varthabharthi


ಅನುಗಾಲ

ಯುದ್ಧೋನ್ಮಾದ ಅಥವಾ ಯುದ್ಧೋದ್ಯಮ

ವಾರ್ತಾ ಭಾರತಿ : 28 Feb, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ದೇಶವನ್ನು ವಿರೋಧಿಸುವುದು ಮತ್ತು ಸರಕಾರದ ನಿರ್ಣಯಗಳನ್ನು ವಿರೋಧಿಸುವುದು ಬೇರೆ ಬೇರೆ. ಕೃತಕ ಗಡಿರೇಖೆಗಳ ನಡುವಣ ಹುಚ್ಚು ಹೋರಾಟವು ಚರಿತ್ರೆಯಲ್ಲಿ ಕಪ್ಪುಕಲೆಯಾಗಿ ನಿಂತಿರುವುದನ್ನು ಎರಡು ವಿಶ್ವ ಸಮರಗಳು ಸಾರಿ ಹೇಳಿವೆ. ವಿಶ್ವಸಂಸ್ಥೆಯಂತಹ ಸಂಘಟನೆಯಿದ್ದಾಗಲೂ ವಿಶ್ವಶಾಂತಿ ಸಾಧ್ಯವಾಗದಿದ್ದರೆ ಅದು ಸಾಧ್ಯವಾಗುವ ಬಗೆಯಾದರೂ ಹೇಗೆ? ಅಷ್ಟೇ ಅಲ್ಲ, ಶಾಂತಿ ಸ್ಥಾಪನೆಗೆ ಯುದ್ಧ ಎಂದೂ ಮಾದರಿಯಾಗಲಾರದು.


ಭಾರತವು ಸದ್ಯ ಒಂದು ಯುದ್ಧೋನ್ಮಾದದ ಸ್ಥಿತಿಯಲ್ಲಿದೆ. ಕೆಲವೇ ದಿನಗಳ ಮೊದಲು ಕೇಂದ್ರ ಮೀಸಲು ಪೊಲೀಸು ಪಡೆಯ 44 ಜನರು ಭಯೋತ್ಪಾದಕರ ಹಸಿವಿಗೆ ಬಲಿಯಾದ ಆನಂತರ ಕೇಂದ್ರ ಸರಕಾರವು ಭಾರತೀಯ ಸೇನೆಗೆ ಸೂಕ್ತ ಕ್ರಮ ಕೈಗೊಳ್ಳಲು ಪೂರ್ಣ ಸ್ವಾತಂತ್ರ್ಯವನ್ನು ನೀಡಿದೆಯೆಂದು ಪ್ರಕಟಿಸಲಾಯಿತು. ಆದ್ದರಿಂದ ಯುದ್ಧದ ನಿರ್ಧಾರವು ರಾಜಕೀಯವಾದದ್ದಲ್ಲ, ಬದಲಾಗಿ ಸೇನೆಯದ್ದೇ ಎಂದು ನಂಬಬೇಕಾಗಿದೆ. ಇದಾದ ಅನಂತರ ಭಾರತೀಯ ವಾಯು ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿ ಭಯೋತ್ಪಾದಕರ ಅನೇಕ ಅಡಗುದಾಣಗಳನ್ನು ನಾಶಮಾಡಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲೂ ನಷ್ಟವಾದದ್ದು ನಮ್ಮದೇ ಕಾಶ್ಮೀರದ ಭಾಗ ಮತ್ತು ಸತ್ತವರು ಭಾರತೀಯರು ಅಲ್ಲವೇ ಎಂಬ ಪ್ರಶ್ನೆ ನನಗಂತೂ ಮೂಡಿದೆ.

ದೇಶಭಕ್ತಿಯನ್ನು ಪ್ರದರ್ಶಿಸಬೇಕೆಂದರೆ ಯುದ್ಧವನ್ನು ಬೆಂಬಲಿಸಬೇಕು ಮತ್ತು ನಮ್ಮ ಎಲ್ಲ ಕ್ರಮಗಳನ್ನು ವೈಭವೀಕರಿಸಬೇಕು. ಜನಪ್ರಿಯತೆಗೆ ಮತ್ತು ಪ್ರಚಾರಕ್ಕೆ ಯುದ್ಧವು ಒಂದು ಒಳ್ಳೆಯ ಅವಕಾಶ ಮತ್ತು ವೇದಿಕೆಯಾಗುತ್ತದೆಯೆಂಬುದು ನಮ್ಮ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸಿದರೆ ಗೊತ್ತಾಗಬಹುದು. ಯುದ್ಧ ಬೇಡವೆನ್ನುವವರು, ಶಾಂತಿಯನ್ನು ಬಯಸಿ ಶಾಂತವಾಗಿ ಉಳಿದವನು ದೇಶದ್ರೋಹಿಯ ಅಥವಾ ಹೇಡಿಯ ಪಟ್ಟವೇರುವ ಅಪಾಯವಿದೆ. ಆದ್ದರಿಂದಲೇ ಇನ್ನೂ ಶಾಂತವಾಗಿಯೇ ಉಳಿದವರು, ಉಳಿಯುವವರು ಅಪರೂಪ. ಅನೇಕ ಸಾತ್ವಿಕರು ಕೂಡಾ ರಾಜಸ, ತಾಮಸ ಸ್ವರೂಪವನ್ನು ನಟಿಸುತ್ತಿದ್ದಾರೆ. ಮಹಾಭಾರತದ ಅಭಿಮನ್ಯು, ಏಕಲವ್ಯರಿಲ್ಲದಿದ್ದರೂ ಉತ್ತರಕುಮಾರರಂತೂ ಎಲ್ಲೆಡೆ ಹಬ್ಬಿದ್ದಾರೆ.

ಮುಂದಿನ ದಿನಗಳು ಶ್ರೀಸಾಮಾನ್ಯನಿಗೆ ಆತಂಕವನ್ನು ತಂದೊಡ್ಡಬಲ್ಲವು. ಯುದ್ಧದ ನೇರ ಫಲಶ್ರುತಿಯೆಂದರೆ ಬೆಲೆಯೇರಿಕೆ ಮತ್ತು ಕಾಳಸಂತೆ. ಸಾವು-ನೋವು ಎಂದಿಗೂ ವೈಯಕ್ತಿಕ. ಆ ಕುರಿತು ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವ ಎಲ್ಲ ಅಭಿವ್ಯಕ್ತಿಗಳೂ ಬಹುಪಾಲು ಟೊಳ್ಳು ಮತ್ತು ಪೊಳ್ಳು. ಅವುಗಳ ಹಿಂದೆ ಮಾನವೀಯವಾದ ಸೆಲೆ-ನೆಲೆಗಳಿದ್ದರೆ ಒಳ್ಳೆಯದು. ಆದರೆ ಬಹುತೇಕ ಗುಪ್ತ ಮಾರ್ಗಸೂಚಿಗಳೇ ಈ ಸಾರ್ವಜನಿಕ, ಬಹಿರಂಗ ಘೋಷಣೆ ಮತ್ತು ಕಾರ್ಯಕ್ರಮಗಳಲ್ಲಿರುತ್ತವೆ. ಅದೀಗ ಸಂತೋಷವನ್ನು ತಂದಿರುವುದು ಬದುಕಿನ ವಾಸ್ತವಕ್ಕೆ ಕುರುಡಾಗಿ ರಾಜಕೀಯ ಲಾಭವನ್ನು ಪಡೆಯುವವರಿಗೆ ಮಾತ್ರ. ಮುತ್ಸದ್ದಿಯು ಮುಂದಿನ ತಲೆಮಾರಿನ ಬಗ್ಗೆ ಯೋಚಿಸಿದರೆ, ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಯೋಚಿಸುತ್ತಾನೆ ಎಂಬುದಕ್ಕೆ ಈ ಸಂದರ್ಭವು ಹೆಚ್ಚು ಉಚಿತವಾಗಿದೆಯೆನ್ನಿಸುತ್ತದೆ. ಕುರುಡು ಅನುಯಾಯಿಗಳು ಅವರವರ ಭಾವಕ್ಕೆ ಮತ್ತು ಅವರವರ ಭಕ್ತಿ-ಶ್ರದ್ಧೆಗೆ ತಕ್ಕಂತೆ ವರ್ತಿಸುವುದರಿಂದಾಗಿ ದೇಶದೊಳಗೆ ಹೊರಗಿನಿಂದಲೂ ಹೆಚ್ಚು ಯುದ್ಧಗಳು ಸಂಭವಿಸುವ ಸಾಧ್ಯತೆಗಳಿವೆ. ಮಹಾಭಾರತದ ಕೊನೆಗೆ ನಡೆದ ಯಾದವೀ ಕಲಹ ಮುಂದೆ ಬರಬಲ್ಲ ಎಲ್ಲ ಯುದ್ಧಾನಂತರದ ಕಲಹಗಳಿಗೆ ನಾಂದಿ ಹಾಡಿತೇನೋ?

ಯುದ್ಧ ಬೇಕೆಂದರೆ ಏಕೆ ಬೇಕು ಎಂದು ಯೋಚಿಸುವುದಕ್ಕೂ ಯಾರಿಗೂ ವ್ಯವಧಾನವಿಲ್ಲ. ಪ್ರಾಯಃ ಮನುಷ್ಯನ ಕ್ರೌರ್ಯಕ್ಕೆ ಸಾಂಸ್ಥಿಕ ರೂಪವನ್ನು ನೀಡುವುದು ಯುದ್ಧವೇ. ಯುದ್ಧವಿಲ್ಲದಿದ್ದರೆ ಯೋಧರಿಗೆ ಮತ್ತಿನನ್ನೇನು ಕೆಲಸ? ರಸ್ತೆ ನಿರ್ಮಿಸುವುದು, ಸಂತ್ರಸ್ತರಿಗೆ ನೆರವು ನೀಡುವುದು, ಪಥ ಸಂಚಲನ ಮಾಡುವುದು, ಸಾಮರ್ಥ್ಯವನ್ನು ಆಳುವವರ ಮುಂದೆ ಪ್ರದರ್ಶಿಸುವುದು ಇವು ಶಾಂತಿಕಾಲದಲ್ಲಿ ನಡೆಸುವ ಕಾರ್ಯಕ್ರಮಗಳು. ಇವನ್ನು ಸಮಾರಂಭಗಳಂತೆ ವೀಕ್ಷಿಸಿ ಚಪ್ಪಾಳೆ ತಟ್ಟುವ ಪ್ರತಿಷ್ಠಿತರ ಒಂದು ವರ್ಗವೇ ಇದೆ. ಯುದ್ಧವನ್ನು ನೋಡದೆಯೇ ಪ್ರತ್ಯಕ್ಷ ಕಂಡಂತೆ ವಿವರಿಸುವವರ ದಂಡು ನಾಗರಿಕರ ಸಮೂಹವೂ ಇದೆ. ಸ್ವಲ್ಪ ಬರೆಯಲು ತಿಳಿದರೆ ಅವರು ಎಂತಹ ರೋಮಾಂಚಕ ದೃಶ್ಯವನ್ನಾದರೂ ಕಲ್ಪಿಸಿ ಕಣ್ಣೆದುರಿಟ್ಟಾರು.

ಪ್ರತ್ಯಕ್ಷ ಯುದ್ಧದಲ್ಲಿ ಭಾಗವಹಿಸಿದ ಪಂಪ ಮತ್ತು ಕನಕದಾಸರು ಎಂದೂ ಯುದ್ಧವನ್ನು ಮತ್ತು ಅದರಡಿಯ ಹಿಂಸೆಯನ್ನು ವೈಭವೀಕರಿಸಿದವರಲ್ಲ. ಇಂದಂತೂ ತಂತ್ರಜ್ಞಾನದ ಪ್ರಗತಿಯ ಆನಂತರ ಯುದ್ಧವನ್ನು ಹೇಗೆ ಬೇಕಾದರೂ ಕಾಣಿಸಬಹುದು. ಇವನ್ನು ಫೋಟೋಶಾಪ್ ಮಾಡಿದರಂತೂ ಬಾಹುಬಲಿಯ ರಾಜಮೌಳಿಯವರನ್ನು ಮೀರಿಸಬಲ್ಲ ದೃಶ್ಯಾವಳಿಗಳನ್ನು ಕಾಣಿಸಬಹುದು. ಅಂಧ ನೃಪಾಲ ಧೃತರಾಷ್ಟ್ರನು ಸಂಜಯನಲ್ಲಿ ‘‘ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡಲೆಂದು ಪಾಂಡುಪುತ್ರರೂ ನನ್ನ ಮಕ್ಕಳೂ ಒಂದೆಡೆ ಸೇರಿ ಏನು ಮಾಡಿದರು? ಹೇಳು’’ ಎಂದಾಗ ಸಂಜಯನು ದಿವ್ಯ ದೃಷ್ಟಿಯಲ್ಲಿ ಯುದ್ಧಭೂಮಿಯನ್ನು ಕಂಡು ವಿವರಿಸಿದನೆಂಬ ಮಾತಿದೆ. ಈ ರೀತಿಯ ವೀಕ್ಷಕ ವಿವರಣೆ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಮಾಧ್ಯಮಗಳು ನೀಡುವ ವರದಿಗಳೇ ಜನತೆಗೆ ಪ್ರಾಥಮಿಕವಾಗುತ್ತವೆ. ಅವುಗಳು ಸಾಚಾ ವರದಿ ನೀಡಿದರೆ ಸರಿ; ಇಲ್ಲವಾದರೆ ಪರಿಸ್ಥಿತಿ ತೀರ ಶೋಚನೀಯವಾಗಬಹುದು. ಇಂದಿನ ಬಹುತೇಕ ಮಾಧ್ಯಮಗಳು ರಾಜಕೀಯ ಪಕ್ಷಗಳ ಪೂರ್ಣಾವಧಿ ಕಾರ್ಯಕರ್ತರಂತೆ ವರ್ತಿಸುವವರಾದ್ದರಿಂದ ಅಲ್ಲೂ ರಾಜಕೀಯ ವಾಸನೆ-ಕಮಟು ಕಂಡರೆ ಅಚ್ಚರಿಯೇನಿಲ್ಲ.

ಮನುಷ್ಯನಿಗೆ ಯುದ್ಧವೆಂದರೆ ಬಹು ಪ್ರೀತಿ. ಪ್ರಾಯಃ ಹಿಂಸೆಯನ್ನು ವೈಭವೀಕರಿಸುವುದಕ್ಕೆ ಮತ್ತು ಸಾಮೂಹಿಕ ಸ್ವೀಕೃತಿಯನ್ನು ಪಡೆಯುವುದಕ್ಕೆ ಯುದ್ಧಕ್ಕಿಂತ ಹೆಚ್ಚಿನ ಅವಕಾಶ ಬೇರೆಯಿಲ್ಲ. ನಮ್ಮ ರಾಮಾಯಣ ಮಹಾಭಾರತ ಪುರಾಣಗಳು, ಚರಿತ್ರೆಗಳು ಯುದ್ಧಗಳಿಂದ ತುಂಬಿ ತುಳುಕುತ್ತಿವೆ. ಯುದ್ಧೋನ್ಮಾದದವರಿಗೆ ಇವುಗಳು ಕೊಡುವ ಸಂತಸ ಅಷ್ಟಿಷ್ಟಲ್ಲ. ಕನ್ನಡ ಕಾವ್ಯವನ್ನೇ ಪರಿಸೀಲಿಸಿದರೆ ಪಂಪ, ರನ್ನ, ಕುಮಾರವ್ಯಾಸ ಇವರೆಲ್ಲರ ಪುರಾಣಾಧಾರಿತ ಕಾವ್ಯಗಳಲ್ಲಿ ಯುದ್ಧದ ವಿವರಣೆಗಳು ಸಾಕಷ್ಟು ರೋಚಕವಾಗಿವೆ. ಕುಮಾರವ್ಯಾಸನಂತೂ ಯುದ್ಧದ ಸನ್ನಿವೇಶ ಬಂತೆಂದರೆ ತಾನೇ ರಣಾಂಗಣದಲ್ಲಿ ಯುದ್ಧದ ನಡುವೆ ಇರುವವನಂತೆ ವಿವರಿಸುತ್ತಾನೆ. ಈ ಎಲ್ಲ ಕವಿಗಳು ವರ್ಣಿಸುವ ಯುದ್ಧದಲ್ಲಿ ಮೃತ್ಯು ದೇವತೆಯ ನರ್ತನ, ವಿನಾಶವು ಉಂಟುಮಾಡುವ ವಿಷಾದದ ಛಾಯೆ ದಟ್ಟವಾಗಿ ಕಾಣಿಸುತ್ತದೆ.

ಗಾಂಧಿ ತಮ್ಮ ‘ಅನಾಸಕ್ತಿ ಯೋಗ’ದಲ್ಲಿ ಹೇಳಿದಂತೆ ‘‘ಮಹಾಭಾರತದ ಕರ್ತೃ ಯುದ್ಧ ಅವಶ್ಯಕವೆಂದಲ್ಲ, ಅದು ನಿರರ್ಥಕವೆಂದೇ ಸಿದ್ಧಪಡಿಸಿದ್ದಾನೆ. ಗೆದ್ದವನನ್ನು ಅಳಿಸಿದ್ದಾನೆ, ಪಶ್ಚಾತ್ತಾಪ ಪಡಿಸಿದ್ದಾನೆ; ಅವನಿಗೆ ದುಃಖವಲ್ಲದೆ ಮತ್ತೇನೂ ದೊರೆಯದಂತೆ ಮಾಡಿದ್ದಾನೆ.’’ ಅಹಿಂಸೆ ಪರಮ ಧರ್ಮವೆಂದು ತಿಳಿದ ಕಾಲದಲ್ಲೂ ಭೌತಿಕ ಯುದ್ಧ ಸಾಮಾನ್ಯವಾಗಿತ್ತು ಎನ್ನುತ್ತಾರೆ ಗಾಂಧಿ. ಯಜ್ಞದಲ್ಲಿ ಪಶುಹಿಂಸೆ ಹಿತಕರವೆನಿಸಿದಂತೆ ಎಂಬ ಹೋಲಿಕೆಯನ್ನೂ ನೀಡುತ್ತಾರೆ. ಗೀತೆಯಂತಹ ಧರ್ಮಗ್ರಂಥವೂ ‘‘ಭೌತಿಕ ಯುದ್ಧದ ರೂಪಕವನ್ನು ಬಳಸಿಕೊಂಡು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ನಡೆಯುತ್ತಿರುವ ದ್ವಂದ್ವಯುದ್ಧದ ವರ್ಣನೆ ಇದು, ಹೃದಯಗತ ಯುದ್ಧವನ್ನು ಮನೋರಂಜಕವಾಗಿ ಮಾಡಲು ಬಂದಿದೆ ಮಾನವ ಯೋಧರ ಕಲ್ಪನೆ’’ ಎಂದು ಅವರಿಗನ್ನಿಸಿತ್ತು. ಅನಾದಿ ಕಾಲದಿಂದ ಆಧುನಿಕ ಯುಗದವರೆಗೂ ಎಲ್ಲ ಕಡೆ ಯುದ್ಧಗಳು ಶಾಂತಿಯ ಹೊರತಾಗಿ ಇತರ ಎಲ್ಲವನ್ನೂ ಸಾಧಿಸಿವೆ; ಸಾಧ್ಯವಾಗಿಸಿವೆ. ಜಗತ್ತಿನಲ್ಲಿ ಯುರೋಪಿಯನ್ನರು ಅಮೆರಿಕನ್ನರು ಯುದ್ಧದಾಹಿಗಳು. ಅವರಿಗೆ ಯುದ್ಧವೂ ಒಂದು ಉದ್ಯಮ.

ಯುದ್ಧಗಳು ನಡೆದರೆ ಶಸ್ತ್ರಾಸ್ತ್ರಗಳ ವಹಿವಾಟು ನಡೆಯುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಿಗೆ ತಮ್ಮಲ್ಲಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ರಾಷ್ಟ್ರಗಳೆಂದರೆ ಅಚ್ಚುಮೆಚ್ಚು. ಅಮೆರಿಕನ್ ಕಂಪೆನಿಗಳಂತೂ ಯುದ್ಧ ನಡೆದರೆ ಬರಲಿರುವ ವರ್ಷಗಳಲ್ಲಿ ತಮ್ಮ ವ್ಯಾಪಾರಕ್ಕೆ ಉತ್ತೇಜನವಾಗುತ್ತದೆಯೆಂದು ಖಾತ್ರಿಮಾಡಿಕೊಳ್ಳುತ್ತಾರೆ. ಇರಾಕ್ ಯುದ್ಧದಲ್ಲಿ ನಡೆದ ಸಾವಿರಾರು ಸಾವು-ನೋವುಗಳ ನಡುವೆ ಅಮೆರಿಕದ ಉಪಾಧ್ಯಕ್ಷರ ಕಂಪೆನಿಯು ಅಲ್ಲಿನ ಪುನರ್ನಿರ್ಮಾಣದ ಗುತ್ತಿಗೆ ಹಿಡಿದು ಭಾರೀ ಹಣ ಗಳಿಸಿತ್ತು. ಭಾರತದಲ್ಲಷ್ಟೇ ಅಲ್ಲ, ಅಲ್ಲೂ ಅಧಿಕಾರಸ್ಥರ ನಿಕಟವರ್ತಿಗಳೇ ಯಾವುದೇ ದೊಡ್ಡ ಗುತ್ತಿಗೆಗಳ ಭಾಗೀದಾರರು ಮತ್ತು ಪಾಲುದಾರರು. ಇದು ಎಲ್ಲ ಕಾಲದ ಸ್ವತಂತ್ರ ಭಾರತಕ್ಕೆ ಹೇಗೆ ಸತ್ಯವೋ ಹಾಗೆಯೇ ಅದೊಂದು ಜಾಗತಿಕ ವಿದ್ಯಮಾನವೆಂಬುದು ಎಲ್ಲ ಅಂಕಿ-ಅಂಶಗಳಿಂದ, ಅಧ್ಯಯನಗಳಿಂದ ಗೋಚರಿಸುತ್ತದೆ.

1960ರ ದಶಕದಲ್ಲಿ ಅಮೆರಿಕವು ವಿಯೆಟ್ನಾಮ್ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿದ್ದಾಗ ಅಲ್ಲಿನ ಶಸ್ತ್ರಾಸ್ತ್ರಗಳು ವಿಯೆಟ್ನಾಮಿಗೆ ಹೋಗದಂತೆ ಅಲ್ಲಿನ ನಾಗರಿಕರ ಒಂದು ದೊಡ್ಡ ಸಮೂಹವೇ ಪ್ರತಿಭಟಿಸಿತ್ತೆಂದು ನೋಮ್ ಚೊಮ್ಸ್ಕಿ ಬರೆಯುತ್ತಾರೆ. ಅದನ್ನು ಎಡಪಂಥೀಯ ಪ್ರತಿಭಟನೆಯೆಂದು ಪರಿಗಣಿಸಿ ಸರಕಾರವು ದಮನಿಸಲು ಯತ್ನಿಸಿತು. ಇದು ಸಾಮಾನ್ಯವಾಗಿ ಎಲ್ಲ ಸರಕಾರಗಳೂ ಹೂಡುವ, ಮಾಡುವ ತಂತ್ರ. ತಾವು ಕೈಗೊಳ್ಳುವ ಯಾವುದೇ ಕ್ರಮವನ್ನು ವಿರೋಧಿಸುವವರನ್ನು ದೇಶದ್ರೋಹಿಗಳಂತೆ ಅಥವಾ ಪ್ರತ್ಯೇಕತಾವಾದಿಗಳಂತೆ ಕಾಣುವುದು ಅನುಕೂಲ ಸಿಂಧು ರಾಜಕಾರಣ. ಯುದ್ಧೋನ್ಮಾದಿಗಳನ್ನು ಇಂತಹವರ ವಿರುದ್ಧ ನಿಲ್ಲಿಸಿದರೆ ಅಂತಹ ಭಿನ್ನಮತವನ್ನು ಹತ್ತಿಕ್ಕಲು ಅನುಕೂಲವಾಗುತ್ತದೆ. ದೇಶವನ್ನು ವಿರೋಧಿಸುವುದು ಮತ್ತು ಸರಕಾರದ ನಿರ್ಣಯಗಳನ್ನು ವಿರೋಧಿಸುವುದು ಬೇರೆ ಬೇರೆ. ಕೃತಕ ಗಡಿರೇಖೆಗಳ ನಡುವಣ ಹುಚ್ಚು ಹೋರಾಟವು ಚರಿತ್ರೆಯಲ್ಲಿ ಕಪ್ಪುಕಲೆಯಾಗಿ ನಿಂತಿರುವುದನ್ನು ಎರಡು ವಿಶ್ವ ಸಮರಗಳು ಸಾರಿ ಹೇಳಿವೆ. ವಿಶ್ವಸಂಸ್ಥೆಯಂತಹ ಸಂಘಟನೆಯಿದ್ದಾಗಲೂ ವಿಶ್ವಶಾಂತಿ ಸಾಧ್ಯವಾಗದಿದ್ದರೆ ಅದು ಸಾಧ್ಯವಾಗುವ ಬಗೆಯಾದರೂ ಹೇಗೆ? ಅಷ್ಟೇ ಅಲ್ಲ, ಶಾಂತಿ ಸ್ಥಾಪನೆಗೆ ಯುದ್ಧ ಎಂದೂ ಮಾದರಿಯಾಗಲಾರದು.

ಎರಡನೇ ಮಹಾ ಯುದ್ಧದಲ್ಲಿ ಮಿತ್ರರಾಷ್ಟ್ರಗಳ ನಾಯಕರಲ್ಲೊಬ್ಬರಾದ ಮತ್ತು ಗೆಲುವಿನ ರೂವಾರಿಗಳಲ್ಲೊಬ್ಬರಾಗಿದ್ದ ಮತ್ತು ವಿಶ್ವಾದ್ಯಂತ ಜನಪ್ರಿಯರಾಗಿದ್ದ ಬ್ರಿಟಿಷ್ ಪ್ರಧಾನಿ ಚರ್ಚಿಲ್ ಯುದ್ಧಾನಂತರದ ಚುನಾವಣೆಯಲ್ಲಿ ಸೋತುಹೋದರೆಂಬುದನ್ನು ನಾಯಕರು ನೆನಪಿಸಿಕೊಂಡರೆ ಯುದ್ಧೋನ್ಮಾದಕ್ಕೆ ಸ್ವಲ್ಪನಿಯಂತ್ರಣ ಬಂದೀತೇನೋ? *

ಯುದ್ಧದ ಕುರಿತು ಅನೇಕ ಕತೆ, ಕಾದಂಬರಿ, ಕವಿತೆಗಳು ಬಂದಿವೆ. ಇವೆಲ್ಲ ಯುದ್ಧದ ನಿರರ್ಥಕತೆಯನ್ನೇ ಮತ್ತು ಯುದ್ಧ ಸೃಷ್ಟಿಸಿದ ದುರಂತಗಳನ್ನೇ ಹೇಳಿವೆ. ಸ್ಮಶಾನ ಕುರುಕ್ಷೇತ್ರವನ್ನು ಅನ್ಯಾದೃಶವಾಗಿ ಕುವೆಂಪು ಸೃಷ್ಟಿಸಿದ್ದರು. ಯೋಚಿಸಬಲ್ಲ ಯಾರೂ ಯುದ್ಧವನ್ನು ಸಕಾರಾತ್ಮಕವಾಗಿ ಕಂಡವರೇ ಅಲ್ಲ.
ಇವುಗಳ ನಡುವೆ ಸುಮಾರು ಎರಡು ದಶಕಗಳ ಹಿಂದೆ ನಾನು ಬರೆದ ಒಂದು ಕವನದ ಹೆಸರು ‘ಯುದ್ಧ’. ಅದು ಹೀಗಿತ್ತು (ಅಥವಾ ಹೀಗಿದೆ!):

ಯುದ್ಧವೆಂದರೆ ಯಾರಿಗೂ ಭಯವಿಲ್ಲ
ನಡೆದುಹೋಗಿದೆ ಬಹಳ ಸಲ
ನಷ್ಟದ ಲೆಕ್ಕ ಭರ್ತಿಯಾಗಿದೆ
ಯುದ್ಧದ ಫಲ ಹೊತ್ತು
ಸಹಜ ಸ್ಥಿತಿಯಲ್ಲಿದೆ ಜಗತ್ತು.

ಹಾರಿಬಂದ ಹಕ್ಕಿಗಳು ಬಾಂಬುದುರಿಸಿದ ಸದ್ದಿಗಾಗಲೀ
ನೆಂಟರಂತೆ ಮತ್ತೆ ಬಂದಾವೆಂಬ ಸುದ್ದಿಗಾಗಲೀ
ಯಾರಿಗೂ ಕುತೂಹಲವಿಲ್ಲ.

ಬಹುಮಹಡಿ ಹುಡಿಯಾದ್ದಕ್ಕೆ
ಸಮೃದ್ಧ ಹಸುರು ಬಣ್ಣ ಕಳಚಿ ಬಿಳಿಚಿಕೊಂಡದ್ದಕ್ಕೆ
ಬದುಕು ಬಿಸಿಲಡಿಗೆ ಅಂಗಾತ ಮಲಗಿ ಕೊನೆಯುಸಿರೆಳೆದದ್ದಕ್ಕೆ
ನಕ್ಷತ್ರಗಳು ತಲೆಕೆಳಗಾಗಿ ಬಿದ್ದದ್ದಕ್ಕೆ
ಬಾಂಬುಗಳಂತೆ ಅಸಂಖ್ಯ ಆಸೆಗಳು ನೆಲಕ್ಕಪ್ಪಳಿಸಿದ್ದಕ್ಕೆ
ಪೂರ್ಣಚಂದ್ರನ ಬೆಳಕು ಬೀಳದ್ದಕ್ಕೆ
ಸುತ್ತಮುತ್ತ ಮಂದಿ ಸತ್ತದ್ದಕ್ಕೆ
ದುಃಖವಿಲ್ಲ.

ಚಿಂತೆಯ ಸಂತೆಗೆ ವ್ಯಾಪಾರವಿಲ್ಲ
ರಾಶಿಬಿದ್ದ ತರಕಾರಿಯಂತೆ ಚಲ್ಲಾಪಿಲ್ಲಿ
ಉಸಿರು ಕಳಕೊಂಡು ಬಿದ್ದವರ ಲೆಕ್ಕ ಮಾಡಿ ಕೊಳ್ಳುವವರಿಲ್ಲ

ಆಗ ತಾನೇ ಹುಟ್ಟಿದ ಮಗು
ಅಳುವುದರ ಬದಲು ಸಾಯುತ್ತಿತ್ತು
ಇದನ್ನೂ ಸಹಜವೆಂಬಂತೆ ಸ್ವೀಕರಿಸಿದರು
ಕತ್ತಲಾಯಿತೆಂದರೆ ಕೆಟ್ಟದ್ದು ಕಾಣದೆಂದರು
ಎಣ್ಣೆಯಾರಿದೆ ಇನ್ನು ಬೆಳಕೆಲ್ಲಿ ಎಂದರು
ದಫನಕ್ಕೆ ಗುಳಿ ತೆಗೆಯಲೇ ಇಲ್ಲ

ಸತ್ತವರ ಮತ್ತವರ ನಂಬಿ ಉಳಿದವರ
ಇದ್ದೂ ಇಲ್ಲದವರ ಇದ್ದಲ್ಲೇ ಮಣ್ಣು ಮುಚ್ಚಿದರು
ಹಠಾತ್ತನೆ ನಿರ್ಮಾಣಗೊಂಡ ಬೆಟ್ಟಗುಡ್ಡಗಳನ್ನು ಹತ್ತಿ ಕುಣಿದರು

ಆಕಾಶದೆತ್ತರ ಎದ್ದ ಹೊಗೆಧೂಳುಬೆಂಕಿಯಡಿ ದಹನಗೊಂಡ ಕನಸುಗಳ ಕಂಡು ಖುಷಿಪಟ್ಟರು.

ಸೂರ್ಯನುದಯದನಿವಾರ್ಯಕ್ಕೆ ಮೋಡಗಳ ಮುಸುಕು
ಬೆಳಕಾದರೂ ಯುದ್ಧವಾದರೂ ಮೂಡುವ ಕೆಂಪು

ಸದ್ದು ನಿಂತಿದೆ ಮೌನದ ಮಾನವುಳಿದಿದೆ

ಕ್ಯೂನಲ್ಲಿ ಕಾದೂ ಕಾದೂ ಟಿಕೆಟು ಸಿಕ್ಕವರಂತೆ ಕುಕ್ಕರಿಸಿ ದಿಗಂತ ನೋಡದೆ ದಿನ ಮುಗಿಯಿತೆನ್ನುವ ಜನ
ಯುದ್ಧ ಮುಗಿಯಿತೆಂದು ಎದ್ದರು

ಕಾದು ನಿಂತರು ಇನ್ನೊಂದು ಯುದ್ಧದ ಬರವಿಗಾಗಿ
ಹಾಲಿಗೆ ನೀರಿಗೆ ಪತ್ರಿಕೆಗೆ ಬಸ್ಸಿಗೆ ಕಾದಂತೆ. . . . .

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)