varthabharthi

ನಿಮ್ಮ ಅಂಕಣ

ಬೇಡ ಯುದ್ಧೋನ್ಮಾದದ ಸಮೂಹ ಸನ್ನಿ ನಾಗರಿಕರಾಗೋಣ ಬನ್ನಿ

ವಾರ್ತಾ ಭಾರತಿ : 20 Feb, 2019
ನಾ. ದಿವಾಕರ

ಯುದ್ಧ ಸಾರುವ ದೇಶಗಳು ವಿಜಯೋತ್ಸವ ಆಚರಿಸುತ್ತವೆ. ಯುದ್ಧದಲ್ಲಿ ಮಡಿದ ಸೈನಿಕರು ಹುತಾತ್ಮರೆನಿಸಿಕೊಳ್ಳುತ್ತಾರೆ. ಆದರೆ ಆಳುವ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ತರಗೆಲೆಗಳಂತೆ ಉದುರಿಹೋಗುವ ಸೈನಿಕರ ಜೀವ ಗಡಿ ರೇಖೆಗಳಲ್ಲಿ ಭೂಗತವಾಗುತ್ತಿದ್ದಂತೆಯೇ ಯಥಾಸ್ಥಿತಿ ಮುಂದುವರಿಯುತ್ತದೆ. ಎರಡೂ ರಾಷ್ಟ್ರಗಳ ಪ್ರಭುತ್ವಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿ ಮತ್ತೊಂದು ಯುದ್ಧಕ್ಕೆ ಸನ್ನದ್ಧವಾಗುತ್ತವೆ. ಹುತಾತ್ಮರ ಸಮಾಧಿಯ ಮೇಲೆ ದಂತದರಮನೆಗಳನ್ನು ನಿರ್ಮಿಸುವ ಆಧುನಿಕ ನಾಗರಿಕ ಮಾನವನ ಹಪಾಹಪಿಗೆ ಬಲಿಯಾಗುವ ಜೀವಗಳು ಮುಂದೊಂದು ದಿನ ಒಂದು ಸಾಮ್ರಾಜ್ಯದ ಅಡಿಗಲ್ಲುಗಳಾಗಿಬಿಡುತ್ತವೆ.


ಯುದ್ಧ ಎನ್ನುವುದು ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸುವ ಮತ್ತು ಸದಾ ಭೀತಿಯಲ್ಲಿರಿಸುವ ಆಡಳಿತ ವ್ಯವಸ್ಥೆಯ ಒಂದು ಸಿದ್ಧ ಕಲೆ. ಯುದ್ಧೋನ್ಮಾದ ಎನ್ನುವುದು ಈ ಕಲೆಯನ್ನು ವಿಸ್ತೃತವಾಗಿ ಪೋಷಿಸಿ, ವೈಭವೀಕರಿಸಿ ಜನಸಾಮಾನ್ಯರನ್ನು ಸಮೂಹ ಸನ್ನಿಗೆ ಒಳಪಡಿಸುವ ಮತ್ತೊಂದು ಕಲೆ. ಸಮಾಜದಲ್ಲಿ ಪ್ರಕ್ಷುಬ್ಧತೆ ಎದುರಾದಾಗ, ಜನಸಾಮಾನ್ಯರ ಜ್ವಲಂತ ಸಮಸ್ಯೆಗಳು ಉಲ್ಬಣಿಸಿ ಪ್ರಜೆಗಳು ತಮ್ಮ ಆಕ್ರೋಶದ ಬೇಗುದಿಯಲ್ಲಿ ಬೇಯುತ್ತಿರುವಾಗ, ಅವಕಾಶವಂಚಿತ ಜನಸಮುದಾಯಗಳು ತಮ್ಮ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆಯಲ್ಲಿ ತೊಡಗಿರುವಾಗ, ಶೋಷಿತ ಸಮುದಾಯಗಳು ಸ್ಥಾಪಿತ ವ್ಯವಸ್ಥೆಯ ವಿರುದ್ಧ ಹೋರಾಟದಲ್ಲಿ ತೊಡಗಿರುವಾಗ ಯುದ್ಧ ಅಥವಾ ಯುದ್ಧೋನ್ಮಾದ ಆಳುವ ವರ್ಗಗಳಿಗೆ ವರದಾನವಾಗಿ ಪರಿಣಮಿಸುತ್ತದೆ. ದೇಶ, ಗಡಿ, ಆತ್ಮಸಾಕ್ಷಿ, ಸ್ವಯಂರಕ್ಷಣೆ ಮತ್ತು ಶತ್ರುಗಳ ದಮನ ಎಂಬ ಪರಿಕಲ್ಪನೆಗಳ ಪ್ರಭಾವಳಿಯಲ್ಲಿ ಸೃಷ್ಟಿಯಾಗುವ ಯುದ್ಧೋನ್ಮಾದ ಜನಸಾಮಾನ್ಯರನ್ನು ಸಮಸ್ಯೆಗಳ ಲೋಕದಿಂದ ಹೊರತಂದು, ರಂಜನೀಯ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಹಲವಾರು ಸಂದರ್ಭಗಳಲ್ಲಿ ಸ್ಥಾಪಿತ ವ್ಯವಸ್ಥೆ ಬುಡಮೇಲಾಗುವುದನ್ನು ತಪ್ಪಿಸಲು ಶತ್ರುಗಳನ್ನು ಸೃಷ್ಟಿಸಿ ಯುದ್ಧ ಸಂಭವಿಸಿರುವುದನ್ನೂ ಇತಿಹಾಸದಲ್ಲಿ ಕಾಣಬಹುದು.

ದೇಶಪ್ರೇಮ ಅಥವಾ ದೇಶಭಕ್ತಿ ಎನ್ನುವ ಸೋಗಲಾಡಿ ವಿದ್ಯಮಾನಗಳ ಅಸ್ತಿತ್ವ ಉಳಿಯಬೇಕಾದರೆ ಒಬ್ಬ ಶತ್ರು ಅತ್ಯಗತ್ಯವಾಗಿ ಬೇಕಾಗುತ್ತಾನೆ. ಈ ಶತ್ರು ಒಂದು ಜನಸಮುದಾಯದ ರೂಪದಲ್ಲಿರಬಹುದು ಅಥವಾ ಭೌಗೋಳಿಕ ರಾಷ್ಟ್ರದ ರೂಪದಲ್ಲಿರಬಹುದು. ಇದೂ ಸಹ ಇತಿಹಾಸ ಕಂಡಿರುವ ಸತ್ಯ. ಈ ಬೌದ್ಧಿಕ ನೆಲೆಯಲ್ಲಿ ನಿಂತು ನೋಡಿದಾಗ ಎರಡು ರಾಷ್ಟ್ರಗಳ ನಡುವೆ ಸಂಭವಿಸುವ ಯುದ್ಧವನ್ನು ಎರಡು ಆಯಾಮಗಳಲ್ಲಿ ನೋಡಬಹುದು. ಮೊದಲನೆಯ ಆಯಾಮ ಎಂದರೆ, ದೇಶ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲಿರುಳೆನ್ನದೆ ಗಡಿ ಕಾಯುವ, ಸದಾ ಸಶಸ್ತ್ರರಾಗಿ ಶತ್ರು ರಾಷ್ಟ್ರಗಳನ್ನು ಮಟ್ಟ ಹಾಕಲು ಸಿದ್ಧಹಸ್ತರಾಗಿರುವ ಸೈನಿಕರು ಯುದ್ಧ ಬಯಸುವುದಿಲ್ಲ. ಯುದ್ಧ ಎಂದಾಕ್ಷಣ ಉನ್ಮತ್ತರಾಗುವುದೂ ಇಲ್ಲ.

ಸೈನಿಕರು ಸದಾ ಯುದ್ಧ ಸನ್ನದ್ಧರಾಗಿಯೇ ಇರುತ್ತಾರೆ. ಆದರೆ ಯುದ್ಧ ಪಿಪಾಸುಗಳಾಗಿರುವುದಿಲ್ಲ. ಏಕೆಂದರೆ ಯುದ್ಧದಿಂದ ಉಂಟಾಗುವ ದುರಂತಗಳ ಪರಿವೆ ಸೈನಿಕರಿಗೆ ಇರುತ್ತದೆ. ಆದರೆ ಒಂದು ಪ್ರಭುತ್ವದ ಆಜ್ಞಾಪಾಲಕರಾಗಿ ತಮ್ಮ ಸೇವೆ ಸಲ್ಲಿಸಲು ಸದಾ ಸಿದ್ಧರಾಗಿರುತ್ತಾರೆ. ಇಲ್ಲಿ ವ್ಯಕ್ತಿಗತ ಅಭಿವ್ಯಕ್ತಿ ಮತ್ತು ಕರ್ತವ್ಯ ಪ್ರಜ್ಞೆಯ ನಡುವೆ ಇರುವ ಅವಿನಾಭಾವ ಸಂಬಂಧದ ಸೂಕ್ಷ್ಮ ತರಂಗಗಳನ್ನು ಗಮನಿಸಲೇಬೇಕು. ಆಧುನಿಕ ಯುದ್ಧಗಳಲ್ಲಿ ಸೋಲು ಗೆಲುವು ನೇಪಥ್ಯಕ್ಕೆ ಸರಿಯುತ್ತದೆ. ಯುದ್ಧ ಸಾರುವ ದೇಶಗಳು ವಿಜಯೋತ್ಸವ ಆಚರಿಸುತ್ತವೆ. ಯುದ್ಧದಲ್ಲಿ ಮಡಿದ ಸೈನಿಕರು ಹುತಾತ್ಮರೆನಿಸಿಕೊಳ್ಳುತ್ತಾರೆ. ಆದರೆ ಆಳುವ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ತರಗೆಲೆಗಳಂತೆ ಉದುರಿಹೋಗುವ ಸೈನಿಕರ ಜೀವ ಗಡಿ ರೇಖೆಗಳಲ್ಲಿ ಭೂಗತವಾಗುತ್ತಿದ್ದಂತೆಯೇ ಯಥಾಸ್ಥಿತಿ ಮುಂದುವರಿಯುತ್ತದೆ. ಎರಡೂ ರಾಷ್ಟ್ರಗಳ ಪ್ರಭುತ್ವಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿ ಮತ್ತೊಂದು ಯುದ್ಧಕ್ಕೆ ಸನ್ನದ್ಧವಾಗುತ್ತವೆ. ಹುತಾತ್ಮರ ಸಮಾಧಿಯ ಮೇಲೆ ದಂತದರಮನೆಗಳನ್ನು ನಿರ್ಮಿಸುವ ಆಧುನಿಕ ನಾಗರಿಕ ಮಾನವನ ಹಪಾಹಪಿಗೆ ಬಲಿಯಾಗುವ ಜೀವಗಳು ಮುಂದೊಂದು ದಿನ ಒಂದು ಸಾಮ್ರಾಜ್ಯದ ಅಡಿಗಲ್ಲುಗಳಾಗಿಬಿಡುತ್ತವೆ.

ಎರಡನೆಯ ಆಯಾಮ ಎಂದರೆ ದೇಶದ ಭೌಗೋಳಿಕ ಸುರಕ್ಷತೆಯನ್ನೇ ದೇಶಪ್ರೇಮದ ಕೇಂದ್ರಬಿಂದುವನ್ನಾಗಿ ಪರಿಗಣಿಸುವ ಜನಸಾಮಾನ್ಯರ ಮನೋಭಾವ. ಆಳುವ ವರ್ಗಗಳು ತಮ್ಮ ಪ್ರಾತಿನಿಧ್ಯ ಮತ್ತು ಆಧಿಪತ್ಯವನ್ನು ಸಂರಕ್ಷಿಸಲು ಒಂದು ಭೌಗೋಳಿಕ ಸೀಮೆಯನ್ನು ಸೃಷ್ಟಿಸಿಕೊಳ್ಳುವುದು ಆಧುನಿಕ ಮಾನವ ಸಮಾಜದ ಪರಂಪರೆಯಾಗಿಯೇ ಬಂದಿದೆ. ರಾಜಪ್ರಭುತ್ವದ ಕಾಲದಿಂದ ಅತ್ಯಾಧುನಿಕ ಗಣತಂತ್ರ ವ್ಯವಸ್ಥೆಯವರೆಗೂ ಈ ಸೀಮಿತ ಭೌಗೋಳಿಕ ಪ್ರದೇಶದ ಅಸ್ಮಿತೆಗಳು ಮನುಕುಲದ ಸಂಘರ್ಷದ ನೆಲೆಯೂ ಆಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ನಾನು ಎನ್ನುವ ಅಹಮಿಕೆ, ನನ್ನದು ಎಂಬ ಅಹಂಭಾವ ಈ ಎರಡರ ಸಮ್ಮಿಶ್ರಣವನ್ನು ದೇಶ-ರಾಷ್ಟ್ರ ಅಥವಾ ಪ್ರಾಂತದ ಪರಿಕಲ್ಪನೆಗಳಲ್ಲಿ ಕಾಣಬಹುದು. ಈ ಪ್ರಾಂತೀಯ ಅಸ್ಮಿತೆಯ ಅಮಲು ಉನ್ಮತ್ತ ರಾಷ್ಟ್ರೀಯತೆಯ ಭಾವನೆಗಳೊಡನೆ ಬೆರೆತಾಗ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳು ಪ್ರಜೆಗಳ ವಿಶ್ವಾಸಾರ್ಹತೆಯ ಪ್ರತೀಕವಾಗಿ ಪರಿಣಮಿಸುತ್ತವೆ. ಈ ಸಮೂಹ ಸನ್ನಿಯ ಸನ್ನಿವೇಶದಲ್ಲಿ ಯುದ್ಧ ಅಥವಾ ಯುದ್ಧೋನ್ಮಾದ ಆಳುವ ವರ್ಗಗಳಿಗೆ ಅಸ್ತಿತ್ವದ ಪ್ರಶ್ನೆಯೂ ಆಗುತ್ತದೆ. ಯೋಧರ ತ್ಯಾಗ ಬಲಿದಾನಗಳನ್ನು ವೈಭವೀಕರಿಸುತ್ತಲೇ ಯುದ್ಧದ ಭೀಕರ ಪರಿಣಾಮಗಳನ್ನು ವೈಭವೀಕರಿಸುವ ಪ್ರವೃತ್ತಿ ಮಾನವೀಯ ಮೌಲ್ಯಗಳನ್ನು ಮೂಲೆಗುಂಪು ಮಾಡುತ್ತದೆ. ಈ ಉನ್ಮತ್ತ ರಾಷ್ಟ್ರೀಯತೆ ಮತ್ತು ಭಾವೋದ್ವೇಗ ಯುದ್ಧ ಸನ್ನಿಗೆ ಪೂರಕವಾಗಿರುತ್ತದೆ.

ಇಂತಹ ಒಂದು ಸಮೂಹ ಸನ್ನಿಯನ್ನು ದೇಶದಲ್ಲಿಂದು ಕಾಣುತ್ತಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ನಡೆದ ಸಂದರ್ಭದಲ್ಲಿ ಈ ಸಮೂಹ ಸನ್ನಿಯನ್ನು ಕಂಡಿದ್ದೇವೆ. ಹುತಾತ್ಮ ಯೋಧರ ಬಗ್ಗೆ ಅಂತಃಕರಣದ ಹೊಳೆ ಹರಿದ ಮಾತ್ರಕ್ಕೆ ಅದು ದೇಶಪ್ರೇಮದ ಪ್ರತೀಕ ಎಂಬ ಭಾವನೆ ಮೂಡಬೇಕಿಲ್ಲ. ಒಬ್ಬ ಹುತಾತ್ಮ ಯೋಧನ ಮಗಳು ಪ್ರಭುತ್ವದ ವಿರುದ್ಧ ಮಾತನಾಡುವುದೇ ಮಹಾಪರಾಧ ಎಂದು ಭಾವಿಸುವ ದೇಶದಲ್ಲಿ ಇಂತಹ ಸಮೂಹ ಸನ್ನಿ ವಿಕೃತ ಸಮಾಜವನ್ನು ಸೃಷ್ಟಿಸುವುದು ಖಚಿತ. ಕೆಲವು ವರ್ಷಗಳ ಮುನ್ನ ದಿಲ್ಲಿಯ ರಾಮಜಾಸ್ ಕಾಲೇಜಿನಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಯೋಧ ಮನ್‌ದೀಪ್ ಸಿಂಗ್ ಅವರ ಪುತ್ರಿ ಗುರ್ ಮೆಹರ್ ಕೌರ್ ‘‘ನನ್ನ ತಂದೆಯನ್ನು ಕೊಲೆ ಮಾಡಿದ್ದು ಪಾಕಿಸ್ತಾನ ಅಲ್ಲ ಯುದ್ಧ’’ ಎಂಬ ಪ್ರಬುದ್ಧ ಹೇಳಿಕೆ ನೀಡಿದಾಗ ಆ ಬಾಲಕಿಯನ್ನು ದಾವೂದ್ ಇಬ್ರಾಹೀಂಗೆ ಹೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂದು ಕಾಶ್ಮೀರದ ಪುಲ್ವಾಮದಲ್ಲಿ ನಡೆದಿರುವ ಭೀಕರ ಭಯೋತ್ಪಾದಕ ಕೃತ್ಯದ ಸಂದರ್ಭದಲ್ಲೂ ಇದೇ ರೀತಿಯ ಪ್ರತಿಗಾಮಿ ಧೋರಣೆ ಮುನ್ನೆಲೆಗೆ ಬರುತ್ತಿದೆ.

 ಪುಲ್ವಾಮದಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರ ಬಲಿ ತೆಗೆದುಕೊಂಡ ಭಯೋತ್ಪಾದಕ ಕೃತ್ಯ ಪ್ರತಿಯೊಬ್ಬ ಭಾರತೀಯರನ್ನೂ ಚಿಂತೆಗೀಡುಮಾಡುವ ವಿಚಾರ. ಈ ದಾಳಿಗೆ ಸ್ಥಳೀಯ ಭಯೋತ್ಪಾದಕ ಸಂಘಟನೆಗಳೇ ಕಾರಣವೋ ಅಥವಾ ಪಾಕಿಸ್ತಾನ ಮೂಲದ ಭಯೋತ್ಪಾದಕರೇ ಕಾರಣವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಏನೇ ಆಗಲಿ, ಯೋಧರ ಸಾವು ಸಹನೀಯವಲ್ಲ. ಭಾರತ ಸರಕಾರದ ಪ್ರತೀಕಾರದ ದಾಳಿ, ಉಗ್ರರ ನೆಲೆಗಳ ಧ್ವಂಸ, ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ, ಕಾಶ್ಮೀರದಲ್ಲಿನ ಪರಿಸ್ಥಿತಿಯ ಅವಲೋಕನ ಇವೆಲ್ಲವನ್ನೂ ಬದಿಗಿಟ್ಟು ನೋಡಿದಾಗ ಇಂದು ದೇಶಾದ್ಯಂತ ಉನ್ಮಾದದ ವಾತಾವರಣ ಸೃಷ್ಟಿಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳು ಸೇನೆಗಿಂತಲೂ ಮುಂಚಿತವಾಗಿಯೇ ಯುದ್ಧದ ತಯಾರಿ ನಡೆಸಿದಂತೆ ಕಾಣುತ್ತಿದೆ. 40 ಕ್ಕೆ 4,000 ಎನ್ನುವ ಪ್ರಮೇಯಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇವಲ ಯೋಧರು ಮಾತ್ರವಲ್ಲದೆ ದೇಶದ ಅಖಂಡತೆ ಮತ್ತು ಪ್ರಜೆಗಳ ರಕ್ಷಣೆಯ ಬಗ್ಗೆ ಒಗ್ಗಟ್ಟಿನಿಂದ ಶ್ರಮಿಸಬೇಕಾದ ರಾಜಕೀಯ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಗಳಿಗೆ ಈ ಘಟನೆಯನ್ನೇ ಪ್ರಣಾಳಿಕೆಯಂತೆ ಪರಿಗಣಿಸುತ್ತಿರುವುದು ಆಘಾತಕಾರಿಯಾದರೂ ಸತ್ಯ.

 ಇರಲಿ, ಇಲ್ಲಿ ಉದ್ಭವಿಸುವ ಮೂಲ ಪ್ರಶ್ನೆ ಎಂದರೆ ನಾವು ಏನನ್ನು ಬಯಸುತ್ತೇವೆ ಎನ್ನುವುದು. ಶಾಂತಿ ಮತ್ತು ಯುದ್ಧ ಈ ಎರಡರ ನಡುವೆ ಯಾವುದನ್ನು ಆಯ್ಕೆ ಮಾಡಿದರೆ ಮನುಕುಲ ಬದುಕಲು ಸಾಧ್ಯ ಎಂಬ ಪ್ರಶ್ನೆ. ಸಾಮಾನ್ಯವಾಗಿ ಯಾವುದೇ ದೇಶದ ಪ್ರಜೆಗಳು ಯುದ್ಧ ಬಯಸುವುದಿಲ್ಲ. ಆದರೆ ಪ್ರಜೆಗಳನ್ನು ಪ್ರತಿನಿಧಿಸುವ ಪ್ರಭುತ್ವಗಳು ಬಯಸುತ್ತವೆ. ಏಕೆಂದರೆ ಯುದ್ಧ ಪ್ರಭುತ್ವದ ಅಸ್ತಿತ್ವವನ್ನು ನಿರ್ಧರಿಸುವ ಅಥವಾ ಕಾಪಾಡುವ ವಾಮ ಮಾರ್ಗ. ಹಾಗಾಗಿ ಯುದ್ಧದ ಸನ್ನಿವೇಶ ಸೃಷ್ಟಿಯಾದ ಕೂಡಲೇ ದೇಶ ಮತ್ತು ದೇಶಭಕ್ತಿಯ ಸುತ್ತ ನಿರ್ಮಿತವಾಗುವ ಉನ್ಮಾದ ಉತ್ತುಂಗಕ್ಕೇರುತ್ತದೆ. ಸಹನಶೀಲತೆ, ಸ್ನೇಹಪರತೆ, ಶಾಂತಿಪ್ರಿಯ ಮನೋಭಾವಗಳು ದೇಶದ್ರೋಹದ ಸಂಕೇತವಾಗಿಬಿಡುತ್ತದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಈ ವಿದ್ಯಮಾನವನ್ನು ಕಾಣಬಹುದಿತ್ತು. ಇಡೀ ದೇಶವೇ ಹೊರ ರಾಷ್ಟ್ರಗಳ ದಾಳಿಗೆ ತುತ್ತಾಗುವ ಸಂಭವವಿದೆ ಎಂಬ ಭೀತಿ ಹುಟ್ಟಿಸುವ ಮೂಲಕ ಜನಸಾಮಾನ್ಯರಲ್ಲಿ ಉನ್ಮಾದ ಹೆಚ್ಚಿಸಲಾಗುತ್ತದೆ. ಜೀವ ಭಯ ಎಂತಹ ಸಹನಶೀಲರನ್ನೂ ಕೆರಳಿಸುತ್ತದೆ. ದೇಶದ ಭೌಗೋಳಿಕ ರಕ್ಷಣೆ ಮತ್ತು ಪ್ರಜೆಗಳ ಸಂರಕ್ಷಣೆ ಅಪಾಯದಲ್ಲಿದೆ ಎಂಬ ಭಾವನೆಯೇ ಜನರಲ್ಲಿ ಆತಂಕ ಹುಟ್ಟಿಸುತ್ತದೆ. ತಮ್ಮನ್ನು ರಕ್ಷಿಸಲು ಪ್ರಭುತ್ವ ಅನುಸರಿಸುವ ಯಾವುದೇ ಮಾರ್ಗವನ್ನು ಜನತೆ ಸ್ವಾಗತಿಸುತ್ತಾರೆ. ಮಾನವ ಸಮಾಜದ ಈ ದೌರ್ಬಲ್ಯವೇ ಇತಿಹಾಸದಲ್ಲಿ ಯುದ್ಧ ಪರಂಪರೆಗೆ ಅಡಿಪಾಯವಾಗಿರುವುದನ್ನು ಗಮನಿಸಬಹುದು.

ಈ ಸಂದರ್ಭದಲ್ಲಿ ನಾಗರಿಕ ಸಮಾಜದ ಪ್ರತಿಕ್ರಿಯೆ ಹೇಗಿರಬೇಕು? ಯುದ್ಧವನ್ನು ವೈಭವೀಕರಿಸುವ ಸಮರಶೀಲ ಮನಸ್ಸುಗಳಿಗೆ ಜೀವ ಎನ್ನುವುದು ಮಾರುಕಟ್ಟೆಯ ಸರಕಿನಂತೆ ಕಾಣುತ್ತದೆ. ದೇಶದ ಭೌಗೋಳಿಕ ಗಡಿ ರಕ್ಷಣೆ ಒಬ್ಬ ಯೋಧನ ಆದ್ಯತೆ ಅಥವಾ ಕರ್ತವ್ಯ ಆಗಬಹುದು. ಆದರೆ ತನ್ನ ಜೀವ ತೆತ್ತು ಹುತಾತ್ಮನಾಗುವುದು ಆದ್ಯತೆಯಾಗುವುದಿಲ್ಲ. ಅದು ಅನಿವಾರ್ಯತೆಯಾಗುತ್ತದೆ. ಆಜ್ಞಾಪಾಲನೆಯ ಪರಿಣಾಮ ಆಗುತ್ತದೆ. ಚಲನಶೀಲತೆಯನ್ನು ಕಳೆದುಕೊಂಡ ಪ್ರಭುತ್ವ ಒಂದು ಸ್ಥಾವರದಂತೆ ಜಡಗಟ್ಟುತ್ತದೆ. ಸ್ಥಾವರಗಳ ಸುತ್ತ ಸ್ವಾರ್ಥ ಹಿತಾಸಕ್ತಿಗಳು ಗಿಡಗಂಟಿಗಳಂತೆ ಬೆಳೆಯುತ್ತವೆ. ಸ್ಥಾಪಿತ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಸಂರಕ್ಷಿಸುವ ನಿಟ್ಟಿನಲ್ಲಿ ಜಡಗಟ್ಟಿದ ಸ್ಥಾವರ ತನ್ನ ಸುತ್ತ ನಿರ್ಮಿಸಿಕೊಳ್ಳುವ ಪ್ರಭಾವಳಿಯಲ್ಲಿ ಮೌಢ್ಯ ಮತ್ತು ಅಂಧ ವಿಶ್ವಾಸ ಮಡುಗಟ್ಟುತ್ತದೆ. ತತ್ಪರಿಣಾಮ ಪ್ರಭುತ್ವ ಪ್ರಶ್ನಾತೀತವಾಗುತ್ತದೆ. ಹಾಗೆಯೇ ಪ್ರಭುತ್ವದ ಅಸ್ತಿತ್ವವನ್ನು ಸಂರಕ್ಷಿಸುವ ಸೇನೆ-ಯುದ್ಧ ಮತ್ತು ಸಮರಶೀಲತೆಯೂ ಪ್ರಶ್ನಾತೀತವಾಗುತ್ತವೆ. ಈ ಪ್ರಶ್ನಾತೀತ ಸಮರಶೀಲತೆ ಯುದ್ಧೋನ್ಮಾದ ಸೃಷ್ಟಿಸುತ್ತದೆ. ಯುದ್ಧ ಒಂದು ಹಂತದಲ್ಲಿ ಅಂತ್ಯ ಕಾಣುತ್ತದೆ, ಕೆಲವರನ್ನು ಕೊಲ್ಲುತ್ತದೆ ಆದರೆ ಯುದ್ಧೋನ್ಮಾದ ಶಾಶ್ವತವಾಗಿ ಉಳಿಯುತ್ತದೆ, ಒಂದು ನಾಗರಿಕತೆಯನ್ನೇ ಕೊಲ್ಲುತ್ತದೆ. ನಾಗರಿಕ ಸಮಾಜದ ಮುಂದಿರುವ ಸವಾಲು ಈ ಯುದ್ಧೋನ್ಮಾದದ ವಿರುದ್ಧ ಹೋರಾಡುವುದೇ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)