varthabharthi

ನಿಮ್ಮ ಅಂಕಣ

ದೇವದಾಸಿ ಪದ್ಧತಿ: ದೇವರ ಹೆಸರಿನಲ್ಲಿ ಶೋಷಣೆ

ವಾರ್ತಾ ಭಾರತಿ : 9 Feb, 2019
ಲೇ: ವಿಖಾರ್ ಅಹ್ಮದ್ ಸಯೀದ್ ಕೃಪೆ: ಫ್ರಂಟ್‌ಲೈನ್

2007-08ರಲ್ಲಿ ರಾಜ್ಯ ಸರಕಾರವು ಸಮೀಕ್ಷೆಯೊಂದನ್ನು ನಡೆಸಿ, ರಾಜ್ಯದ ಬೆಳಗಾವಿ, ವಿಜಯಪುರ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಯಾದಗಿರಿ ಹಾಗೂ ಬಾಗಲಕೋಟೆ ಹೀಗೆ 14 ಜಿಲ್ಲೆಗಳಲ್ಲಿ 46,660 ದೇವದಾಸಿಯರಿದ್ದರೆಂದು ಗಣತಿ ಮಾಡಿತ್ತು. ದೇವದಾಸಿಯರನ್ನಾಗಿ ಮಾಡುವ ಪದ್ಧತಿಯಲ್ಲಿ ಕುಸಿತ ಕಂಡುಬಂದಿದೆಯಾದರೂ, ಈಗಲೂ ಅದು ಗುಟ್ಟಾಗಿ ನಡೆಯುತ್ತಿದೆ.


ಭಾಗ-1

ದೇವದಾಸಿಯರು ಉತ್ತರ ಕರ್ನಾಟಕದ ಗ್ರಾಮೀಣ ಸಮಾಜದ ಪರಿಧಿ ಯೊಳಗೆ ತಾರತಮ್ಯಕ್ಕೊಳಗಾಗಿ ಬದುಕನ್ನು ಸಾಗಿಸುತ್ತಿದ್ದಾರೆ. ದೇವದಾಸಿಯರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಈ ಕೆಟ್ಟ ಸಂಪ್ರದಾಯವನ್ನು ನಿಲ್ಲಿಸಲು ಸರಕಾರದ ನೀತಿಯಲ್ಲಿ ಬದಲಾವಣೆಗಳ ಅಗತ್ಯವಿದೆಯೆಂದು ಎನ್‌ಎಲ್‌ಎಸ್‌ಐ (ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ, ಬೆಂಗಳೂರು) ಸಿದ್ಧಪಡಿಸಿರುವ ವರದಿ ಹಾಗೂ ‘ಮಾದರಿ ಶಾಸನ’ವೊಂದು ಆಗ್ರಹಿಸಿದೆ.

  ತೆಗ್ಗಿಹಾಳ ಗ್ರಾಮದ 22 ವರ್ಷ ವಯಸ್ಸಿನ ಯುವತಿ ಕಾಂತಮ್ಮ ಮುದುಕಪ್ಪ, ಮುದೆನೂರ್ ಗ್ರಾಮದಲ್ಲಿರುವ ತನ್ನ ಸೋದರನ ಮನೆಯಲ್ಲಿ ಮಾತೇ ಬರದವಳಂತೆ ಕುಳಿತುಕೊಂಡಿದ್ದಾಳೆ. ಇವೆರಡೂ ಹಳ್ಳಿಗಳು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿವೆ. ದಲಿತ ಸಮುದಾಯವಾದ ಮಾದಿಗರ ಕೇರಿಯಲ್ಲಿರುವ ಆಕೆಯ ಸಹೋದರನ ಮನೆಯಲ್ಲಿ ಕೇವಲ ಎರಡು ಕೊಠಡಿಗಳಿದ್ದು, ದುಸ್ಥಿತಿಯಲ್ಲಿದೆ.

   ಈ ಪುಟ್ಟ ಮನೆಯು ಕಾಂತಮ್ಮ ಅವರ ಬಂಧುಗಳು ಹಾಗೂ ಸಮುದಾಯದ ಹಿರಿಯರಿಂದ ತುಂಬಿ ತುಳುಕುತ್ತಿತ್ತು. ಅಲ್ಲಿ ಒಂದು ಬಗೆಯ ಆತಂಕದ ವಾತಾವರಣ ಕವಿದಿತ್ತು. ಅವರೆಲ್ಲರೂ ಕಾಂತಮ್ಮನ ಭವಿಷ್ಯದ ಬಗ್ಗೆ ಏನು ಮಾಡಬೇಕೆಂಬುದಾಗಿ ಗಹನವಾಗಿ ಚರ್ಚಿಸಲು ಅಲ್ಲಿ ಜಮಾಯಿಸಿದ್ದರು. ಮಾದಿಗ ಸಮುದಾಯಕ್ಕೆ ಸೇರಿದ ಕಾಂತಮ್ಮ, ಚಂದ್ರಪ್ಪ ಎಂಬ ಕುರುಬ ಸಮುದಾಯದ ವಿವಾಹಿತ ವ್ಯಕ್ತಿಯೊಬ್ಬನೊಂದಿಗೆ ಕಳೆದ ಆರು ತಿಂಗಳುಗಳಿಂದ ಪ್ರೇಮ ಸಂಬಂಧವನ್ನು ಹೊಂದಿದ್ದಳು. ಸಾಮಾಜಿಕ ಶ್ರೇಣಿಯಲ್ಲಿ ಕುರುಬರು ಮಧ್ಯಂತರ ಜಾತಿಯಾಗಿದ್ದು, ಆಕೆಯ ಹಳ್ಳಿಯಲ್ಲಿ ಪ್ರಬಲರಾಗಿದ್ದಾರೆ. ತನ್ನನ್ನು ವಿವಾಹವಾಗುವಂತೆ ಕಾಂತಮ್ಮ ಚಂದ್ರಪ್ಪನನ್ನು ಒತ್ತಾಯಿಸಿದಾಗ, ಆತ ಹಿಂದೆ ಸರಿದಿದ್ದ ಹಾಗೂ ದೇವದಾಸಿಯಾಗುವಂತೆ ಕಾಂತಮ್ಮಳ ಮೇಲೆ ಒತ್ತಡ ಹೇರಿದ್ದ. ‘‘ಆಕೆಯನ್ನು ಬಲವಂತವಾಗಿ ಹತ್ತಿರದಲ್ಲಿರುವ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಕರೆದೊಯ್ದು ಆಕೆಗೆ ದೇವದಾಸಿ ದೀಕ್ಷೆ ನೀಡಿದ. ಕಾಂತಮ್ಮಳ ಕುಟುಂಬದ ಹಾಗೂ ಜಾತಿಯ ಪದ್ಧತಿ ಪ್ರಕಾರ ಆಕೆ ದೇವದಾಸಿಯಾಗಬೇಕೆಂದು ಆತ ತಿಳಿಸಿದ’’ ಎಂಬುದಾಗಿ ಕಾಂತಮ್ಮಳ ಕುಟುಂಬಕ್ಕೆ ಪರಿಚಯವಿರುವ ಪಡಿಯಮ್ಮ ಎಂಬ 60 ವರ್ಷ ವಯಸ್ಸಿನ ದೇವದಾಸಿ ತಿಳಿಸಿದ್ದಾರೆ. ಆದರೆ ಮಾತೇ ಹೊರಡದಂತಾಗಿದ್ದ ಕಾಂತಮ್ಮ, ತಲೆಯಾಡಿಸುತ್ತಲೇ ಆಕೆಯ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಳು.

 ಜುಲೈ 24ರಂದು ಕಾಂತಮ್ಮಳಿಗೆ ದೇವದಾಸಿಯ ‘ದೀಕ್ಷೆ’ಯ ವಿಧಿಯನ್ನು ನಡೆಸಲಾಯಿತು. ಆದರೆ ಕಾಂತಮ್ಮಳ ಬಂಧುಗಳು ಹಾಗೂ ಪಡಿಯಮ್ಮ ಸೇರಿದಂತೆ ಮಾಜಿ ದೇವದಾಸಿಗಳು ಒತ್ತಡ ಹೇರಿದ ಬಳಿಕ ಆಗಸ್ಟ್ 14ರ ವೇಳೆಗಷ್ಟೇ ಚಂದ್ರಪ್ಪನ ವಿರುದ್ಧ ಕರ್ನಾಟಕ ದೇವದಾಸಿ ಪದ್ಧತಿ ನಿಷೇಧ ಕಾಯ್ದೆಯಡಿ ಔಪಚಾರಿವಾಗಿ ಪೊಲೀಸ್ ದೂರನ್ನು ನೀಡಲಾಗಿತ್ತು. ‘‘ಆರೋಪಿ ಚಂದ್ರಪ್ಪನ ವಿರುದ್ಧ ಯಾವ ಕಾಯ್ದೆ ಹಾಗೂ ಸೆಕ್ಷನ್‌ನಡಿ ದೂರು ದಾಖಲಿಸಬೇಕೆಂಬುದು ಪೊಲೀಸರಿಗೆ ತಿಳಿದೇ ಇರಲಿಲ್ಲ. ನಾವೇ ಪೊಲೀಸರಿಗೆ ಅದನ್ನು ವಿವರಿಸಬೇಕಾಯಿತು’’ ಎಂದು ಕೊಪ್ಪಳದ ದೇವದಾಸಿಯೊಬ್ಬರ ಪುತ್ರನಾದ ಯುಮನುರಪ್ಪ ಹಾಳವಾಗಲಿ ತಿಳಿಸಿದ್ದಾರೆ. ಸೆಪ್ಟಂಬರ್ ತಿಂಗಳ ಮಧ್ಯದಲ್ಲಿ ಕಾಂತಮ್ಮ ಅವರನ್ನು ಇಂಗ್ಲಿಷ್ ನಿಯತಕಾಲಿಕ ಫ್ರಂಟ್‌ಲೈನ್ ಪತ್ರಿಕೆಯ ವರದಿಗಾರರು ಭೇಟಿಯಾಗಿದ್ದರು. ಆವಾಗಲೂ ಚಂದ್ರಪ್ಪ ಅವರ ಬಂಧನವಾಗಲಿಲ್ಲ. ಈ ಬಗ್ಗೆ ಏನು ಮಾಡಬೇಕೆಂದು ಕಾಂತಮ್ಮಳ ಕುಟುಂಬದ ಸದಸ್ಯರು ಹಾಗೂ ಸಮುದಾಯದ ಹಿರಿಯರ ನಡುವೆ ಕಾವೇರಿದ ಚರ್ಚೆ ನಡೆದಿತ್ತು. ಆಕ್ರೋಶಭರಿತರಾಗಿದ್ದ ಮಾದಿಗ ಸಮುದಾಯದ ಸ್ಥಳೀಯ ನಾಯಕರಾದ ಹುಸೈನಪ್ಪ ಮೂಲಿಮನೆ ಅವರು ಕಾಂತಮ್ಮಳನ್ನು ಚಂದ್ರಪ್ಪ ಜೊತೆ ಬಲವಂತವಾಗಿಯಾದರೂ, ಮದುವೆ ಮಾಡಿಸಬೇಕೆಂದು ಜೋರಾಗಿ ಹೇಳುತ್ತಿದ್ದರು. ಆದರೆ ದೇವದಾಸಿಯರು ದೇವತೆಯ ಜೊತೆ ಸಾಂಕೇತಿಕವಾಗಿ ಮದುವೆಯಾಗಿರುವುದರಿಂದ ಅವರು ವಿವಾಹವಾಗಲು ಸಾಧ್ಯವಿಲ್ಲವೆಂದು ಹಿರಿಯ ದೇವದಾಸಿಯೊಬ್ಬಳು ಹೇಳುತ್ತಿದ್ದಳು. ಅದೇ ಹೊತ್ತಿಗೆ, ಸ್ಥಳೀಯ ದೇವಾಲಯದಿಂದ ಡೋಲುವಾದನದೊಂದಿಗೆ ಮೆರವಣಿಗೆಯೊಂದು ಹಾದುಹೋದಾಗ, ಮನೆಯಲ್ಲಿ ವೌನ ಕವಿಯಿತು. ಪ್ರತಿಯೊಬ್ಬರು ಡೋಲು, ವಾದ್ಯದ ಸದ್ದು ಅಡಗುವುನ್ನೇ ಕಾಯುತ್ತಿದ್ದರು. ಅವರೆಲ್ಲರೂ ತಮ್ಮ ಸುತ್ತಮುತ್ತಲಿನಲ್ಲಿ ಹಾಗೂ ಕುಟುಂಬದಲ್ಲಿ ದೇವದಾಸಿಯರನ್ನು ಕಾಣುತ್ತಲೇ ಬೆಳೆದಿರುವುದಿಂದ,(ಹುಸೈನಪ್ಪ ಅವರ ತಾಯಿ ದೇವದಾಸಿ) ಕಿರಿಯ ವಯಸ್ಸಿನ ಯುವತಿಯರು ದೇವದಾಸಿಯಾಗುವುದು ಅವರಿಗೆ ಬೇಕಿರಲಿಲ್ಲ. ದೇವದಾಸಿ ಸಂಪ್ರದಾಯವು ಕಾನೂನುಬಾಹಿರ ಮಾತ್ರವಲ್ಲ ಈ ಪದ್ಧತಿಯು, ಸಾಮಾನ್ಯ ಗ್ರಾಮೀಣ ಮಹಿಳೆಯರ ಸ್ಥಾನಮಾನವನ್ನು ಕಸಿದುಕೊಳ್ಳುತ್ತದೆ ಹಾಗೂ ಆಕೆ ತೀವ್ರವಾದ ಅಪಮಾನಕ್ಕೊಳಗಾಗುವಂತೆ ಮಾಡುತ್ತದೆ.
 
ದೇವದಾಸಿ ಪದ್ಧತಿಗೆ ನಿಷೇಧ
ಕರ್ನಾಟಕ ಸರಕಾರವು 1982ರಲ್ಲಿ ಕರ್ನಾಟಕ ದೇವದಾಸಿ ನಿಷೇಧ ಕಾಯ್ದೆ (ಕೆಡಿಪಿಡಿಎ)ಯಡಿ ದೇವದಾಸಿಯ ಪದ್ಧತಿಯನ್ನು ನಿಷೇಧಿಸಿತ್ತು. 2010ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. 2007-08ರಲ್ಲಿ ರಾಜ್ಯ ಸರಕಾರವು ಸಮೀಕ್ಷೆಯೊಂದನ್ನು ನಡೆಸಿ, ರಾಜ್ಯದ ಬೆಳಗಾವಿ, ವಿಜಯಪುರ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಯಾದಗಿರಿ ಹಾಗೂ ಬಾಗಲಕೋಟೆ ಹೀಗೆ 14 ಜಿಲ್ಲೆಗಳಲ್ಲಿ 46,660 ದೇವದಾಸಿಯರಿದ್ದರೆಂದು ಗಣತಿ ಮಾಡಿತ್ತು. ದೇವದಾಸಿಯರನ್ನಾಗಿ ಮಾಡುವ ಪದ್ಧತಿಯಲ್ಲಿ ಕುಸಿತ ಕಂಡುಬಂದಿದೆಯಾದರೂ, ಈಗಲೂ ಅದು ಗುಟ್ಟಾಗಿ ನಡೆಯುತ್ತಿದೆ. ಕಾಂತಮ್ಮ ಹಾಗೂ ಆಕೆಯ ಕುಟುಂಬದವರಂತಹ ವ್ಯಕ್ತಿಗಳು ಈ ಬಗ್ಗೆ ಮಾತನಾಡಿದ್ದರಿಂದ ಮಾತ್ರವೇ ಅದು ಬಹಿರಂಗಗೊಂಡಿದೆ. ಕಳೆದ ಎರಡು ದಶಕಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 20 ದೇವದಾಸಿಯರ ಉಪಸ್ಥಿತಿಯಿರುವ ಬಗ್ಗೆ ತಿಳಿದಿರುವುದಾಗಿ ಕುಷ್ಟಗಿ ತಾಲೂಕಿನ ಕ್ಯಾಡಿಗುಪ್ಪ ಗ್ರಾಮದ ನಿವಾಸಿ ಪಡಿಯಮ್ಮ ಹೇಳುತ್ತಾರೆ.

ಮಹಿಳೆಯರನ್ನು ದೇವದಾಸಿಯರನ್ನಾಗಿ ಮಾಡುವ ಪದ್ಧತಿಗೆ ಪುರಾತನ ಧಾರ್ಮಿಕ ಸಂಪ್ರದಾಯ ಹಾಗೂ ಜಾತಿ ವ್ಯವಸ್ಥೆಯ ಸಮ್ಮತಿಯಿತ್ತು. ಪುರಾತನ ಹಾಗೂ ಮಧ್ಯಯುಗದ ಭಾರತದಲ್ಲಿ ದೇವದಾಸಿಯರು ಪ್ರಮುಖ ದೇವಾಲಯಗಳಲ್ಲಿ ವಾಸವಾಗಿದ್ದರು. ವಿವಿಧ ಕಾರಣಗಳಿಗಾಗಿ ಅವರನ್ನು ಸಮಾಜದ ಶ್ರೀಮಂತ ವರ್ಗ ಪೋಷಿಸುತ್ತಿತ್ತು. ಸಂಗೀತ ಹಾಗೂ ನೃತ್ಯದ ಸಂಪ್ರದಾಯವನ್ನು ಮುಂದಕ್ಕೊಯ್ಯುವುದರ ಜೊತೆ, ವೇಶ್ಯಾವಾಟಿಕೆಯ ವೃತ್ತಿಯಲ್ಲೂ ಅವರು ತೊಡಗುತ್ತಿದ್ದರು. ಬೃಹತ್ ದೇಗುಲಗಳಲ್ಲಿ 100ಕ್ಕೂ ಅಧಿಕ ದೇವದಾಸಿಯರಿರುತ್ತಿದ್ದರು. ಪಿತೃಪ್ರಧಾನ ಸಮಾಜದಲ್ಲಿ ದೇವದಾಸಿಯರು ತಾವಾಗಿಯೇ ಅತ್ಯಂತ ಪ್ರಭಾವಿ ಸ್ಥಾನವನ್ನು ರೂಪಿಸಿಕೊಂಡಿದ್ದರೆಂದು ಕೆಲವು ಇತಿಹಾಸ ಸಂಶೋಧಕರು ಪ್ರತಿಪಾದಿಸಿದ್ದಾರೆ. ಭಾರತದ ವಿವಿಧ ಭಾಗಗಳಲ್ಲಿ ದೇವದಾಸಿ ಪದ್ಧತಿ ಅಸ್ತಿತ್ವದಲ್ಲಿತ್ತಾದರೂ, ದಕ್ಷಿಣ ಭಾರತದಲ್ಲಿ ಹೆಚ್ಚು ವ್ಯಾಪಕವಾಗಿತ್ತು.

 ವಸಾಹತುಶಾಹಿ ಕಾಲದಲ್ಲಿ ಜಾತಿ ಪದ್ಧತಿ ನಿರ್ಮೂಲನೆ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದ ಭಾರತದ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಕರು ಮತ್ತು ಕಾರ್ಯಕರ್ತರು, ದೇವದಾಸಿ ಮಹಿಳೆಯರ ಯಾತನೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದರು. 1934ರಲ್ಲಿ ಬಾಂಬೆ ಸಂಸ್ಥಾನದಲ್ಲಿ ಬಾಂಬೆ ದೇವದಾಸಿ ಸಂರಕ್ಷಣಾ ಕಾಯ್ದೆಯನ್ನು ಅಂಗೀಕರಿಸಲಾಯಿತು. ದೇವದಾಸಿ ಪದ್ಧತಿಯ ಸ್ವರೂಪ ಹಾಗೂ ವ್ಯವಸ್ಥೆಯು ಹಲವು ಶತಮಾನಗಳಲ್ಲಿ ಗಣನೀಯ ಬದಲಾವಣೆಯನ್ನು ಕಂಡಿದೆಯಾದರೂ, ಸ್ವಾತಂತ್ರಾನಂತರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಅದು ಹೆಚ್ಚು ಬೆಳವಣಿಗೆಯನ್ನು ಕಂಡಿತ್ತು.

ದೇವದಾಸಿ ಪದ್ಧತಿಯ ಸಂರಚನೆ

ಕರ್ನಾಟಕದಲ್ಲಿ ಸ್ವಾತಂತ್ರಾನಂತರ ಈ ಪದ್ಧತಿಯು ಹೇಗೆ ಬದಲಾಯಿತೆಂಬು ದನ್ನು ಅರಿತುಕೊಳ್ಳಲು ಈ ಪ್ರತಿನಿಧಿಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಕುಷ್ಟಗಿಯ 30 ಮಂದಿ ದೇವದಾಸಿಯರನ್ನು ಮಾತನಾಡಿಸಿದ್ದಾನೆ. 1960 ಹಾಗೂ 1980ರ ದಶಕದ ಮಧ್ಯೆ ಅವರು ದೇವದಾಸಿಯರಾಗಿದ್ದರು. ವಿವಿಧ ರೀತಿಯ ಮೂಢನಂಬಿಕೆಗಳು ಹೆಣ್ಣು ಮಕ್ಕಳನ್ನು ದೇವದಾಸಿ ಪದ್ಧತಿಗೆ ದೂಡಿವೆಯೆಂಬುದು ಅವರು ನೀಡಿದ ಉತ್ತರಗಳಿಂದ ಸ್ಪಷ್ಟವಾಗುತ್ತದೆ. ಇವರಲ್ಲಿ ಹೆಚ್ಚಿನವರು ಬಾಲಕಿಯರಾಗಿದ್ದಾಗಲೇ ಅವರನ್ನು ದೇವದಾಸಿಯರನ್ನಾಗಿ ಮಾಡಲಾಗಿದೆ. ಇವರಲ್ಲಿ ಕೆಲವರು ದೇವದಾಸಿಯರಾದ ವೇಳೆ ಎಷ್ಟು ಸಣ್ಣವಯಸ್ಸಿನವರಾಗಿದ್ದಾರೆಂದರೆ, ಅವರಿಗೆ ಆ ಘಟನೆಯನ್ನು ನೆನಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಅಧಿಕೃತವಾಗಿ ಚಿಕ್ಕೋಡಿ ತಾಲೂಕಿನಲ್ಲಿ 588 ಮಂದಿ ಹಾಗೂ ಕುಷ್ಟಗಿ ತಾಲೂಕಿನಲ್ಲಿ 671 ಮಂದಿ ದೇವದಾಸಿಯರಿದ್ದಾರೆ. ಚಿಕ್ಕೋಡಿ ಜಿಲ್ಲೆಯಲ್ಲಿ ದೇವದಾಸಿಯರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮಹಿಳಾ ಅಭಿವೃದ್ಧಿ ಮತ್ತು ಸೇವಾಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾದ ಕುಮಾರ್ ನೆಲ್ಲವ್ವ ನಾಡಾರ್ ಅವರು ಚಿಕ್ಕೋಡಿ ತಾಲೂಕಿನಲ್ಲಿ ಇನ್ನೂ 40ಕ್ಕೂ ಮಂದಿ ಅಧಿಕ ದೇವದಾಸಿಯರಿದ್ದು, ಅವರನ್ನು ಸಮೀಕ್ಷೆ ಯಲ್ಲಿ ದಾಖಲಿಸಲಾಗಿಲ್ಲವೆಂದು ಹೇಳಿದ್ದರು. ಚಿಕ್ಕೋಡಿಯ ಚಂದ್ರವ್ವ ಗಂಗವ್ವ ಖಾತೆದಾರ್ ಮೂರನೆ ತಲೆಮಾರಿನ ದೇವದಾಸಿಯಾಗಿದ್ದಾಳೆ. ತನ್ನ ಕುಟುಂಬವು ಅನುಸರಿ ಸಿಕೊಂಡು ಬಂದ ‘ನಂಬಿಕೆ’ ಗಳ ಕಾರಣದಿಂದಾಗಿ ತನ್ನನ್ನು ದೇವದಾಸಿಯಾಗಿ ಮಾಡಲಾಯಿತೆಂದು ಆಕೆ ಹೇಳುತ್ತಾಳೆ. ಜೋಡುಕುರಳಿ ಗ್ರಾಮದ ನಿಂಗವ್ವ ಎಂಬಾಕೆ, ಬಾಲಕಿಯಾಗಿದ್ದಾಗ ಚರ್ಮರೋಗದಿಂದ ಬಳಲುತ್ತಿದ್ದಳು. ಆಗ ಹೆತ್ತವರು ಆಕೆಯನ್ನು ದೇವದಾಸಿಯಾಗಿ ಸವದತ್ತಿಯ ಎಲ್ಲಮ್ಮ ದೇವಾಲಯಕ್ಕೆ ಒಪ್ಪಿಸಿದ್ದರೆಂದು ಹೇಳುತ್ತಾಳೆ. ಚಿಕ್ಕೋಡಿಯ ಲಲಿತಾ ಬಾಯಿ, ತಾನು ಏಳು ವರ್ಷದವಳಾಗಿದ್ದಾಗ ತಾಯಿ ತೀರಿಕೊಂಡಿದ್ದರು.

ಆಗ ತನ್ನನ್ನು ಯಾರೂ ನೋಡಿಕೊಳ್ಳುವವರಿಲ್ಲವಾದ ಕಾರಣ ತನ್ನನ್ನು ದೇವದಾಸಿಯಾಗಿ ಮಾಡಲಾಯಿತು ಎಂದು ಹೇಳುತ್ತಾಳೆ. ತನ್ನ ತಾಯಿ ತುಂಬಾ ಸಮಯದವರೆಗೆ ಹೆರದೆ ಇದ್ದುದರಿಂದ, ತನ್ನ ತಂದೆ ಮೊದಲು ಹುಟ್ಟುವ ಹೆಣ್ಣು ಮಗುವನ್ನು ಸವದತ್ತಿಯ ಎಲ್ಲಮ್ಮ ದೇವಾಲಯಕ್ಕೆ ಅರ್ಪಿಸುವುದಾಗಿ ಹರಕೆಹೊತ್ತಿದ್ದನೆಂದು ಕೃಷ್ಣಾ ಬಾಯಿ ಹೇಳುತ್ತಾಳೆ. ಜೋಡುಕುರಳ್ಳಿ ಗ್ರಾಮದ ತೆಂಗವ್ವ ರಾಣಪ್ಪ ಕಾಂಬ್ಳೆ ಎಂಬಾಕೆ ತನಗೆ 12 ವರ್ಷವಾಗಿದ್ದಾಗ ಚರ್ಮ ರೋಗ ಅಂಟಿಕೊಂಡಿತ್ತು, ಯಾರೂ ಕೂಡಾ ತನ್ನನ್ನು ಮದುವೆಯಾಗಲು ಮುಂದೆ ಬರಲಾರರು ಎಂಬ ಕಾರಣಕ್ಕಾಗಿ ತನ್ನನ್ನು ದೇವದಾಸಿಯಾಗಿ ಒಪ್ಪಿಸಲಾಯಿತೆಂದು ಹೇಳುತ್ತಾಳೆ. ರೇಖಾ ಮಲ್ಲಪ್ಪ ಎಂಬಾಕೆಯ ತಾಯಿ, ತನ್ನ ಪುತ್ರಿ ಆರೋಗ್ಯವಂತಳಾಗಿ ಜನಿಸಿದ್ದಲ್ಲಿ ಆಕೆಯನ್ನು ದೇವದಾಸಿಯಾಗಿ ಮಾಡುವುದಾಗಿ ಹರಕೆ ಹೇಳಿಕೊಂಡಿದ್ದಳು. ಹನುಮಸಾಗರ ಗ್ರಾಮದ ಹುಸೈನಮ್ಮ ಸನ್ನದುರ್ಗಪ್ಪ ಆದಿಮನೆ ಎಂಬಾಕೆ, ತನ್ನ ತಂದೆಗೆ ಹೆಣ್ಣು ಮಕ್ಕಳು ಮಾತ್ರವೇ ಇದ್ದುದರಿಂದ, ತನ್ನನ್ನು ಆತ ದೇವದಾಸಿಯನ್ನಾಗಿ ಮಾಡಿದ. ಇದರಿಂದಾಗಿ ಆಕೆ ಅವಿವಾಹಿತಳಾಗಿಯೇ ಉಳಿದುಕೊಳ್ಳುತ್ತಾಳೆ ಹಾಗೂ ಆತನ ಪೂರ್ವಿಕರ ಭೂಮಿಗೆ ವಾರಸುದಾರಳಾಗಿ ಉಳಿಯುತ್ತಾಳೆ ಎಂಬುದೇ ಆತನ ಯೋಚನೆಯಾಗಿತ್ತು ಎಂದು ಹೇಳುತ್ತಾಳೆ. ಕ್ಯಾಡಿಗುಪ್ಪ ಗ್ರಾಮದ ನಾಗಮ್ಮ, ಕಣ್ಣಿಗೆ ಸಂಬಂಧಿಸಿದ ಕಾಯಿಲೆಯಿಂದ ಪೀಡಿತಳಾಗಿದ್ದಳು. ಅದನ್ನು ಗುಣಪಡಿಸುವುದಾಗಿ ಹೇಳಿಕೊಂಡು ನಕಲಿ ಪಂಡಿತನೊಬ್ಬ ಆಕೆಯ ಕಣ್ಣಿಗೆ ಸೂಜಿಯನ್ನು ಚುಚ್ಚಿದ್ದ. ಇದರ ಪರಿಣಾಮವಾಗಿ ಆಕೆ ಕುರುಡಳಾಗಿಬ್ಟಿಟ್ಟಳು. ಆಕೆಯನ್ನು ಹೆತ್ತವರು ದೇವದಾಸಿಯಾಗಿ ಒಪ್ಪಿಸಿದರು.

 ದೇವದಾಸಿ ಪದ್ಧತಿಗೆ ಬಲಿಪಶುಗಳಾದವರಲ್ಲಿ ಬಹುತೇಕ ಮಂದಿ ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೊಲೆಯ ಜಾತಿಯ ಕೆಲವರು ಕೂಡಾ ದೇವದಾಸಿಯಾಗಿದ್ದಾರೆ. ಕೈಬೆರಳೆಣಿಕೆಯಷ್ಟು ಸಂಖ್ಯೆಯ ದೇವದಾಸಿಯರು ಮಾತ್ರವೇ ಸಣ್ಣ ಪುಟ್ಟ ಜಮೀನುಗಳನ್ನು ಹೊಂದಿದ್ದಾರೆ. ಉಳಿದವರು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಫ್ರಂಟ್‌ಲೈನ್ ಪತ್ರಿಕೆಯ ವರದಿಗಾರನು ಮಾತನಾಡಿಸಿದ ಬಹುತೇಕ ದೇವದಾಸಿಯರು ಸಣ್ಣ ಪ್ರಾಯದಲ್ಲೇ ಶಾಲೆಯನ್ನು ಬಿಟ್ಟವರಾಗಿದ್ದಾರೆ. ಈ ಹಿಂದೆ ದೇವದಾಸಿಯರು ಭಿಕ್ಷೆ ಬೇಡಿ ಬದುಕಿದ್ದರು. ಆದರೆ ಈ ಪದ್ಧತಿ ಅಂತ್ಯಗೊಳ್ಳುವ ಹಾಗೆ ಕಾಣಿಸುತ್ತಿದೆ.

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)