಸ್ಟಡಿ ಎಂದರೆ ಒಂದು ರೀತಿಯ ತವರು ಮನೆ ಇದ್ದಂತೆ ಇಂತಹವರಿಗೆ. ಪ್ರಬಲ ರಾಜಕಾರಣಿಗಳ ಶಿಫಾರಸು, ಹಣ... ಹೀಗೆ ಎಲ್ಲದರ ನೆರವನ್ನು ಪಡೆದು ಜಾಮೀನಿನಲ್ಲಿ ಮರುಕ್ಷಣವೇ ಇವರು ಜೈಲಿನಿಂದ ಬಿಡುಗಡೆಗೊಳ್ಳುತ್ತಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಆರೋಪಿಗಳು ಪಾನಮತ್ತರಾಗಿದ್ದರು ಎಂಬುದು. ಸಮಾಜದ ಹಿತ ಕಾಯುವ ಅನೇಕರು ಕುಡಿತದ ದುಷ್ಪರಿಣಾಮವನ್ನು ಸರಕಾರಕ್ಕೆ ಆಗಾಗ ಎಚ್ಚರಿಸುತ್ತಿದ್ದರೂ ಆಳುವ ವರ್ಗ ಈ ಕುರಿತು ಜಾಣ ಮೌನಕ್ಕೆ ಜಾರಿರುವುದು ದುರಂತವೇ ಸರಿ.

ಒಂದೆಡೆ ಕುಡಿತದ ದುಶ್ಚಟದಿಂದಾಗಿ ನಿತ್ಯ ಇಲ್ಲಿ ಅಪರಾಧ ಕೃತ್ಯಗಳಲ್ಲಿ ವಿಪರೀತ ಹೆಚ್ಚಳವಾಗುತ್ತಿದ್ದರೆ, ಮಗದೊಂದೆಡೆ ಮದ್ಯದ ದಾಸರಾಗಿ ಕುಡುಕರು ತಮ್ಮ ಕುಟುಂಬ, ಆರೋಗ್ಯ ಹಣ ಹಾಗೂ ನೆಮ್ಮದಿ ಹೀಗೆ ಎಲ್ಲವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ನಾಡಿನ ಅದೆಷ್ಟೊ ಕುಗ್ರಾಮಗಳಲ್ಲಿ ಕುಡಿಯಲು ಶುದ್ಧ ನೀರಿಲ್ಲದೆ ಜನತೆ ನಿತ್ಯ ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ. ಆದರೆ ನೀರಿಲ್ಲದ ಅಂತಹ ಗ್ರಾಮಗಳಲ್ಲಿಯೂ ಎಗ್ಗಿಲ್ಲದೆ ಮದ್ಯ ದೊರಕುತ್ತಿದೆ ಎಂದರೇನರ್ಥ. ಜನರಿಗೆ ಶುದ್ಧ ನೀರನ್ನು ಕುಡಿಸದ ಸರಕಾರ ಯಾವುದೇ ಅಡೆತಡೆಯಿಲ್ಲದೆ ಶರಾಬನ್ನು ಕುಡಿಸುತ್ತಿದೆ. ಈ ರೋಗಕ್ಕೆ ಅಂಟಿಕೊಂಡಿರುವವರ ಅದೆಷ್ಟೋ ಅಮಾಯಕ ಹೆಂಡತಿ ಮಕ್ಕಳನ್ನು ಕಣ್ಣೀರಿನಲ್ಲಿ ಮುಳುಗಿಸಿ ಅವರ ಬದುಕನ್ನು ನರಕವನ್ನಾಗಿಸಿ ಮದ್ಯದಿಂದ ಸರಕಾರವು ಕ್ಷಣಿಕ ಲಾಭವನ್ನು ಪಡೆದುಕೊಂಡರೂ ಮರ್ದಿತರ ಆಕ್ರಂದನ ಒಂದಲ್ಲ ಒಂದು ದಿನ ಇವರ ಪಾಲಿಗೆ ಶಾಪವಾಗಿ ಪರಿಣಮಿಸಲಿದೆ. ಕುಡುಕರನ್ನು ಕಟ್ಟಿಕೊಂಡು ಕೆಡುಕು ಮುಕ್ತ ಸಮಾಜ ನಿರ್ಮಿಸಲು ಹೊರಟಿರುವ ಸರಕಾರದ ವಿರೋಧಾಭಾಸದ ಧೋರಣೆಯನ್ನು ರಾಜ್ಯದ ಜನತೆ ಗಟ್ಟಿಯಾಗಿ ವಿರೋಧಿಸಬೇಕಾಗಿದೆ. ಸರಕಾರ ಒಂದೊಡೆ ಮದ್ಯವನ್ನು ಮುಕ್ತವನ್ನಾಗಿಸಿ ಜನರನ್ನು ಅನಾರೋಗ್ಯದ ಬಾಗಿಲಿಗೆ ತಳ್ಳುತ್ತ ಮಗದೊಂದೆಡೆ ಆರೋಗ್ಯ ಕ್ಷೇತ್ರಕ್ಕೆ ಕೋಟಿಗಟ್ಟಲೆ ಬಜೆಟ್‌ನ್ನು ನಿಗದಿಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಇನ್ನಾದರೂ ಸರಕಾರ ತನ್ನ ಬೂಟಾಟಿಕೆಯನ್ನು ನಿಲ್ಲಿಸಿ ರಾಜ್ಯವನ್ನು ಮದ್ಯ ಮುಕ್ತವನ್ನಾಗಿಸಲು ಕ್ರಮವನ್ನು ಕೈಗೊಳ್ಳಲಿ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)