varthabharthi

ರಾಷ್ಟ್ರೀಯ

ರಫೇಲ್ ಡೀಲ್ ನಲ್ಲಿ ‘ಭ್ರಷ್ಟಾಚಾರ ವಿರೋಧಿ’ ಶರತ್ತುಗಳನ್ನು ಕೈಬಿಟ್ಟಿದ್ದ ಕೇಂದ್ರ ಸರಕಾರ: ವರದಿ

ವಾರ್ತಾ ಭಾರತಿ : 11 Feb, 2019

ಹೊಸದಿಲ್ಲಿ,ಫೆ.11: ರಫೇಲ್ ಯುದ್ಧವಿಮಾನಗಳ ಖರೀದಿಗಾಗಿ ಮಾಡಿಕೊಳ್ಳಲಾಗಿರುವ ಒಪ್ಪಂದಕ್ಕೆ ಸಹಿ ಹಾಕುವ ಕೆಲವೇ ದಿನಗಳ ಮೊದಲು ಭ್ರಷ್ಟಾಚಾರ ನಿಗ್ರಹ ದಂಡನೆಗಳು ಮತ್ತು ಎಸ್ಕ್ರೋ ಖಾತೆಯ ಪ್ರಮುಖ ಷರತ್ತುಗಳನ್ನು ಅದರಿಂದ ಕೈಬಿಡಲಾಗಿತ್ತು ಎಂದು ‘ದಿ ಹಿಂದೂ’ ಆಂಗ್ಲ ದೈನಿಕವು ತನ್ನ ತನಿಖಾ ವರದಿಯಲ್ಲಿ ಬಹಿರಂಗಗೊಳಿಸಿದೆ.

ಇವು ರಕ್ಷಣಾ ಖರೀದಿಗಳಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಪದೇ ಪದೇ ಒತ್ತು ನೀಡುತ್ತ್ತಿರುವ ಸರಕಾರದಿಂದ ಕೊಡಮಾಡಲ್ಪಟ್ಟಿರುವ ಪ್ರಮುಖ ಮತ್ತು ಅಭೂತಪೂರ್ವ ರಿಯಾಯಿತಿಗಳಾಗಿವೆ ಎಂದು  ಅದು ಬಣ್ಣಿಸಿದೆ.

ರಫೇಲ್ ಯುದ್ಧವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿಯು ನಡೆಸಿದ್ದ ‘ಸಮಾನಾಂತರ ಮಾತುಕತೆಗಳಿಗೆ’ ರಕ್ಷಣಾ ಸಚಿವಾಲಯದ ಆಕ್ಷೇಪಗಳನ್ನು ದೈನಿಕವು ಈ ಹಿಂದೆ ವರದಿ ಮಾಡಿತ್ತು.

ಉನ್ನತ ಮಟ್ಟದ ರಾಜಕೀಯ ಹಸ್ತಕ್ಷೇಪದಿಂದಾಗಿ ರಫೇಲ್ ಯುದ್ಧವಿಮಾನಗಳನ್ನು ತಯಾರಿಸುವ ಡಸಾಲ್ಟ್ ಏವಿಯೇಷನ್ ಮತ್ತು ಕ್ಷಿಪಣಿ ತಯಾರಕ ಎಂಬಿಡಿಎ ಫ್ರಾನ್ಸ್ ಜೊತೆಗಿನ ಒಪ್ಪಂದದಿಂದ ‘ಅನುಚಿತ ಪ್ರಭಾವ ಬಳಕೆ ಮತ್ತು ಏಜೆಂಟ್/ಏಜೆನ್ಸಿಗೆ ಕಮಿಷನ್ ನೀಡಿಕೆಗಾಗಿ ದಂಡನೆ ಮತ್ತು ಕಂಪನಿಯ ಲೆಕ್ಕಪತ್ರಗಳ ಪರಿಶೀಲನೆ’ ಇವುಗಳ ಕುರಿತ ನಿಗದಿತ ರಕ್ಷಣಾ ಖರೀದಿ ಪ್ರಕ್ರಿಯೆಯಲ್ಲಿನ ಉಪನಿಯಮಗಳನ್ನು ಸರಕಾರವು ಕೈಬಿಟ್ಟಿದೆ ಎಂದು ದೈನಿಕವು ಬೆಟ್ಟು ಮಾಡಿದೆ.

2016,ಸೆ.23ರಂದು ಸಹಿ ಮಾಡಲಾದ ಭಾರತ ಮತ್ತು ಫ್ರಾನ್ಸ್ ನಡುವಿನ ಅಂತರ್-ಸರಕಾರಿ ಒಪ್ಪಂದದಡಿ ಡಸಾಲ್ಟ್ ರಫೇಲ್ ಯುದ್ಧವಿಮಾನಗಳ ಮತ್ತು ಎಂಬಿಡಿಎ ಫ್ರಾನ್ಸ್ ಭಾರತೀಯ ವಾಯುಪಡೆಗೆ ಶಸ್ತ್ರಾಸ್ತ್ರಗಳ ಪೂರೈಕೆ ಕಂಪನಿ ಗಳಾಗಿವೆ.

ಕೊನೇ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳ ಹಿಂದೆ ಯಾವ ಹಿತಾಸಕ್ತಿಗಳಿದ್ದವು? ಭ್ರಷ್ಟಾಚಾರ ನಿಗ್ರಹ ಷರತ್ತುಗಳು ಮತ್ತು ಎಸ್ಕ್ರೋ ಖಾತೆಯನ್ನು ಕೈಬಿಟ್ಟಿರುವುದರಿಂದ ಭಾರತೀಯ ವಾಯುಪಡೆಗೆ ಯಾವ ಲಾಭ ದೊರೆಯಲಿದೆ ಎಂದು ತನ್ನ ವರದಿಯ ಕುರಿತಂತೆ ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ದಿ ಹಿಂದು ಪಬ್ಲಿಷಿಂಗ್ ಗ್ರೂಪ್‌ನ ಅಧ್ಯಕ್ಷ ಎನ್. ರಾಮ್ ಪ್ರಶ್ನಿಸಿದ್ದಾರೆ.

2016ರಲ್ಲಿ ಆಗಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿಯು ಸಭೆ ಸೇರಿತ್ತು ಮತ್ತು ಅಂತರ್-ಸರಕಾರಿ ಒಪ್ಪಂದದಲ್ಲಿ ಮಾಡಲಾಗಿದ್ದ ಎಂಟು ಬದಲಾವಣೆಗಳಿಗೆ ಒಪ್ಪಿಗೆಯನ್ನು ನೀಡಿತ್ತು ಎನ್ನ್ನುವುದನ್ನು ಬಹಿರಂಗಗೊಳಿಸಿರುವ ಅಧಿಕೃತ ದಾಖಲೆಗಳನ್ನು ದೈನಿಕವು ಉಲ್ಲೇಖಿಸಿದೆ. ಆ.24ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆಯಲ್ಲಿ ಒಪ್ಪಂದ ಮತ್ತು ದಾಖಲೆಗಳಿಗೆ ಒಪ್ಪಿಗೆ ನೀಡಲಾಗಿತ್ತು ಎಂದೂ ಅದು ವರದಿ ಮಾಡಿದೆ.

ರಕ್ಷಣಾ ಖರೀದಿ ಮಂಡಳಿಯ ಸದಸ್ಯ-ಕಾರ್ಯದರ್ಶಿ ವೈಸ್ ಅಡ್ಮಿರಲ್ ಅಜಿತ್ ಕುಮಾರ್ ಅವರು ಸಹಿ ಮಾಡಿರುವ ಟಿಪ್ಪಣಿಯಲ್ಲಿ ದಾಖಲಿಸಲಾಗಿರುವ ಎಂಟು ಬದಲಾವಣೆಗಳಲ್ಲಿ ಅತ್ಯಂತ ಮಹತ್ವದ ಬದಲಾವಣೆಯನ್ನು ಉಪ ಪ್ಯಾರಾ(ಸಿ)ದಲ್ಲಿ ಮಾಡುವ ಮೂಲಕ ಭ್ರಷ್ಟಾಚಾರ ನಿಗ್ರಹ ಷರತ್ತುಗಳನ್ನು ಒಪ್ಪಂದದಡಿ ‘ಸಪ್ಲೈ ಪ್ರೋಟೊಕಾಲ್’ನಿಂದ ಕೈಬಿಡಲಾಗಿದೆ. ಈ ಪ್ರೋಟೊಕಾಲ್‌ಗಳನ್ನು ಖಾಸಗಿ ಕಂಪನಿಗಳಾಗಿರುವ ಡಸಾಲ್ಟ್ ಮತ್ತು ಎಂಬಿಡಿಎ ಕಾರ್ಯಗತಗೊಳಿಸಬೇಕಿತ್ತು.

ರಫೇಲ್ ಒಪ್ಪಂದಕ್ಕಾಗಿ ಭಾರತದ ಸಂಧಾನ ತಂಡದಲ್ಲಿಯ ಮೂವರು ಸದಸ್ಯರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಹಣಕಾಸು ವಿವೇಚನೆಯ ಮೂಲ ಅಗತ್ಯಗಳನ್ನು ಕೈಬಿಡುವುದು ಸಮರ್ಥನೀಯವಲ್ಲ ಎಂದು ಅವರು ಲಿಖಿತ ರೂಪದಲ್ಲಿ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದರು ಎಂದು ದೈನಿಕವು ಹೇಳಿದೆ.

2013ರ ರಕ್ಷಣಾ ಖರೀದಿ ಪ್ರಕ್ರಿಯೆಯಡಿ ರಫೇಲ್ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು,ನಿಗದಿತ ಒಪ್ಪಂದ ದಾಖಲೆಯು ಎಲ್ಲ ಖರೀದಿಗಳಿಗೆ ಮಾರ್ಗ ಸೂಚಿಯಾಗಿರುತ್ತದೆ ಎಂದು ಈ ಪ್ರಕ್ರಿಯೆಯಲ್ಲಿ ಹೇಳಲಾಗಿದೆ. ಆದರೆ ಸರಕಾರವು ಎರಡು ಖಾಸಗಿ ಕಂಪನಿಗಳ ಜೊತೆಗಿನ ಸಪ್ಲೈ ಪ್ರೋಟೊಕಾಲ್‌ಗಳಿಂದ ಉಪನಿಯಮಗಳನ್ನು ಕೈಬಿಟ್ಟಿತ್ತು. ಸರಕಾರವು ಫ್ರಾನ್ಸ್‌ನಿಂದ ಸಾರ್ವಭೌಮ ಅಥವಾ ಬ್ಯಾಂಕ್ ಗ್ಯಾರಂಟಿಯನ್ನು ಕೈಬಿಟ್ಟು,ಯಾವುದೇ ಕಾನೂನು ಬಾಧ್ಯತೆಯಿಲ್ಲದ ಫ್ರೆಂಚ್ ಪ್ರಧಾನಿಗಳ ಪತ್ರಕ್ಕೆ ತೃಪ್ತಿ ಪಟ್ಟುಕೊಂಡಿದ್ದರಿಂದ ಇದು ಮಹತ್ವದ್ದಗಿದೆ ಎಂದು ದೈನಿಕವು ತನ್ನ ತನಿಖಾ ವರದಿಯಲ್ಲಿ ಹೇಳಿದೆ.

► ಕಾಂಗ್ರೆಸ್ ದಾಳಿ

ಉದ್ಯಮಿ ಅನಿಲ ಅಂಬಾನಿಗೆ ಲಾಭ ಮಾಡಿಕೊಡಲು ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರದ ತನ್ನ ಆರೋಪವನ್ನು ಪುನರುಚ್ಚರಿಸಿ ಸೋಮವಾರ ಟ್ವೀಟಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,‘ಭಾರತೀಯ ವಾಯುಪಡೆಯಿಂದ 30,000 ಕೋ.ರೂ.ಗಳನ್ನು ಕೊಳ್ಳೆ ಹೊಡೆಯಲು ಸ್ವತಃ ಚೌಕಿದಾರ(ಮೋದಿ)ರೇ ಅಂಬಾನಿಗೆ ಬಾಗಿಲು ತೆರೆದಿದ್ದಾರೆ’ಎಂದು ಹೇಳಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಸರಕಾರವು ಎಣಿಸಿದ್ದಕ್ಕಿಂತಲೂ ವೇಗವಾಗಿ ರಫೇಲ್ ಒಪ್ಪಂದವು ಬಯಲಾಗುತ್ತಿದೆ ಎಂದಿದ್ದಾರೆ.

► ಬಿಜೆಪಿ ಸಮರ್ಥನೆ

ಕಾಂಗ್ರೆಸ್ ಮತ್ತು ದಿ ಹಿಂದೂ ಪತ್ರಿಕೆ ಪರಸ್ಪರ ಕೈ ಜೋಡಿಸಿವೆ. ಕಾಂಗ್ರೆಸ್ ಹೊಲಸು ಆಟವನ್ನು ಆಡುತ್ತಿದೆ ಮತ್ತು ಸೇನೆಗೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಬಿಜೆಪಿ ನಾಯಕ ಖೇಮಚಂದ್ ಶರ್ಮಾ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)