varthabharthi

ನಿಮ್ಮ ಅಂಕಣ

ಈ ವಾಹನಗಳಲ್ಲೂ ರಿಯಾಯಿತಿ ಇರಲಿ

ವಾರ್ತಾ ಭಾರತಿ : 13 Feb, 2019
-ಕೆ.ಎಸ್. ನಾಗರಾಜ್ ಹನುಮಂತನಗರ, ಬೆಂಗಳೂರು

ಮಾನ್ಯರೇ,

ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿವಿಧ ಪ್ರದೇಶಗಳಿಗೆ ಹೋಗುವ ಸಾಧಾರಣ ಬಸ್ಸುಗಳಲ್ಲಿ ಮಾತ್ರ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಸೌಕರ್ಯವಿರುತ್ತದೆ. ಆದರೆ, ಐರಾವತ ಅಥವಾ ರಾಜಹಂಸದಂತಹ ಹವಾನಿಯಂತ್ರಿತ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಲು ಅವಕಾಶವಿರುವುದಿಲ್ಲ. ಬಹುತೇಕ ಬಸ್ಸುಗಳು ವಿಶೇಷವಾಗಿ ಹವಾನಿಯಂತ್ರಿತ ಬಸ್ಸುಗಳು, ಅದರಲ್ಲೂ ವಿಶೇಷವಾಗಿ ಐರಾವತ ಬಸ್ಸುಗಳಲ್ಲಿ ದೂರದ ಊರುಗಳಿಗೆ ಹಲವಾರು ಬಾರಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇರುತ್ತಾರೆ. ಕಡಿಮೆ ಪ್ರಯಾಣಿಕರನ್ನು ಹೊತ್ತು ಸಾಗಿದರೂ ಸಹ ಇಂಧನ ಅಷ್ಟೇ ವ್ಯಯವಾಗುತ್ತದೆ. ಇದರ ಬದಲಿಗೆ ಕನಿಷ್ಠ 25ರಷ್ಟು ಸ್ಥಾನವನ್ನಾದರೂ ಹಿರಿಯ ನಾಗರಿಕರಿಗೆ ಇಂತಹ ಬಸ್ಸುಗಳಲ್ಲಿ ಮೀಸಲಿಟ್ಟರೆ, ಇದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತದೆ. ನಷ್ಟದಲ್ಲಿ ಓಡಾಡುವ ಈ ಮಾರ್ಗಗಳು ಅಲ್ಪ ಪ್ರಮಾಣದಲ್ಲಿ ಲಾಭವನ್ನು ಕಾಣಬಹುದು. ಪ್ರಯಾಣಿಕರಿಲ್ಲದೆ ಓಡಾಡುವ ಬಸ್ಸುಗಳಿಗಿಂತ ಪ್ರಯಾಣಿಕರನ್ನು ತುಂಬಿಕೊಂಡು ಓಡಾಡುವುದು ಹೆಚ್ಚು ಲಾಭವಾಗುತ್ತದೆ. ದಯಮಾಡಿ ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ಈ ನಿಟ್ಟಿನಲ್ಲಿ ಆಲೋಚಿಸಿ. ಅಲ್ಲದೆ ಬೆಂಗಳೂರು ನಗರದಲ್ಲಂತೂ ಹಲವಾರು ವರ್ಷಗಳಿಂದ ಬಾಡಿಗೆಗೆ ಯಾರೂ ಬಾರದೆ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿನ ವಾಣಿಜ್ಯ ಸಂಕೀರ್ಣಗಳು ಧೂಳು ತುಂಬಿಕೊಂಡಿವೆ. ಇವುಗಳನ್ನು ಹೀಗೆಯೇ ಬಿಟ್ಟು ನಷ್ಟ ಮಾಡಿಕೊಳ್ಳುತ್ತಿರುವ ಬಿಎಂಟಿಸಿ, ಕನಿಷ್ಠ ಮತ್ತೆ ಪ್ರಯತ್ನ ಪಟ್ಟು ಕಡಿಮೆ ದರದಲ್ಲಾದರೂ ಬಾಡಿಗೆಗೆ ಕೊಟ್ಟು ಧೂಳು ತುಂಬಿರುವ ಬಿಎಂಟಿಸಿ ಬಸ್ ನಿಲ್ದಾಣಗಳ ವಾಣಿಜ್ಯ ಮಳಿಗೆಗಳಿಗೆ ಹಿಡಿದಿರುವ ಗ್ರಹಣವನ್ನು ಬಿಡಿಸಲಿ.

-ಕೆ.ಎಸ್. ನಾಗರಾಜ್ ಹನುಮಂತನಗರ, ಬೆಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)