varthabharthi

ನಿಮ್ಮ ಅಂಕಣ

ಪ್ರಜಾತಂತ್ರದ ಶವಯಾತ್ರೆಯಲ್ಲಿ ಊಳಿಗಮಾನ್ಯ ಔದಾರ್ಯ

ವಾರ್ತಾ ಭಾರತಿ : 9 Feb, 2019
ನಾ. ದಿವಾಕರ

ದೇಶಭಕ್ತಿ ರಾಜಕೀಯ ಮಾರುಕಟ್ಟೆಯಲ್ಲಿ ಸರಕಿನಂತಾಗಿದ್ದರೆ ದೇಶದ್ರೋಹ ಎನ್ನುವುದು ಮಾರುಕಟ್ಟೆ ಪೈಪೋಟಿಯ ಅಸ್ತ್ರವಾಗಿ ಪರಿಣಮಿಸಿದೆ. ಇದಕ್ಕೆ ಪೂರಕವಾಗಿ ದೇಶದಲ್ಲಿ ಸಾಂಸ್ಕೃತಿಕ ರಾಜಕಾರಣವನ್ನು ಪುನರ್ ಸ್ಥಾಪಿಸಲು ಕಟಿಬದ್ಧರಾಗಿರುವ ದೊಡ್ಡ ಪಡೆಯನ್ನೇ ಸೃಷ್ಟಿಸಲಾಗಿದೆ. ಪರಿಣಾಮ, ತಿನ್ನುವ ಅನ್ನ, ಉಡುವ ವಸ್ತ್ರ, ಬಳಸುವ ವಸ್ತು ಇವೆಲ್ಲವೂ ಪೌರತ್ವವನ್ನು ನಿರ್ಧರಿಸುವ ಮಾನದಂಡಗಳಾಗಿ ಪರಿಣಮಿಸಿವೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಿರ್ದಿಷ್ಟ ಆಹಾರ ಪದ್ಧತಿ, ನಿರ್ದಿಷ್ಟ ಉಡುಪು ಮತ್ತು ನಿರ್ದಿಷ್ಟ ಕಸುಬು ಸಾವಿನ ಪರವಾನಿಗೆಗಳಾಗಿ ಪರಿಣಮಿಸಿವೆ.


ಕವಲುಹಾದಿಯಲ್ಲಿರುವ ಭಾರತದ ಪ್ರಜಾತಂತ್ರ ವ್ಯವಸ್ಥೆ ಹಠಾತ್ತನೆ ತನ್ನ ಅಸ್ತಿತ್ವಕ್ಕಾಗಿಯೇ ಪರದಾಡುವ ಸ್ಥಿತಿಗೆ ತಲುಪಿದೆ. ಸಂವಿಧಾನ, ಶಾಸನಸಭೆ, ಚುನಾವಣೆ ಮತ್ತು ಸಾರ್ವತ್ರಿಕ ಮತದಾನ ಹಕ್ಕು ಇಷ್ಟು ಮಾತ್ರವೇ ಪ್ರಜಾತಂತ್ರ ಎನ್ನುವುದಾದರೆ ಭಾರತದಲ್ಲಿ ಪ್ರಜಾತಂತ್ರ ಇದೆ ಎನ್ನಬಹುದು. ಆದರೆ ಈ ನೆಲೆಗಳನ್ನೂ ಮೀರಿ ಯೋಚಿಸಿದಾಗ ಬಹುಶಃ ನಾವು ನೈಜ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಳೆದುಕೊಂಡು ಸ್ವತಃ ಕಳೆದುಹೋಗಿದ್ದೇವೆ ಎನಿಸುತ್ತದೆ. ಚುನಾಯಿತ ಸರಕಾರ ಅಧಿಕಾರದಲ್ಲಿದೆ ಎನ್ನುವ ಒಂದೇ ಕಾರಣಕ್ಕೆ ಬೆನ್ನು ತಟ್ಟಿಕೊಳ್ಳುವುದು ಆತ್ಮದ್ರೋಹವಾಗುತ್ತದೆ. ಈ ಚುನಾಯಿತ ಸರಕಾರ ಹೇಗೆ ಚುನಾಯಿತವಾಗಿದೆ? ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿರುವ ಸಾರ್ವಭೌಮ ಪ್ರಜೆಗಳ ಅಸ್ತಿತ್ವ ಏನಾಗಿದೆ? ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಬೇಕಾದ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆ ಮತ್ತು ಸ್ವಂತಿಕೆಯನ್ನು ಉಳಿಸಿಕೊಂಡಿವೆಯೇ? ಸಂವಿಧಾನವನ್ನು ರಕ್ಷಿಸಲೆಂದೇ ರೂಪಿಸಲ್ಪಟ್ಟಿರುವ ನಿಯಮಗಳು, ಕಾನೂನು ಕಟ್ಟಲೆಗಳು ಮತ್ತು ನಿರ್ಬಂಧಗಳು ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡಿವೆಯೇ? ಎರಡು ಮತದಾನಗಳ ನಡುವೆ ಪ್ರಜೆಗಳ ಪಾತ್ರ ನಿಷ್ಕರ್ಷೆಯಾಗಿದೆಯೇ? ತಾವೇ ಚುನಾಯಿಸಿದ ಪ್ರತಿನಿಧಿಗಳ ಮೇಲೆ ಸಾರ್ವಭೌಮ ಪ್ರಜೆಗಳಿಗೆ ಇರುವ ಪ್ರಜಾತಾಂತ್ರಿಕ ಹಕ್ಕುಗಳು ತಮ್ಮ ಮಾನ್ಯತೆಯನ್ನು ಉಳಿಸಿಕೊಂಡಿವೆಯೇ? ಇಷ್ಟೆಲ್ಲಾ ಪ್ರಶ್ನೆಗಳು ಉದ್ಭವಿಸಿದಾಗ ಈ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆಯೇ ಎನ್ನುವ ಅನುಮಾನವೂ ಮೂಡಿದರೆ ಅಚ್ಚರಿಯೇನಿಲ್ಲ.

ಈ ಎಲ್ಲ ಪ್ರಶ್ನೆಗಳೂ ನಾಗರಿಕ ಸಮಾಜವನ್ನು ಪದೇ ಪದೇ ಕಾಡುತ್ತಲೇ ಇವೆ. ಆದರೆ ಎಲ್ಲೋ ಒಂದು ಕಡೆ ಪ್ರಜ್ಞಾವಂತ ಸಮಾಜ ಈ ಪ್ರಶ್ನೆಗಳನ್ನು ನಿರ್ಲಕ್ಷಿಸುತ್ತಲೇ ಆಳುವ ವರ್ಗಗಳು ಸೃಷ್ಟಿಸಿರುವ ಭ್ರಮಾಲೋಕದಲ್ಲಿ ವಿಹರಿಸುತ್ತಿದೆ. ಕಳೆದ ಮೂರು ದಶಕಗಳ ರಾಜಕೀಯ ಬೆಳವಣಿಗೆಗಳು ಮತ್ತು ಆರ್ಥಿಕ ನೀತಿಗಳ ಹಿನ್ನೆಲೆಯಲ್ಲಿ ಭಾರತದ ಪ್ರಜಾತಂತ್ರ ವ್ಯವಸ್ಥೆ ಸಾಂವಿಧಾನಿಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದ್ದರೂ ತಳಮಟ್ಟದಲ್ಲಿ ತನ್ನ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಚುನಾವಣೆ, ಮತದಾನ, ಸರಕಾರ ಮತ್ತು ಸಂವಿಧಾನದಿಂದಾಚೆಗೂ ಪ್ರಜಾತಂತ್ರ ತನ್ನದೇ ಆದ ಅಸ್ತಿತ್ವ ಹೊಂದಿರುವುದನ್ನು ಗಮನಿಸದ ಯಾವುದೇ ಸಮಾಜ ನೈಜ ಪ್ರಜಾತಂತ್ರದತ್ತ ಸಾಗುವುದು ಅಸಾಧ್ಯ. ಬಹುಶಃ ಭಾರತ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಚುನಾಯಿತ ಸರಕಾರಗಳು ಮತದಾರ ಪ್ರಭುಗಳನ್ನು ತಾವು ಎಸೆದ ತುಣುಕುಗಳನ್ನು ಆಯ್ದುಕೊಳ್ಳುವ ಅಬ್ಬೇಪಾರಿಗಳಂತೆ ಪರಿಗಣಿಸುವುದು, ಚುನಾಯಿತ ಪ್ರತಿನಿಧಿಗಳು ಸ್ವತಃ ತಮ್ಮ ಸ್ಥಾನಮಾನಗಳನ್ನು ಪ್ರಶ್ನಾತೀತ ಎಂದು ಪರಿಗಣಿಸುವುದು, ಆಳುವ ವರ್ಗಗಳು ಚುನಾಯಿತ ಪ್ರತಿನಿಧಿಗಳನ್ನು ಮಾರುಕಟ್ಟೆಯ ಸರಕುಗಳಂತೆ ಭಾವಿಸುವುದು, ಪ್ರಭುತ್ವ ದೇಶದ ಸಾರ್ವಭೌಮ ಪ್ರಜೆಗಳನ್ನು ಅಡಿಯಾಳುಗಳಂತೆ ಪರಿಗಣಿಸುವುದು, ಆಡಳಿತಾರೂಢ ಪಕ್ಷಗಳು ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಅಧೀನದಲ್ಲಿರಿಸಿಕೊಳ್ಳಲು ಯತ್ನಿಸುವುದು, ಇವೆಲ್ಲವೂ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಗಳು. ಈ ಸಮಸ್ಯೆಗಳ ಪರಿಹಾರಕ್ಕೆ ಇರುವ ಮಾರ್ಗ ಚುನಾವಣೆ ಮಾತ್ರವೇ? ಈ ಸಂದರ್ಭದಲ್ಲಿ ಪ್ರಜಾತಂತ್ರ ಮೌಲ್ಯಗಳು ಮುನ್ನೆಲೆಗೆ ಬರುತ್ತವೆ.

ಕಳೆದ ನಾಲ್ಕು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು, ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ಗಮನಿಸಿದಾಗ ಪ್ರಜಾತಂತ್ರ ಮೌಲ್ಯಗಳು ತಮ್ಮ ಅಂತಃಸತ್ವವನ್ನೇ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಪ್ರಜಾತಂತ್ರದ ತಳಹದಿ ಇರುವುದು ವ್ಯಕ್ತಿ ಸ್ವಾತಂತ್ರ್ಯದಲ್ಲಿ. ಪ್ರತಿಯೊಬ್ಬ ಪ್ರಜೆಗೂ ತನ್ನ ಅಭಿವ್ಯಕ್ತಿಯನ್ನು ಕಾಪಾಡಿಕೊಳ್ಳುವ ಹಕ್ಕು ಇದ್ದರೆ ಮಾತ್ರವೇ ಅಂತಹ ಸಮಾಜ ಪ್ರಗತಿಯತ್ತ ಮುನ್ನಡೆಯಲು ಸಾಧ್ಯ. ಆದರೆ ಪ್ರಸ್ತುತ ರಾಜಕಾರಣದಲ್ಲಿ ಈ ಅಭಿವ್ಯಕ್ತಿಯೇ ಅಪಾಯಕ್ಕೆ ಸಿಲುಕಿದೆ. ರಾಜಕೀಯ ಪಕ್ಷಗಳು ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲಿ ನಿರ್ಮಿಸುವ ನಿರ್ದಿಷ್ಟ ಚೌಕಟ್ಟುಗಳಲ್ಲೇ ದೇಶದ ಸಮಾಜೋ ಸಾಂಸ್ಕೃತಿಕ ಇತಿಹಾಸವನ್ನು ಬಂಧಿಸುವ ಮೂಲಕ ಜನಾಭಿಪ್ರಾಯವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿರುವುದು ದಿನೇದಿನೇ ಸ್ಪಷ್ಟವಾಗುತ್ತಿದೆ. ಈ ಚೌಕಟ್ಟುಗಳನ್ನು ಮೀರುವ ಮನಸ್ಸುಗಳನ್ನು ವರ್ಗೀಕರಿಸುವ ಮೂಲಕ ಸಮಾಜದ ಸೌಹಾರ್ದವನ್ನೇ ಹಾಳುಗೆಡಹುವ ವ್ಯವಸ್ಥಿತ ಪಿತೂರಿಯನ್ನು ನಿತ್ಯಜೀವನದಲ್ಲಿ ಕಾಣಬಹುದಾಗಿದೆ.

ಈ ಹುನ್ನಾರಗಳು ಸಂವಿಧಾನದ ಚೌಕಟ್ಟಿನಲ್ಲೇ ಅನಾವರಣಗೊಳ್ಳುತ್ತಿರುವುದು ಆತಂಕಕಾರಿಯಷ್ಟೇ ಅಲ್ಲ ಅಪಾಯಕಾರಿಯಾಗಿಯೂ ಕಾಣುತ್ತಿದೆ. ಭಾರತದ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದದ್ದು ಎನ್ನುವ ಹೆಮ್ಮೆ ಪ್ರತಿಯೊಬ್ಬ ಭಾರತೀಯನಿಗೂ ಇದೆ. ಆದರೆ ಈ ಸಂವಿಧಾನದ ಮೌಲ್ಯಗಳು ಮತ್ತು ಸಾಂವಿಧಾನಿಕ ನಿಯಮಗಳು ಎಷ್ಟರ ಮಟ್ಟಿಗೆ ಪಾಲಿಸಲ್ಪಡುತ್ತಿವೆ ಎಂದು ಗಮನಿಸಿದಾಗ ಈ ಹೆಮ್ಮೆ ಕೇವಲ ಆತ್ಮರತಿಯೇನೋ ಎನಿಸಿಬಿಡುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಆಡಳಿತಾರೂಢ ಪಕ್ಷಗಳು ಮತ್ತು ವಿರೋಧ ಪಕ್ಷಗಳು ವಹಿಸಬೇಕಾದ ಪಾತ್ರದಿಂದ ಹಿಡಿದು ಅಭಿವ್ಯಕ್ತಿ ಸ್ವಾತಂತ್ರ್ಯದವರೆಗೆ ಸಂವಿಧಾನದ ಆಶಯಗಳು ಮಣ್ಣುಪಾಲಾಗುತ್ತಿದೆ. ‘‘ಭಾರತದ ಪ್ರಜೆಗಳಾದ ನಾವು’’ ಎಂದು ಆರಂಭವಾಗುವ ಸಂವಿಧಾನದ ರಕ್ಷಣೆ ಜನಸಾಮಾನ್ಯರ ಹೊಣೆ ಎನ್ನುವ ಪರಿಜ್ಞಾನವನ್ನೂ ಜನತೆ ಕಳೆದುಕೊಳ್ಳುವ ಮಟ್ಟಿಗೆ ರಾಜಕೀಯ ಪಕ್ಷಗಳು ಜನಸಾಮಾನ್ಯರನ್ನು ನಿಷ್ಕ್ರಿಯಗೊಳಿಸಿವೆ.

ಹೋರಾಟಗಳನ್ನು ದುರ್ಬಲಗೊಳಿಸಿವೆ. ಹೋರಾಟಗಾರರನ್ನು ನಿರ್ವೀರ್ಯಗೊಳಿಸಿವೆ. ಆಧಿಪತ್ಯ ರಾಜಕಾರಣ ಮತ್ತು ನವ ಉದಾರವಾದದ ಕಾರ್ಪೊರೇಟ್ ಔದ್ಯಮಿಕ ಹಿತಾಸಕ್ತಿಯ ಜುಗಲ್‌ಬಂದಿಯಲ್ಲಿ ಈ ದೇಶದ ಅನೇಕ ಹೋರಾಟಗಳು ತಮ್ಮ ಅಂತಃಸತ್ವವನ್ನೇ ಕಳೆದುಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇತ್ತೀಚೆಗೆ ಆನಂದ್ ತೇಲ್ತುಂಬ್ಡೆ ಅವರ ಬಂಧನವಾದ ಸಂದರ್ಭದಲ್ಲಿ ದಲಿತ ಚಳವಳಿಯ ತವರು ನಾಡು ಎನಿಸಿಕೊಂಡ ಮಹಾರಾಷ್ಟ್ರದಲ್ಲಿ ಪ್ರತಿಭಟನೆಯ ಕಿರುಬೆಟ್ಟೂ ಕಾಣದಿದ್ದುದು ಇಲ್ಲಿ ದುರಂತ ನಿದರ್ಶನ.

ಮತಧರ್ಮ ನಿರಪೇಕ್ಷತೆ, ಸಮಾಜವಾದ, ಸೌಹಾರ್ದ, ಭ್ರಾತೃತ್ವ ಮತ್ತು ದೇಶದ ಅಖಂಡತೆ ಈ ಎಲ್ಲ ಸಾಂವಿಧಾನಿಕ ಮೌಲ್ಯಗಳು ಒಂದು ಗ್ರಂಥದ ಬಿಡಿ ಭಾಗಗಳಲ್ಲ. ಈ ಎಲ್ಲ ಮೌಲ್ಯಗಳ ಸಮ್ಮಿಶ್ರಣವೇ ಭಾರತ ಎನ್ನುವ ಒಂದು ದೇಶವನ್ನು ರೂಪಿಸಿ ಸುರಕ್ಷಿತವಾಗಿಡಲು ಸಾಧ್ಯ. ಆದರೆ ಇಂದು ಈ ಎಲ್ಲ ಮೌಲ್ಯಗಳೂ ಭ್ರಷ್ಟವಾಗಿವೆ. ತ್ರಿವರ್ಣ ಧ್ವಜಕ್ಕೆ ಎದ್ದು ನಿಂತು ಗೌರವ ಸಲ್ಲಿಸುವುದನ್ನೇ ದೇಶಭಕ್ತಿ ಎಂದು ಪರಿಗಣಿಸುವ ಮನಸ್ಸುಗಳಿಗೆ ಈ ಧ್ವಜದ ಹಿಂದಿನ ಸಂವೇದನೆಯೂ ಅರಿವಾಗಿಲ್ಲ, ಇತಿಹಾಸವೂ ಅರಿವಾಗಿಲ್ಲ. ಹಾಗಾಗಿಯೇ ದೇಶಭಕ್ತಿ ರಾಜಕೀಯ ಮಾರುಕಟ್ಟೆಯಲ್ಲಿ ಸರಕಿನಂತಾಗಿದ್ದರೆ ದೇಶದ್ರೋಹ ಎನ್ನುವುದು ಮಾರುಕಟ್ಟೆ ಪೈಪೋಟಿಯ ಅಸ್ತ್ರವಾಗಿ ಪರಿಣಮಿಸಿದೆ. ಇದಕ್ಕೆ ಪೂರಕವಾಗಿ ದೇಶದಲ್ಲಿ ಸಾಂಸ್ಕೃತಿಕ ರಾಜಕಾರಣವನ್ನು ಪುನರ್ ಸ್ಥಾಪಿಸಲು ಕಟಿಬದ್ಧರಾಗಿರುವ ದೊಡ್ಡ ಪಡೆಯನ್ನೇ ಸೃಷ್ಟಿಸಲಾಗಿದೆ. ಪರಿಣಾಮ, ತಿನ್ನುವ ಅನ್ನ, ಉಡುವ ವಸ್ತ್ರ, ಬಳಸುವ ವಸ್ತು ಇವೆಲ್ಲವೂ ಪೌರತ್ವವನ್ನು ನಿರ್ಧರಿಸುವ ಮಾನದಂಡಗಳಾಗಿ ಪರಿಣಮಿಸಿವೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಿರ್ದಿಷ್ಟ ಆಹಾರ ಪದ್ಧತಿ, ನಿರ್ದಿಷ್ಟ ಉಡುಪು ಮತ್ತು ನಿರ್ದಿಷ್ಟ ಕಸುಬು ಸಾವಿನ ಪರವಾನಿಗೆಗಳಾಗಿ ಪರಿಣಮಿಸಿವೆ.

ಈ ಸಾಂಸ್ಕೃತಿಕ ರಾಜಕಾರಣದ ಚೌಕಟ್ಟಿನಲ್ಲೇ ಗಾಂಧೀಜಿಯ ಹಂತಕನ ವಿಜೃಂಭಣೆ ನಡೆಯುತ್ತಿದೆ. ಗಾಂಧಿಯ ಮೌಲ್ಯಗಳು ಸ್ವಚ್ಛತೆಯ ಭ್ರಮೆಯಲ್ಲಿ ತೂರಿಹೋಗುತ್ತ್ತಿವೆ. ಗಾಂಧೀಜಿಯ ಹತ್ಯೆಯನ್ನು ಸಂಭ್ರಮಿಸುವ ವಿಕೃತ ಸಂಸ್ಕೃತಿಯೇ ಗೌರಿ-ಕಲಬುರ್ಗಿ-ಪನ್ಸಾರೆ-ದಾಭೋಲ್ಕರ್ ಅವರ ಹತ್ಯೆಯನ್ನೂ ಪೋಷಿಸುತ್ತದೆ. ಇದೇ ವಿಕೃತ ಸಂಸ್ಕೃತಿಯೇ 200 ವರ್ಷಗಳ ಅಮೋಘ ಇತಿಹಾಸ ಹೊಂದಿರುವ ಭೀಮಾ ಕೋರೆಗಾಂವ್ ಸಂಭ್ರಮವನ್ನು ದೇಶದ್ರೋಹದ ಚೌಕಟ್ಟಿನಲ್ಲಿ ಬಂಧಿಸಿ ನಗರ ನಕ್ಸಲರನ್ನು ಸೃಷ್ಟಿಸುತ್ತದೆ. ಆನಂದ್ ತೇಲ್ತುಂಬ್ಡೆ ಇಂತಹ ವಿಕೃತಿಗೆ ಬಲಿಯಾಗಲಿದ್ದಾರೆ. ರೋಹಿತ್ ವೇಮುಲಾ ಈಗಾಗಲೇ ಬಲಿಯಾಗಿದ್ದಾರೆ. ಪೆಹ್ಲೂಖಾನ್, ಅಖ್ಲಾಕ್ ಮುಂತಾದ ಅಮಾಯಕರು ಬಲಿಪೀಠದಲ್ಲಿ ಆಹುತಿಯಾಗಿದ್ದಾರೆ. ಈ ಬಲಿಪಶುಗಳ ಅಪರಾಧ ಸಾಂವಿಧಾನಿಕವಾಗಿ ಲಭ್ಯವಾಗಿರುವ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿದ್ದೇ ಹೊರತು ಯಾವುದೇ ಅಸಾಂವಿಧಾನಿಕ ಕೃತ್ಯ ಎಸಗಿದ್ದಲ್ಲ. ಗೋಮಾಂಸ ಸೇವಿಸುವವರು ದೇಶದ್ರೋಹಿಗಳಾಗುತ್ತಾರೆ. ಗೋವನ್ನು ಪೂಜನೀಯವಾಗಿ ಕಂಡ ಗಾಂಧೀಜಿಯ ಹಂತಕನೊಬ್ಬ ದೇಶಭಕ್ತನಾಗುತ್ತಾನೆ. ಇದು ವಿಕೃತಿಯೋ ವಿಡಂಬನೆಯೋ ಅಥವಾ ಸಾಂಸ್ಕೃತಿಕ ರಾಜಕಾರಣದ ವಿಕೋಪವೋ! ಏನೆನ್ನಬೇಕು ?

ಈ ವಿಷಮ ಸನ್ನಿವೇಶದಲ್ಲೇ ಆಡಳಿತಾರೂಢ ಪಕ್ಷಗಳು ತಮ್ಮ ಸಾಂವಿಧಾನಿಕ ಬದ್ಧತೆಯನ್ನು ಪ್ರದರ್ಶಿಸಲು ಆಡಳಿತ ವ್ಯವಸ್ಥೆಯ ಎಲ್ಲ ಮಜಲುಗಳನ್ನೂ ಬಳಸಿಕೊಳ್ಳುತ್ತವೆ. ದಿಲ್ಲಿಯಲ್ಲಿ ತಮ್ಮ ನಾಳಿನ ಬದುಕಿನ ಚಿಂತೆಯ ಹೊತ್ತು ನೆರೆದ ಐವತ್ತು ಲಕ್ಷ ಅನ್ನದಾತರ ಕೂಗು ಪ್ರಜಾತಂತ್ರ ವ್ಯವಸ್ಥೆಯ ಕಿವಿಗೆ ಅಪ್ಪಳಿಸುವುದಿಲ್ಲ. ಇತ್ತ ಕರ್ನಾಟಕದಲ್ಲಿ ತಮ್ಮ ನಿತ್ಯ ಜೀವನವನ್ನು ಹಸನಾಗಿಸಲು ಮದ್ಯಪಾನ ನಿಷೇಧಕ್ಕಾಗಿ ಆಗ್ರಹಿಸುವ ಸಾವಿರಾರು ಮಹಿಳೆಯರ ಕೂಗು ಆಡಳಿತ ವ್ಯವಸ್ಥೆಗೆ ಮುಟ್ಟುವುದಿಲ್ಲ. ಆದರೂ ತಮ್ಮ ವಾರ್ಷಿಕ ಬಜೆಟ್‌ಗಳಲ್ಲಿ ಇದೇ ಜನಸಮುದಾಯಗಳಿಗೆ ಆಡಳಿತ ಪಕ್ಷಗಳು ತುಣುಕುಗಳನ್ನು ಎಸೆಯುತ್ತಲೇ ಇರುತ್ತವೆ. ಐವತ್ತು ಲಕ್ಷ ರೈತರ ಆಕ್ರಂದನವನ್ನು ನಿರ್ಲಕ್ಷಿಸುವ, ರೈತರ ಆತ್ಮಹತ್ಯೆಯನ್ನು ಫ್ಯಾಷನ್ ಎಂದು ಮೂದಲಿಸುವ ಕೇಂದ್ರ ಸರಕಾರ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ನೆರವು ನೀಡುವ ನಾಟಕವಾಡುತ್ತದೆ. ದೇಶದ ಸಮಸ್ತ ಆಡಳಿತ ಸೂತ್ರವನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ಸದ್ದಿಲ್ಲದೆ ಪರಭಾರೆ ಮಾಡುತ್ತಲೇ ನೇಪಥ್ಯದಲ್ಲಿ ಸರಕಾರಗಳು ಎಸೆಯುವ ತುಣುಕುಗಳು ಕುಸಿಯುತ್ತಿರುವ ಸಾಂವಿಧಾನಿಕ ಮೌಲ್ಯಗಳನ್ನು ಅಣಕಿಸುವಂತೆ ಕಾಣುತ್ತದೆ.

ಬಜೆಟ್ ಮೂಲಕ ಸರಕಾರಗಳು ವ್ಯಕ್ತಪಡಿಸುವ ಹಣಕಾಸಿನ ಔದಾರ್ಯ, ಮಧ್ಯಪ್ರಾಚೀನ ಕಾಲಘಟ್ಟದ ಊಳಿಗಮಾನ್ಯ ಔದಾರ್ಯದ ಆಧುನಿಕ ಸ್ವರೂಪವಷ್ಟೇ ಎಂದು ಇನ್ನಾದರೂ ಪ್ರಜ್ಞಾವಂತ ಸಮಾಜ ಗ್ರಹಿಸಬೇಕಿದೆ. ಹಣಕಾಸು, ರಕ್ಷಣೆ, ಶಿಕ್ಷಣ, ಆರೋಗ್ಯ, ವಿಮೆ ಮತ್ತು ಸಾರ್ವಜನಿಕ ಉದ್ದಿಮೆ -ಒಂದು ಸುಭದ್ರ ಸುಸ್ಥಿರ ಸಮಾಜಕ್ಕೆ ಅಗತ್ಯವಾದ ಈ ಎಲ್ಲ ಕ್ಷೇತ್ರಗಳನ್ನೂ ಹಂತಹಂತವಾಗಿ ಕಾರ್ಪೊರೇಟ್ ವಶಕ್ಕೆ ಒಪ್ಪಿಸಲು ಮೆಟ್ಟಿಲುಗಳನ್ನು ನಿರ್ಮಿ ಸುತ್ತಿರುವ ಆಳುವ ವರ್ಗಗಳು ಬಜೆಟ್ ಮೂಲಕ ತೋರುವ ಔದಾರ್ಯ ಕೇವಲ ಜನಸಾಮಾನ್ಯರ ದೃಷ್ಟಿಯನ್ನು ಮತ್ತಷ್ಟು ಮಸುಕಾಗಿಸುವ ಪ್ರಯತ್ನಗಳಷ್ಟೇ ಎನ್ನುವ ಸತ್ಯವನ್ನು ನಾವಿಂದು ಗ್ರಹಿಸಬೇಕಿದೆ. ಪ್ರಶ್ನಾತೀತ ಮೌಲ್ಯಗಳನ್ನು ನಾಶಪಡಿಸುತ್ತಲೇ ಪ್ರಶ್ನಾತೀತ ನಾಯಕರನ್ನು ಸೃಷ್ಟಿಸುವ ಮೂಲಕ ಆಧುನಿಕ ಭಾರತದ ಆಡಳಿತ ವ್ಯವಸ್ಥೆ ಸಮೂಹ ಸನ್ನಿಯನ್ನು ಸೃಷ್ಟಿಸುತ್ತಿರುವುದನ್ನು ಗಮನಿಸಬೇಕಿದೆ. ಇಲ್ಲವಾದಲ್ಲಿ ಪ್ರಜಾತಂತ್ರ ಮತ್ತು ಸಾಂವಿಧಾನಿಕ ಮೌಲ್ಯಗಳ ಶವಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಆಯ್ಕೆ ನಮ್ಮದು ಆದ್ಯತೆಯೂ ನಮ್ಮದು ಮಾರ್ಗವೂ ನಮ್ಮದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)