varthabharthi

ಸಿನಿಮಾ

ಯಜಮಾನ: ಈ ಯಜಮಾನ ಸಮಾಜಕ್ಕೆ ಡಾಕ್ಟರ್

ವಾರ್ತಾ ಭಾರತಿ : 3 Mar, 2019

‘ಯಜಮಾನ’ ಎಂದೊಡನೆ ನೆನಪಾಗುವುದು ವಿಷ್ಣುವರ್ಧನ್ ಅವರು ನಟಿಸಿ ದಾಖಲೆ ಯಶಸ್ಸು ಕಂಡ ಚಿತ್ರ. ಅದರಲ್ಲಿ ವಿಷ್ಣುವರ್ಧನ್ ಒಂದು ಕುಟುಂಬದ ಯಜಮಾನನಾಗಿ ಮಾದರಿಯಾಗಿರುತ್ತಾರೆ. ಈ ಯಜಮಾನದಲ್ಲಿ ದರ್ಶನ್ ಒಂದು ಹಳ್ಳಿಗೆ ಹೇಗೆ ಮಾದರಿಯ ಯಜಮಾನನಾಗಬಹುದು ಎಂದು ತೋರಿಸಿದ್ದಾರೆ.

ಹುಲಿದುರ್ಗ ಎಂಬ ಊರು. ಆ ಊರು ಕೃಷಿಗೆ ಹೆಸರುವಾಸಿ. ಮುಖ್ಯವಾಗಿ ಕೊಬ್ಬರಿ ಎಣ್ಣೆಗೆ ಫೇಮಸ್ಸು. ಎಲ್ಲವೂ ಚೆನ್ನಾಗಿದೆ ಎನ್ನುವಾಗ ಆ ಹಳ್ಳಿಯತ್ತ ಬಹುರಾಷ್ಟ್ರೀಯ ಕಂಪೆನಿಯೊಂದು ಕಣ್ಣು ಹಾಕುತ್ತದೆ. ಆದರೆ ಅವರ ಕಂಪೆನಿ ಊರಿಗೆ ಕಾಲಿಡದಂತೆ ಮಾಡುವಲ್ಲಿ ಕೃಷ್ಣ ಎಂಬ ಯುವ ವ್ಯಾಪಾರಿ ಯಶಸ್ವಿಯಾಗುತ್ತಾನೆ. ಕೊನೆಗೆ ಅನಿವಾರ್ಯವಾಗಿ ಅವರ ಜಾಲದಲ್ಲಿ ಸಿಲುಕಿ ಎಣ್ಣೆ ವ್ಯಾಪಾರದಲ್ಲಿ ನಷ್ಟ ಗೊಳ್ಳಬೇಕಾದ ಪರಿಸ್ಥಿತಿ ಆ ಹಳ್ಳಿಗೆ ಎದುರಾಗುತ್ತದೆ. ಅದನ್ನು ಕೃಷ್ಣ ಹೇಗೆ ಸಮರ್ಥವಾಗಿ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಕತೆ. ಕೃಷ್ಣನಾಗಿ ದರ್ಶನ್ ಮೊದಲಾರ್ಧದಲ್ಲಿ ಒಂದಿಷ್ಟು ತುಂಟಾಟ ಆಡುತ್ತಾರೆ. ಆದರೆ ಅದು ಅಷ್ಟೇನೂ ಮೋಡಿ ಮಾಡುವುದಿಲ್ಲ ಎನ್ನುವುದು ಸತ್ಯ.

ಕತೆ ಮುಂದುವರಿಯುತ್ತಾ ಹೋದಂತೆ, ದರ್ಶನ್ ಶೈಲಿಯ ಹೊಡೆದಾಟಗಳು ಎದುರಾದಂತೆ ಚಿತ್ರ ಆಸಕ್ತಿ ಮೂಡಿಸುತ್ತದೆ. ದರ್ಶನ್ ಜೋಡಿಯಾಗಿ ಬಹು ನಿರೀಕ್ಷೆ ಮೂಡಿಸಿದ್ದ ರಶ್ಮಿಕಾ ಮಂದಣ್ಣ ನೀಡಿರುವ ನಟನೆ ಸಪ್ಪೆಎನಿಸುತ್ತದೆ. ಕಾವೇರಿ ಎಂಬ ಆಕೆಯ ಪಾತ್ರಕ್ಕೆ ವಿಶೇಷತೆ ಏನೂ ಇಲ್ಲ. ಆದರೆ ಮತ್ತೋರ್ವ ನಾಯಕಿಯಾಗಿ ಗಂಗಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾನ್ಯ ಹೋಪ್ ವಿವಿಧ ಗೆಟಪ್‌ನಲ್ಲಿ ಬಂದು ಮನಸೆಳೆಯುತ್ತಾರೆ.

ಚಿತ್ರದಲ್ಲಿ ಪ್ರಮುಖ ಖಳನಾಗಿ ನಟಿಸಿರುವ ಠಾಕೂರ್ ಅನೂಪ್ ಸಿಂಗ್ ನಟನೆ ಕೂಡ ಮನಗೆಲ್ಲುತ್ತದೆ. ರಶ್ಮಿಕಾ ತಂದೆಯಾಗಿ ದೇವರಾಜ್ ಮತ್ತು ಇತರ ಪಾತ್ರಗಳಲ್ಲಿ ಪಿ.ರವಿಶಂಕರ್, ಸುಚಿತ್ರಾ, ಸಾಧುಕೋಕಿಲಾ, ದತ್ತಣ್ಣ ಮೊದಲಾದವರು ಎಂದಿನಂತೆ ತಮ್ಮದೇ ಶೈಲಿಯ ಅಭಿನಯ ನೀಡಿದ್ದಾರೆ. ಎಲ್ಲಾ ಪಾತ್ರಗಳಿಗೂ ಹೈಲೈಟ್ ಆಗಲು ಒಂದೊಂದು ದೃಶ್ಯಗಳು ಮೀಸಲಾಗಿರುವುದು ವಿಶೇಷ.

ವಾಸ್ತವದ ನೆಲೆಗಟ್ಟಿನ ಕತೆಯಾದರೂ ಕೋರ್ಟ್ ಸೀನ್ ಸೇರಿದಂತೆ ಸಾಕಷ್ಟು ದೃಶ್ಯಗಳು ನೈಜತೆಗಿಂತ ಮಾರು ದೂರ ನಿಲ್ಲುತ್ತದೆ. ಆದರೆ ಶಶಿಧರ ಅಡಪ ಅವರ ಕಲಾ ನಿರ್ದೇಶನ ಅಮೋಘ ಎನ್ನಲೇ ಬೇಕು. ಒಟ್ಟಿನಲ್ಲಿ ದರ್ಶನ್ ಅಭಿಮಾನಿಗಳು ಮೆಚ್ಚುವಂತಹ ಸನ್ನಿವೇಶ, ಸಂಭಾಷಣೆ, ಸಂಗೀತಕ್ಕೆ ಕೊರತೆ ಇಲ್ಲ.

 ತಾರಾಗಣ : ದರ್ಶನ್, ರಶ್ಮಿಕಾ, ತಾನ್ಯಾ ಹೋಪ್
ನಿರ್ದೇಶನ : ಹರಿಕೃಷ್ಣ , ಪಿ.ಕುಮಾರ್
ನಿರ್ಮಾಣ : ಮೀಡಿಯಾ ಹೌಸ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)