varthabharthi

ನಿಮ್ಮ ಅಂಕಣ

ಇದು ಅವಮಾನ ಮತ್ತು ದೇಶದ್ರೋಹ

ವಾರ್ತಾ ಭಾರತಿ : 11 Feb, 2019
ಆರ್. ಬಿ. ಶೇಣವ, ಬಲ್ಲಾಳ್‌ಬಾಗ್, ಮಂಗಳೂರು

ಮಾನ್ಯರೇ,

ಕೇವಲ 2016ರಲ್ಲಿ ತಾನು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಒಂದೇ ಹಿಂದಿನ 70 ವರ್ಷಗಳಲ್ಲಿ ನಡೆದ ಏಕಮಾತ್ರ ಸರ್ಜಿಕಲ್ ಸ್ಟ್ರೈಕ್, ಅದಕ್ಕಿಂತ ಮೊದಲು ನಮ್ಮ ದೇಶದ ಸೇನಾಪಡೆ ಪಾಕ್ ಮೇಲೆ ಯಾವುದೇ ಸರ್ಜಿಕಲ್ ದಾಳಿ ನಡೆಸಿರಲಿಲ್ಲ ಎಂದು ಮೋದಿ ಮತ್ತೊಮ್ಮೆ ಹುಬ್ಬಳ್ಳಿಯಲ್ಲಿ ಹೇಳಿದ್ದು ಮಾತ್ರವಲ್ಲ, ಈ ‘‘ಉರಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿರೋಧ ಪಕ್ಷಗಳು ಸಂಶಯ ಎತ್ತಿ ನಮ್ಮ ವೀರ ಸೇನಾಪಡೆಗೆ ಘೋರ ಅವಮಾನ ಮಾಡಿ ದೇಶದ್ರೋಹ ಬಗೆಯುತ್ತಿದ್ದಾರೆ’’ ಎಂದು ಮೊನ್ನೆ ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಆರೋಪಿಸಿದರು. ಆದರೆ ವಿರೋಧ ಪಕ್ಷದವರಿಗಿಂತ ಏಳು ಪಟ್ಟು ಹೆಚ್ಚು ಅವಮಾನ ಮೋದಿಯವರೇ ನಮ್ಮ ವೀರ ಸೇನಾಪಡೆಗೆ ಮಾಡುತ್ತಿದ್ದಾರೆ.

ಬಾಂಗ್ಲಾ ವಿಮೋಚನೆಯ ನಂತರ ಹಿಂದಿನ 48 ವರ್ಷಗಳಲ್ಲಿ ಪಾಕಿಸ್ತಾನದ ವಿರುದ್ಧ ಅನೇಕ ಸರ್ಜಿಕಲ್ ದಾಳಿಗಳನ್ನು ನಮ್ಮ ವೀರ ಯೋಧರು ಯಶಸ್ವಿಯಾಗಿ ನಡೆಸಿದ್ದು, ಅದರಲ್ಲಿ ಏಳು ದಾಳಿಗಳು ಗಡಿ ದಾಟಿ ಪಾಕ್ ನೆಲದಲ್ಲಿ ನಡೆಸಿದ ಅಧಿಕೃತ ಸರ್ಜಿಕಲ್ ದಾಳಿಗಳಾಗಿದ್ದವು. ಇವುಗಳನ್ನು ಮೋದಿ ನಿರಾಕರಿಸಿರುವುದು ಅವರು ನಮ್ಮ ವೀರ ಯೋಧರಿಗೆ ಹಾಗೂ ಹಿಂದಿನ ಪ್ರಧಾನಿ ಮತ್ತು ರಕ್ಷಣಾ ಮಂತ್ರಿಗಳಿಗೆ ಅವಮಾನ ಮಾಡಿ ದೇಶದ್ರೋಹ ಬಗೆದಂತೆ ಆಗಿದೆ.

1971ರ ಬಾಂಗ್ಲಾ ದೇಶ ವಿಮೋಚನೆಯ ನಂತರ ಪಾಕಿಸ್ತಾನಿಗಳು ಗಡಿಯಲ್ಲಿ ಭಾರತಕ್ಕೆ ಸತತ ಕಿರುಕುಳ ಕೊಡುತ್ತಲೇ ಇದ್ದಾರೆ ಹಾಗೂ ಅದಕ್ಕೆ ಪ್ರತಿಯಾಗಿ ನಮ್ಮ ಯೋಧರು ಅವರಿಗೆ ಬುದ್ಧಿ ಕಲಿಸುತ್ತಲೇ ಇದ್ದಾರೆ. ಅದರಲ್ಲಿ ಏಳು ಸಲ ಆಗಿನ ರಕ್ಷಣಾ ಮಂತ್ರಿ ಹಾಗೂ ಪ್ರಧಾನ ಮಂತ್ರಿಗಳ ಉಸ್ತುವಾರಿಯಲ್ಲಿ ಅಧಿಕೃತ ಸರ್ಜಿಕಲ್ ಸ್ಟ್ರೈಕ್ ನಡೆದಿವೆ. ಅದರಲ್ಲೂ 1999ರಲ್ಲಿ ಜಾರ್ಜ್ ಫೆರ್ನಾಂಡಿಸ್ ರಕ್ಷಣಾಮಂತ್ರಿ ಹಾಗೂ ವಾಜಪೇಯಿ ಪ್ರಧಾನಿ ಆಗಿದ್ದಾಗ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಪರಿಣಾಮಕಾರಿ ಸರ್ಜಿಕಲ್ ಸ್ಟ್ರೈಕ್ ಆಗಿತ್ತು ಎಂದು ಸೇನಾ ಮೂಲಗಳೇ ಹೇಳುತ್ತವೆ. ಆದರೆ ಆಗಿನ ಪ್ರಧಾನಿ ಮತ್ತು ರಕ್ಷಣಾ ಮಂತ್ರಿಗಳು ಈ ಸರ್ಜಿಕಲ್ ಸ್ಟ್ರೈಕನ್ನು ತಮ್ಮ ವೈಯುಕ್ತಿಕ ವೈಭವೀಕರಣಕ್ಕೆ ಬಳಸದೇ ಗುಟ್ಟಾಗಿಯೇ ಇಟ್ಟು ಮಿಲಿಟರಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದರು. ಆದರೆ ಮೋದಿ ಮಿಲಿಟರಿ ನಿಯಮಗಳನ್ನು ಮುರಿದು ಒಂದು ಸಣ್ಣ ಸರ್ಜಿಕಲ್ ದಾಳಿಯನ್ನು ತನ್ನ ಸ್ವಂತ ವೈಭವೀಕರಣಕ್ಕೆ ಬಳಸಿ ದೇಶದ ಭದ್ರತೆಗೆ ಘೋರ ದ್ರೋಹ ಬಗೆದಿದ್ದಾರೆ. ಆದರೂ ತಾನು ಮಾತ್ರವೇ ದೇಶಪ್ರೇಮಿ ಉಳಿದವರೆಲ್ಲಾ ದೇಶದ್ರೋಹಿಗಳು ಎಂಬ ರೀತಿಯಲ್ಲಿ ಅವರು ಯಾವಾಗಲೂ ಬಡಾಯಿ ಕೊಚ್ಚುತ್ತಿರುವುದು ಅವರಿಗೆ ಮಿಲಿಟರಿ ನಿಯಮಗಳ ಬಗ್ಗೆ ಯಾವುದೇ ಗೌರವ ಇಲ್ಲ ಎಂಬುದನ್ನೂ ಸೂಚಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)