varthabharthi


ಪ್ರಚಲಿತ

ಬಿಜೆಪಿ ಮತ್ತು ಬಸವಣ್ಣ

ವಾರ್ತಾ ಭಾರತಿ : 11 Feb, 2019
ಸನತ್ ಕುಮಾರ್ ಬೆಳಗಲಿ

ಭಾರತದಲ್ಲಿ ಈಗಿರುವ ಜಾತ್ಯತೀತ ಆಡಳಿತ ಪದ್ಧತಿ ಬಗ್ಗೆ, ಸಂವಿಧಾನದ ಬಗ್ಗೆ ಆರೆಸ್ಸೆಸ್‌ಗೆ ಸಮ್ಮತಿಯಿಲ್ಲ. ಮೊಗಲರು ಬರುವುದಕ್ಕಿಂತ ಮುಂಚಿನ ಆಡಳಿತ ವ್ಯವಸ್ಥೆ ಅದಕ್ಕೆ ಬೇಕಾಗಿದೆ. ರಾಜ್ಯಾಡಳಿತ ಧಾರ್ಮಿಕ ನಿರ್ದೇಶನದಂತೆ ನಡೆಯಬೇಕೆಂದು ಅದರ ಬಯಕೆ. ಅದಕ್ಕಾಗಿ ಅದು ಪದೇ ಪದೇ ಹಿಂದೂ ರಾಷ್ಟ್ರದ ಘೋಷಣೆ ಮಾಡುತ್ತಿದೆ.


ಬಿಜೆಪಿ ಕೋಮುವಾದಿ ಪಕ್ಷ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದು ಸ್ವತಂತ್ರ ರಾಜಕೀಯ ಪಕ್ಷವಲ್ಲ. ಅದನ್ನು ನಿಯಂತ್ರಿಸುವ ಅಧಿಕಾರ ಕೇಂದ್ರವೊಂದು ನಾಗಪುರದಲ್ಲಿದೆ. ಅದರ ಹೆಸರು ಆರೆಸ್ಸೆಸ್. ಅದಕ್ಕೆ ಒಂದು ನಿರ್ದಿಷ್ಟ ಸಿದ್ಧಾಂತವಿದೆ. ಆ ಸಿದ್ಧಾಂತದ ಜಾರಿಗಾಗಿ ಅದು ತನ್ನದೇ ಆದ ಕೆಲ ಉಪಸಂಘಟನೆಗಳನ್ನು ಕಟ್ಟಿಕೊಂಡಿದೆ. ವಿದ್ಯಾರ್ಥಿಗಳಿಗಾಗಿ ಎಬಿವಿಪಿ, ಕಾರ್ಮಿಕರಿಗಾಗಿ ಬಿಎಂಎಸ್, ಮಹಿಳೆಯರಿಗಾಗಿ ರಾಷ್ಟ್ರಸೇವಿಕಾ ಹೀಗೆ ಹಲವಾರು ಸಂಘಟನೆಗಳಿರುವಂತೆ ರಾಜಕೀಯಕ್ಕಾಗಿ ಬಿಜೆಪಿ ಇದೆ.
ಭಾರತದಲ್ಲಿ ಈಗಿರುವ ಜಾತ್ಯತೀತ ಆಡಳಿತ ಪದ್ಧತಿ ಬಗ್ಗೆ, ಸಂವಿಧಾನದ ಬಗ್ಗೆ ಆರೆಸ್ಸೆಸ್‌ಗೆ ಸಮ್ಮತಿಯಿಲ್ಲ. ಮೊಗಲರು ಬರುವುದಕ್ಕಿಂತ ಮುಂಚಿನ ಆಡಳಿತ ವ್ಯವಸ್ಥೆ ಅದಕ್ಕೆ ಬೇಕಾಗಿದೆ. ರಾಜ್ಯಾಡಳಿತ ಧಾರ್ಮಿಕ ನಿರ್ದೇಶನದಂತೆ ನಡೆಯಬೇಕೆಂದು ಅದರ ಬಯಕೆ. ಅದಕ್ಕಾಗಿ ಅದು ಪದೇ ಪದೇ ಹಿಂದೂ ರಾಷ್ಟ್ರದ ಘೋಷಣೆ ಮಾಡುತ್ತಿದೆ.
ಬುದ್ಧ, ಬಸವಣ್ಣ, ಬಾಬಾ ಸಾಹೇಬರನ್ನು ಒಪ್ಪುವವರು ಹಿಂದೂ ಪರಿಕಲ್ಪನೆಯನ್ನು ಒಪ್ಪುವುದಿಲ್ಲ. ‘ವೇದಕ್ಕೆ ಓರೆಯ ಕಟ್ಟುವೇ, ಆಗಮದ ಮೂಗ ಕೊಯ್ಯುವೆ’ ಎಂದು ಹೇಳಿದ ಬಸವಣ್ಣನವರನ್ನು ಹಿಂದೂ ರಾಷ್ಟ್ರ ಸಮರ್ಥಕರು ಒಪ್ಪುವುದಿಲ್ಲ. ಆದರೆ ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ನಮ್ಮ ಸಂವಿಧಾನ ನಮ್ಮ ದೇಶ ಹೀಗಿರಬೇಕೆಂಬ ಬಗ್ಗೆ ಸ್ಪಷ್ಟವಾಗಿ ಹೇಳಿದೆ.
 

ಭಾರತವು ಎಲ್ಲ ಧರ್ಮಗಳಿಗೆ ಸೇರಿದ ರಾಷ್ಟ್ರ ಎಂದು ಸಂವಿಧಾನ ಸಾರಿದೆ. ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಬಹುಸಂಖ್ಯಾತರು ಸವಾರಿ ಮಾಡದಿರಲಿ ಎಂದು ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೆಲವು ವಿಶೇಷ ಅವಕಾಶಗಳನ್ನು ಸಂವಿಧಾನ ಕಲ್ಪಿಸಿದೆ. ಇದನ್ನು ಸಹಿಸದ ದುಷ್ಟ ಶಕ್ತಿಗಳು ಇತ್ತೀಚೆಗೆ ಸಂವಿಧಾನವನ್ನೇ ದಿಲ್ಲಿಯಲ್ಲಿ ಸುಟ್ಟು ಹಾಕಿದವು. ಸಂವಿಧಾನವನ್ನು ಸುಡುವುದೆಂದರೆ ಪ್ರಜಾಪ್ರಭುತ್ವ, ಸೌಹಾರ್ದ, ಸೋದರತೆ, ಸಮಾನತೆ, ಸಾಮಾಜಿಕ ನ್ಯಾಯ ಇವೆಲ್ಲ ಸಿದ್ಧಾಂತಗಳನ್ನು ಸುಟ್ಟಂತೆ. ಸಂವಿಧಾನವನ್ನು ಸುಡುವ ಈ ಕೃತ್ಯಕ್ಕೆ ಹಿಂದೂ ರಾಷ್ಟ್ರ ಪ್ರತಿಪಾದಕರ ಪರೋಕ್ಷ ಬೆಂಬಲವಿದೆ. ಬಿಜೆಪಿಯ ಪ್ರಧಾನ ಮಂತ್ರಿಯೂ ಇದನ್ನು ಖಂಡಿಸುವುದಿಲ್ಲ. ಇಂಥ ಬಿಜೆಪಿ ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರಕ್ಕೆ ಬಂದಿದ್ದು ವೇದಕ್ಕೆ ಒರೆಯ ಕಟ್ಟುವೆ ಎಂಬ ಬಸವಣ್ಣನವರ ಹೆಸರನ್ನು ಹೇಳಿಕೊಳ್ಳುವ ಸಮುದಾಯದ ಬೆಂಬಲದಿಂದ. ಎಲ್ಲ ಲಿಂಗಾಯತರು ಬಿಜೆಪಿ ಬೆಂಬಲಿಗರಲ್ಲ. ಕಾಂಗ್ರೆಸ್ ಜೊತೆಗೂ ಸಾಕಷ್ಟು ಲಿಂಗಾಯತರಿದ್ದಾರೆ. ಆದರೆ ಬಹುತೇಕ ಲಿಂಗಾಯತರು ಚುನಾವಣೆಯಲ್ಲಿ ಓಟು ಹಾಕುವುದು ಬಿಜೆಪಿಗೆ. ಕಾಂಗ್ರೆಸ್ ಇಬ್ಭಾಗವಾದ ನಂತರ ಅಂದರೆ ಎಪ್ಪತ್ತರ ದಶಕದ ನಂತರ ಕರ್ನಾಟಕದ ಲಿಂಗಾಯತರು ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರಲ್ಲಿ ತಮ್ಮ ನಾಯಕನನ್ನು ಕಂಡರು. ನಂತರ ವೀರೇಂದ್ರ ಪಾಟೀಲರನ್ನು ಒಪ್ಪಿಕೊಂಡರು. ಒಂದು ಹಂತದಲ್ಲಿ ರಾಮಕೃಷ್ಣ ಹೆಗಡೆ ಅವರೂ ಲಿಂಗಾಯತರ ನಾಯಕರಾಗಿದ್ದರು. ಆದರೆ ಜನತಾ ಪಕ್ಷ ಒಡೆದು ಹೋಳಾದಾಗ ಲಿಂಗಾಯತರಿಗೆ ನಾಯಕತ್ವವಿರಲಿಲ್ಲ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಬಹುಸಂಖ್ಯೆಯಲ್ಲಿ ಇರುವ ಲಿಂಗಾಯತರು ದಿಕ್ಕು ಕಾಣದಾದರು. ಈ ಸಂದರ್ಭವನ್ನು ಬಳಸಿಕೊಂಡ ಮಂಡ್ಯ ಮೂಲದ ಬಿ.ಎಸ್. ಯಡಿಯೂರಪ್ಪ ಲಿಂಗಾಯತ ನಾಯಕನಾಗಿ ಹೊರ ಹೊಮ್ಮಿದರು. ಬಾಲ್ಯದಿಂದಲೂ ಆರೆಸ್ಸೆಸ್ ಶಾಖೆಯಲ್ಲಿ ಬೆಳೆದ ಯಡಿಯೂರಪ್ಪ ಸಂಘದ ಪ್ರತಿಪಾದಕರಾಗಿ ಶಿವಮೊಗ್ಗ ಜಿಲ್ಲೆಗೆ ಬಂದರು. ಆಗ ಶಿಕಾರಿಪುರದ ಅಕ್ಕಿ ಗಿರಣಿ ಮಾಲಕರ ಪುತ್ರಿಯನ್ನು ಒಲಿಸಿಕೊಂಡು ಮದುವೆಯಾದರು. ಶಿಕಾರಿಪುರದಲ್ಲಿ ಲಿಂಗಾಯತರಿಗೆ ನಾಯಕರಾಗಿ ಬೆಳೆದರು. ಹೀಗೆ ಜಾತಿ ಕಾಣಕ್ಕಾಗಿ ಲಿಂಗಾಯತರ ನಾಯಕರಾದ ಯಡಿಯೂರಪ್ಪ ನಂತರ ಮುಖ್ಯಮಂತ್ರಿಯೂ ಆದರು. ಅಧಿಕಾರ ಸಿಕ್ಕಾಗ ಅದನ್ನು ಜನಪರ ಕಾರ್ಯಕ್ರಮಗಳ ಜಾರಿಗೆ ಬಳಸಲಿಲ್ಲ. ನಾನಾ ಹಗರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದರು. ತನಗಾದ ಅನ್ಯಾಯವನ್ನು ಲಿಂಗಾಯತರಿಗಾದ ಅನ್ಯಾಯವೆಂದು ಬಿಂಬಿಸಿದರು.
ನಂತರ ಬಿಜೆಪಿ ಬಿಟ್ಟು ಕೆಜೆಪಿ ಮಾಡಿದಾಗ ಅನೇಕ ಪ್ರಗತಿಪರರು ಸಂತಸಗೊಂಡಿದ್ದರು. ಚಂಪಾ ಅವರಂತಹ ಸೋಶಿಯಲಿಸ್ಟ್ ಲೇಖಕರು ಕೆಜೆಪಿ ಸೇರಿದರು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಗೂ ಜನರು ಬೆಂಬಲ ನೀಡಿದರು. ಬಿಜೆಪಿ ಮಾತ್ರ ಅಧಿಕಾರಕ್ಕೆ ಬರಲಿಲ್ಲ. ಕಾಂಗ್ರೆಸ್‌ನ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.
ಕೆಜೆಪಿ ಮಾಡಿದಾಗ ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂದು ಯಡಿಯೂರಪ್ಪ ಪ್ರಮಾಣ ಮಾಡಿದ್ದರು. ಇವರ ಆಣೆ ಪ್ರಮಾಣ ನಂಬಿ ಎಂ.ಬಿ. ಪಾಟೀಲರಂಥ ಸಮಾಜವಾದಿ ಹಿನ್ನೆಲೆಯ ಶಾಸಕರು ಇವರನ್ನು ಬೆಂಬಲಿಸಿದರು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಜಂಪ್ ಮಾಡಿದರು.
 
 ಆರೆಸ್ಸೆಸ್ ಶಾಖೆಯಲ್ಲಿ ಬೆಳೆದ ಯಡಿಯೂರಪ್ಪ ಬದುಕಿನಲ್ಲಿ ಅಳವಡಿಸಿಕೊಂಡದ್ದು ಲಿಂಗಾಯತ ಸಂಸ್ಕಾರಗಳನ್ನಲ್ಲ. ಬದಲಿಗೆ ವೈದಿಕ ಸಂಸ್ಕಾರಗಳನ್ನು. ಬ್ರಾಹ್ಮಣ ಪುರೋಹಿತರ ಎದುರು ಅಂಗಿಬಿಚ್ಚಿ ನಿಲ್ಲುತ್ತಾರೆ. ಹಣೆಗೆ ಲಿಂಗಾಯತರಂತೆ ವಿಭೂತಿಯನ್ನು ಧರಿಸುವುದಿಲ್ಲ ಕುಂಕುಮ ಹಚ್ಚಿಕೊಳ್ಳುತ್ತಾರೆ. ಇಂಥ ಯಡಿಯೂರಪ್ಪ ಇಂದಿಗೂ ಲಿಂಗಾಯತರ ನಾಯಕ. ಅವರನ್ನು ಮುಖ್ಯಮಂತ್ರಿ ಮಾಡಲೆಂದೇ ಬಹುತೇಕ ಲಿಂಗಾಯತರು ಅದೂ ಮುಂಬೈ ಕರ್ನಾಟಕದಲ್ಲಿ (ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಗದಗ) ಬಿಜೆಪಿಗೆ ಮತ ಹಾಕಿದರು ಹೀಗಾಗಿ ಬಿಜೆಪಿ 104 ಸ್ಥಾನ ಗೆದ್ದಿತು.
   
 
  ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಉತ್ತರ ಕರ್ನಾಟಕದ ಹಲವೆಡೆ ಬೃಹತ್ ಸಮಾವೇಶಗಳು ನಡೆದವು. ಈ ಸಮಾವೇಶಗಳಲ್ಲಿ ಕೆಲವೆಡೆ ನಾನೂ ಭಾಗವಹಿಸಿದ್ದೆ. ಯಡಿಯೂರಪ್ಪ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನು ವಿರೋಧಿಸಿದರು. ಬಹಿರಂಗವಾಗಿ ಖಂಡಿಸಿದರು. ಆದರೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದರು. ಇವೆಲ್ಲದರ ಪರಿಣಾಮವಾಗಿ ಸಿದ್ದರಾಮಯ್ಯ ಮತ್ತೆ ಗೆದ್ದು ಅಧಿಕಾರಕ್ಕೆ ಬರುತ್ತಾರೆ ಎಂದು ನಾವೆಲ್ಲ ನಂಬಿದ್ದೆವು. ಆದರೆ ಚುನಾವಣೆಯಲ್ಲಿ ನಡೆದದ್ದೇ ಬೇರೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಪರವಾಗಿ ಶಿಫಾರಸು ಮಾಡಿದ ಸಿದ್ದರಾಮಯ್ಯನವರನ್ನು ಬೆಂಬಲಿಸಬೇಕಾದವರು ಬೆಂಬಲಿಸಲಿಲ್ಲ. ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಲಿಂಗಾಯತರು ಬಿಜೆಪಿಗೆ ಓಟು ಹಾಕಿದರು. ಒಂದೆಡೆ ಬಸವಾ ಬಸವಾ ಎನ್ನುವವರೇ, ಜಾತಿ ಕಾರಣಕ್ಕಾಗಿ ಯಡಿಯೂರಪ್ಪನವರನ್ನು ಬೆಂಬಲಿಸಿದ್ದು ನನಗೆ ತುಂಬ ಬೇಸರವಾಯಿತು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಡೆದಾಗ ಎಡಪಂಥೀಯ ಚಳವಳಿಯ ಹಿನ್ನೆಲೆಯಿಂದ ಬಂದ ನನ್ನಂಥವರೂ ಕೂಡ ಎಷ್ಟು ಭಾವುಕರಾಗಿದ್ದೆವೆಂದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಾಗಪುರದಲ್ಲಿ ಬೌದ್ಧ ಧರ್ಮ ಸೇರಿದಂತೆ ನಾವು ಸಾಮಾಜಿಕವಾಗಿ ಲಿಂಗಾಯತ ಧರ್ಮ ಸೇರಬಾರದೇಕೆ ಎಂದೆಲ್ಲ ಅಂದುಕೊಂಡಿದ್ದೆವು.
 ಯಾವಾಗ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಗೆ ಬಿತ್ತೋ ಆಗ ನಮ್ಮ ಉತ್ಸಾಹ ಇಳಿದು ಹೋಯಿತು. ಆಗ ನಾನು ಮಾತನಾಡಿಸಿದ ಲಿಂಗಾಯತ ಚಳವಳಿಯಲ್ಲಿದ್ದ ಮಾತೆ ಮಹಾದೇವಿ ಅವರ ಕೆಲ ಭಕ್ತರು ‘ನಮ್ಮ ಯಡಿಯೂರಪ್ಪ ಸಿಎಂ ಆಗಲಿ ಮತ್ತೆ ಕುರುಬರು ಬರುವುದು ಬೇಡ’ ಎಂದು ಮತ ಹಾಕಿದೆವು ಎಂದರು. ಇಂಥವರೊಂದಿಗೆ ಮಾತನಾಡಿ ಪ್ರಯೋಜನವಿಲ್ಲ ಎಂದು ಸುಮ್ಮನಾದೆ. ಯಡಿಯೂರಪ್ಪ ಮಾನಸಿಕವಾಗಿ ಲಿಂಗಾಯತರಲ್ಲ. ಭ್ರಷ್ಟಾಚಾರದ ಆರೋಪ ಹೊತ್ತವರು ತನಗಿಂತ ಚಿಕ್ಕವನಾದ ಅಮಿತ್‌ಶಾರ ಕಾಲಿಗೆ ಬೀಳುವ ಸ್ವಾಭಿಮಾನವಿಲ್ಲದ ವ್ಯಕ್ತಿ. ಇಂಥವರನ್ನು ಲಿಂಗಾಯತರು ತಮ್ಮ ನಾಯಕರೆಂದು ಓಟು ಹಾಕುತ್ತಾರೆ. ಕೆಲ ಜಗದ್ಗುರುಗಳು ಚಂಚಲವಾಗಿ ನಿಲ್ಲುತ್ತಾರೆ.
 ಪ್ರಗತಿಪರ ಮಠಾಧೀಶರು, ರಂಜಾನ್ ದರ್ಗಾರಂತಹ ಲೇಖಕರು ಬಸವಣ್ಣನವರ ಬಗ್ಗೆ ಎಷ್ಟೇ ಹೇಳಲಿ, ಎಷ್ಟೇ ಬರೆಯಲಿ ಲಿಂಗಾಯತರಿಗೆ ಯಡಿಯೂರಪ್ಪ ಮಾತ್ರ ಮುಖ್ಯಮಂತ್ರಿಯಾಗಬೇಕು. ಅದಕ್ಕಾಗಿ ಚುನಾವಣೆ ಬಂದಾಗ ಅವರು ಒಟ್ಟಾಗುತ್ತಾರೆ. ಲಿಂಗಾಯತರು ಬಸವಣ್ಣನವರನ್ನು ತಮ್ಮ ಆದರ್ಶ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಚುನಾವಣೆ ಬಂದಾಗ ಬಸವ ತತ್ವಕ್ಕೆ ಸಂಬಂಧವೇ ಇಲ್ಲದ ಯಡಿಯೂರಪ್ಪನವರ ಪರವಾಗಿ ನಿಲ್ಲುತ್ತಾರೆ. ಕೆಲ ಪ್ರಗತಿಪರ ಲಿಂಗಾಯತರು ಯಡಿಯೂರಪ್ಪನವರ ವಿರುದ್ಧ ಬಿಜೆಪಿಯಲ್ಲಿನ ಬ್ರಾಹ್ಮಣರು ಪಿತೂರಿ ನಡೆಸಿದ್ದಾರೆ ಎಂದು ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ.
 
 ಆದರೆ ಮನುವಾದಿ ಪರಿವಾರಕ್ಕೆ ಸೇರಿದ ಪಕ್ಷವೊಂದರ ನಾಯಕ ಯಡಿಯೂರಪ್ಪನವರ ಬಗ್ಗೆ ಇಂತಹ ಸಹಾನುಭೂತಿ ಅನಗತ್ಯ. ಕರ್ನಾಟಕದಲ್ಲಿ ಸಂಘಪರಿವಾರ ಬೇರು ಬಿಡಲು ಈ ಯಡಿಯೂರಪ್ಪನವರೇ ಕಾರಣ. ಲಿಂಗಾಯತರು ಈಗ ಗೊಂದಲದಿಂದ ಹೊರಗೆ ಬರಬೇಕು. ಇಬ್ಬಂದಿತನ ಬಿಡಬೇಕು. ಲಿಂಗಾಯತರು ತಮಗೆ ಬಸವಣ್ಣ ಬೇಕೋ ಇಲ್ಲ, ಯಡಿಯೂರಪ್ಪ ಬೇಕೋ ಎರಡರಲ್ಲಿ ಒಂದನ್ನ ಆಯ್ಕೆ ಮಾಡಿಕೊಳ್ಳಬೇಕು. ನೀವು ಲಿಂಗಾಯತರಾದರೆ ಜಾತಿಯನ್ನು ತಿರಸ್ಕರಿಸಬೇಕು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)