varthabharthi

ಕರಾವಳಿ

ಸಾಲ್ಮರ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಕಾಂಗ್ರೆಸ್ ಧರಣಿ

ವಾರ್ತಾ ಭಾರತಿ : 11 Feb, 2019

ಪುತ್ತೂರು, ಫೆ.11: ದೇವರು, ಧರ್ಮದ ಹೆಸರನ್ನು ಹೇಳುತ್ತಾ ಮತ ಪಡೆದು ಗೆಲ್ಲುವ ಬಿಜೆಪಿ ಜನಪ್ರತಿನಿಧಿಗಳು ಗೆದ್ದ ಬಳಿಕ ಅಭಿವೃದ್ಧಿ ಕೆಲಸವನ್ನು ಮಾಡುವುದಕ್ಕಿಂತ ಹೆಚ್ಚಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆಗಳು ಅವರಿಗೆ ಬೇಕಾಗಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಸಾಲ್ಮರ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಇಲ್ಲಿನ ಸಾಲ್ಮರ ರೈಲ್ವೇ ಕ್ರಾಸಿಂಗ್ ಬಳಿಯಲ್ಲಿ ಸೋಮವಾರ ನಡೆದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಈ ಭಾಗದಲ್ಲಿ ಸುಮಾರು 30 ವರ್ಷಗಳ ಕಾಲ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಅವರಲ್ಲಿ ಹಲವರು ಸಚಿವರಾಗಿಯೂ ನೇಮಕಗೊಂಡಿದ್ದಾರೆ. ಪುತ್ತೂರಿನವರೇ ಸಂಸದರಾಗಿ, ಕೇಂದ್ರದ ರೈಲ್ವೇ ಸಚಿವರಾಗಿ, ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಅವರಿಗೆ ಯಾರಿಗೂ ಇಲ್ಲಿನ ರೈಲ್ವೇ ಕ್ರಾಸಿಂಗ್ ಸಮಸ್ಯೆ ಆರ್ಥವಾಗದೇ ಇರುವುದು ದುರಂತ ಎಂದರು.

ಜನರ ಅಭಿವೃದ್ಧಿಗಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಅಭಿವೃದ್ಧಿ ಕೆಲಸ ಮಾಡುತ್ತಾ ಯಾರಿಗೂ ನೋವಾಗದಂತೆ ಇರಬೇಕಿತ್ತು. ಆದರೆ ಬಿಜೆಪಿ ಸಂಸದರು ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿ ಜನರನ್ನು ಉದ್ರೇಕಿಸುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ಜನರಲ್ಲಿ ಕೋಮುವಾದದ ವಿಷ ಬೀಜ ಬಿತ್ತುವುದನ್ನು ಬಿಟ್ಟರೆ ಜಿಲ್ಲೆಯ ಬಿಜೆಪಿ ಸಂಸದರಿಂದ ಕಳೆದ 30 ವರ್ಷಗಳಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆ ಸಿಕ್ಕಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಸಾಲ್ಮರ ರೈಲ್ವೇ ಮೇಲ್ಸೇತುವೆ ನಿರ್ಮಾಣ ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿದ್ದು, ಇದಕ್ಕೆ ಸ್ಪಂದಿಸಬೇಕಾಗಿದ್ದ ಸಂಸದರು ಮತ್ತು ಕೇಂದ್ರ ಸರ್ಕಾರ ನಿಷ್ಕ್ರಿಯ ಧೋರಣೆ ಅನುಸರಿಸುತ್ತಿದೆ. ಪುತ್ತೂರಿನವರೇ ಆದ ಡಿ.ವಿ.ಸದಾನಂದ ಗೌಡ ಕೇಂದ್ರದ ರೈಲ್ವೇ ಸಚಿವರಾಗಿದ್ದಾಗ ಇಲ್ಲಿನ ಮೇಲ್ಸೇತುವೆ, ಮುರ ರೈಲ್ವೇ ಸೇತುವೆ ಸೇರಿದಂತೆ ಹಲವಾರು ರೈಲ್ವೇ ಸಮಸ್ಯೆಗಳು ಪರಿಹಾರವಾಗುವ ಕನಸು ಈ ಭಾಗದ ಜನರಿಗಿತ್ತು. ಆದರೆ ಅವರು ಈ ಬಗ್ಗೆ ಆಸಕ್ತಿ ತೋರಿಸದಿರುವುದು ನಮ್ಮ ದುರದೃಷ್ಟಕರ ಎಂದರು.

ಮುಂದಿನ ಲೋಕಸಬಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಪಡೆದು ಅಧಿಕಾರಕ್ಕೆ ಬಂದಲ್ಲಿ ಮೂರು ತಿಂಗಳ ಒಳಗಾಗಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ನಾವು ಮಾಡಿಸಿ ತೋರಿಸುತ್ತೇವೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮುಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ದ.ಕ, ಉಡುಪಿ ಅಲ್ಪ ಸಂಖ್ಯಾತ ಸಮಿತಿಯ ಉಸ್ತುವಾರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ರಾಜ್ಯ ಅಲ್ಪ ಸಂಖ್ಯಾತ ಘಟಕದ ಸಂಯೋಜಕ ಇಸಾಕ್ ಸಾಲ್ಮರ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಕೆಪಿಸಿಸಿ ಸದಸ್ಯ ಎಂ.ಬಿ.ವಿಶ್ವನಾಥ ರೈ, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಉಮಾನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್‌ನ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ನಗರ ಸಮಿತಿಯ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ಎಪಿಎಂಸಿ ಸದಸ್ಯ ಶಕೂರ್ ಹಾಜಿ, ಪುಡಾದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಮುಖಂಡರಾದ ಶಾರದಾ ಅರಸ್, ಬಾಬು ಶೆಟ್ಟಿ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ಈಶ್ವರ ಭಟ್ ಕಡಂದೇಲು, ಪೂರ್ಣೇಶ್, ರೋಶನ್ ರೈ ಬನ್ನೂರು, ಯಾಕೂಬ್ ದರ್ಬೆ, ಮೊಯ್ದಿನ್ ಅರ್ಶದ್ ದರ್ಬೆ, ಅಬೂಬಕರ್ ಆರ್ಲಪದವು, ನಗರಸಭಾ ಸದಸ್ಯರಾದ ಮುಹಮ್ಮದ್ ರಿಯಾಝ್, ಯೂಸುಫ್ ಶೈಲಾ ಪೈ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ಅಮಲಾ ರಾಮಚಂದ್ರ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)