varthabharthi

ಸಿನಿಮಾ

ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮಾ ಉತ್ಸವ

ನೋಡಬೇಕಾದ ಸಿನೆಮಾಗಳು

ವಾರ್ತಾ ಭಾರತಿ : 17 Feb, 2019
ಕೆ. ಫಣಿರಾಜ್

ಇದೇ 21 ರಿಂದ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮಾ ಉತ್ಸವವು ಶುರುವಾಗುತ್ತದೆ. ಎಂಟು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ 200ಕ್ಕೂ ಮಿಕ್ಕಿದ ಸಿನೆಮಾಗಳು ಪ್ರದರ್ಶಿತವಾಗುತ್ತವೆ. ಒಂದೇ ವೇಳೆಯಲ್ಲಿ 11 ತೆರೆಗಳಲ್ಲಿ ಪ್ರದರ್ಶನ ನಡೆಯುತ್ತಿರುತ್ತದೆ. ಒಂದು ಹೊತ್ತಿಗೆ ಒಂದೇ ತೆರೆಯಲ್ಲಿ ಒಬ್ಬರು ಪ್ರದರ್ಶನ ನೋಡುವ ಮೀತಿ ಇರುವುದರಿಂದ, ನೋಡಬೇಕಾದ ಸಿನೆಮಾಗಳ ಆಯ್ಕೆಗೆ ಮಿತಿ ಇರುತ್ತದೆ. ಹೀಗಾಗಿ, ಈ ಹಿಂದೆ ನಡೆದಿರುವ ಸಿನೆಮಾ ಉತ್ಸವಗಳಲ್ಲಿ ನಾನು ನೋಡಿರುವ (ಹಾಗೂ ಬೆಂಗಳೂರು ಉತ್ಸವದ ಪಟ್ಟಿಯಲ್ಲಿರುವ) ಸಿನೆಮಾಗಳಲ್ಲಿ, ಸಿನೆಮಾ ಕಲೆಯ ಎಲ್ಲೆಯನ್ನು ವಿಸ್ತರಿಸುವ ಸೃಜಶೀಲತೆಯುಳ್ಳವು ಎಂದು ಸಿನೆಮಾ ವಿದ್ಯಾರ್ಥೀಯಾದ ನನಗೆ ಕಂಡ, ಕೆಲವು ಚಿತ್ರಗಳ ಕಿರು ಪರಿಚಯ ಕೊಡುತ್ತಿರುವೆ- ನನ್ನ ಹಾಗೆಯೇ ಸಿನೆಮಾ ಕಲೆಯ ವ್ಯಾಕರಣ ಕಲಿಯಲು ಉತ್ಸಾಹ ಇರುವ ಸಹಪಾಠಿಗಳಿಗೆ ಅನುಕೂಲವಾಗಲಿ ಎಂದು. ಇದರ ಹೊರತಾಗಿಯೂ, ಹತ್ತಾರು ಉತ್ತಮ ಸಿನೆಮಾಗಳು ಉತ್ಸವದ ಪಟ್ಟಿಯಲ್ಲಿ ಇವೆ; ನಾನು ನೋಡಿರದ, ಉತ್ತಮ ರಚನೆಗಳೂ ಇರಬಹುದು. ನೋಡಿದ್ದರಲ್ಲಿ, ಸಿನೆಮಾ ಕಲೆಯನ್ನು ಬೆಳಗುತ್ತವೆ ಅನ್ನಿಸಿದ 8 ಸಿನೆಮಾಗಳ ಪರಿಚಯ ಇಲ್ಲಿದೆ.

ದಿ ವೈಲ್ಡ್ ಪಿಯರ್ ಟ್ರೀ  
 ದೇಶ: ಟರ್ಕಿ ನಿರ್ದೇಶನ: ನೂರಿ ಬಿಲ್ಗೆ 


ಖಾಸಗಿ ಬದುಕುಗಳಲ್ಲಿ ನಡೆಯುವ ಸಂಬಂಧಗಳ ಸೆಣಸಾಟವನ್ನು ಮನುಷ್ಯರ ಸಾಮಾಜಿಕ ಅಸ್ತಿತ್ವದ ಸೂತ್ರಗಳು ಹಿಡಿದಿಡುವ ಬಗೆಗಳನ್ನು ದೃಶ್ಯ ರೂಪಕಗಳಲ್ಲಿ ಹಿಡಿದಿಡುವುದರಲ್ಲಿ ನೂರಿ ಬಿಲ್ಗೆ ನುರಿತ. ತನ್ನ ದಿ ವಿಂಟರ್ ಸ್ಲೀಪ್(2014)ಗಾಗಿ ಕ್ಯಾನ್ಸ್‌ನ ಅತ್ಯುನ್ನತ ಪ್ರಶಸ್ತಿ ಪಡೆದಿರುವ ನೂರಿಯ ಸಿನೆಮಾ ಯಾನದ ಮತ್ತೊಂದು ಮಹತ್ವದ ಸಿನೆಮಾವಿದು. ಅತ್ತ ಯುರೋಪಿನ ಭಾಗವಾಗಲು ತುಡಿಯುವ, ಇತ್ತ ಪಶ್ಚಿಮ ಏಶ್ಯಾದ ಸಾಮುದಾಯಿಕ ಬೇರುಳ್ಳ ಟರ್ಕಿ ದೇಶದ ಸಾಮಾಜಿಕ ಜೀವನದ ಬಿರುಕುಗಳು ಖಾಸಗಿ ಬದುಕುಗಳ ಅಸ್ತಿತ್ವಕ್ಕೂ ಚಾಚುವುದನ್ನು, ಯಾವ ಹೆಚ್ಚಿನ ಬೌದ್ಧಿಕ ತೋರಿಕೆಯೂ ಇಲ್ಲದೆ, ಸಂವಾದಾತ್ಮಕ ಚಿತ್ರಕತೆ, ಪಾತ್ರಗಳ ಭಾವಗತಿಯನ್ನು ಸೂಸುವ ದೃಶ್ಯಗಳ ಬಲದಲ್ಲಿ ತೋರಿಸಬಲ್ಲ ಸೃಜನತೆಯುಳ್ಳ ಕಲಾವಿದನೀತ. ಈ ಸಿನೆಮಾವು, ಹಲವು ಬದುಕುಗಳ ನಿತ್ಯ ಅಸ್ತಿತ್ವದ ಜಿಜ್ಞಾಸೆಯನ್ನು, ಒಂದು ಕಾಲ-ದೇಶ ಸನ್ನಿವೇಶದಲ್ಲಿ ಹರಳುಗಟ್ಟಬಲ್ಲ ಜೀವನ ದರ್ಶನದ ಎತ್ತರಕ್ಕೆ ಕೊಂಡೊಯ್ಯುತ್ತದೆ.

***

ಷಾಪ್ ಲಿಫ್ಟರ್ಸ್‌
ದೇಶ: ಜಪಾನ್, ನಿರ್ದೇಶನ: ಹಿರೊಕಜು ಕೊರೆ ಇಡ 


ಶಿಷ್ಟ ವರ್ಗದ ಸಂಸಾರ ಪರಿಕಲ್ಪನೆಯಾಚೆ, ಪ್ರಭುತ್ವಗಳ ದೃಷ್ಟಿಯಲ್ಲಿ ಕನಿಷ್ಟ ಪ್ರಜೆಗಳೂ ಕೂಡ ಅಲ್ಲದ ನಿರ್ಗತಿಕ ಜನ ಒಗ್ಗೂಡಿ ಕಟ್ಟಿಕೊಂಡ ಸಂಸಾರದ ಸುಖ, ಸಂತೋಷ, ದುಗುಡ, ದುಮ್ಮಾನಗಳನ್ನು ಲವಲವಿಕೆಯಲ್ಲಿ ಕಟ್ಟುವ ಮೂಲಕ ಮನುಷ್ಯ ಬದುಕಿನ ಸುಖ ಸಂಬಂಧಗಳ ಅರ್ಥವನ್ನು ಅನಾಯಾಸದಲ್ಲಿ ಪ್ರಸ್ತುತ ಪಡಿಸುವ ಸಿನೆಮಾವಿದು. ಇಂತಹ ಸಾಮುದಾಯಿಕ ಜೀವನವನ್ನು ಸದಾ ಹಂಗಾಮಿಯಾಗಿಡುವ ಶಿಷ್ಟ ಸಮಾಜದ ಅದೃಶ್ಯ ಕೈಗಳಡಿ, ದುರಂತ ಬೆನ್ನಿಗೆ ಕಟ್ಟಿಕೊಂಡೆ ಇರುವುದನ್ನು ಅಂತರಗಾಮಿಯಾಗಿ ತೋರುವುದು ಈ ಸಿನೆಮಾದ ಹೆಚ್ಚಳ. ತನ್ನ 12 ಸಿನೆಮಾಗಳಿಗೆ ಹಲವು ಪ್ರಶಸ್ತಿ ಗಳಿಸಿರುವ ಹಿರೊಕಜು, ಈ ಸಿನೆಮಾಕ್ಕಾಗಿ 2018ರ ಕ್ಯಾನ್ಸ್ ಸಿನಿಮೋತ್ಸವದಲ್ಲಿ ಅತ್ಯುನ್ನತ ಪ್ರಶಸ್ತಿ ಗಳಿಸಿರುವನು. ಬಿಗಿ ಚಿತ್ರಕತೆ ಹಾಗೂ ಅದಕ್ಕೆ ಸಹಯೋಗಿಯಾದ ಕ್ಯಾಮರಾ ಕಸುಬುದಾರಿಕೆಯ ಮೂಲಕ, ಸಾಮಾಜಿಕ ಸ್ಥಿತಿಯನ್ನು ಯಾವ ಮೆಲೋಡ್ರಾಮವಿಲ್ಲದೆ ಬುದ್ಧಿಭಾವಗಳನ್ನು ಎಚ್ಚರಿಸುವ ಹಾಗೆ ಕಟ್ಟಿ ತೋರುವ ಹ್ಯುಮನ್‌ಸ್ಕೇಪ್ ಸಿನೆಮಾ ಶೈಲಿಯ ಉನ್ನತ ಉದಾಹರಣೆ ಇದು.

***

3 ಫೇಸಸ್
ದೇಶ: ಇರಾನ್, ನಿರ್ದೇಶನ: ಜಫಾರ್ ಪನ್ಹಾಹಿ


ನಟಿಯಾಗುವ ಮಹಾತ್ವಾಕಾಂಕ್ಷೆಯುಳ್ಳ ಹಳ್ಳಿಯ ತರುಣಿಯೊಬ್ಬಳು ನಾಟಕ ಶಾಲೆ ಸೇರಲು ಬಯಸುವಳು. ಅವಳ ಸಂಪ್ರದಾಯಸ್ಥ ಕುಟುಂಬ ನಿರಾಕರಿಸಿದಾಗ, ಆ ತರುಣಿ, ತಾನು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂಬ ಮೊಬೈಲ್ ವೀಡಿಯೊ ತುಣುಕನ್ನು ಪ್ರಸಿದ್ಧ ನಟಿ, ಬೆಹ್ರಾನ್ ಜಾಫ್ರಿಗೆ ಕಳಿಸುವಳು. ತಲ್ಲಣಗೊಂಡ ಬೆಹ್ರಾನ್, ಜಫಾರ್ ಪನ್ಹಾಹಿಯೊಟ್ಟಿಗೆ ವಾಸ್ತವ ತಿಳಿಯಲು ಆ ಹಳ್ಳಿಗೆ ಪ್ರಯಾಣ ಬೆಳೆಸುವಳು. ಪ್ರಯಾಣದ ಕಥನವೇ ಪ್ರಸ್ತುತ ಸಿನೆಮಾ. ಇರಾನಿನ ಮೂಲಭೂತವಾದಿ ಪ್ರಭುತ್ವದ ಕಟು ಟೀಕಾಕಾರನಾದ ಜಾಫರ್ ಪನ್ಹಾಹಿಯು ಕಳೆದ 9 ವರ್ಷಗಳಿಂದ ದೇಶಬಂದಿಯಾಗಿರುವನು; ಅವನ ಸಿನೆಮಾಗಳಿಗೆ ಇರಾನಿನಲ್ಲಿ ಪ್ರದರ್ಶನ ಬಹಿಷ್ಕಾರವಿದೆ. ಅವನು ಸಿನೆಮಾಗಳನ್ನು ಮಾಡುವುದಕ್ಕೂ ಕಠಿಣ ನಿರ್ಬಂಧವಿದೆ. ಇಂತಿದ್ದೂ, ಪನ್ಹಾಹಿ, ಸರಳ ಉಪಕರಣಗಳನ್ನು ಬಳಸಿ ಸಿನೆಮಾ ಮಾಡುತ್ತಲೇ ಇರುವನು. ನಿರ್ಬಂಧಗಳ ಕಾರಣ ತನ್ನ ಸಿನೆಮಾ ಶೈಲಿಯನ್ನೇ ಭಿನ್ನವಾಗಿ ಹೊರಳಿಸಿಕೊಂಡು, ತನ್ನ ನಿತ್ಯ ಜೀವನ ನಡಾವಳಿಗಳಿಗೆ ಹೊಂದುವ ಬಿಗಿ ಬಂಧದ ಚಿತ್ರಕತೆ ಕಟ್ಟಿಕೊಂಡು, ತಾನೇ ಅದರಲ್ಲಿ ಪಾತ್ರವಾಗಿ, ಇರಾನಿನ ನಿತ್ಯದ ಆಗುಹೋಗುಗಳ ಕುರಿತ ಹರಿತ ಕಥನಾ ಚಿತ್ರಗಳನ್ನು ಮಾಡುತ್ತಿರುವನು. ಸಾಕ್ಷ್ಯ ಚಿತ್ರಗಳ ವಾಸ್ತವಿಕ ದೃಶ್ಯ ಕಟ್ಟುವ ಬಗೆಯನ್ನು ಅನುಸರಿಸುತ್ತಾ, ಸರಣಿ ಘಟನಾವಳಿಗಳ ಮೂಲಕ ಕಥನಾ ಹೆಣೆಯುವ ವಿಶಿಷ್ಟ ಸಿನೆಮಾ ಶೈಲಿ ರೂಪಿಸುತ್ತಿರುವ ಪನ್ಹಾಹಿ ಕೇಡುಗಾಲದಲ್ಲಿ, ಕೇಡುಗಾಲದ ಬಗ್ಗೆ ಸೂಕ್ಷ್ಮಸಂವೇದನೆಯ ಸಿನೆಮಾ ಮಾಡುತ್ತಿರುವ ದಿಟ್ಟ ಕಲಾವಿದ. ಈ ನಮೂನೆಯ ಸಿನೆಮಾದ ಕಲಾತ್ಮಕ ಹಿರಿಮೆಗೆ ಈ ಸಿನೆಮಾ ಮತ್ತೊಂದು ಸಾಕ್ಷಿ.

***

ಅಯ್ಕ
ದೇಶ: ರಶ್ಯಾ-ಕಝಕಿಸ್ತಾನ್, ನಿರ್ದೇಶನ: ಸರ್ಗಿ ದ್ವೊವಿರ್ಸ್‌ಸ್ತೇವ್


ಕಝಕಿಸ್ತಾನ್‌ನಲ್ಲಿರುವ ಕಡು ಬಡ ಕುಟುಂಬಕ್ಕೆ ಆಧಾರವಾಗುವ ಸಲುವಾಗಿ ಅಯ್ಕ ರಶ್ಯಾದ ಪಟ್ಟಣಕ್ಕೆ ಅಕ್ರಮ ವಲಸೆ ಬರುತ್ತಾಳೆ. ಕಠಿಣ ದೈಹಿಕ ಶ್ರಮದ ಬಿಡಿಗಾಸಿನ ಕೆಲಸ ಮಾಡುತ್ತಿರುವವಳಿಗೆ, ಅತ್ಯಾಚಾರದ ಬಸುರಿಂದ ಮಗುವೊಂದು ಹುಟ್ಟಿದಾಗ, ಕೂಸನ್ನು ಬಿಟ್ಟು, ಆಸ್ಪತ್ರೆಯಿಂದ ಪರಾರಿಯಾಗುತ್ತಾಳೆ. ಹಸಿ ಬಾಣಂತಿಯಾದರೂ ಬಿಡಿಕಾಸಿನ ಚಾಕರಿ ಗಳನ್ನು ಮಾಡಿ ಬದುಕಲು ಹೆಣಗುತ್ತಾಳೆ. ಮಗುವಿಗೆ ಹಾಲುಣಿಸದೆ ಬಿಗಿದು ನೋಯುವ ಎದೆಯನ್ನು ಕಟ್ಟಿಡುವುದೂ ಅವಳ ದರಿದ್ರ ಅಸ್ತಿತ್ವದ ಮತ್ತೊಂದು ಯಾತನಾಮಯ ಭಾಗವಾಗಿಬಿಡುತ್ತದೆ. ಪೋಲಿಸರಿಂದ ಅಡಗಿ ಅಕ್ರಮ ವಲಸಿಗರ ಗುಪ್ತ ಠಿಕಾಣಿಯಲ್ಲಿ ಬದುಕು, ಕೈಜಾರುವ ಕೂಲಿ ಕೆಲಸಗಳು, ಊರಲ್ಲಿ ಸಾಲ ಕೊಟ್ಟ ಸಾಹುಕಾರರ ಗೂಂಡಾಗಳ ಬೆನ್ನ್ನೆತ್ತುವಿಕೆ-ಎಲ್ಲವನ್ನೂ ಹಲ್ಲು ಕಚ್ಚಿ ಎದುರಿಸುವ ಛಲವೊಂದು ಕಡೆ, ನಿತ್ಯವೂ ಹಾಲೆದೆಯುಕ್ಕಿ ಹಸುಗೂಸಿನ ಕಡೆ ನೂಕುವ ಜೀವನಂಟಿನ ಸಂಕಟ ಮತ್ತೊಂದು ಕಡೆ. ಬದುಕು ಕ್ರೂರವಾದಷ್ಟೂ, ಜೈವಿಕ ಕುಡಿಯ ಸೆಳೆತವನ್ನು ಕಿತ್ತೊಗೆಯುವ ಕ್ರೂರತೆ ಅವಳ ವಿಧಿಯೆನ್ನುವಂತಾಗಿಬಿಟ್ಟಿದೆ. ಕೊನೆಗಾಣದ ಸಾಮಾಜಿಕ ಹಿಂಸೆಯು, ಅವಳ ದೇಹ-ಭಾವಗಳ ಮೇಲೆ ನಡೆಸುವ ಕ್ರೌರ್ಯವನ್ನು, ರಮ್ಯ ಭಾವೋದ್ವೇಗಕ್ಕೆ ಸಿಲುಕದೆ, ದೃಶ್ಯಾವಳಿಗಳೇ ಪ್ರೇಕ್ಷಕರ ಮುಖಕ್ಕೆ ಹಿಡಿಯುವ ಹಾಗೆ ಕಟ್ಟಿರುವ ಮತ್ತೊಂದು ಉತ್ತಮ ಹ್ಯುಮನ್ ಸ್ಕೇಪ್ ಸಿನೆಮಾವಿದು. ಅಯ್ಕ ಆಗಿ ನಟಿಸಿರುವ ಸಮಲ್ ಯೆಸ್ಲ್ಯಾಮೊವ ತನ್ನ ಅದ್ಭುತ ನಟನೆಗೆ ಕ್ಯಾನ್ಸ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವಳು.

***

ಯೊಮೆಡ್ಡಿನ್
ದೇಶ: ಈಜಿಪ್ಟ್, ನಿರ್ದೇಶನ: ಎ.ಬಿ.ಷವ್ಯಿಕ್

ಬೆಷಾಯ್ ಕುಷ್ಠರೋಗಿಗಳ ಕಾಲನಿಯಲ್ಲಿ ವಾಸಿಸುತ್ತಾ, ಗುಜರಿ ಹೆಕ್ಕುವ ವೃತ್ತಿ ಮಾಡಿಕೊಂಡಿರುವವನು. ಬಾಲ್ಯದಲ್ಲೇ, ಅವನಿಗೆ ಕುಷ್ಠರೋಗದ ಅಂಟಿದೆ ಎಂದು ತಿಳಿದು, ಅವನ ತಂದೆ ಬೆಷಾಯ್‌ನನ್ನು ಕಾಲೋನಿಯಲ್ಲಿ ಹಾಕಿ ತೊರೆದುಬಿಟ್ಟಿರುತ್ತಾನೆ. ಅನಾಥ ಬದುಕನ್ನು, ರೋಗದಿಂದ ಮುಕ್ತವಾಗಿದ್ದರೂ ಊರ ಹೊರಗಿಟ್ಟ ಸಮಾಜವನ್ನು, ಜಿಗುಟುತನ ಮತ್ತು ಕಟು ಹಾಸ್ಯ ಪ್ರಜ್ಞೆಯಿಂದ ಎದುರಿಸಿ ಬದುಕಿ, ಸಂಸಾರಸ್ಥನೂ ಆಗಿರುವ ಬೆಷಾಯ್‌ಗೆ ಒಬಮಾ ಎಂಬ ಅನಾಥ ಬಾಲಕ ಬಾಲಂಗೋಚಿ. ಹೆಂಡತಿ ಅನಾರೋಗ್ಯದಿಂದ ಮರಣಹೊಂದಿದ ನಂತರ, ತನ್ನ ಕತ್ತೆ ಗಾಡಿಯಲ್ಲಿ ತನ್ನ ಸಮಸ್ತ ಗುಜರಿ ಆಸ್ತಿಯನ್ನು ತುಂಬಿಸಿಕೊಂಡು, ತನ್ನ ಹುಟ್ಟೂರಿಗೆ ಪ್ರಯಾಣ ಹೊರಡುತ್ತಾನೆ; ತನ್ನ ತಂದೆಗೆ ‘‘ಯಾಕೆ ಹೀಗೆ ನನಗೆ ಅನ್ಯಾಯ ಮಾಡಿದೆ’’ ಎಂದು ಕೇಳುವ ಛಲ ಅವನದು. ಅವನ ಯಾನಕ್ಕೆ ಸಂಗಾತಿ ಒಬಮಾ. ಇಬ್ಬರ ಯಾನದ ಮೂಲಕ ಸಿನೆಮಾವು ಈಜಿಪ್ಟಿನ ಸಮಾಜದ ಹಲವು ಮುಖಗಳನ್ನು ಪರಿಚಯಿಸುತ್ತ ಸಾಗುತ್ತದೆ. ಈ ಸರಳ ಕಥನದ ಕಸುವು ಇರುವುದು, ಅದರ ಬಿಗಿ ನಿರೂಪಣೆಯಲ್ಲಿ ಮತ್ತು ಪರಿತ್ಯಕ್ತರಾಗಿ ಸಮಾಜದ ಅಂಚಿನಲ್ಲಿ ಬದುಕುವ ಜನರ ಜೀವ ಸಂಕಲ್ಪವನ್ನು ಒಂದಿನಿತೂ ಒಣ ಕರುಣೆ ತೋರದೆ, ಕಟು ವ್ಯಂಗ್ಯ-ವಿಮರ್ಶೆಗಳ ಪಾತ್ರ ರಚನೆಯಲ್ಲಿ. ಅಂಚಿನಲ್ಲ್ಲಿರುವ ಜನರ ಸ್ವಾಯತ್ತೆ ಮತ್ತು ಸ್ವಾಭಿಮಾನವನ್ನು, ಅವರ ಬದುಕಿನ ಸ್ಥಿತಿಯನ್ನು ತೆಳುಗೊಳಿಸದೆ ಲವಲವಿಕೆಯಿಂದ ಕಟ್ಟಿರುವ ಅಚ್ಚರಿಯ ಸಿನೆಮಾವಿದು. ‘ನ್ಯಾಯ ನಿರ್ಣಯದ ದಿನ’ (ಯೊಮೆಡ್ಡಿನ್) ಎಂಬ ಶೀರ್ಷಿಕೆಯಿಂದಲೇ ಸಿನೆಮಾದ ಕಟು ವ್ಯಂಗ್ಯದ ಸಮಾಜ ವಿಮರ್ಶೆ ಶುರುವಾಗುತ್ತದೆ. ಈ ಸಿನೆಮಾ ಕ್ಯಾನ್ಸ್ ನಲ್ಲಿ ಪ್ರಶಸ್ತಿ ಪಡೆದಿರುವುದು ಅಚ್ಚರಿಯೇನೂ ಅಲ್ಲ.

***

ಮಂಟ ರಾಯ್
ದೇಶ : ಥಾಯ್ಲೆಂಡ್, ನಿರ್ದೇಶನ : ಫುಟ್ಟಿಫೊಂಗ್‌ಅರೂನ್‌ಫೊಂಗ್ 


ಸಾವಿರಾರು ರೊಹಿಂಗ್ಯಾ ಸಮುದಾಯದ ನಿರಾಶ್ರಿತರು ಮುಳುಗಿ ಸತ್ತ ಥಾಯ್ಲೆಂಡ್‌ನ ತೀರ. ಅಲ್ಲಿನ ಒಬ್ಬ ಯುವ ಮೀನುಗಾರ. ಅವನಿಗೊಮ್ಮೆ, ಕಡಲತಡಿಯಲ್ಲಿ ಎಚ್ಚರ ತಪ್ಪಿದ ಅಪರಿಚಿತ ವ್ಯಕ್ತಿ ಸಿಗುವನು. ಅವನನ್ನು ತನ್ನ ಮನೆಗೆ ತಂದು ಉಪಚರಿಸಿ ಜೀವ ಉಳಿಸುವನು. ಅಪರಿಚಿತ ವ್ಯಕ್ತಿಗೆ ಮಾತು ಬಾರದು. ಮೀನುಗಾರನೇ ಅವನಿಗೊಂದು ಹೆಸರು ನೀಡಿ ತನ್ನ ಸಹವಾಸಿ ಮಾಡಿಕೊಂಡು ತನ್ನ ನಿತ್ಯ ಕಾಯಕದ ಭಾಗ ಮಾಡಿಕೊಳ್ಳುವನು. ಒಂದು ದಿನ ಮೀನುಗಾರ ಮರೆಯಾಗುವನು; ಅಪರಿಚಿತ ವ್ಯಕ್ತಿಯೇ ಮೀನುಗಾರನ ಬದುಕು ನಡೆಸುವನು. ಇಷ್ಟೇ ಕುತೂಹಲದ ಕಥಾ ಹಂದರವನ್ನು ಇಟ್ಟುಕೊಂಡು ಅರೂನ್‌ಫೊಂಗ್, ನಿರಾಶ್ರಿತ ರೋಹಿಂಗ್ಯಾ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸೆಯ ಸ್ವರೂಪವನ್ನು ಅದ್ಭುತ ದೃಶ್ಯಗಾರಿಕೆಯ ಕಲೆಯ ಮೂಲಕ ತಲ್ಲಣಿಸುವಂತೆ ನಿರೂಪಿಸಿದ್ದಾನೆ. ಅಪಿಚಿತ್ಪಾಂಗ್ ವೀರಸಂಕುಲೆಯಿಂದ ಹಿಡಿದು, ಇಂದಿನ ಯುವ ನಿರ್ದೇಶಕರಾದ ಅನೋಚ ಸುವಿಚಾರೋಫೊಂಗ್, ಅರೂನ್‌ಫೊಂಗ್ ಇವರು, ತಮ್ಮ ದೇಶದಲ್ಲಿ ಘಟಿಸುತ್ತಿರುವ ರಾಜಕೀಯ-ಸಾಮಾಜಿಕ ಹಿಂಸೆಗಳನ್ನು, ದಟ್ಟವಾದ ದೃಶ್ಯ ಸಂಕಲನಗಳ ಮೂಲಕ ಕಟ್ಟುವ ಅಪರೂಪದ ಸಿನೆಮಾ ಕಲಾ ಶೈಲಿಯನ್ನು ರೂಪಿಸಿರುವರು. ಇಂತಹ ಸಿನೆಮಾಗಳನ್ನು ಮಾಡಲು ಹಲವು ವರ್ಷಗಳ ಕಾಲ ತಯಾರಿ ಮಾಡಿಕೊಂಡು, ಉತ್ತಮ ತಾಂತ್ರಿಕ ನಿರ್ಮಾಣಕ್ಕೆ ಬೇಕಾದ ಬಂಡವಾಳವನ್ನು ಹೊಂದಿಸಿಕೊಂಡು, ಸಿನೆಮಾಕ್ಕೆ ವಿಶಿಷ್ಟವಾದ ದೃಶ್ಯ ವ್ಯಾಕರಣಕ್ಕೆ ತೀವ್ರ ಬದ್ಧರಾಗಿ ಕೃತಿಗಳನ್ನು ರಚಿಸುವ ಇವರ ಸೃಜನಶೀಲತೆ ಅಪರೂಪದ್ದು. ನಮ್ಮ ಕೃತಿಗಳನ್ನು ಓದುವ ಸಾಮಾಜಿಕ ಜ್ಞಾನ ಪಡೆದು, ಕಲಾಭಿರುಚಿ ಗಳಿಸಿ, ನಮ್ಮ ಸಿನೆಮಾ ನೋಡಿ ಎಂದು ದಿಟ್ಟವಾಗಿ ಪ್ರೇಕ್ಷಕರಿಗೆ ಹೇಳುವ ಇವರ ಸಿನೆಮಾಗಳು, ರಂಜೋನೋದ್ಯಮವಾದ ಸಿನೆಮಾ ಉದ್ಯಮಕ್ಕೆ ಕಲಾ ಪ್ರತಿರೋಧವೂ ಆಗಿದೆ.

***

ಆ್ಯಷ್ ಇಸ್ ಪ್ಯುರೆಸ್ಟ್ ವೈಟ್
ದೇಶ: ಚೀನಾ, ನಿರ್ದೇಶನ : ಜಿಯ ಝಾಂಗ್ಕೆ

 ಜಗತ್ತಿನ ಸಂಪದ್ಭರಿತ ದೇಶವಾಗಲು, ಚೀನಾದ ಪ್ರಭುತ್ವ ಅನುಸರಿಸುತ್ತಿರುವ ಭರಾಟೆಯ ಮಾರಾಟದ ಸರಕು ಉತ್ಪಾದನೆಯ ಬಂಡವಾಳಶಾಹಿ ವಿಧಾನಕ್ಕೂ, ಚೀನಾದ ಜನಜೀವನದಲ್ಲಿ ಉಂಟಾಗುತ್ತಿರುವ ಸಾಮುದಾಯಿಕ- ಸಾಂಸಾರಿಕ ತಲ್ಲಣಗಳಿಗೂ ಅವಿನಾಭಾವ ಸಂಬಂಧವಿದೆ ಎಂಬ ಅರಿವಿನಲ್ಲಿ ಸಿನೆಮಾ ಮಾಡುತ್ತಿರುವವನು ಝಾಂಗ್ಕೆ. ಸಾಮಾಜಿಕ ಬದುಕಿನಲ್ಲಿ, ವ್ಯಕ್ತಿಗತ ಸಂಬಂಧಗಳ ವಲಯದಲ್ಲಿ ಘಟಿಸುತ್ತಿರುವ ಹಿಂಸೆಯು ಪ್ರಭುತ್ವದ ಉತ್ಪಾದನಾ ವಿಧಾನದ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿದೆ; ಸಮುದಾಯ, ಸಂಸಾರ ಕಥನಗಳಲ್ಲಿ ಪ್ರಕಟವಾಗುವ ಪರಕೀಯ ಭಾವ ಹಾಗೂ ಅದರ ಬೆನ್ನೇರಿ ಘಟಿಸುವ ಹಿಂಸೆಗಳು ಝಾಂಗ್ಕೆಯ ಕೃತಿಗಳ ಕೇಂದ್ರ ಒತ್ತಾಸೆಗಳು. ತನ್ನ ಹಿಂದಿನ ಸ್ಟಿಲ್ ಲೈಫ್, ಎ ಟಚ್ ಆಫ್ ಸಿನ್ ಹಾಗೂ ಮೌಂಟೇನ್ ಮಸ್ಟ್ ಮೂವ್ ಕೃತಿಗಳ ಮೂಲಕ ಆತ ಕಟ್ಟಿಕೊಟ್ಟ ಸಮಾಜದರ್ಶಿ ಸಾಂಸಾರಿಕ ಕಥನಗಳು, ಪ್ರಸ್ತುತ ಸಿನೆಮಾದಲ್ಲಿ ಮತ್ತಷ್ಟೂ ತೀವ್ರ ಸಂವೇದನೆಯಲ್ಲಿ ನಿರೂಪಿತವಾಗಿದೆ. ಪ್ರತಿ ದೃಶ್ಯವನ್ನೂ ಸಾಮಾಜಿಕ ಅಧಿಕಾರದ ದರ್ಶನ ಮಾಡಿಸುವ ದರ್ದಿನಲ್ಲಿ ಕಟ್ಟುತ್ತಾ, ಸಂಕಲಿತ ದೃಶ್ಯಾವಳಿಗಳ ಸಮಗ್ರ ರಚನೆಯು ಕಣ್ಣಿಗೆ ಗೋಚರಿಸದ, ಆದರೆ ಸಮಾಜದ ಉಸಿರೊಳಗೆ ಬೆರೆತ ಹಿಂಸೆಯನ್ನು ಕಾಣಿಸುವುದು ಝಾಂಗ್ಕೆಯ ವಿಶಿಷ್ಟತೆ.

***

ಬರ್ನಿಂಗ್
ದೇಶ: ದಕ್ಷಿಣ ಕೊರಿಯ, ನಿರ್ದೇಶನ: ಲೀ ಚಾಂಗ್-ಡಾಂಗ್


ಕಳೆದ ಇಪ್ಪತ್ತು ವರ್ಷಗಳಿಂದ ದಕ್ಷಿಣ ಕೊರಿಯಾದಲ್ಲಿ, ಕೊರಿಯನ್ ಹೊಸ ಅಲೆ ಎಂದು ಗುರುತಿಸಬಹುದಾದ ಚಲನ ಚಿತ್ರ ಕೃತಿಗಳನ್ನು ಅನೇಕ ನಿರ್ದೇಶಕರು ಕಟ್ಟುತ್ತಿದ್ದಾರೆ. ದಕ್ಷಿಣ ಕೊರಿಯಾದ ರಾಜಕೀಯ ಅಧಿಕಾರ, ಸಾಮಾಜಿಕ ಯಜಮಾನಿಕೆಗಳ ಫಲವಾಗಿ ಸಮಾಜ ಜೀವಿಗಳಲ್ಲಿ ಉಂಟಾಗುವ ಬುದ್ಧಿ-ಭಾವಗಳ ಬಿರುಕು, ತಲ್ಲಣಗಳನ್ನು ಗ್ರಹಿಸಿ, ಸಮಾಜ ಜೀವಿಗಳ ತಲ್ಲಣಗಳನ್ನು ನಿರೂಪಿಸುವುದು ಈ ಬಗೆಯ ಸಿನೆಮಾಗಳ ಇರಾದೆ. ಭೌತಿಕ ಇರುವಿಕೆಯ ಬದುಕಿನ ವಿವರಗಳಷ್ಟೇ, ಭಾವಿಸಿದ ಊಹೆಯ ಬದುಕಿನ ವಿವರಗಳೂ ಸಮಾಜ ಜೀವಿಗಳ ಜೀವನ ದರ್ಶನಕ್ಕೆ ದಿಕ್ಸೂಚಿಗಳಾಗಿರುತ್ತವೆ- ಎಂಬ ವಿಚಾರವನ್ನು ನಂಬಿ ಕೃತಿ ಕಟ್ಟುವುದು ಈ ಶೈಲಿಯ ವಿಶಿಷ್ಟತೆ. ವಾಸ್ತವಿಕ ಬದುಕಿನ ಒಂದು ಕುತೂಹಲಕರ ವಿದ್ಯಮಾನವನ್ನು ಕಥನಾ ಹಂದರವಾಗಿ ಈ ಬಗೆಯ ಸಿನೆಮಾ ಇಟ್ಟುಕೊಂಡಿರುತ್ತದೆ, ಉಳಿದಂತೆ, ದೃಶ್ಯ ರಚನೆಯ ಕೌಶಲದಲ್ಲಿ ಪ್ರಕಟವಾಗುವ ಇಹ-ಊಹಾ ಬದುಕಿನಾಟವನ್ನು ಅರ್ಥೈಸಿ, ಸಮಾಜದ ಬಗ್ಗೆ ಒಂದು ಕಣ್ಣೋಟ ಕಟ್ಟಿಕೊಳ್ಳುವಂತೆ ಪ್ರೇಕ್ಷಕರನ್ನು ಆಹ್ವಾನಿಸುತ್ತದೆ ಚಲನಚಿತ್ರ ಕೃತಿ ರಚನೆಯ ಈ ನವೀನತೆಗಾಗಿ, ಸಿನೆಮಾದ ದೃಶ್ಯ ವ್ಯಾಕರಣದ ಕಸುವನ್ನು ಮನದಟ್ಟು ಮಾಡಿಕೊಡುವ ಕಾರಣಕ್ಕಾಗಿ ಈ ಸಿನೆಮಾವನ್ನು ನೋಡಬೇಕು. ಬರ್ನಿಂಗ್ ಅಂತಹ ಶಕ್ತಿಯುಳ್ಳ ಸಿನೆಮಾ; ನೋಡಿದ ನಂತರದ ಹಲವು ದಿನಗಳ ಕಾಲ, ದೃಶ್ಯಗಳ ಅರ್ಥವಂತಿಕೆ ಹುಡುಕಾಟಕ್ಕೆ ಪ್ರೇಕ್ಷಕರನ್ನು ಪ್ರಚೋದಿಸುವ ಸಿನೆಮಾ ಇದು, ನೋಡಬೇಕಾದ್ದು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)