varthabharthi

ನಿಮ್ಮ ಅಂಕಣ

ಸ್ವಾಮಿಗಳು ವಕಾಲತ್ತು ವಹಿಸುವುದು ಸರಿಯೇ?

ವಾರ್ತಾ ಭಾರತಿ : 11 Feb, 2019
-ಗಿರಿಜಾಶಂಕರ್ ಜಿ ಎಸ್., ನೇರಲಕೆರೆ

ಮಾನ್ಯರೇ,

ಎಲ್ಲರೊಂದಿಗೂ ಸಾಮರಸ್ಯ ಭಾವನೆಯನ್ನು ಬಿತ್ತುವಂಥ ಮಠಾಧೀಶರಲ್ಲಿ ಕೆಲವು ಸ್ವಾಮಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಜಾತಿಯ ಪರವಾಗಿ ವಕಾಲತ್ತು ವಹಿಸಿ ಮಾತನಾಡುತ್ತಿರುವುದು ಹೆಚ್ಚಾಗುತ್ತಿದೆ. ಇದು ನಿಜಕ್ಕೂ ವಿಷಾದನೀಯ ಬೆಳವಣಿಗೆ. ಇತ್ತೀಚೆಗೆ ಮೈಸೂರಿನಲ್ಲಿ ಕನಕ ಪೀಠದ ಸ್ವಾಮಿಗಳು ಮಾತನಾಡುತ್ತಾ, ‘‘ವಿಧಾನಸಭೆ ಚುನಾವಣೆಯಲ್ಲಿ ಒಂದು ಕೋಮುವಿನಿಂದಾಗಿ ಸಿದ್ದರಾಮಯ್ಯನವರು ಸೋಲುವಂತಾಯಿತು. ಹೀಗಾಗಿ ಸಿದ್ದರಾಮಯ್ಯನವರಿಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯವಾಯಿತು. ಚುನಾವಣೆಯಲ್ಲಿ ಸೋಲಿಸಿದ ಕಾರಣ ಕೊಡಿಗಿನಲ್ಲಿ ಪ್ರವಾಹ ಉಂಟಾಗಿ ದೊಡ್ಡ ದುರಂತ ನಡೆದುಹೋಯಿತು’’ ಎಂದು ಹೇಳುವ ಮೂಲಕ ತಮ್ಮ ಸಂಕುಚಿತ ಮನೋಭಾವವನ್ನು ತೋರಿಸಿದ್ದಾರೆ. ಸ್ವಾಮಿಗಳಾದವರು ಜನರಲ್ಲಿ ಅರಿವನ್ನು ಬೆಳೆಸಬೇಕೇ ಹೊರತು ಅಜ್ಞಾನ ತುಂಬುವ ಕೆಲಸವನ್ನು ಮಾಡಬಾರದು. ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಸುನಾಮಿ ಮುಂತಾದವುಗಳು ಪ್ರಕೃತಿಯಲ್ಲಿ ನಡೆಯುವ ಏರುಪೇರಿನಿಂದ ನಡೆಯುವಂಥ ಪ್ರಕ್ರಿಯೆಗಳು. ಇಂತಹ ಪ್ರಕ್ರಿಯೆಗಳು ಒಬ್ಬ ರಾಜಕೀಯ ಮುಖಂಡನ ಗೆಲುವು-ಸೋಲಿನ ಮೇಲೆ ನಿರ್ಧಾರವಾಗುತ್ತವೆ ಅನ್ನೋದು ಎಂಥ ಅಜ್ಞಾನದ ಪರಮಾವಧಿ! ಅದರಲ್ಲೂ ಸ್ವಾಮಿಗಳಾದವರು ಇಂಥ ಮೌಢ್ಯದ ಮಾತುಗಳನ್ನು ಹೇಳುತ್ತಾರೆಂದರೆ ಏನನ್ನಬೇಕು? ಸ್ವಾಮಿಗಳಾದವರು ಯಾವುದೇ ಸಮುದಾಯದ ರಾಜಕೀಯ ಮುಖಂಡರು ತಪ್ಪುಮಾಡಿದಾಗ ತಿದ್ದಿ ಬುದ್ಧಿ ಹೇಳಬೇಕು. ಉತ್ತಮ ಕೆಲಸ ಮಾಡಿದಾಗ ಮೆಚ್ಚುಗೆ ಮಾತುಗಳನ್ನು ಆಡಲಿ. ಆದರೆ ಇಂಥ ಮಾತುಗಳನ್ನು ಹೇಳುವ ಮೂಲಕ ಕೆಲವು ಸ್ವಾಮಿಗಳು ಜನರಲ್ಲಿ ಸಾಮರಸ್ಯ ಕದಡುವ ಕೆಲಸವನ್ನು ಮಾಡುತ್ತಿರುವುದು ದುರಂತವೇ ಸರಿ. ಸ್ವಾಮಿಗಳು ಯಾವುದೇ ಜಾತಿಯವರಾದರೂ ಅವರು ಒಂದು ಜಾತಿಯನ್ನು ಪ್ರತಿನಿಧಿಸಬಾರದು. ಅವರು ಸರ್ವಜನಾಂಗದ ಏಳ್ಗೆಗಾಗಿ ಧ್ವನಿ ಎತ್ತಬೇಕೇ ಹೊರತು ಈ ರೀತಿ ಸ್ವಜಾತಿಯ ರಾಜಕೀಯ ನಾಯಕರನ್ನು ಕುರಿತು ಮತ್ತೆ ಮತ್ತೆ ಸಮರ್ಥಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)