varthabharthi

ನಿಮ್ಮ ಅಂಕಣ

​ಅಪಾಯಕಾರಿ ಹಂಪ್‌ಗಳು

ವಾರ್ತಾ ಭಾರತಿ : 8 Feb, 2019
ಮಹಾಂತೇಶ ಎನ್., ನೂಲಾನವರ, ಸಿಂದಗಿ

ಮಾನ್ಯರೇ,

ರಸ್ತೆಯಲ್ಲಿ ಹಂಪ್‌ಗಳನ್ನು ಅಳವಡಿಸುವ ಉದ್ದೇಶವೇನೆಂದರೆ ಯಾವುದೇ ರೀತಿಯ ಅಪಘಾತಗಳನ್ನು ತಪ್ಪಿಸುವುದಾಗಿದೆ ವಿಪರ್ಯಾಸವೆಂದರೆ ಇತ್ತೀಚೆಗೆ ಅವೈಜ್ಞಾನಿಕ ರಸ್ತೆ ಹಂಪ್‌ಗಳ ಹಾವಳಿಯಿಂದಾಗಿಯೇ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲೂ ರಸ್ತೆಯುದ್ದಕ್ಕೂ ಸಿಕ್ಕಾಪಟ್ಟೆ ಹಂಪ್‌ಗಳನ್ನು ಹಾಕಲಾಗಿದೆ. ಉದಾಹರಣೆಗೆ ಸಿಂದಗಿಯಿಂದ ರಾಯಚೂರಿಗೆ ಪ್ರಯಾಣ ಬೆಳೆಸುತ್ತಿರುವ ಸಂದರ್ಭದಲ್ಲಿ ಗಮನಿಸಿದ ಹಾಗೆ ಈ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಹಂಪ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ವಯಸ್ಕರಿಗೆ ತೊಂದರೆ, ಸಮಯದ ವ್ಯಯ, ವಾಹನದ ಇಂಧನ ಖರ್ಚು ಹೆಚ್ಚಾಗುತ್ತಿದೆ. ಅಲ್ಲದೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಹಂಪ್‌ನ ನೆಪದಿಂದ ಚಾಲಕ ಒಮ್ಮೆಲೇ ಬ್ರೇಕ್ ತುಳಿದಾಗ ಬೆನ್ನು ಮೂಳೆಗೆ ತೊಂದರೆ ಉಂಟಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಅಪಾಯಕಾರಿ ರಸ್ತೆ ಹಂಪ್‌ಗಳ ಬಗ್ಗೆ ಸಚಿವರು ಹೇಳಿಕೆ ನೀಡಿದಾಗ ಒಂದಿಷ್ಟು ಹಂಪ್‌ಗಳು ತೆರವಾಗುತ್ತವೆ. ಕೆಲ ದಿನಗಳ ಬಳಿಕ ಮತ್ತೊಂದಿಷ್ಟು ಹಂಪ್‌ಗಳು ಹುಟ್ಟಿಕೊಳ್ಳುತ್ತವೆ. ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಗಳ ಪ್ರಕಾರ ರಸ್ತೆ ಹಂಪ್‌ಗಳು 4 ಇಂಚು ಎತ್ತರ ಮತ್ತು 11.5 ಅಡಿ ಅಗಲದವರೆಗೂ ರಸ್ತೆಯ ಎರಡೂ ಅಂಚಿನವರೆಗೂ ವ್ಯಾಪಿಸಿರಬೇಕು ಎಂದು ಹೇಳುತ್ತದೆ. ಹಂಪ್‌ಗಳಿಗೆ ಬಿಳಿ ಬಣ್ಣ ಹಚ್ಚಿ ಎಚ್ಚರಿಕೆ ಫಲಕಗಳನ್ನು ಹಾಕಬೇಕು ಎಂದು ನಿಯಮವಿದೆ. ಆದರೆ ಬಹುತೇಕ ರಸ್ತೆ ಹಂಪ್‌ಗಳು ನಿಯಮಗಳಿಗೆ ಬದ್ಧವಾಗಿಲ್ಲ. ಹಾಗಾಗಿ ಹಂಪ್‌ಗಳಿಂದಾಗಿಯೇ ಅಪಘಾತಗಳು ನಡೆದು ಅಮಾಯಕರು ಬಲಿಯಾಗುತ್ತಿದ್ದಾರೆ. ಕೆಲವರು ಶಾಶ್ವತವಾಗಿ ಹಾಸಿಗೆ ಹಿಡಿದಿದ್ದಾರೆ.
ಇನ್ನಾದರೂ ಸರಕಾರ, ಸಂಬಂಧಿಸಿದ ಅಧಿಕಾರಿಗಳು ಇಂತಹ ಅವೈಜ್ಞಾನಿಕ ರಸ್ತೆ ಹಂಪ್‌ಗಳನ್ನು ತೆರವುಗೊಳಿಸಲು ಕೂಡಲೇ ಆದೇಶ ಹೊರಡಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)