varthabharthi

ನಿಮ್ಮ ಅಂಕಣ

ಅಸ್ಸಾಂನಲ್ಲಿ ದೇಶ ಭ್ರಷ್ಟರು

ವಾರ್ತಾ ಭಾರತಿ : 20 Feb, 2019
ಹರ್ಷ ಮಂದರ್ ಕನ್ನಡಕ್ಕೆ: ಕಸ್ತೂರಿ

ಅಸ್ಸಾಂನಲ್ಲಿ ಎನ್‌ಆರ್‌ಸಿ ಟ್ರಿಬ್ಯುನಲ್‌ಗಳ ವಿಷಯದಲ್ಲಿ ಈ ಸಾಂವಿಧಾನಿಕ ನಿಯಮವನ್ನು ರದ್ದು ಮಾಡಲಾಗಿದೆ. ಒಬ್ಬ ವ್ಯಕ್ತಿ ಭಾರತೀಯ ಪ್ರಜೆ ಎಂದು ಎಫ್‌ಟಿ ದೃಢೀಕರಿಸಿದ ಬಳಿಕ ಕೂಡಾ ಮತ್ತೊಂದು ಎಫ್‌ಟಿ (ಹಳೆಯ ಎಫ್‌ಟಿ ಸಹ) ಅದೇ ವ್ಯಕ್ತಿಗೆ ತನ್ನ ಕಾನೂನುಬದ್ಧ ಪೌರತ್ವವನ್ನು ಮತ್ತೊಂದು ಸಲ ಸಾಬೀತು ಪಡಿಸಬೇಕೆಂದು ನೋಟಿಸ್ ಜಾರಿಮಾಡುವುದಕ್ಕೆ ಅವಕಾಶ ಇದೆ. ಹೀಗೆ ಹಲವರಿಗೆ ನೋಟಿಸ್‌ಗಳು ಜಾರಿ ಆಗಿವೆ. ಆತ/ಆಕೆ ಭಾರತೀಯ ಪೌರರು ಎಂದು ಸರಕಾರ ಅಂತಿಮವಾಗಿ ಘೋಷಿಸುವವರೆಗೆ ತಮಗೆ ಎಂತಹದೇ ಅಪಾಯ ಇಲ್ಲ ಎಂದು ಭಾವಿಸುವ ಪರಿಸ್ಥಿತಿ ಅಸ್ಸಾಂನಲ್ಲಿನ ಲಕ್ಷಾಂತರ ಪೌರರಿಗೆ ಇಲ್ಲದೆ ಹೋಗಿದೆ.


ಸುದೀರ್ಘ ಕಾಲದಿಂದ ಅಸ್ಸಾಂನಲ್ಲಿ ವಾಸಿಸುತ್ತಿರುವ ಲಕ್ಷಾಂತರ ಪ್ರಜೆಗಳು ತಮ್ಮ ಭಾರತೀಯ ಪೌರತ್ವವನ್ನು ಸಾಬೀತು ಮಾಡಬೇಕಾದ ದುರ್ಗತಿಯನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಅತ್ಯಧಿಕರು ಬಡವರು. ಮೇಲಾಗಿ ಗ್ರಾಮೀಣರು, ಅನಕ್ಷರಸ್ಥರು. ಈ ನತದೃಷ್ಟರು ನಿಜಕ್ಕೂ ಭಾರತೀಯ ಪೌರರು ಅಲ್ಲವೆಂದು, ವಲಸೆ ಬಂದ ವಿದೇಶಿಯರು ಎಂದು ಭಾರತ ಆಡಳಿತ ವ್ಯವಸ್ಥೆ ಕಳೆದ ಎರಡು ದಶಕಗಳಿಂದ ಅನುಮಾನಿಸುತ್ತಿದೆ. ಅಂಥ ಭಾವನೆಯಿಂದಲೇ ಅವರೊಂದಿಗೆ ವ್ಯವಹರಿಸುತ್ತಿದೆ. ಸರಕಾರಿ ದೋರಣೆಯಿಂದ ಅವರು ಪೂರ್ತಿ ನಿಸ್ಸಹಾಯಕರಾಗಿದ್ದಾರೆ. ತಮ್ಮ ಅನಿಶ್ಚಿತ ಭವಿಷ್ಯದ ವಿಷಯವಾಗಿ ತೀವ್ರ ವ್ಯಾಕುಲತೆಗೆ ಗುರಿಯಾಗುತ್ತಿದ್ದಾರೆ.

 ಪೌರತ್ವ ನಿಯಮ ನಿಬಂಧನೆಗಳೇನೂ ಪಾರದರ್ಶಕವಾಗಿಲ್ಲ. ಮೇಲಾಗಿ ತಮ್ಮತ್ತ ಮುಂದಾಗಿಯೇ ಒಂದು ನಿರ್ದಿಷ್ಟ ವಿರೋಧಿ ಧೋರಣೆಯಿಂದ ವ್ಯವಹರಿಸುತ್ತಿರುವ ಅಧಿಕಾರಿಗಳೊಂದಿಗೆ ಅವರಿಗೆ ಏಗಬೇಕಾಗಿರುತ್ತದೆ. ಬರ್ತ್ ಸರ್ಟಿಫಿಕೇಟು, ಭೂಮಿಗೆ ಸಂಬಂಧಿಸಿದ ಪತ್ರಗಳು, ನಿರಾಶ್ರಿತರ ಸರ್ಟಿಫಿಕೇಟ್‌ಗಳು, ಶಾಲಾ-ಕಾಲೇಜು(?) ಸರ್ಟಿಫಿಕೇಟ್‌ಗಳು ಪಾಸ್‌ಪೋರ್ಟ್‌ಗಳು, ಕೋರ್ಟ್ ಪೇಪರ್ ಮತ್ತಿತರ 12 ವಿಧಗಳ ಪತ್ರಗಳ ಆಧಾರದಿಂದ ತಮ್ಮ ಭಾರತೀಯ ಪೌರತ್ವವನ್ನು ನಿರ್ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ಪಟ್ಟಣ ಪ್ರಾಂತೀಯರು ಮಧ್ಯಮ ವರ್ಗಕ್ಕೆ ಸೇರಿದ ವಿದ್ಯಾವಂತರು ಕೂಡಾ ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅತ್ಯಂತ ಕಷ್ಟಪಟ್ಟು ಸಂಬಂಧಿತ ಅಧಿಕಾರಿಗಳ ಅಂಗೀಕಾರ ಹೊಂದಿದ ಮೇಲೂ ಉನ್ನತಸ್ಥಾಯಿ ಅಧಿಕಾರಿಗಳು ಅವರ ಪೌರತ್ವವನ್ನು ಪ್ರಶ್ನಿಸುತ್ತಿದ್ದಾರೆ. ಕೆಲಮಂದಿಯ ವಿಷಯದಲ್ಲಿ ಭಾರತೀಯ ಪೌರ ಎಂದು ನಿರ್ಧರಿಸಿದ ಅಧಿಕಾರಿಯೇ ಅವರಿಗೆ ಮತ್ತೆ ನೋಟಿಸ್ ಕಳುಹಿಸುವುದು ನಡೆಯುತ್ತಿದೆ! ಇದರೊಂದಿಗೆ ಕಥೆ ಮತ್ತೆ ಮೊದಲಿಗೇ ಬರುತ್ತದೆ! ಭಯಾನಕ ವಿಷಾದ ಪುನಃ ಆರಂಭವಾಗುತ್ತದೆ!

ಗೌಹಾಟಿಯಲ್ಲಿ ಇತ್ತೀಚೆಗೆ ಜಸ್ಟಿಸ್ ವೆಂಕಟ್ ಗೋಪಾಲ ಗೌಡ, ಕೊಲಿನ್ ಗೊನ್ಸಾಲ್ವೆಸ್, ಮೊನಿರುಲ್ ಹುಸೈನ್, ಸಂಜಯ್ ಹಜರಿಕಾ ರೊಂದಿಗೆ ಸೇರಿ ನಾನು ರಾಷ್ಟ್ರೀಯ ಪೌರ ಪಟ್ಟಿ (ಘೆಠಿಜಿಟ್ಞಚ್ಝ ್ಕಛಿಜಜಿಠಿಛ್ಟಿ ಣ್ಛ ಇಜಿಠಿಜ್ಢಿಛ್ಞಿಘ್ಕೆಇ) ಮೇಲಿನ ವಿಶೇಷ ಜನತಾ ನ್ಯಾಯಾಲಯ (ಛಿಟಟ್ಝಛಿ’ ಠ್ಟಿಜಿಚಿಚ್ಞಚ್ಝ)ದಲ್ಲಿ ಪಾಲ್ಗೊಂಡೆ. ಅಸ್ಸಾಂನಲ್ಲಿನ 13 ಜಿಲ್ಲೆಗಳಿಂದ 53 ಮಂದಿ ಪೌರತ್ವ ಸಂತ್ರಸ್ತರ ಹೃದಯ ವಿದ್ರಾವಕವಾದ ಕಥೆಗಳನ್ನು ಕೇಳಿದೆ.

ಅವು, ಯಾರನ್ನಾದರೂ ಮರಗಟ್ಟಿ ಹೋಗುವಂತೆ ಮಾಡುವ ದುರಂತ ವೃತ್ತಾಂತಗಳು, ಸರಕಾರಿ ಅಧಿಕಾರಿಗಳು ಎಷ್ಟು ಕಠಿಣ, ಅವೈಚಾರಿಕ ಧೋರಣೆಯಿಂದ ವ್ಯವಹರಿಸುತ್ತಾರೆಂದು ಸಾರಿದವು. ಅಧಿಕಾರಿಗಳಲ್ಲಿ ದಯೆದಾಕ್ಷಿಣ್ಯಗಳು ಪೂರ್ತಿಯಾಗಿ ಮಾಯವಾಗಿವೆ ಎಂಬುದು ಅರ್ಥವಾಯಿತು. ಆ ಅಧಿಕಾರಿಗಳ ರೀತಿ-ನೀತಿಗಳಿಂದ ತಾವು ಎಂತಹ ಕಷ್ಟನಷ್ಟಗಳಿಗೆ ಗುರಿಯಾದವೆಂದು ವಿವರಿಸುತ್ತಾ ಕೆಲವು ವೃದ್ಧರು ಕೂಡಾ ಭೋರನೆ ಅಳುವುದು ಆ ಜನತಾ ನ್ಯಾಯಾಲಯದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರನ್ನು ಅಪಾರವಾಗಿ ಕಳವಳಪಡಿಸಿತು.

ಬಹಳ ಮಂದಿ ಪೌರರ ಹೆಸರುಗಳನ್ನು ಎನ್‌ಆರ್‌ಸಿಯಿಂದ ತೆಗೆದಿದ್ದಾಗಿ ನಮ್ಮ ವಿಚಾರಣೆಯಲ್ಲಿ ತಿಳಿದು ಬಂತು. ಕಾರಣ ಏನು ಗೊತ್ತಾ? ಸಂಬಂಧಿತ ವ್ಯಕ್ತಿಗಳ ಬಂಗಾಲಿ ಹೆಸರುಗಳನ್ನು ವಿವಿಧ ದಾಖಲೆಗಳಲ್ಲಿ ಆಂಗ್ಲದಲ್ಲಿ ಬರೆದಾಗ ಅಕ್ಷರ ಕ್ರಮದಲ್ಲಿ ವ್ಯತ್ಯಾಸಗಳಾಗಿದ್ದೇ ಕಾರಣ! ಹಾಗೆ ಒಂದು ಹೆಸರಿನಲ್ಲಿ ಒಂದೇ ಒಂದು ಅಕ್ಷರ ಬದಲಾಗಿ ಹೋಗುವುದರಿಂದ (ಉಮರ್ ಎಂಬ ಹೆಸರಿನಲ್ಲಿ ‘ಮ’ಗೆ ಬದಲು ‘ನ’ ಬರುವುದು, ಉನಾರ್ ಎಂಬ ಹೆಸರಿನಲ್ಲಿ ‘ನಾ’ಗೆ ಬದಲು ‘ಮಾ’ ಎಂದು ಬರೆಯುವುದು ಇದಕ್ಕೆ ನಿದರ್ಶನಗಳು.) ಸಂಬಂಧಿತ ವ್ಯಕ್ತಿ ವಿದೇಶಿ ಎಂದು ನಿರ್ಧಾರ ಮಾಡಲಾಗಿದೆ.

ಗ್ರಾಮೀಣ ನಿರಕ್ಷರಿಗಳಿಗೆ ತಮ್ಮ ಜನ್ಮ ದಿನಾಂಕ ಯಾವುದೋ ಸ್ಪಷ್ಟವಾಗಿ ತಿಳಿಯದೇ ಹೋಗಿರಬಹುದು. ಈ ಗ್ರಾಮೀಣರಲ್ಲಿ ಒಬ್ಬರು ತಮ್ಮ ವಯಸ್ಸು 40 ವರ್ಷಗಳು ಎಂದು ಹೇಳಿದರೆ ಕೊಟ್ಟಿರುವ ದಾಖಲೆಗಳಲ್ಲ್ಲಿ ಅದಕ್ಕೆ ಭಿನ್ನವಾಗಿ 42 ಎಂದು ಇದ್ದರೆ ಆತನ ಅಥವಾ ಆಕೆಯ ಹೆಸರನ್ನು ರಾಷ್ಟ್ರೀಯ ಪೌರರ ಪಟ್ಟಿಯಿಂದ ತಗೆದು ಹಾಕಲಾಗಿದೆ.

ಮುಖ್ಯವಾಗಿ ಮಹಿಳೆಯರು ರಾಷ್ಟ್ರೀಯ ಪೌರಪಟ್ಟಿಯಿಂದ ತೊಲಗಿಸಲ್ಪಡುವ ಅಪಾಯವನ್ನು ಮತ್ತೂ ಹೆಚ್ಚಾಗಿ ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಅವರ ಜನ್ಮದಿನಾಂಕವನ್ನು ದೃಢೀಕರಿಸುವ ಪತ್ರಗಳು ಯಾವುವೂ ಇರವು. ಸಹಜವಾಗಿಯೇ ಈ ಹುಡುಗಿಯರು ಶಾಲೆಯ ಮುಖ ನೋಡಿರುವುದಿಲ್ಲ. ಯುಕ್ತವಯಸ್ಸು ಬರುವ ಮುನ್ನವೇ ವಿವಾಹಿತೆಯರಾಗಿರುತ್ತಾರೆ. ಮತದಾರರ ಪಟ್ಟಿಯಲ್ಲಿ ಈ ಹೆಣ್ಣುಮಕ್ಕಳ ಹೆಸರುಗಳು ಮೊತ್ತಮೊದಲ ಸಲ ಕಾಣಿಸುವ ಹೊತ್ತಿಗೆ ಅವರು ತಮ್ಮ ತಾಯಿ ತಂದೆಯರ ಗ್ರಾಮದಲ್ಲಿ ಅಲ್ಲದೆ ಅತ್ತೆಮನೆ ಇರುವ ಊರಲ್ಲಿರುತ್ತಾರೆ. ಇದು ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ.
‘‘ನಾವು ಇಂಥವರ ಮಕ್ಕಳ ಎಂದು, ಇಂಥವರು ನಮ್ಮ ತಾಯಿತಂದೆ’’ ಎಂದು ನಿರೂಪಿಸುವ ಪತ್ರಗಳು ಅವರ ಬಳಿ ಇರವು. ಈ ಕಾರಣದ ಆಧಾರದಿಂದ ಹಲವು ಮಹಿಳೆಯರ ಹೆಸರುಗಳನ್ನು ರಾಷ್ಟ್ರೀಯ ಪೌರರ ಪಟ್ಟಿಯಿಂದ ತೊಲಗಿಸುವುದು ನಡೆದಿದೆ!

 ವಲಸೆ ಕಾರ್ಮಿಕರ ಸಮಸ್ಯೆ ಇಷ್ಟೇ ಸಂಕೀರ್ಣವಾದುದು. ಕಾಯಕಷ್ಟವೇ ಜೀವನಾಧಾರವಾಗಿರುವ ಕಟ್ಟಡ ಕಾರ್ಮಿಕರು, ರಸ್ತೆ ನಿರ್ಮಾಣ ಕೂಲಿಗಳು, ಕಲ್ಲಿದ್ದಲು ಗಣಿಕಾರ್ಮಿಕರು ಮೊದಲಾದವರು ಉತ್ತಮವಾದ ಜೀವನೋಪಾಯವನ್ನು ಅರಸುತ್ತಾ ಅಸ್ಸಾಂನಲ್ಲಿನ ಇತರ ಸುತ್ತಲಿನ ಜಿಲ್ಲೆಗಳಿಗೆ ವಲಸೆ ಹೋಗುವುದು ಸರ್ವೇಸಾಮಾನ್ಯ. ಅವರು ವಲಸೆಹೋದ ಜಿಲ್ಲೆಗಳಲ್ಲಿನ ಸ್ಥಳೀಯ ಅಧಿಕಾರಿಗಳು ಬಹಳಷ್ಟು ಸಂದರ್ಭಗಳಲ್ಲಿ ಈ ವಲಸಿಗರ ಹೆಸರುಗಳನ್ನು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದ ವಲಸಿಗರೆಂದು ಪರಿಗಣಿಸುವುದು ನಡೆಯುತ್ತಿದೆ! ಆ ವಲಸೆ ಕಾರ್ಮಿಕರತ್ತ ತಾರತಮ್ಯಪೂರಿತ ಧೋರಣೆ ಪ್ರದರ್ಶಿಸುತ್ತಾರೆ.

ಊರಲ್ಲದ ಊರಿನಲ್ಲಿ ತಾರತಮ್ಯಗಳೊಂದಿಗೆ ಬದುಕಿ ಪುನಃ ಸ್ವಸ್ಥಳಕ್ಕೆ ಸೇರಿಕೊಂಡ ಇವರಿಗೆ ಸಂಬಂಧಿತ ಜಿಲ್ಲೆಯಲ್ಲಿನ ಎನ್‌ಆರ್‌ಸಿ ಟ್ರಿಬ್ಯುನಲ್ ನಿಂದ ನೋಟಿಸ್‌ಗಳು ಬರುತ್ತವೆ. ಹೀಗೆ ನೋಟಿಸ್‌ಗಳನ್ನು ಪಡೆದವರು ತುಂಬಾ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆಂದು ಮತ್ತೆ ಹೇಳಬೇಕಾದ ಅಗತ್ಯ ಇಲ್ಲವಷ್ಟೆ. ಒಂದೊಮ್ಮೆ ತಾವು ಜೀವನೋಪಾಯ ನೋಡಿಕೊಂಡ ದೂರದ ಜಿಲ್ಲೆಗಳಿಗೆ ಎನ್‌ಆರ್‌ಸಿ ಟ್ರಿಬ್ಯುನಲ್ ವಿಚಾರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವರು ಎಷ್ಟೋ ಖರ್ಚು ಶ್ರಮಗಳಿಗೆ ಒಳಗಾಗ ಬೇಕಾಗಿ ಬರುತ್ತದೆ. ಕಾಯಕಷ್ಟದ ಮೇಲೆ ಬದುಕುವವರು ಇಷ್ಟೊಂದು ಖರ್ಚುವೆಚ್ಚಗಳನ್ನು ಹೇಗೆ ಭರಿಸಬಲ್ಲರು?

ತಮ್ಮ ಭಾರತೀಯ ಪೌರತ್ವವನ್ನು ನಿರೂಪಿಸಿಕೊಳ್ಳವುದಕ್ಕೆ ಕೇವಲ ಎನ್‌ಆರ್‌ಸಿ ಮೂಲಕವೇ ಅಲ್ಲದೆ ಇತರ ಪ್ರಕ್ರಿಯೆಗಳ ಮೂಲಕ ಕೂಡಾ ಆಡಳಿತ ವ್ಯವಸ್ಥೆಯ ಸವಾಲುಗಳನ್ನು ಎದುರಿಸಬೇಕಾಗಿರುವುದು ಗಮನಾರ್ಹ. ಈ ಪ್ರಕ್ರಿಯೆಗಳಲ್ಲಿ ಒಂದು 1990ರ ದಶಕದ ಮಧ್ಯದ ದಿನಗಳಲ್ಲೇ ಆರಂಭವಾಯಿತು. ಟಿ.ಎನ್. ಶೇಷನ್ ಪ್ರಧಾನ ಚುನಾವಣಾ ಕಮೀಷನರಾಗಿ ಇದ್ದಾಗ ಸಂದೇಹಾಸ್ಪದ ಓಟರ್‌ಗಳೆಂದು ಭಾವಿಸುತ್ತಿದ್ದವರನ್ನು ಗುರುತಿಸುವುದಕ್ಕೆ ಓಟರ್‌ಗಳ ಪಟ್ಟಿಗಳಲ್ಲಿ ಅವರ ಹೆಸರುಗಳಿಗೆ ಎದುರಾಗಿ ‘ಡಿ’ ಎಂಬ ಆಂಗ್ಲ ಅಕ್ಷರವನ್ನು ಸೇರಿಸಬೇಕೆಂದು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಆದೇಶಿಸಿದ್ದರು. ಈ ಕ್ರಮದಿಂದ ಸಂಬಂಧಿತ ವ್ಯಕ್ತಿಗಳು, ವಿಚಾರಣೆ ಪೂರ್ತಿ ಆಗುವವರೆಗೆ ಓಟಿಂಗ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಇಲ್ಲವೇ ಸ್ಪರ್ಧಿಸುವುದಕ್ಕೆ ಅನರ್ಹರಾಗುತ್ತಾರೆ. ಆದರೆ ಈ ತಾತ್ಕಾಲಿಕ ಕ್ರಮ ಶಾಶ್ವತ ಕ್ರಮವಾಗಿ ಪರಿಣಮಿಸಿತು.

ಯಾವ ವ್ಯಕ್ತಿಯ ಪೌರತ್ವವನ್ನು ಯಾವಾಗಲಾದರೂ ಸರಿ, ಎಂತಹ ಕಾರಣ ತೋರಿಸದೆಯೇ ಸಂಶಯಿಸುವ ಅಧಿಕಾರ ಜೂನಿಯರ್ ಅಧಿಕಾರಿಗಳಿಗೆ ನೀಡುವುದು ನಡೆಯಿತು. ಹೀಗೆ ‘ಡಿ’ ಮುದ್ರಾಂಕಿತರಾದವರು ನ್ಯಾಯಾಲಯಗಳಲ್ಲಿ ಅಪೀಲ್ ಮಾಡಿಕೊಳ್ಳುವಂತಿಲ್ಲ. ತಮ್ಮ ಪೌರತ್ವ ನಿರ್ಧಾರದ ಬಗ್ಗೆ ವಿಚಾರಣೆ ಪೂರ್ತಿ ಆಗುವವರೆಗೆ ಅಂಥ ಹಕ್ಕು ಇರುವುದಿಲ್ಲ. ಮತ್ತೆ ವಿಚಾರಣೆಯ ಪ್ರಕ್ರಿಯೆ ಸುದೀರ್ಘವಾಗಿ ಸಾಗುತ್ತಲೇ ಇರುತ್ತದಷ್ಟೆ! ಹೀಗಾಗಿ ಅಸ್ಸಾಂನಲ್ಲಿ ಓಟರ್‌ಗಳ ಪಟ್ಟಿಯಲ್ಲಿನ ಈ ‘ಡಿ’ ಓಟರ್‌ಗಳನ್ನು ರಾಷ್ಟ್ರೀಯ ಪೌರ ಪಟ್ಟಿಯಿಂದ ಹೊರಗಿಟ್ಟರು.

‘ವಿದೇಶಿಯರು’ ಎಂದು ತಾವು ಅನುಮಾನಿಸುವ ಯಾವ ವ್ಯಕ್ತಿಯನ್ನಾಗಲೀ ಸರಿ, ವಿದೇಶಿಯರೆಂದೇ ಗುರುತಿಸುವುದಕ್ಕೆ ಅಸ್ಸಾಂ ಪೊಲೀಸರಿಗೆ ಸಾಧಿಕಾರತೆ ಕಲ್ಪಿಸುವುದು ಮತ್ತೊಂದು ಪ್ರಕ್ರಿಯೆ. ಮತ್ತೆ ಈ ಅಧಿಕಾರವನ್ನು ಅಸ್ಸಾಂ ಪೊಲೀಸರು ಸಕ್ರಮವಾಗಿ ಬಳಸಿಕೊಳ್ಳುತ್ತಾರಾ? ಬಹಳ ಮಂದಿ ವಿದೇಶಿಯರೆಂದು ಗುರುತಿಸಲ್ಪಟ್ಟ ಸ್ತ್ರೀ-ಪುರುಷರಿಗೆ ಅನ್ಯಾಯವಾಗಿದೆ. ಅವರಲ್ಲಿ ಬಹಳ ಮಂದಿ ತಮ್ಮ ಪೌರತ್ವಕ್ಕೆ ಸಾಕ್ಷಿಯಾಗಿ ಸೂಕ್ತ ದಾಖಲೆಗಳನ್ನು ತೋರಿಸಲಾರದೆ ಹೋದುದರಿಂದ ಅವರನ್ನು ‘ವಿದೇಶಿಯರು’ ಎಂದು ಪರಿಗಣಿಸುವುದು ನಡೆಯುತ್ತಿದೆ. ಪೊಲೀಸರು ವರದಿ ಮಾಡುವ ಇಂತಹ ಕೇಸುಗಳ ಮೇಲೆ ‘ವಿದೇಶಿಯರ ಟ್ರಿಬ್ಯುನಲ್ಸ್’ (ಊ) ವಿಚಾರಣೆ ನಡೆಸುತ್ತವೆ. ಈ ಟ್ರಿಬ್ಯುನಲ್‌ಗಳಲ್ಲಿ ಹಿಂದೆ ನಿವೃತ್ತ ನ್ಯಾಯಾಧೀಶರು ನೇಮಕರಾಗುತ್ತಿದ್ದರು. ನ್ಯಾಯಾಧೀಶರಾಗಿ ಕೆಲಸ ಮಾಡದ ಕೆಲವು ನ್ಯಾಯವಾದಿಗಳನ್ನು (ಅವರು ಆಡಳಿತ ಪಕ್ಷಕ್ಕೋ ಇಲ್ಲವೇ ಆರೆಸ್ಸೆಸ್‌ಗೋ ಸೇರಿದವರೆಂದು ಹೇಳಬೇಕಾಗಿಲ್ಲವಷ್ಟೆ) ಬಿಜೆಪಿ ನೇಮಿಸಿದೆ.

ಪೊಲೀಸರು ವರದಿ ಮಾಡಿದ ಕೇಸುಗಳ ಬಗ್ಗೆ ಎಫ್‌ಟಿಗಳು ವಿಚಾರಣೆ ನಡೆಸುತ್ತವೆ ಎಂದು ಹೇಳಿದ್ದೇನಲ್ಲವೇ?. ಬಹಳ ತಿಂಗಳುಗಳಿಂದ ಈ ಕೇಸ್‌ಗಳಿಗೆ ಸಂಬಂಧಿಸಿದ ಅನುಮಾನಿತರಲ್ಲಿ ಒಬ್ಬರನ್ನೂ ಭಾರತೀಯ ಪೌರನೆಂದು ಘೋಷಿಸದ ಎಫ್‌ಟಿಗಳು ತುಂಬಾ ದೊಡ್ಡ ಸಂಖ್ಯೆಯಲ್ಲಿವೆ. ಪ್ರಜೆಗಳನ್ನು ವಿದೇಶಿಯರೆಂದು ಘೋಷಿಸುವುದರಲ್ಲಿ ತಮಗೆ ನಿರ್ದೇಶಿಸಿದ ಗುರಿಯನ್ನು ನೆರವೇರಿಸುವುದಕ್ಕೆ ಪೊಲೀಸರು, ಪೊಲೀಸರು ಟ್ರಿಬ್ಯುನಲ್ ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ದಟ್ಟವಾಗುತ್ತಿದೆ.

ಒಬ್ಬ ವ್ಯಕ್ತಿಯ ಹೆಸರು ರಾಷ್ಟ್ರೀಯ ಪೌರ ಪಟ್ಟಿಯಲ್ಲಿ ಇದ್ದಾಗ್ಯೂ ಆತ ಇಲ್ಲವೇ ಆಕೆಯ ಕೇಸನ್ನು ಎಫ್‌ಟಿಗೆ ಪುನರ್‌ವಿಚಾರಣೆಗೆ ವಿನಂತಿಸುವ ಅಧಿಕಾರ ಪೊಲೀಸರಿಗೆ ಇದೆ. ಸದರಿ ವ್ಯಕ್ತಿಯನ್ನು ‘ಡಿ’ ಓಟರಾಗಿ ಪರಿಗಣಿಸುವುದಕ್ಕೆ ಚುನಾವಣಾ ಆಯೋಗಕ್ಕೆ ಅಧಿಕಾರ ಇದೆ. ಸಂವಿಧಾನದಲ್ಲಿನ ಅಧಿಕರಣ 20 ದೇಶದ ಪೌರರಿಗೆ ನೀಡಿರುವ ಒಂದು ಪ್ರಾಥಮಿಕ ಹಕ್ಕು. ‘ಒಂದು ಅಪರಾಧಕ್ಕೆ ಒಂದು ಸಲ ವಿಚಾರಣೆ, ಶಿಕ್ಷೆ ಇರಬೇಕು. ಒಂದು ಸಲ ವಿಚಾರಣೆ ಜರುಗಿದ ಬಳಿಕ ಪುನಃ ಅದೇ ಅಪರಾಧಕ್ಕೆ ಮತ್ತೆ ವಿಚಾರಿಸಕೊಡದು’ ಎಂದು ಸ್ಪಷ್ಟಪಡಿಸಿದೆ.

ಅಸ್ಸಾಂನಲ್ಲಿ ಎನ್‌ಆರ್‌ಸಿ ಟ್ರಿಬ್ಯುನಲ್‌ಗಳ ವಿಷಯದಲ್ಲಿ ಈ ಸಾಂವಿಧಾನಿಕ ನಿಯಮವನ್ನು ರದ್ದು ಮಾಡಲಾಗಿದೆ. ಒಬ್ಬ ವ್ಯಕ್ತಿ ಭಾರತೀಯ ಪ್ರಜೆ ಎಂದು ಎಫ್‌ಟಿ ದೃಢೀಕರಿಸಿದ ಬಳಿಕ ಕೂಡಾ ಮತ್ತೊಂದು ಎಫ್‌ಟಿ (ಹಳೆಯ ಎಫ್‌ಟಿ ಸಹಾ) ಅದೇ ವ್ಯಕ್ತಿಗೆ ತನ್ನ ಕಾನೂನುಬದ್ಧ ಪೌರತ್ವವನ್ನು ಮತ್ತೊಂದು ಸಲ ಸಾಬೀತು ಪಡಿಸಬೇಕೆಂದು ನೋಟಿಸ್ ಜಾರಿಮಾಡುವುದಕ್ಕೆ ಅವಕಾಶ ಇದೆ. ಹೀಗೆ ಹಲವರಿಗೆ ನೋಟಿಸ್‌ಗಳು ಜಾರಿ ಆಗಿವೆ. ಆತ/ಆಕೆ ಭಾರತೀಯ ಪೌರರು ಎಂದು ಸರಕಾರ ಅಂತಿಮವಾಗಿ ಘೋಷಿಸುವವರೆಗೆ ತಮಗೆ ಎಂತಹದೇ ಅಪಾಯ ಇಲ್ಲ ಎಂದು ಭಾವಿಸುವ ಪರಿಸ್ಥಿತಿ ಅಸ್ಸಾಂನಲ್ಲಿನ ಲಕ್ಷಾಂತರ ಪೌರರಿಗೆ ಇಲ್ಲದೆ ಹೋಗಿದೆ.
ವಿಶೇಷ ಜನತಾ ನ್ಯಾಯಾಲಯದಲ್ಲಿ ದೂರು ಕೊಟ್ಟ ವ್ಯಕ್ತಿಗಳ್ಯಾರಿಗೂ ಅಗತ್ಯವಾದ ಕಡೆ ಸರಕಾರ ಕಾನೂನು ನೆರವು ನೀಡಲಿಲ್ಲ. ಎನ್‌ಆರ್‌ಸಿ ಟ್ರಿಬ್ಯುನಲ್‌ಗಳು, ಉನ್ನತ ನ್ಯಾಯಾಲಯಗಳಲ್ಲಿ ಈ ಕೇಸ್‌ಗಳ ವಿಚಾರಣೆಯಲ್ಲಿ ಸಂಬಂಧಿತ ವ್ಯಕ್ತಿಗಳಿಗೆ ಅಗತ್ಯವಾದ ಕಾನೂನು ನೆರವನ್ನು ಸರಕಾರವೇ ತನ್ನ ಸ್ವಂತ ಖರ್ಚಿನಿಂದ ಒದಗಿಸಬೇಕೆಂದು ಕಾನೂನು ನಿರ್ದೇಶಿಸಿದೆ.

ಆದರೆ ತಮ್ಮ ಪೌರತ್ವವನ್ನು ನಿರೂಪಿಸಿ ಕೊಳ್ಳಬೇಕಾದವರು ಸ್ವಂತ ವೆಚ್ಚದಲ್ಲಿ ನ್ಯಾಯವಾದಿಗಳನ್ನು ನೇಮಿಸಿಕೊಳ್ಳುತ್ತಿದ್ದಾರೆ. ತಮ್ಮ ಪರವಾಗಿ ಸಾಕ್ಷ ನೀಡುವವರನ್ನು ಕರೆದೊಯ್ಯುವುದಕ್ಕೆ ಆಗುವ ಪ್ರಯಾಣದ ಖರ್ಚುಗಳನ್ನು ಕೂಡಾ ಅವರೇ ಭರಿಸಬೇಕಾಗಿದೆ.
ಮೊದಲೇ ಅಷ್ಟಕ್ಕಷ್ಟೇ ಆದಾಯ ಇರುವ ಈ ವ್ಯಕ್ತಿಗಳು ಈ ಖರ್ಚುಗಳಿಗಾಗಿ ತಮಗಿರುವ ಅಲ್ಪಸ್ವಲ್ಪ ಆಸ್ತಿಪಾಸ್ತಿಗಳನ್ನು ಮಾರಿಕೊಳ್ಳುವುದು ಅನಿವಾರ್ಯವಾಗಿದೆ. ಕೆಲವರು ಬಡ್ಡಿವ್ಯಾಪಾರಿಗಳಿಂದ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಈ ಕಷ್ಟಗಳಿಂದ ಅವರು ಮತ್ತಷ್ಟು ಬಡತನಕ್ಕೆ ಜಾರಿಹೋಗುತ್ತಿದ್ದಾರೆ. ಪಾರದರ್ಶಕವಾಗಿ ವ್ಯವಹರಿಸದ ಟ್ರಿಬ್ಯುನಲ್‌ಗಳ ಎದುರು ತಮ್ಮ ಪೌರತ್ವವನ್ನು ನಿರೂಪಿಸಿಕೊಳ್ಳಬೇಕಾದ ಅಗತ್ಯ ಅವರಿಗೆ ಏರ್ಪಟ್ಟಿದೆ. ಪರಿಣಾಮವಾಗಿ ಲಕ್ಷಾಂತರ ಜನರು ಸಂಕೀರ್ಣ ಉದ್ಯೋಗಸ್ವಾಮ್ಯ ವ್ಯವಸ್ಥೆಯಲ್ಲಿ ಸಿಕ್ಕಿಕೊಂಡು ಅದರಿಂದ ಹೊರಬೀಳಲಾರದೇ ಹೋಗುತ್ತಿದಾರೆ.
ಪಕ್ಷಪಾತದಿಂದಲೂ, ವಿರೋಧ ಭಾವದಿಂದಲೂ ವ್ಯವಹರಿಸುತ್ತಿರುವ ಸಂಸ್ಥೆಗಳ ನಿರ್ಧಾರದ ಮೇಲೆ ಆ ಲಕ್ಷಾಂತರ ಪ್ರಜೆಗಳ ಭವಿಷ್ಯ ಆಧಾರಗೊಂಡಿದೆ. ಆಡಳಿತವೇ ತನ್ನ ಪೌರರನ್ನು ದೇಶಭ್ರಷ್ಟರನ್ನಾಗಿ ಮಾಡುತ್ತಿರುವ ದುಷ್ಟತನ ಇದು. ಅಸ್ಸಾಂನಲ್ಲಿ ಆಡಳಿತವ್ಯವಸ್ಥೆ ನಡೆಸುತ್ತಿರುವ ಈ ಖಂಡನೀಯ, ನಿರ್ಲಜ್ಜ ಕೃತ್ಯಕ್ಕೆ ಸಮನಾದ ಅನ್ಯಾಯಗಳು ಜಗತ್ತಿನಲ್ಲಿ ಬಹಳ ಕಡಿಮೆ ನಡೆಯುತ್ತಿವೆ ಎಂದು ಸ್ಪಷ್ಟವಾಗಿ ಹೇಳಬಹುದು.


(ಕೃಪೆ: ಆಂಧ್ರ ಜ್ಯೋತಿ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)