varthabharthi

ಕ್ರೀಡೆ

ಮೂರನೇ ಟ್ವೆಂಟಿ-20: ಭಾರತಕ್ಕೆ 213 ರನ್ ಸವಾಲು

ವಾರ್ತಾ ಭಾರತಿ : 10 Feb, 2019

ಹ್ಯಾಮಿಲ್ಟನ್, ಫೆ.10: ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ನ್ಯೂಝಿಲೆಂಡ್ ತಂಡ ಭಾರತದ ಗೆಲುವಿಗೆ 213 ರನ್ ಕಠಿಣ ಸವಾಲು ನೀಡಿದೆ.

ರವಿವಾರ ಇಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ನ್ಯೂಝಿಲೆಂಡ್‌ನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ನ್ಯೂಝಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 212 ರನ್ ಕಲೆಹಾಕಿತು.

ಆರಂಭಿಕ ಆಟಗಾರ ಕಾಲಿನ್ ಮುನ್ರೊ(72, 40 ಎಸೆತ, 5 ಬೌಂಡರಿ, 5 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು. ಇನ್ನೋರ್ವ ಆರಂಭಿಕ ಸೈಫರ್ಟ್(43)ಅವರೊಂದಿಗೆ ಮೊದಲ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿ ತಂಡದ ಉತ್ತಮ ಮೊತ್ತಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಕಿವೀಸ್ ಪರ ಗ್ರಾಂಡ್‌ಹೊಮ್ಮೆ(30), ನಾಯಕ ವಿಲಿಯಮ್ಸನ್(27), ಡ್ಯಾರಿಲ್ ಮಿಚೆಲ್(ಔಟಾಗದೆ 19) ಹಾಗೂ ರಾಸ್ ಟೇಲರ್(ಔಟಾಗದೆ 14)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಪರ ಕುಲದೀಪ್ ಯಾದವ್(26ಕ್ಕೆ2)ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ವೇಗಿಗಳಾದ ಭುವನೇಶ್ವರ ಕುಮಾರ್(1-37) ಹಾಗೂ ಅಹ್ಮದ್(1-47)ತಲಾ ಒಂದು ವಿಕೆಟ್ ಪಡೆದರು.

 ಸರಣಿ ನಿರ್ಣಾಯಕ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದು ಬದಲಾವಣೆ ಮಾಡಿದ್ದವು. ನ್ಯೂಝಿಲೆಂಡ್ ಲುಕಿ ಫರ್ಗ್ಯುಸನ್‌ಗೆ ವಿಶ್ರಾಂತಿ ನೀಡಿ ಬಲಗೈ ವೇಗಿ ಬ್ಲೇರ್ ಟಿಕ್ನೆರ್‌ಗೆ ಚೊಚ್ಚಲ ಪಂದ್ಯ ಆಡಲು ಅವಕಾಶ ನೀಡಿದೆ. ಕುಲದೀಪ್ ಯಾದವ್ ಅವರು ಸಹ ಸ್ಪಿನ್ನರ್ ಯಜುವೇಂದ್ರ ಚಹಾಲ್ ಬದಲಿಗೆ ಸ್ಥಾನ ಪಡೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)