varthabharthi

ಕರ್ನಾಟಕ

ಗಾಂಧೀ ಪ್ರತಿಕೃತಿಗೆ ಗುಂಡಿಕ್ಕಿದವರನ್ನು ದೇಶದಿಂದ ಗಡಿಪಾರು ಮಾಡಬೇಕು: ಶಾಸಕ ಬಯ್ಯಾಪುರ

ವಾರ್ತಾ ಭಾರತಿ : 10 Feb, 2019

ಗಂಗಾವತಿ,ಫೆ.10: ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಾ ಗಾಂಧೀಜಿಯವರ ಪ್ರತಿಕೃತಿಗೆ ನಕಲಿ ಗನ್‍ನಿಂದ ಗುಂಡು ಹೊಡೆದಿರುವುದು ದುರಂತ. ಹಿಂದೂ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆಗೆ ಕಾನೂನು, ಸಂವಿಧಾನದ ಅರಿವಿಲ್ಲ. ಇಂಥವರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ನಗರದ ರಾಯಚೂರು ರಸ್ತೆಯಲ್ಲಿರುವ ಶ್ರೀ ಕನ್ವೆಷನ್‍ಹಾಲ್‍ನಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಸಹೋದರ ಅಕ್ತರ್ ಅನ್ಸಾರಿ ಅವರ ಸುಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯ ದಿನ ಅವರ ಪ್ರತಿಕೃತಿಗೆ ಗುಂಡು ಹಾರಿಸಿರುವುದು ದೇಶದ್ರೋಹವೆಂದು ಪರಗಣಿಸಿ ಕೂಡಲೇ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ದೇಶದ ಪ್ರಧಾನಿ ಮೋದಿ ಚಾಣಾಕ್ಷ ಭಾಷಣಗಾರ, ಮಾತಿನ ಮೋಡಿಗಾರ. ಅವರಿಂದ ದೇಶಕ್ಕೆ ಯಾವುದೇ ಅಭಿವೃದ್ಧಿಯಾಗಿಲ್ಲ. ಇತ್ತ ರಾಜ್ಯದಲ್ಲಿ ಬಿಜೆಪಿಗೆ ಸಂಸ್ಕೃತಿ-ಸಂಸ್ಕಾರ ಇಲ್ಲದೇ ಅಧಿಕಾರದ ಲಾಲಸೆಗಾಗಿ ಹಾತೊರೆಯುತ್ತಿದ್ದಾರೆ. ಇವರ ಯಾವುದೇ ಕುತಂತ್ರಕ್ಕೂ ಸಮ್ಮಿಶ್ರ ಸರ್ಕಾರ ಮಣಿಯುವುದಿಲ್ಲ.  ಸಂಪೂರ್ಣ ಐದು ವರ್ಷ ಆಡಳಿತ ನಡೆಸುವ ಜೊತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಗತಿಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರ ಉರುಳಿಸಲು ಹುನ್ನಾರ ನಡೆಸಿದ್ದ ಯಡಿಯೂರಪ್ಪನವರ ಆಡಿಯೋ ಕುರಿತು ಈಗಾಗಲೇ ಕಾನೂನು ರೀತಿಯಲ್ಲಿ ವಿಚಾರಣೆಯಾಗುತ್ತಿದೆ. ಅಲ್ಲದೇ ಕ್ರಮ ತೆಗೆದುಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸಹ ಸೂಚನೆ ನೀಡಲಾಗಿದೆ. ಆಡಿಯೋ ಕುರಿತಂತೆ ದೇಶದೆಲ್ಲೆಡೆ ವ್ಯಾಪಕ ಚರ್ಚೆಯಾಗುವಂತೆ ಮಾಡುತ್ತೇವೆ ಎಂದು ಹೇಳಿದರಲ್ಲದೇ ಉಡುಪಿ ಮತ್ತು ಧರ್ಮಸ್ಥಳಗಳಲ್ಲಿ ಆಣೆ ಪ್ರಮಾಣ ಮಾಡಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಈಗ ಜನರ ವಿಶ್ವಾಸವನ್ನೂ ಸಹ ಕಳೆದುಕೊಂಡಿದ್ದಾರೆ ಎಂದರು.

ಸಿಂಧನೂರಿಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಆಗಮಿಸುವ ಬಗ್ಗೆ ಪ್ರಶ್ನೆಸಿದ ಪತ್ರಕರ್ತರಿಗೆ ಉತ್ತರಿಸಿದ ಅವರು, ಅಮಿತ್‍ ಶಾ ಬರುತ್ತಾನೆ, ಭಾಷಣ ಮಾಡಿ ಹೋಗುತ್ತಾನೆ ಅಷ್ಟೇ. ಮತ್ತೇನಾದರೂ ಇಲ್ಲಸಲ್ಲದ ವಿಷಯಗಳನ್ನು ಮಾತನಾಡಿದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ, ನಗರಸಭೆ ಸದಸ್ಯ ಖಾಸೀಂ ಸಾಬ್ ಗದ್ವಾಲ್ ಸೇರಿದಂತೆ ಹಲವರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)