varthabharthi

ನಿಮ್ಮ ಅಂಕಣ

ಪಿಯೂಷ್ ಬಜೆಟ್‌ನಿಂದ ಒಳಿತು ಸಾಧ್ಯವೇ?

ವಾರ್ತಾ ಭಾರತಿ : 13 Feb, 2019
ಡಾ. ಪಿ. ಮಾಧವ ರಾವ್, ಕನ್ನಡಕ್ಕೆ: ಕಸ್ತೂರಿ

ರೈತರ ಸಮಸ್ಯೆಯ ಬಗ್ಗೆ ಸಮಗ್ರ ಅಧ್ಯಯನ, ಆ ಅಧ್ಯಯನಗಳ ಮೇಲೆ ಆಧಾರಿತ ನಿರ್ಣಯಗಳು ಏನೂ ಇಲ್ಲದೆಯೇ 6,000ರೂ. ಗಳನ್ನು ರೈತನ ಖಾತೆಯಲ್ಲಿ ಜಮೆ ಮಾಡುತ್ತೇವೆನ್ನುವುದು, ಮೊದಲು 2,000 ರೂ. ಕೂಡಲೇ ಖಾತೆಗೆ ಕಳುಹಿಸುತ್ತೇವೆ ಎನ್ನುವುದು ವೋಟಿಗೆ 6,000ರೂ.ನಂತೆ ಮಾತಾಡಿಕೊಂಡು, 2,000 ರೂ. ಅಡ್ವಾನ್ಸಾಗಿ ಸಲ್ಲಿಸುವುದಲ್ಲದೆ ಮತ್ತೇನು?

ಮೋದಿ ಸರಕಾರ ಅಧಿಕಾರಾಂತ್ಯದಲ್ಲಿ ಮಧ್ಯಂತರ ಬಜೆಟ್ ಮಂಡನೆ ಸಮಯದಲ್ಲೇ ಆರ್ಥಿಕಮಂತ್ರಿ ಅರುಣ್ ಜೇಟ್ಲಿ ಅಸ್ವಸ್ಥರಾದರು. ಸಂಪೂರ್ಣ ಬಜೆಟ್, ಮಧ್ಯಂತರ ಬಜೆಟ್ ವೋಟ್ ಆನ್ ಅಕೌಂಟ್ ಎಂಬ ಸಂದಿಗ್ಧಗಳನ್ನು ಛೇದಿಸುತ್ತಾ ಜೇಟ್ಲಿ ಸ್ಥಾನದಲ್ಲಿ ಪಿಯೂಷ್‌ಗೋಯಲ್ ಅರ್ಥವಿಲ್ಲದ ಮಧ್ಯಂತರ ಬಜೆಟ್ ಮಂಡಿಸಿದರು. ಪಿಯೂಷ್ ಗೋಯಲ್ ಭಾಷಣ ಕೇಳುತ್ತಿದ್ದಷ್ಟು ಹೊತ್ತೂ ಅರ್ಥಶಾಸ್ತ್ರವನ್ನು ಕರಗತ ಮಾಡಿಕೊಂಡ ಅರ್ಥಶಾಸ್ತ್ರಜ್ಞರು ಮೂಗಿನ ಮೇಲೆ ಬೆರಳಿಟ್ಟರು. ಸಾಮಾನ್ಯವಾಗಿ ಮಧ್ಯಂತರ ಬಜೆಟ್ ಎಂಥದೇ ಪಾಲಿಸಿ ತೀರ್ಮಾನಗಳನ್ನು ಪ್ರಕಟಿಸುವುದಿಲ್ಲ. ಹೊಸ ಯೋಜನೆಗಳನ್ನು, ದೀರ್ಘಕಾಲೀನ ಆರ್ಥಿಕ ಜವಾಬ್ದಾರಿಗಳನ್ನು, ಭಾರವನ್ನು ಹೊರಿಸುವ ಯೋಜನೆಗಳನ್ನು ಪ್ರಕಟಿಸದು. ಹೇಗೂ ಮಾರ್ಚ್ 31ರವರೆಗೆ ಈಗಿನ ಬಜೆಟ್ ನಡೆಯುತ್ತದಾದ್ದರಿಂದ ಎಪ್ರಿಲ್ 1ರಿಂದ ಒಂದೆರಡು ತಿಂಗಳುಗಳಿಗೋಸ್ಕರ ಆಗುವ ಖರ್ಚುಗಳಿಗೋಸ್ಕರ ತಾತ್ಕಾಲಿಕವಾಗಿ ವೋಟ್ ಆನ್ ಅಕೌಂಟನ್ನು ಮಾತ್ರವೇ ಪ್ರವೇಶಗೊಳಿಸುತ್ತದೆ. ಗೋಯಲ್ ಮಂಡಿಸಿದ ಬಜೆಟ್ ಅದಕ್ಕೆ ಭಿನ್ನವಾಗಿದೆ.

ಬಜೆಟ್ ಭಾಷಣದ ಮೊದಲೇ ಐದು ವರ್ಷಗಳ ಮೋದಿ ಸರಕಾರದಲ್ಲಿ ತಾವು ಸಾಧಿಸಿದ್ದೇವೆ ಎಂದುಕೊಂಡ ಪ್ರಗತಿಯನ್ನು ಪಟ್ಟಿಮಾಡಿದರು. ಆರ್ಥಿಕ ಸರ್ವೇ ಇಲ್ಲದೆ, ಅಭಿವೃದ್ಧಿ ವಿಶ್ಲೇಷಣೆಗೆ ಸಮಯವಲ್ಲದಿದ್ದರೂ ನಾವು ಇದನ್ನು ಸಾಧಿಸಿದ್ದೇವೆ. ಅದನ್ನು ಸಾಧಿಸಿದ್ದೇವೆ ಎನ್ನುತ್ತಾ ಭಾರತದೇಶವನ್ನು ತಾವೇ ಸೃಷ್ಟಿಸಿ, ಸಾಕಿ, ಬೆಳೆಸಿದ್ದೇವೆಂಬ ಧಿಮಾಕಿನಿಂದ ಹೇಳಿಕೊಳ್ಳುತ್ತಿದ್ದರು. ಬಜೆಟ್ ಪ್ರಸ್ತಾಪಗಳ ನೋಡಿದರೆ ಚುನಾವಣಾ ಮ್ಯಾನಿಫೆಸ್ಟೋನಂತೆ ಇದೆ ಹೊರತು ಬಜೆಟ್‌ನಂತೆ ಕಾಣಿಸಲಿಲ್ಲ. ಮಧ್ಯಂತರ ಬಜೆಟ್ ಜಾರಿ ದಿನಾಂಕಕ್ಕಿಂತ ಮುನ್ನವೇ ನೀಡುವ ಸಬ್ಸಿಡಿಗಳೂ, ನಗದು ಬದಲಿಗಳ ವಿಷಯ ಈಗ ಏತಕ್ಕೋ ಯಾರಿಗೆ ಅರ್ಥವಾಗಲಿಲ್ಲ. ಪಿಯೂಷ್ ಮಾಡಿದ ಪ್ರಸ್ತಾಪಗಳನ್ನು ಒಂದೊಂದಾಗಿ ಪರಿಶೀಲಿಸಿದರೆ ಚುನಾವಣೆಯಲ್ಲಿ ವೋಟು ಗಳಿಸುವುದಕ್ಕೆ ಹೊರತು ಮತ್ತೇನೂ ಅಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಬಜೆಟ್ ಉಪನ್ಯಾಸ ಪೂರಾ ಕಿಮಕ್ಕನ್ನದೇ ಕೇಳಿದ ಪಾರ್ಲಿಮೆಂಟೇರಿಯನ್ನರು ಆದಾಯ ತೆರಿಗೆ ವಿನಾಯಿತಿ ಪ್ರಕಟಿಸುತ್ತಲೇ ಕೇಕೆ ಹೊಡೆದರೇ ಹೊರತು ಅದರೊಳಗಿನ ಕುಟುಕು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲೂ ಇಲ್ಲ.

ಗೋಯಲ್ ರೇಟುಗಳು ಬದಲಾಗವು ಎಂದು ಹೇಳಿದರೇ ಹೊರತು, ಆದಾಯ ತೆರಿಗೆ ಸ್ಲಾಬುಗಳ ವಿಷಯ ಸ್ಪಷ್ಟಪಡಿಸಲಿಲ್ಲ. ಹಾಗಾಗಿ ಐದು ಲಕ್ಷ ರೂ. ಆದಾಯ ದಾಟಿದವರ ಸ್ವಂತ ಸ್ಲಾಬುಗಳ ಪ್ರಕಾರ ಎರಡೂವರೆ ಲಕ್ಷ ತೆರಿಗೆ ಕಟ್ಟಬೇಕಾ ಎನ್ನುವುದು ಇನ್ನೂ ಅಸ್ಪಷ್ಟವಾಗಿಯೇ ಇದೆ.

 ಪ್ರಕಟಿಸಿದ ಆದಾಯ ತೆರಿಗೆ ವಿನಾಯಿತಿಯಿಂದ ಈಗಿಂದೀಗ ಯಾರಿಗೇನೂ ಪ್ರಯೋಜನವಿಲ್ಲ. 2020 ಮಾರ್ಚ್‌ನಲ್ಲಿ ತೆರಿಗೆ ಕಟ್ಟುವವರಿಗೆ ಹೊರತು, ಈ ನಿರ್ಣಯ ಜಾರಿಗೆ ಬರುವುದು ಎಪ್ರಿಲ್ 1. 2019ರಿಂದ. ಅಂದರೆ ಬರಲಿರುವ ಸರಕಾರದ ಮೇಲೆ ಬೀಳಲಿರುವ ಭಾರದ ಜೊತೆಗೆ ಪ್ರಸ್ತುತ ಸರಕಾರಕ್ಕೆ ವೋಟು ಬೀಳುವ ಸಾಧನ ಎಂದು ಅರ್ಥಮಾಡಿಕೊಳ್ಳ ಬೇಕಾಗಿರುತ್ತದೆ. ಮೇಲಾಗಿ 5 ಲಕ್ಷ ರೂ. ಆದಾಯ, ಅದರ ಮೇಲೆ ಉದ್ಯೋಗಿಗಳಿಗೆ 50,000 ಸ್ಟಾಂಡರ್ಡ್ ಡಿಡಕ್ಷನ್, ಹಣವನ್ನು 80 ಸಿ ಸೆಕ್ಷನ್ ಕೆಳಗೆ ಪಡೆದುಕೊಂಡರೆ, ಮತ್ತೊಂದು ಲಕ್ಷ ಐವತ್ತು ಸಾವಿರ ವಿನಾಯಿತಿ ಸೇರಿಸಿ ಉದ್ಯೋಗಸ್ಥರಾದರೆ 7 ಲಕ್ಷ ರೂ. ಆದಾಯದವರೆಗೆ ತೆರಿಗೆ ದವಡೆಯಿಂದ ತಪ್ಪಿಸಿಕೊಳ್ಳಬಹುದು. ಇದು ಇತ್ತೀಚೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನಿರ್ಣಯಿಸಿದ ಆದಾಯ ಮಿತಿ 8 ಲಕ್ಷಕ್ಕಿಂತ ಕೇವಲ 1 ಲಕ್ಷ ರೂ.ಗಳಷ್ಟೇ ಕಡಿಮೆ. ಇದುವರೆಗೂ ಬಿದ್ದ ಆರೋಪಗಳ ತೊಡೆದುಕೊಳ್ಳುವುದಕ್ಕೆ ತಾವು ಈಗ ಮಾಡೋದೇನೂ ಇಲ್ಲವಾದ್ದರಿಂದ ಆ ಮಿತಿಯನ್ನು 8 ಲಕ್ಷಗಳವರೆಗೂ ಹೆಚ್ಚಿಸಿದರೆ ಆಗಿತ್ತು. ಉದ್ಯೋಗಿಗಳನ್ನು, ನಿವೃತ್ತರನ್ನು ಸಂಪೂರ್ಣವಾಗಿ ಆದಾಯ ತೆರಿಗೆ ಮಿತಿಯಿಂದಲೇ ತೊಲಗಿಸಿದ್ದರೂ ಬರುವ ನಷ್ಟ ಇರಲಿಲ್ಲ.

ಒಟ್ಟು ತೆರಿಗೆ ವಸೂಲಿನಲ್ಲಿ ಉದ್ಯೋಗಿಗಳಿಂದ ಬರುವುದು 11ರಿಂದ ಶೇ.12 ದಾಟದು. ಈಗ ಕೊಟ್ಟಿರುವ ವಿನಾಯಿತಿಯಿಂದ ಅದು 2ರಿಂದ ಶೇ.3ಕ್ಕೆ ಬಿದ್ದುಹೋಗುತ್ತದೆ. ಅಂದರೆ ರಾವಣಾಸುರನಿಗೆ ಅರೆಕಾಸು ಮಜ್ಜಿಗೆ ಎಂಬಂತೆ.

ಶಿಲಾಫಲಕಗಳ ಮೇಲೂ, ವಿಗ್ರಹಗಳ ಮೇಲೂ, ವಿದೇಶಿ ಪ್ರವಾಸಗಳ ಮೇಲೆ, ಸದ್ಯಕ್ಕೆ ಅಗತ್ಯ ಇಲ್ಲದ ಹೈಸ್ಪೀಡ್ ರೈಲುಗಳ ಮೇಲೆ ಮಾಡುವ ದುಂದುವೆಚ್ಚವನ್ನು ತಗ್ಗಿಸಿದರೆ ಉದ್ಯೋಗಿವರ್ಗದಿಂದ ರೂಪಾಯಿ ವಸೂಲು ಮಾಡದೆಯೇ ಸರಕಾರ ನಡೆಸಬಹುದು ಎಂದು ಲೆಕ್ಕಗಳು ಹೇಳುತ್ತಿವೆ. ಸರಕಾರಿ ಲೆಕ್ಕಗಳ ಪ್ರಕಾರವೇ 12 ಕೋಟಿ ಮಂದಿ ಹೊಸದಾಗಿ, ಆದಾಯ ತೆರಿಗೆ ರಿಟರ್ನ್‌ಗಳ ದಾಖಲು ಮಾಡಿದ್ದಾರೆಂದರೆ ಅವರಲ್ಲಿರುವ ಉದ್ಯೋಗಿಗಳು ತುಂಬಾ ಕಡಿಮೆ. ಏಕೆಂದರೆ ಹೊಸದಾಗಿ ಉದ್ಯೋಗದಲ್ಲಿ ಸೇರಿದವರು ಕೋಟ್ಯಂತರ ಸಂಖ್ಯೆಯಲ್ಲಿಲ್ಲ. ಉದ್ಯೋಗಿಗಳ ಭವಿಷ್ಯನಿಧಿ ಮೂಲಕ ಸಂಗ್ರಹಿಸಿದ ಲೆಕ್ಕಗಳು ಸರಿಯಲ್ಲ. ಅದರಲ್ಲಿ ಆದಾಯ ತೆರಿಗೆ ಪರಿಧಿಯೊಳಗೆ ಬರುವ ಉದ್ಯೋಗಿಗಳು ಅತಿಕಡಿಮೆ. ಮೋದಿ ಸರಕಾರ ಈ ನಾಲ್ಕು ವರ್ಷಗಳಲ್ಲಿ ಉದ್ಯೋಗಗಳನ್ನೇನೂ ಹೊಸದಾಗಿ ಸೃಷ್ಟಿಸುವುದು ಹಾಗಿರಲಿ, ಖಾಲಿಯಾದ ಉದ್ಯೋಗಗಳನ್ನು ಸಹಾ ಭರ್ತಿ ಮಾಡಲಿಲ್ಲ.

 ದೇಶದಲ್ಲಿ ಸುಮಾರು 1500 ಐಎಎಸ್ ಅಧಿಕಾರಿಗಳ ಅಗತ್ಯ ಇದೆ ಎಂದು ಸಂಬಂಧಿತ ಸಚಿವ ಕಳೆದ ವರ್ಷ ಪ್ರಕಟಿಸಿದ್ದರೇ ಹೊರತು, ಅವನ್ನು ಭರ್ತಿ ಮಾಡುತ್ತೇವೆ ಎಂದು ಹೇಳಲಿಲ್ಲ. ಪ್ರತಿ ವಿಭಾಗದಲ್ಲಿ ಖಾಲಿಯಾದ ಹುದ್ದೆಗಳೂ, ಭರ್ತಿ ಆಗದ ಹುದ್ದೆಗಳನ್ನೂ ಸೇರಿಸಿ ಲಕ್ಷಕ್ಕೂ ಮೀರಿ ಖಾಲಿ ಹುದ್ದೆಗಳಿವೆ ಎಂದು ಕೇಂದ್ರದ ಲೆಕ್ಕಗಳೇ ಹೇಳುತ್ತಿವೆ.

ವ್ಯಕ್ತಿಗತ ತೆರಿಗೆಗಳು ಇಲ್ಲದೆಯೇ ಬಹಮಾಸ್, ಬಹರೈನ್, ಬರ್ಮುಡಾ, ಬ್ರುಯೋನಿ, ಕುವೈಟ್, ಖತರ್, ಒಮಾನ್, ಸೌದಿ ಅರೇಬಿಯಾ, ಬೊಸ್ನಿಯಾ, ಬಲ್ಗೇರಿಯಾದಂಥ ದೇಶಗಳು ಬದುಕಬಲ್ಲವಾಗಿವೆ. ಮೋದಿ ಸರಕಾರ ಒಟ್ಟು ಉದ್ಯೋಗಿಗಳಿಗೆ ತೆರಿಗೆ ತಪ್ಪಿಸಿದರೂ, ಕನಿಷ್ಠ ಉದ್ಯೋಗಗಳನ್ನು ಕೊಡಿಸಲಿಲ್ಲ ಎಂಬ ಅಪವಾದವಾದರೂ ತಪ್ಪುತ್ತಿತ್ತು.

 ಇನ್ನು ರೈತರಿಗೆ ಕೊಡುವ ವಿನಾಯಿತಿಗಳು, ಕೊಡುಗೆಗಳು...ನಿಜಕ್ಕೂ ರೈತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ್ದಾರಾ? ಅಥವಾ ಕಣ್ಣೊರೆಸಲು ಆರುಸಾವಿರ ವರ್ಷಕ್ಕೆ ಕೊಡುತ್ತೇನೆಂದಿದ್ದಾರಾ?

ಒಂದು ಕಡೆ ರೈತರ ಆದಾಯ ಹೆಚ್ಚಿದೆ ಎಂದು ಹೇಳುತ್ತಾ, ಆ ಕ್ಷೇತ್ರದಲ್ಲಿ ಅದನ್ನು ದುಪ್ಪಟ್ಟು ಮಾಡುತ್ತೇವೆಂದು ಹೇಳುವವರಿಂದ, ಈ ಕೊಡುಗೆಗಳೇಕೆಂಬ ಪ್ರಶ್ನೆ ಬಾರದೇ ಹೋಗದು. ತೆಲಂಗಾಣದಂಥ ರಾಜ್ಯದಲ್ಲಿ ರೈತ ಬಂಧು ಯೋಜನೆ, ರೈತ ಸಾಲ ಮನ್ನಾ ಯೋಜನೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಬೆಳೆಗಳಿಗೆ ವಿಮೆ, ರೈತರ ವೃದ್ಧಾಪ್ಯ ವೇತನ, ರೈತರಿಗೆ ಆರೋಗ್ಯ ರಕ್ಷಣಾ ಯೋಜನೆ, ರೈತ ಕುಟುಂಬಕ್ಕೆ ಮದುವೆ ವೆಚ್ಚಗಳು, ಮೀಸಲಾತಿಗಳು, ಕಿಸಾನ್ ಕಾರ್ಡ್‌ಗಳು ಇವೆಲ್ಲಾ ಇದ್ದರೂ ರೈತ ಯಾಕೆ ಅಳುತ್ತಿದ್ದಾನೆ. ರೈತ ಯಾಕೆ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾನೆ? ಹಸುವಿನ ಸಾವು ಯಾಕೆ ಸಂಭವಿಸುತ್ತಿವೆ. ರೈತ ಕುಟುಂಬದಲ್ಲಿ ಬಾಲ್ಯ ವಿವಾಹಗಳು, ಬಲವಂತದ ವಿವಾಹಗಳು, ಬೆಳೆ ನಷ್ಟಗಳು, ಕೀಟನಾಶಕ ಕುಡಿಯುವುದು ಯಾಕೆ ಇನ್ನೂ ಮುಂದುವರಿಯುತ್ತಿವೆ ಎಂಬ ವಿಷಯದಲ್ಲಿ ಸಮಗ್ರ ಅಧ್ಯಯನ, ಆ ಅಧ್ಯಯನಗಳ ಮೇಲೆ ಆಧಾರಿತ ನಿರ್ಣಯಗಳೂ ಏನೂ ಇಲ್ಲದೆಯೇ 6,000ರೂ. ಗಳನ್ನು ರೈತನ ಖಾತೆಯಲ್ಲಿ ಜಮೆ ಮಾಡುತ್ತೇವೆನ್ನುವುದು, ಮೊದಲು 2,000 ರೂ. ಕೂಡಲೇ ಖಾತೆಗೆ ಕಳುಹಿಸುತ್ತೇವೆ ಎನ್ನುವುದು ವೋಟಿಗೆ 6,000ರೂ.ನಂತೆ ಮಾತಾಡಿಕೊಂಡು, 2,000 ರೂ. ಅಡ್ವಾನ್ಸಾಗಿ ಸಲ್ಲಿಸುವುದಲ್ಲದೆ ಮತ್ತೇನು?

ಮೂರನೇ ಭಯಂಕರ ನಿರ್ಣಯ ಅಸಂಘಟಿತ ರಂಗಗಳಲ್ಲಿನ ಕಾರ್ಮಿಕರಿಗೆ ಪಿಂಚಣಿ. ಎರಡು ರಾಷ್ಟ್ರೀಯ ಕಮಿಶನ್‌ಗಳು ಏರ್ಪಟ್ಟು, ವರ್ಷಗಟ್ಟಲೆ ಕುಳಿತು ಕಾರ್ಮಿಕರ ಸ್ಥಿಗತಿಗಳ ಮೇಲಿನ ವರದಿಗಳು ರಾಶಿ ರಾಶಿ ಬಿದ್ದರೂ ಅಸಂಘಟಿತ ರಂಗವನ್ನು ವ್ಯಾಖ್ಯಾನಿಸಲಾರದೆ ಹೋಗಿವೆ. ಕೊನೆಗೆ ತಮ್ಮ ಹಕ್ಕುಗಳಿಗೋಸ್ಕರ ಸಂಘಟಿತರಾಗಲಾರದ ವರ್ಗ ಅಸಂಘಟಿತ ರಂಗ ಎಂದು ಅಪೂರ್ಣ ವ್ಯಾಖ್ಯಾನ ನೀಡಿತು.

ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ 2003ರಲ್ಲಿ ಆಗಿನ ಕಾರ್ಮಿಕ ಸಚಿವ ಸಾಹಿಬ್ ಸಿಂಗ್‌ವರ್ಮ ಅಸಂಘಟಿತ ಕಾರ್ಮಿಕರಿಗೋಸ್ಕರ ಪಿಂಚಣಿ ವ್ಯವಸ್ಥೆಯನ್ನು ಏರ್ಪಾಟು ಮಾಡಬೇಕೆಂದು ಅನೇಕ ಯತ್ನಗಳನ್ನು ಮಾಡಿದರು. ನೂರಾರು ಸಭೆಗಳು, ಚರ್ಚೆಗಳನ್ನು ನಡೆಸಿದರು. ಎಲ್ಲರೂ ಸೇರಿ ಖಚಿತ ಪಡಿಸಿದ ವಿಷಯ ಅಸಂಘಟಿತ ವಲಯದಲ್ಲಿ ಆಗ 430 ಮಿಲಿಯನ್ ಕಾರ್ಮಿಕರಿದ್ದಾರೆ, ಅವರಲ್ಲಿ ರೈತ ಕೂಲಿಗಳೇ ಸುಮಾರು 167 ಮಿಲಿಯನ್ ಇದ್ದಾರೆ. ಅವರೆಲ್ಲರಿಂದ 100 ರೂ.ಯಂತೆ ಚಂದಾ ವಸೂಲು ಮಾಡಿ ಪಿಂಚಣಿ ಕೊಟ್ಟರೆ ವಸೂಲಿ ಖರ್ಚುಗಳೇ ಪಿಂಚಣಿ ಖರ್ಚುಗಳಿಗಿಂತ ಹೆಚ್ಚಾಗುತ್ತವೆ ಎಂದು ಲೆಕ್ಕಗಳು ಹೇಳಿದವು. ಅದಕ್ಕೋಸ್ಕರ ಏನೂ ತೆಗೆದುಕೊಳ್ಳದೆ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ ಕೊಡಬೇಕೆಂದು ಕಾರ್ಮಿಕ ಸಚಿವ, ಅವರ ಸಾಮಾಜಿಕ ಭದ್ರತಾ ಸಲಹೆಗಾರ ವಾದಿಸಿದರು. ಇದೊಂದು ಭಯಂಕರ ಆರ್ಥಿಕ ಸಮಸ್ಯೆಯೆಂದು ವ್ಯಯ ವಿಭಾಗ ಕಾರ್ಯದರ್ಶಿ ಮುಂದಕ್ಕೆ ಕೊಂಡೊಯ್ಯಲಿಲ್ಲ. ಇಷ್ಟರಲ್ಲಿ ಹೊಸ ಪಿಂಚಣಿ ವಿಧಾನ ಜಾರಿಯೊಳಗೆ ಬಂದಿತು. ಅದರಲ್ಲಿ ಅಸಂಘಟಿತ ವಲಯದವರೂ ಸೇರಬಹುದಾಗಿದೆ. ಅದು ಈಗಲೂ ಜಾರಿಯಲ್ಲಿದೆ.

ಆದಾಗ್ಯೂ ಪಿಯೂಷ್ ಗೋಯಲ್ ಎಂತಹದೇ ಹೊಸ ಸರ್ವೇ, ಚರ್ಚೆಗಳಿಲ್ಲದೇ ಆರ್ಥಿಕ ವಿಶ್ಲೇಷಣೆಗಳೂ, ಲೆಕ್ಕಗಳೂ ಇಲ್ಲದೇ 100 ರೂ.ಯ ಚಂದದೊಂದಿಗೆ ವರ್ಷಕ್ಕೆ 3,000ರೂ. 60ವರ್ಷ ದಾಟಿದವರಿಗೆ ಕೊಡುತ್ತೇನೆ ಎಂದಿರುವುದು ಕ್ರೂರ ತಮಾಷೆಯಾಗಿದೆ. ನಮ್ಮ ಜನಸಂಖ್ಯೆಯಲ್ಲಿ ಅರವತ್ತು ವರ್ಷ ದಾಟಿದವರ ಸಂಖ್ಯೆ ಶೇ.7 ಅಂದರೆ 8.9 ಕೋಟಿಗಳು ದಾಟುವುದಿಲ್ಲವೇ! ಅದಕ್ಕೋಸ್ಕರ 50-60 ಕೋಟಿ ಅಸಂಘಟಿತ ಕಾರ್ಮಿಕರಿಂದ ಹಣ ವಸೂಲು ಮಾಡುವುದು. ಅವನ್ನು ಬಚ್ಚಿಡುವುದು, ಅವುಗಳ ಮೇಲೆ ಬಡ್ಡಿ ಅರ್ಜಿಸುವುದು ಮತ್ತೆ ಪಿಂಚಣಿೆ ವಸೂಲು ಮಾಡುವುದು ಎಷ್ಟು ದೊಡ್ಡ ಕೆಲಸವೋ ಅಲೋಚಿಸಿದರೇನೇ ತಲೆ ತಿರುಗುತ್ತದೆ.

ಸಾವಿರಕ್ಕೂ ಹೆಚ್ಚಿನ ಕಮಿಷನರ್‌ಗಳು, 30,000ಕ್ಕೂ ಹೆಚ್ಚಿನ ಉದ್ಯೋಗಿಗಳು, 300ಕ್ಕೂ ಹೆಚ್ಚಿನ ಕಚೇರಿಗಳು ಇರುವ ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯಲ್ಲೇ ಲಕ್ಷಾಂತರ ಕಾರ್ಮಿಕರಿಂದ ವಸೂಲು ಮಾಡಿದ ಹಣ ಲೆಕ್ಕ ತಿಳಿಯದೆ ಬಾಕಿ ಇದೆ. ಇವನ್ನೆಲ್ಲಾ ಗ್ರಹಿಸದೆ ಮಧ್ಯಂತರ ಆರ್ಥಿಕ ಮಂತ್ರಿ ತನ್ನ ಮಧ್ಯಂತರ ಬಜೆಟ್‌ನಲ್ಲಿ ಎಲೆಕ್ಷನ್ ಬಳಿಕ ಎಂದೋ ಜಾರಿಯಾಗುವ ಸ್ಕೀಂನ ಈಗಲೇ ಪ್ರಕಟಸಿ ಒಂದು ವಿಧವಾದ ಆರ್ಥಿಕ ಅಪರಾಧ ಮಾಡಿದ್ದಾರೆ ಅನಿಸುತ್ತಿದೆ.

ವೃದ್ಧಾಪ್ಯ ಪಿಂಚಣಿ ಒಳ್ಳೆಯದಲ್ಲ ಎಂದಲ್ಲ. ಆದರೆ ಅದಕ್ಕೆ ಶಾಸ್ತ್ರೀಯವಾದ ಅಧ್ಯಯನ ಬೇಕು. ವೃದ್ಧರ ಸಂಖ್ಯೆ ತಿಳಿಯಬೇಕು. ಅವರಲ್ಲಿ ವಿವಿಧ ರಾಜ್ಯಗಳಲ್ಲಿ ಈಗಾಗಲೇ ವಿವಿಧ ಯೋಜನೆಗಳಡಿ ಕೊಡುತ್ತಿರುವ ಪಿಂಚಣಿಗಳ ಲೆಕ್ಕವೂ ತಿಳಿಯಬೇಕು. ಒಬ್ಬರೇ ವ್ಯಕ್ತಿಗೆ ವಿವಿಧ ಯೋಜನೆಗಳಡಿ ಎಷ್ಟು ಬರುತ್ತದೆ, ಯಾವುದೂ ಬಾರದವರು ಎಷ್ಟು ಇತ್ಯಾದಿ ತಿಳಿಯಬೇಕು. ಆಗಷ್ಟೇ ಎಂತಹ ಪಿಂಚಣಿ ವ್ಯವಸ್ಥೆಯನ್ನಾದರೂ ಜಾರಿಗೊಳಿಸಬಹುದು.

ಈ ಮಧ್ಯಂತರ ಬಜೆಟ್‌ನಲ್ಲಿ ವಿಮಾನ ನಿಲ್ದಾಣಗಳ ಸಂಗತಿ, ಅವು ಯಾವ ತರಗತಿಯವರನ್ನು ಉದ್ದೇಶಿಸಿದೆ, ಮಾನವ ರಕ್ಷಣೆ ಇಲ್ಲದ ರೈಲ್ವೆ ಗೇಟುಗಳ ಉಲ್ಲೇಖ ಅಲ್ಲದೆ ದೇಶ ಅತ್ತ ಇರಲಿ, ದಿಲ್ಲಿ ಬೀದಿಗಳನ್ನೇ ಗುಡಿಸಿಕೊಳ್ಳಲಾರದ ‘ಸ್ವಚ್ಛಭಾರತ್ ಅಭಿಯಾನ್’ ಪ್ರಶಂಸೆ ಏತಕ್ಕೋ ಅರ್ಥವಾಗಲಿಲ್ಲ.

ಡಿಜಿಟಲ್ ಇಂಡಿಯಾ ವಿಷಯದಲ್ಲಿ ಮಾಡಿದ ಪ್ರಕಟನೆ ಮತ್ತೊಂದು ಪ್ರಹಸನ. ಭಾರತ ದೇಶದ ವಿದ್ಯಾರ್ಥಿಗಳೂ, ಕಂಪ್ಯೂಟರ್ ವಿಜ್ಞಾನಿಗಳೂ ಅಮೆರಿಕದಂಥ ದೇಶಗಳಿಗೆ ತಮ್ಮ ಪ್ರತಿಭೆ ಹಂಚುತ್ತಿದ್ದರೆ, ನಮ್ಮ ದೇಶದಲ್ಲಿ ಯಾವ ಒಂದು ಸರಕಾರಿ ಕಚೇರಿಯಾದರೂ ಇ-ಮೇಲ್‌ಗೆ ಉತ್ತರಿಸುವ ಅಭ್ಯಾಸ ಮಾಡಿಕೊಳ್ಳಲಿಲ್ಲ. ಮೇಲಾಗಿ ಸರಕಾರಿ ಕಚೇರಿಗಳಿಗೆ ತಮ್ಮ ಸ್ವಂತ ಇ-ಮೇಲ್ ಡೊಮೈನ್‌ಗಳು ಇಲ್ಲ. ಜಿಮೇಲ್, ಯಾಹೂ, ರೆಡಿಫ್‌ಗಳ ಖಾತೆಗಳೇ ಆಗಲಿ ಸರಕಾರದ ಸ್ವಂತ ಖಾತೆಗಳಲ್ಲ.

ಇವನ್ನೆಲ್ಲಾ ಬದಿಗಿಟ್ಟು ಹಳ್ಳಿಗಳನ್ನೆಲ್ಲಾ ಡಿಜಿಟಲ್ ಮಾಡುತ್ತೇನೆ ಎಂಬುದು ಹಾಸ್ಯಾಸ್ಪದ. ಮೋದಿ ಸರಕಾರ ಮತ್ತೆ ಗೆಲ್ಲುವುದಕ್ಕೆ ಎಸೆದ ಕಲ್ಲು ಎಲ್ಲಿ ಯಾರಿಗೆ ತಗಲುತ್ತೋ ನೋಡಬೇಕು. ಬರುವ ಸರಕಾರಗಳು ಎಷ್ಟರ ಮಟ್ಟಿಗೆ ಸಮರ್ಥಿಸುತ್ತವೋ ಎಷ್ಟು ಬದಲಾವಣೆಗಳನ್ನು ತರುತ್ತವೋ ಹೇಳಲಾಗದು.

(ಕೃಪೆ: ಆಂಧ್ರಜ್ಯೋತಿ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)