varthabharthi

ಕರಾವಳಿ

ಆರೋಪಿ ಬಿಜೆಪಿ ಜಿಪಂ ಸದಸ್ಯನ ರಾಜೀನಾಮೆಗೆ ಆಗ್ರಹಿಸಿ ಧರಣಿ

ಕೋಟ ಕೊಲೆ ಪ್ರಕರಣದಿಂದ ಬಿಜೆಪಿ ನಿಜ ಬಣ್ಣ ಬಯಲು: ಸೊರಕೆ

ವಾರ್ತಾ ಭಾರತಿ : 11 Feb, 2019

ಕೋಟ, ಫೆ.11: ಕೋಟದ ಅಮಾಯಕ ಯುವಕರ ಜೋಡಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಒತ್ತಡ ಎರುವ ಕೆಲಸ ಕೆಲಸಕ್ಕೆ ಬಿಜೆಪಿ ಮುಂದಾ ಗಿರುವುದು ದುರಂತ. ಇದರಿಂದ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಆರೋಪಿಸಿದ್ದಾರೆ.

ಕೋಟದ ಯುವಕರ ಜೋಡಿ ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಪ್ರಕರಣದ ಆರೋಪಿ ಬಿಜೆಪಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೋಟ ಬಸ್ ನಿಲ್ದಾಣದ ಬಳಿ ಸೋಮವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಸಾವಿನಲ್ಲೂ ಜಾತಿ, ಧರ್ಮವನ್ನು ಬೆರೆಸಿ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುವವರೇ ಇಂದು ಅಮಾಯಕರ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಗಲಭೆ ಎಬ್ಬಿಸಿದವರು ಇಂದು ಸಿಬಿಐ ತನಿಖೆ ಎತ್ತ ಸಾಗಿದೆ ಎಂಬುವುದರ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರವೀಣ್ ಪೂಜಾರಿ, ವಿನಾಯಕ ಬಾಳಿಗ, ಬಂಟ್ವಾಳದ ಹರೀಶ್ ಪೂಜಾರಿಯವರನ್ನು ಕೊಂದವರೇ ಬಿಜೆಪಿಗರು ಎಂದು ಅವರು ದೂರಿದರು.

ಒಂದು ಪಕ್ಷದ ಜನಪ್ರತಿನಿಧಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಸಂದರ್ಭ ದಲ್ಲಿ ತಕ್ಷಣ ಆತನನ್ನು ಪಕ್ಷದಿಂದ ತೆಗೆದುಹಾಕುವುದು ಆ ಪಕ್ಷದ ನೈತಿಕ ಗುಣವನ್ನು ಎತ್ತಿ ತೋರಿಸುತ್ತದೆ. ಆದರೆ ಇಂದು ಬಿಜೆಪಿ ಪರೋಕ್ಷವಾಗಿ ಕೊಲೆಗಡುಕರಿಗೆ ಬೆಂಬಲ ಕೊಡುವುದರ ಮೂಲಕ ಯಾರು ಕೃತ್ಯ ನಡೆಸಿದ್ದಾರೆಯೋ ಅವರನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಯತೀಶ್ ಹಾಗೂ ಭರತ್ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡುವಂತೆ ಸಂಬಂಧಪಟ್ಟವರಿಗೆ ಒತ್ತಡ ಹಾಕಲಾಗುವುದು ಎಂದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿ, ಯಾರೂ ಸತ್ತರು ಕೂಡ ನಮ್ಮವ ಎಂದು ಹೇಳಿ ಗಲಭೆ ಸೃಷ್ಠಿಸುವ ಸಂಸದೆ ಶೋಭಾ ಕರಂದ್ಲಾಜೆಗೆ ಕೊಲೆಗೀಡಾದ ಅಮಾಯಕ ಭರತ್ ಹಾಗೂ ಯತೀಶ್ ನಮ್ಮವರು ಎಂದು ಅನಿಸಲಿಲ್ಲವೇ. ನಿಮ್ಮದೆ ಪಕ್ಷದ ಚುನಾಯಿತ ಸದಸ್ಯ ಮಾಡಿಸಿರುವ ಈ ಕೊಲೆಯನ್ನು ಯಾವ ರೀತಿ ಸಮರ್ಥಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.

ಹಿಂದೂಗಳೆಂದರೆ ಬಿಜೆಪಿಯಲ್ಲಿದ್ದವರು ಮಾತ್ರ ಅಲ್ಲ. ಬೇರೆಯವರು ಕೂಡ ಹಿಂದೂಗಳೇ ಆಗಿದ್ದಾರೆ. ಹಿಂದೂಗಳೆಂದು ಎನಿಸಿಕೊಳ್ಳಲು ಬಿಜೆಪಿಯ ಲೇಬಲ್ ಅವಶ್ಯಕತೆ ಇಲ್ಲ. ಇಂತಹ ಹಲವು ಕೊಲೆಗಳನ್ನು ಮಾಡಿರುವ ಬಿಜೆಪಿ ಗರು ಕೊಲೆಗಡುಕರು. ಈ ಕೊಲೆಗೆ ನೇರ ಜವಾಬ್ದಾರಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಮಾತ್ರವಲ್ಲ, ಈತನನ್ನು ಬೆಂಬಲಿಸಿದ ಬಿಜೆಪಿ ನಾಯಕರು ಕೂಡ ಜವಾಬ್ದಾರರು ಎಂದು ಅವರು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಎಐಸಿಸಿ ಸದಸ್ಯ ಅಮೃತ್ ಶೆಣೈ, ಮಾಜಿ ಶಾಸಕ ಗೋಪಾಲ ಭಂಡಾರಿ, ತಿಮ್ಮ ಪೂಜಾರಿ ಮಾತನಾಡಿದರು. ಬಳಿಕ ಈ ಕುರಿತ ಮನವಿಯನ್ನು ಕೋಟ ಪೊಲೀಸ್ ಉಪನಿರೀಕ್ಷಕ ನರಸಿಂಹ ಶೆಟ್ಟಿ ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ರೋಶನಿ ಒಲಿವೇರಾ, ವಿಕಾಸ್ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ರಾಜರಾಮ್ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)