varthabharthi

ನಿಮ್ಮ ಅಂಕಣ

ಮಂಕಾದ ಮೋಡಿ!

ವಾರ್ತಾ ಭಾರತಿ : 14 Feb, 2019
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,
ಸಾಮಾನ್ಯವಾಗಿ ಔಷಧಿ ತಯಾರಕರು ವಿವಿಧ ಕಾಯಿಲೆಗಳಿಗೆ ಕೊಡುವ ಗುಳಿಗೆಗಳಿಗೆ ಒಂದಷ್ಟು ದಿನಗಳು ಎಂದು ನಿಗದಿಪಡಿಸಿರುತ್ತಾರೆ. ಅವಧಿಯ ಆ ದಿನ ಮುಗಿಯುತ್ತಿದ್ದಂತೆ ಔಷಧಿಗಳು ಕಸವಾಗುತ್ತದೆ. ಅದೇ ರೀತಿಯಲ್ಲಿ ಅಂಗಡಿಗಳಲ್ಲಿ ಮಾರುವ ಮಿಠಾಯಿಗಳು ಒಂದಷ್ಟು ದಿನಗಳಾದ ಮೇಲೆ ಭೂಸ್ಟ್ ಹಿಡಿಯುತ್ತದೆ. ಆಗ ಅದನ್ನೂ ಕಸವೆಂದು ಡಬ್ಬದಿಂದ ತೆಗೆದು ಹಾಕುತ್ತಾರೆ. ಅದೇ ರೀತಿಯಲ್ಲಿ 2014ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದಲ್ಲಿ ಕಾಡುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಹರಡಿದ ಅನೇಕ ಕಾಯಿಲೆಗಳಿಗೆ ತಾನೊಬ್ಬನೇ ಔಷಧಿ ಎನ್ನುವ ರೀತಿಯಲ್ಲಿ ತಮ್ಮ ಮೊನಚಾದ ಮಾತುಗಳಿಂದ ಮತ್ತು ಮೋಡಿ ಮಾಡುವ ವ್ಯಕ್ತಿತ್ವದಿಂದ ಇಡೀ ದೇಶದ ಜನರನ್ನು ಆಕರ್ಷಿಸಿ, ಭರವಸೆಯ ಮಹಾಪೂರವನ್ನು ಹರಿಸಿ ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೇಶದ ಜನರಿಗೆ ಏನೆಂದು ಅರ್ಥವಾಗಿದ್ದಾರೆ. ಈಗ ಅವರ ಮಾತಿನಲ್ಲಿ ಮೊನಚಿಲ್ಲ. ಅವರ ಮೋಡಿಯು ಮಂಕಾಗಿದೆ. ಹೀಗಾಗಿ ಅವರಾಡುವ ಮಾತುಗಳು ಹಳೆಯ ಮಿಠಾಯಿ ರೀತಿಯಾಗಿದೆ. ಅವರು ಹೇಳುವ ರಾಜಕೀಯ ಮಾತುಗಳೆಲ್ಲವೂ ಅವಧಿಯನ್ನು ಕಳೆದುಕೊಂಡ ಔಷಧಿಗಳಂತಾಗಿದೆ. ಕಳೆದ ನಾಲ್ಕು ಮುಕ್ಕಾಲು ವರ್ಷದ ಅವಧಿಯಲ್ಲಿ ಇವರ ಭಾಷಣವನ್ನು ಕೇಳಿ ಕೇಳಿ ಜನರ ಕಿವಿ ತೂತಾಗಿದೆ.
 ಹೇಳಿದ್ದನ್ನೇ ಹೇಳುವುದು, ತಮ್ಮನ್ನು ತಾವೇ ಪ್ರಶಂಸಿಸಿಕೊಳ್ಳುವುದು, ದೇಶದ ಎಲ್ಲ ಒಳಿತಿಗೆ ತಾನೊಬ್ಬನೇ ಕಾರಣ, ದೇಶದ ಎಲ್ಲಾ ಕೆಡಕುಗಳಿಗೆ ವಿರೋಧ ಪಕ್ಷದವರೇ ಕಾರಣ ಎನ್ನುವ ಇವರ ಮಾತು ಮತ್ತು ಸರ್ವಾಧಿಕಾರಿಯಂತೆ ತಮ್ಮನ್ನು ತಾವೇ ಕೇಂದ್ರೀಕರಿಸಿಕೊಂಡು ಎಲ್ಲರಲ್ಲಿಯೂ ಬಲವಂತವಾಗಿ ಗೌರವವನ್ನು ಬಯಸುವ ಇವರ ನಡವಳಿಕೆ ರಾಷ್ಟ್ರದ ಜನರಿಗೆ ಸಾಕು ಸಾಕೆನಿಸಿದೆ. ಹೊಸ ಭರವಸೆಗಳನ್ನು ಕೊಡುವ ಮುನ್ನ, ಹಿಂದೆ ಕೊಟ್ಟ ಭರವಸೆಗಳೇನಾಯಿತು ಎನ್ನುವ ಮುನ್ನ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿ. ಕೆಲವು ದೃಶ್ಯ ಮಾಧ್ಯಮದವರು ಮೋದಿಯವರ ಒಂದೊಂದು ಭಾಷಣವನ್ನೂ ಮತದಾರರ ಮೇಲೆ ಪರಿಣಾಮ ಬೀರುವ ಮಹಾನ್ ಸಭೆಗಳು ಎಂದು ಬಿಂಬಿಸುತ್ತಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಇವರೇ ಮಾಡಿದ ನೂರಾರು ರ್ಯಾಲಿಗಳ ಪರಿಣಾಮ ಏನಾಯಿತು ಎಂದು ಈಗಾಗಲೇ ತಿಳಿದಿದೆ. ಇನ್ನು ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೂರಾರು ಸಭೆಗಳನ್ನು ಇಡೀ ದೇಶದ ಎಲ್ಲಾ ಮುಖ್ಯಮಂತ್ರಿಗಳನ್ನು ಕರೆಸಿ ಮಾಡಿಸಿದರೂ, ಮೋದಿಯವರೇ ಜಿಲ್ಲೆ ಜಿಲ್ಲೆಗಳಲ್ಲಿ ಅಬ್ಬರಿಸಿ ಮಾತನಾಡಿದರೂ, ಬಹುಮತವನ್ನು ಜನತೆ ಕೊಡಲೇ ಇಲ್ಲ.
 
ಪ್ರತಿಯೊಂದು ನಾಣ್ಯಕ್ಕೂ ಚಲಾವಣೆಗೆ ಒಂದಷ್ಟು ದಿನಗಳಿರುತ್ತದೆ. ಅವಧಿ ಮುಗಿದ ಮೇಲೆ ಅವು ಚಲಾವಣೆಯಲ್ಲಿಲ್ಲದ ನಾಣ್ಯಗಳಾಗುತ್ತವೆ. ಜನಪ್ರಿಯತೆ ಎನ್ನುವುದು ಬಿಸಿ ಬೋಂಡ ಇದ್ದ ಹಾಗೆ. ಅದು ತುಂಬಾ ದಿನಗಳ ಕಾಲ ಉಳಿಯುವುದಿಲ್ಲ. ಇದು ಈ ದೇಶದಲ್ಲಿ ಹಲವಾರು ದಶಕಗಳಿಂದ ಸಾಗಿ ಬಂದಿರುವ ನಿಯಮವಾಗಿರುತ್ತವೆ. ಸುಳ್ಳುಗಳು ಹೆಚ್ಚು ದಿನ ಬದುಕುವುದಿಲ್ಲ ಎಂಬುದನ್ನು ಇನ್ನಾದರೂ ಪ್ರಧಾನಿ ಅರಿಯಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)