varthabharthi


ಅನುಗಾಲ

ಅಳಲಿನ ರಿಲೇ ಓಟ

ವಾರ್ತಾ ಭಾರತಿ : 7 Mar, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಆರಾಮಕುರ್ಚಿ ಪ್ರಯಾಣಿಕರಂತೆ ಆರಾಮಕುರ್ಚಿ ಚಿಂತಕರಿರುವಾಗ ಎಲ್ಲ ನೋವುಗಳನ್ನು ಶಮನಗೊಳಿಸುವ ಸಂಜೀವಿನೀ ಮಾತುಗಳು ಅಲಭ್ಯವಲ್ಲ. ಒಬ್ಬೊಬ್ಬರು ತಮ್ಮ ನೋವುಗಳನ್ನು ಗುಟ್ಟಾಗಿ ಹೇಳಬಹುದೇ ವಿನಾ ಇದನ್ನು ಎಲ್ಲರಿಂದ ನಿರೀಕ್ಷಿಸಲಾಗದು. ತೋರಿಕೆಯೇ ಬದುಕಾಗಿ ಪರಿಣಮಿಸಿದ ಈ ಕಾಲದಲ್ಲಿ ಶೂಲದ ಮೇಲೆ ಕುಳಿತವನೂ ತಾನು ಸುಖವಾಗಿದ್ದೇನೆಂದು ಹೇಳುವುದು ಅಚ್ಚರಿ ತರುವುದಿಲ್ಲ.


ನನ್ನ ಪರಿಚಯದವರೊಬ್ಬರು ತಮ್ಮ ಶಾಲಾ ಕಾಲೇಜು ದಿನಗಳಿಂದಲೇ ತರಗತಿಗಳಲ್ಲಿ ಅಗ್ರಗಣ್ಯರು. ತಾನಾಯಿತು, ತನ್ನ ಪಠ್ಯಗಳ ಅಧ್ಯಯನವಾಯಿತು ಎಂಬ ಹಾಗೆ ಇರುತ್ತಿದ್ದವರು. ಇತರ ಸಹಪಾಠಿಗಳು ಪಂದ್ಯಾಟಗಳಲ್ಲೋ, ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲೋ ತೊಡಗಿಕೊಂಡರೆ ಅದರಿಂದ ಪಾಠಕ್ಕೆ ಮತ್ತು ಭವಿಷ್ಯಕ್ಕೆ ಅಡ್ಡಿಯೆಂದು ಹೇಳುತ್ತಿದ್ದವರು. ಸಾಕಷ್ಟು ಅಂಕಗಳನ್ನು ಗಳಿಸಿದ್ದರಿಂದ ಅವರಿಗೆ ದೇಶದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಅಧ್ಯಯನಕ್ಕೆ ಅವಕಾಶ ಸಿಕ್ಕಿತು. ಅಲ್ಲೂ ಉನ್ನತ ಅಂಕಗಳನ್ನು ಗಳಿಸಿ ವಿದೇಶಕ್ಕೆ ಹೋದರು. ಅಲ್ಲಿ ಯಾವುದೋ ವಿದೇಶಿಯೆಂದು ನಾವು ಇಲ್ಲಿ ಹೇಳುವ, ಆದರೆ ಅಲ್ಲಿನ ಸ್ವದೇಶೀ ಕಂಪೆನಿಯೊಂದರಲ್ಲಿ ದೊಡ್ಡ ಉದ್ಯೋಗವು ದಕ್ಕಿತು. ಅಲ್ಲಿಂದ ಅವರು ದುಡಿಯುತ್ತಲೇ ಬಂದರು. ಅಲ್ಲೇ ವಿವಾಹವಾದರು. ಬಹಳಷ್ಟು ಸಂಪಾದಿಸಿದರೆಂದು ಕೊಂಡಿದ್ದೇನೆ. ಮಕ್ಕಳೆಲ್ಲ ಅಲ್ಲೇ ತಮ್ಮ ನೆಲೆಗಳನ್ನು ಕಂಡುಕೊಂಡಿದ್ದಾರೆ. ಅಂತರ್ಜಾತಿ, ಅಂತರ್‌ಧರ್ಮೀಯ ವಿವಾಹಗಳನ್ನು ಕಂಡರೆ ಹುಬ್ಬೇರಿಸುವ ಊರಿನ ಮಂದಿಗೆ ಸೆಡ್ಡುಹೊಡೆಯುವ ಹಾಗೆ ಅಲ್ಲೇ ಜಾತಿ, ಧರ್ಮ ಯಾವುದೆಂದು ಪತ್ತೆಮಾಡುವುದೇ ಕಷ್ಟವಾಗುವಂತಹ ಅಂತರ್‌ರಾಷ್ಟ್ರೀಯ ಅಂತರ್‌ ಜನಾಂಗೀಯವಾಗಿ ಮದುವೆ ಮಾಡಿಕೊಂಡಿದ್ದಾರೆ.

ಒಮ್ಮಮ್ಮೆ ಈ ದೇಶಕ್ಕೆ ಬರುತ್ತಾರೆ. ಬಂದಾಗ ನಾಲ್ಕಾರು ದಿನ ಕಳೆಯುವುದಕ್ಕಾಗಿ ತಮ್ಮ ಊರಿಗೆ ಆಗಮಿಸಿ ಸಂಭ್ರಮಿಸುತ್ತಾರೆ. ಅವರು ಬರುತ್ತಾರೆಂದೇ ಊರಿನ ಸಾಂಪ್ರದಾಯಿಕ ಮನೆಗಳಲ್ಲಿ ಅವರಿಗಾಗಿ ವಿದೇಶೀ ಮಾದರಿಯ ಶೌಚಾಲಯಗಳು, ವಿಶ್ರಾಂತಿ ಕೊಠಡಿಗಳು ನಿರ್ಮಾಣಗೊಳ್ಳುತ್ತವೆ. ಅವರ ನೆಂಟರಿಷ್ಟರಲ್ಲಿ ಅವರ ಆಗಮನವೇ ವಿಶೇಷವೆಂದು ಭಾವಿಸುತ್ತಾರೆ.

ಈಗ ನನ್ನೀ ಸ್ನೇಹಿತರು ನಿವೃತ್ತರಾಗಿದ್ದಾರೆ. ಭೇಟಿಯಾದಾಗ ತಾನು ಬದುಕಿನಲ್ಲಿ ಏನು ಮಾಡಿದೆ, ಏನು ಸಾಧಿಸಿದೆ ಎಂದು ಅತ್ತುಕೊಳ್ಳುತ್ತಾರೆ. ತಮ್ಮ ಪಾಡಿಗೆ ತಾವು ಊರಿನಲ್ಲೋ ಸಮೀಪದ ಪಟ್ಟಣದಲ್ಲೋ ಕೃಷಿ, ಮಾಸ್ತರಿಕೆ, ವ್ಯಾಪಾರ ಇನ್ನಿತರ ವ್ಯವಹಾರಗಳಲ್ಲಿ ತೊಡಗಿಕೊಂಡು ಸದಾ ಎಲ್ಲರೊಂದಿಗೆ ಬೆರೆತುಕೊಂಡು ಬದುಕುವುದಾಗಲಿಲ್ಲ, ಬದಲು ಎಲ್ಲೋ ದೂರ ತನ್ನ ಬಳಗವನ್ನು ಬಿಟ್ಟು ಎಸೆದುಕೊಂಡ ಬೀಜದಂತೆ ತಾನು ಉಳಿದೆ ಎನ್ನುತ್ತಾರೆ. ಬದುಕಿನಲ್ಲಿ ಎಲ್ಲ ಇದೆ ಆದರೆ ಇಲ್ಲಿನ ರೀತಿಯ ಸಾಂಸಾರಿಕ ಹೊಂದಾಣಿಕೆ ಅಲ್ಲಿ ಕಾಣಲಿಲ್ಲ, ನೀವೆಲ್ಲ ಅದೃಷ್ಟವಂತರು ಎಂದು ಹೇಳಿ ಅವರ ಕುರಿತು ನನಗಾಗಬಹುದಾಗಿದ್ದ ಮತ್ಸರವನ್ನು ಕೊಂಚ ಕಡಿಮೆಮಾಡುತ್ತಾರೆ. ಜೊತೆಗೇ ತನಗಿನ್ನು ಇಲ್ಲಿ ಬಂದು ಬದುಕುವುದು ಸಾಧ್ಯವಿಲ್ಲ, ಅಲ್ಲಿಗೆ ಒಗ್ಗಿಹೋಗಿದ್ದೇನೆ ಅದು ಅನಿವಾರ್ಯವೆನ್ನುತ್ತಾರೆ. ಹಿಗ್ಗು-ಕುಗ್ಗುಗಳ ನಡುವೆ ನಗುತ್ತ ತೆರಳುತ್ತಾರೆ. ಪ್ರತೀ ಭೇಟಿಯಲ್ಲೂ ಇದೇ ಪುನರಾವರ್ತನೆಯಾಗುತ್ತದೆ.

ಇಡೀ ಜಗತ್ತನ್ನು ಒಂದು ಗ್ರಾಮವಾಗಿಸುವ ಆಧುನಿಕತೆಯ ಪ್ರಕ್ರಿಯೆಯಲ್ಲಿ ಇದೊಂದು ಮಾದರಿ ಮಾತ್ರ. ಕಷ್ಟ ಎನ್ನುವುದು ಒಂದು ತೌಲನಿಕ ಮೌಲ್ಯವಾಗಿ ಗ್ರಹಿಸಿದರೆ ಅವರು ನಮ್ಮಷ್ಟು ಕಷ್ಟದಲ್ಲಿಲ್ಲ. ಆದರೆ ಎಲ್ಲ ಭೌತಿಕ ಸೌಕರ್ಯಗಳು ಇದ್ದಾಗಲೂ ಅವರು ತೃಪ್ತರಲ್ಲ. ಅವರು ನಮ್ಮ ದೃಷ್ಟಿಯಲ್ಲಿ ಸುಖಿಗಳು; ಅವರ ಸಂಕಟಗಳು ಅವರೊಳಗಷ್ಟೇ ಗುರುತರವಾಗಿವೆ. ಯಾವುದು ಹೆಚ್ಚು ಯಾವುದು ಕಡಿಮೆಯೆಂದು ಅಳೆಯಲು ಸಾಧ್ಯವಿಲ್ಲದಂತಿದೆ ಆಧುನಿಕ ಬದುಕು. ಸಾಂಪ್ರದಾಯಿಕ ಬದುಕಿನ ನೆಲೆಗಳು ಕೆಲವೇ ಇದ್ದವು. ಸಮಾಜದ ಬಹುಪಾಲು ವ್ಯಕ್ತಿಗಳು, ಸಂಸಾರಗಳು ಒಂದೇ ತೆರನಾದ ಬದುಕನ್ನು ಬದುಕುತ್ತಿದ್ದವು. (ಬದುಕನ್ನು ಬದುಕುವುದು ಎಂಬುದೇ ಒಂದು ವ್ಯಂಗ್ಯ!) ಆಗಾಗ ಮಿಳಿತಗೊಳ್ಳುತ್ತಿದ್ದರು. ತಾವು ಬೆಳೆದು ಬಂದ ಬಗೆಯನ್ನು (ಹಾಳಾದ ಬಗೆಯನ್ನೂ!) ಹಂಚಿಕೊಳ್ಳುತ್ತಿದ್ದರು. ಎಲ್ಲ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸಾಮಾಜಿಕ ಹಕ್ಕು ಮತ್ತು ಕರ್ತವ್ಯವೆಂಬ ಹಾಗಿರುತ್ತಿದ್ದರು. ಊರು-ಪರವೂರುಗಳ ಎಲ್ಲ ಒಳಿತು-ಕೆಡುಕುಗಳನ್ನು ಚರ್ಚಿಸುತ್ತಿದ್ದರು. ತಮಗೆ ಬಂದ ಯಾವುದೇ ಸುದ್ದಿಯನ್ನು ಇತರರಿಗೆ ವರದಿಮಾಡುತ್ತಿದ್ದರು. ಕೂಲಿಕಾರರು, ಕ್ಷೌರ ಮಾಡುವವರಿಂದ ಮೊದಲ್ಗೊಂಡು ಬಸ್ ಚಾಲಕ ನಿರ್ವಾಹಕರವರೆಗೂ ಬದುಕನ್ನು ವಿಧವಿಧವಾಗಿ ಚಪ್ಪರಿಸುವುದು ದುಡಿಮೆಯ ಅಂಗವಾಗಿರುತ್ತಿತ್ತು. ಕುಟುಂಬದಲ್ಲಿ ಒಬ್ಬರೋ ಇಬ್ಬರೋ ಒಂದಷ್ಟು ಓದಿದರೆ ಸಾಕೆಂಬ ಅಭಿಪ್ರಾಯವಿತ್ತು.

ಮನೆಯಲ್ಲಿ ವಯಸ್ಸಾದವರು ಅನಾರೋಗ್ಯ ಪೀಡಿತರಾದರೆ ಅವರ ಕೊನೆಯವರೆಗೂ ಅವರ ಆರೈಕೆಗೆ ಜನರಿದ್ದರು. ಮದುವೆಯಿರಲಿ, ಮಸಣವಿರಲಿ, ಪದ ಕುಸಿಯೆ ನೆಲ ಮಾತ್ರವಲ್ಲ ಬಂಧುಗಳಿದ್ದರು. ಪರಸ್ಪರ ವಿನಿಮಯದ ಮೂಲಕ ಅಭಿವೃದ್ಧಿಯ ಪಥ ನಡೆಯುತ್ತಿತ್ತು. ಸಹಾಯ ಮಾಡುವುದು ಕರ್ತವ್ಯವೇನೋ ಎಂಬ ಹಾಗೆ ಜನರು ವರ್ತಿಸುತ್ತಿದ್ದರು. ರಸ್ತೆಯಲ್ಲೋ ಊರಿನ, ಪಟ್ಟಣಗಳ ಗೊತ್ತಾದ ಜಾಗದಲ್ಲೋ ಹಣ್ಣು, ಹೂ, ಸೊಪ್ಪು, ತರಕಾರಿಗಳು ಮತ್ತಿತರ ಸಹಭಾಗಿಗಳು ಯಾವ ಮತ್ತು ಯಾರ ಆತಂಕಗಳೂ ಇಲ್ಲದೆ ಕೊಡುಕೊಳ್ಳುವ ವ್ಯವಹಾರದಲ್ಲಿ ಪಾಲ್ಗೊಳ್ಳುತ್ತಿದ್ದು ಅಲ್ಲಿ ಅಧಿಕಾರಗಳ ಪ್ರವೇಶ ತೀರ ಸೀಮಿತವಾಗಿತ್ತು. ಬಡಜನರು ಕಾಡುಗಳಿಂದ ತಮಗೆ ಬೇಕಾದ ಬೆತ್ತ, ಸೌದೆ, ಸೊಪ್ಪುಗಳನ್ನು ಮಾತ್ರವಲ್ಲ ಮರಮುಟ್ಟುಗಳನ್ನು ತಮಗೆ ಬೇಕಷ್ಟು ತಂದಾಗಲೂ ತರಿಸಿಕೊಂಡಾಗಲೂ ಕಾಡಿಗೆ ಏಟು ಬಿದ್ದಿರಲಿಲ್ಲ.

ಇವನ್ನೆಲ್ಲ ನಾವು ಅರಿವಿಲ್ಲದೇ ತೊಡೆದುಹಾಕಿದಂತಿದೆ. ಎಲ್ಲವೂ ಯಾಂತ್ರೀ ಕೃತವಾಗಿದೆ. ಮನೆಗಳು ಒಂದೆರಡು ರೋಗಿಗಳ ನಿರ್ಜನ ಆಸ್ಪತ್ರೆಗಳಂತಿವೆ. ನಮ್ಮ ಅಭಿವೃದ್ಧಿಯ ಹಾದಿಯಲ್ಲಿ ಯಂತ್ರೋದ್ಯಮದ ಮೆರವಣಿಗೆ ನಡೆಯುತ್ತಿದೆ. ಸಂತೆ-ಹಬ್ಬ-ಜಾತ್ರೆಗಳೆಲ್ಲ ಯಾಂತ್ರೀಕರಣಗೊಂಡು ಅವುಗಳಲ್ಲಿ ಮನುಷ್ಯರ ಪಾತ್ರ ಕಡಿಮೆಯಾಗುತ್ತಿದೆ. ಇಂದು ಕೃಷ್ಯುತ್ಪನ್ನ ಮಾರುಕಟ್ಟೆಗಳ ಆಡಳಿತದಿಂದಾಗಿ ಬೆಳೆಯ ಸಿಂಹಪಾಲು ಈ ಕಾನೂನು ಕಾಯ್ದೆಗಳ ಅನುಷ್ಠಾನಕ್ಕೆ ಸಲ್ಲುತ್ತಿದೆ. ಕಾಡಿನ ರಕ್ಷಣೆ ಹೆಚ್ಚಾಗಿ ಕಾಡುಗಳ ಸಂತತಿ ನಿರ್ಮೂಲನವಾಗುತ್ತ ಬಂದಿದೆ. ವನಸಂಪತ್ತು ಹಣಸಂಪತ್ತಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಬಲಿಪಶುವಾಗಿರುವ ವನವಾಸಿಗಳೂ, ಊರ ಪಾರಂಪರಿಕ ಕುಶಲಕರ್ಮಿಗಳೂ ಬೀದಿಪಾಲಾಗುತ್ತಿದ್ದಾರೆ ಮಾತ್ರವಲ್ಲ ಅವರ ಮೂಲಕ ಪ್ರತಿನಿಧಿತವಾಗುತ್ತಿದ್ದ ಸಾಂಪ್ರದಾಯಿಕ ಕುಶಲಕಲೆಗಳು ಅಳಿವಿನ ಅಂಚಿಗೆ ಬಂದಿವೆ. ಇಷ್ಟೇ ಅಲ್ಲ, ಕಾಡೊಳಗಿದ್ದ ಇಂತಹ ಮಂದಿಯನ್ನು ಹೊರಹಾಕುವ ಮೂಲಕ ಅಲ್ಲಿನ ಎಲ್ಲ ಬಡಿವಾರಗಳ ಸೂತ್ರ ಹಿಡಿಯುವ ರಾಜಕಾರಣದ ಕನಸಿನಿಂದಾಗಿ ಕಾಡಾಡಿಗಳನ್ನು ನಾಡಾಡಿಗಳನ್ನಾಗಿಸಲಾಗುತ್ತಿದೆ. ಕಾನೂನು ಮಣ್ಣಿನ ಯಾವ ಹಿಡಿತಕ್ಕೂ ಸಿಕ್ಕದೆ ತಾನೇ ತಾನಾಗಿ ವಿಜೃಂಭಿಸುತ್ತಿದೆ. ಯಾರದೀ ಕಾಡು ಎಂಬ ಪ್ರಶ್ನೆಗೆ ಬಿರ್ಸಾ ಮುಂಡಾನಂತಹ ಆತ್ಮಗಳಿಗೆ, ಮೂಕ ಮನಸ್ಸುಗಳಿಗೆ ಉತ್ತರ ಸಿಕ್ಕದಂತಾಗಿದೆ. ಮನುಷ್ಯರೂ ಪ್ರಾಣಿಗಳೂ ಸಂಬಂಧದ ದೃಷ್ಟಿಯಲ್ಲಿ ಲೆಕ್ಕಕ್ಕಿಲ್ಲದವರಾ ಗಿದ್ದಾರೆ. ರಸ್ತೆಯಲ್ಲಿ ಭೇಟಿಯಾದವರನ್ನು ಹಲೋ ಅಥವಾ ಗುಡ್ ಮಾರ್ನಿಂಗ್ ಎಂದು ಹೇಳುತ್ತೇವೆ, ಹೇಗಿದ್ದೀರಿ ಎಂದು ವಿಚಾರಿಸುತ್ತೇವೆ. ಆದರೆ ಈ ಉಭಯ ಕುಶಲೋಪರಿಯೆಲ್ಲ ಕೊರಳಿನ ಮೇಲಣ ಮಾತಿನಂತೆ ವ್ಯಕ್ತವಾಗುತ್ತದೆ.

ಇತ್ತೀಚೆಗೆ ವಿದ್ಯುನ್ಮಾನ ಜಾಲತಾಣಗಳು ಬಂದ ಮೇಲಂತೂ ಎದುರು ಸಿಕ್ಕಿವನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳದೆ ವಾಟ್ಸ್‌ಆ್ಯಪ್, ಇಲ್ಲವೇ ಫೇಸ್‌ಬುಕ್ (ಗಣ್ಯರಾದರೆ ಟ್ವಿಟರ್)ಗಳಲ್ಲಿ ನಮ್ಮ ಇರವನ್ನು ತೋರಿಸಿಕೊಂಡು ಶುಭಾಶಯಗಳನ್ನು ವಿನಿಮಯಮಾಡಿಕೊಳ್ಳುತ್ತೇವೆ. ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಜಾಲತಾಣಗಳಿಗೂ, ಜಾಲತಾಣಗಳಲ್ಲಿ ಬಂದ ಸುದ್ದಿಯನ್ನು ಪತ್ರಿಕೆಗೂ ಬಿಡುಗಡೆ ಮಾಡುತ್ತೇವೆ. ಡಾ.ಫಾಸ್ಟಸ್ ನಾಚುವಷ್ಟು ನಮ್ಮ ಕುರಿತು, ನಮ್ಮ ಇಷ್ಟಾನಿಷ್ಟಗಳ ಕುರಿತು, ಬದುಕಿನ, ಜಗತ್ತಿನ ಎಲ್ಲ ಸುಖಭೋಗಗಳು, ಪ್ರಶಸ್ತಿ-ಪ್ರಸಿದ್ಧಿಗಳು ನಮಗೆ ಮತ್ತು ನಮಗೆ ಮಾತ್ರ ದೊರಕಬೇಕೆಂಬಷ್ಟು ಸ್ವಕೇಂದ್ರಿತವಾಗಿದ್ದೇವೆ. ಯಾವ ವೇದಿಕೆಯಲ್ಲೂ ನಮಗೆ ಯಾವುದೇ ವಿಷಯವನ್ನು ನೀಡಲಿ, ಅದರ ಕುರಿತು ಮಾತನಾಡುವುದಕ್ಕಿಂತ ಹೆಚ್ಚಾಗಿ ನಮ್ಮ ಕುರಿತು ಹೇಳುತ್ತೇವೆ. ಒಳ್ಳೆಯ ಸಮಯ-ಸಂದರ್ಭಗಳೆಲ್ಲ ನಮ್ಮ ಕಡೆಗೇ ಹರಿಯಬೇಕೆಂಬುದನ್ನು ಬಯಸಿ ಅದು ಸಿಕ್ಕದಾಗೆಲ್ಲ ದಾರ್ಶನಿಕ ಠೀವಿಯಲ್ಲಿ ಟೀಕಿಸುತ್ತೇವೆ. ಹಸುಗಳೂ ಆಡು-ಕುರಿಗಳೂ ನಾಯಿ-ಬೆಕ್ಕುಗಳೂ ಕಲಾರೂಪಕ ಗಳಾಗುತ್ತಿವೆಯೇ ಹೊರತು ನಮ್ಮ ಜೀವನದ ಅವಿನಾಭಾವವಾಗುತ್ತಿಲ್ಲ. ಹಳ್ಳಿಯೆಂಬುದು, ಸರಳ ಬದುಕೆಂಬುದು ವಸ್ತುಗಳಾಗುತ್ತಿವೆ. ಅವನ್ನು ಕೇಂದ್ರೀಕರಿಸಿ ಉತ್ಪಾದನೆಯಾಗುತ್ತಿರುವ ಎಲ್ಲ ಸೃಜನಶೀಲತೆಯೂ ಯಂತ್ರ-ತಂತ್ರಗಳ ಮುಖೇನ ಬದುಕುತ್ತಿವೆ. ಹಳೆಯದೆಲ್ಲ ಒಳ್ಳೆಯದೆಂದೇನೂ ಅಲ್ಲ ಅಥವಾ ನಾವಿರುವ ಊರೇ ಸರ್ವಶ್ರೇಷ್ಠವೆಂದಲ್ಲ. ಅಲ್ಲೂ ಲೋಪದೋಷಗಳಿದ್ದವು.

ಅನಾರೋಗ್ಯವೆಂದರೆ ಸಾಕು ಸಾವೇ ಗತಿಯೇನೋ ಎಂಬಂತೆ ಆರೋಗ್ಯ ಕವಚ ದುರ್ಲಭವಾಗಿತ್ತು. ಹೆರಿಗೆಯಲ್ಲಿ ತಾಯಿ ಮಗು ಇವರಲ್ಲಿ ಒಬ್ಬರು ಉಳಿದರೂ ಸಾಕೆಂದು ಪ್ರಾರ್ಥನೆ ಮಾಡುತ್ತಿದ್ದದ್ದೂ ಇತ್ತೆಂದು ಕೇಳಿದ್ದೇನೆ. ಇನ್ನೊಬ್ಬರಿಗೆ ತೊಂದರೆ ಕೊಡುವವರು ಇದ್ದರಾದರೂ ಪರೋಪಕಾರವೇ ಪುಣ್ಯ, ಪರಪೀಡನೆ ಪಾಪ ಎಂಬುದನ್ನು ಆದರ್ಶವಾಗಿ ಸಮಾಜ ಗ್ರಹಿಸಿದಂತಿದ್ದು ಕೇಡು ಎಲ್ಲೆಡೆ ಪ್ರಚಲಿತವಿದ್ದರೂ ಅದೊಂದು ಋಣಾತ್ಮಕ ಮತ್ತು ಅಪವಾದದಂತಿತ್ತು. ಅದಕ್ಕೊಂದು ಸೂತ್ರ ಬದ್ಧತೆಯಿತ್ತು. ಹಳೆಯದರ ಕೆಡುಕನ್ನು ನಿವಾರಿಸುವ ಬದಲು ಹಳೆಯದನ್ನೆಲ್ಲ ಅಳಿಸಿಹಾಕು ವುದೇ ಆಧುನಿಕತೆಯೆಂಬಂತೆ ಬದುಕುತ್ತಿದ್ದೇವೆ. ರೋಗನಿವಾರಣೆಗೆ ರೋಗಿಯನ್ನೇ ಕೊಲ್ಲುವ ಈ ವಿದ್ಯಮಾನದಲ್ಲಿ ಬದುಕು ಬಡವಾಗಿದೆ.

ಇದಕ್ಕೆ ಪರಿಹಾರವನ್ನು ಚಿಂತಿಸುವವರೂ ಇಲ್ಲದಾಗಿರುವಾಗ ಮತ್ತು ತಮ್ಮ ಹಾಡು-ಪಾಡೇ ಜಗತ್ತಿನ ಹಾಡು-ಪಾಡು ಎಂಬಂತೆ ಮನುಷ್ಯರು ವ್ಯವಹರಿಸುತ್ತಿರುವಾಗ ಮತ್ತು ಅಂತಹ ವ್ಯವಹಾರವೇ ಬದುಕಾಗಿ ಪರಿಣಮಿಸಿರುವಾಗ ಪರಿಹಾರವು ದೊರಕುವುದಾದರೂ ಹೇಗೆ? ಅಲ್ಲೋ ಇಲ್ಲೋ ಕೆಲವರು ಪ್ರಯೋಗಶೀಲರಾಗಿ ದೇಸಿ ಬದುಕಿಗೆ ನೀರೆರೆಯುತ್ತಿರು ವರಾದರೂ ಅದು ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆಯಾಗಿದೆ.

ತನ್ನ-ತಮ್ಮ ನೆಲ ಮತ್ತು ನೆಲೆಯನ್ನು ಜನರು ಬಿಟ್ಟುಹೋಗುತ್ತಿರುವುದ ರಿಂದಾಗಿಯೇ ಇಂತಹ ಪರಿವರ್ತನೆಗಳೂ ವ್ಯತ್ಯಸ್ತತೆಗಳೂ ಸಂಭವಿಸುತ್ತವೆ ಯೆಂದು ಹೇಳುವುದು ತೀರ ಸರಳ ವಾದವಾಗಬಹುದು. ಆದರೆ ಈ ದೇಶದ ನಾಗರಿಕತೆ ಹರಿದು ಬಂದ ರೀತಿಯನ್ನು ಗಮನಿಸಿದರೆ ಇದು ಕೃಷಿ ಪ್ರಧಾನ ಮತ್ತು ಪ್ರಾಕೃತಿಕ ಸಂಪತ್ತಿನ ದೇಶವಾಗಿದ್ದು ಅದರ ಹರಣವಾಗದಿರುವುದೇ ಮತ್ತು ಪೋಷಣೆಯೇ ಅದನ್ನು ಉಳಿಸಿಕೊಂಡು ಬಂದ ವಿಧಾನವಾಗಿತ್ತೆಂದು ಕಾಣಿಸುತ್ತದೆ. ಆದರೆ ದೇಶದ ಜನರೆಲ್ಲ ಹಳ್ಳಿಯಿಂದ ಪಟ್ಟಣಕ್ಕೆ, ಪಟ್ಟಣದಿಂದ ಮಹಾ ನಗರಗಳಿಗೆ, ಮಹಾನಗರಗಳಿಂದ ವಿದೇಶಗಳಿಗೆ ಹೀಗೆ ವಲಸೆ ಹೋಗುತ್ತಿರುವಾಗ ಸಹಜವಾಗಿಯೇ ಹೊಕ್ಕುಳುಬಳ್ಳಿ, ಬೇರುಗಳನ್ನು ಕಡಿದುಕೊಳ್ಳಬೇಕಾಗುತ್ತದೆ. ನೆಲೆ-ನೆಲ ಒಂದು ಫ್ಯಾಷನ್ ಆಗಿ ಮಾತ್ರ ಉಳಿಯುತ್ತದೆ. ಗ್ರಾಮೀಣ ಪರಿಸರವೆಂಬುದು ಒಂದು ವಿಶ್ರಾಂತಿಯ ತಾತ್ಕಾಲಿಕ ತಂಗುದಾಣವಾಗಿ ಉಳಿಯುತ್ತದೆ. ಕ್ರಮೇಣ-ಅಲ್ಲ, ಈಗಲೇ- ನಗರಗಳಲ್ಲಿರುವ ಅನೇಕ ವಿದ್ಯಾವಂತ ಉದ್ಯೋಗಿಗಳು, ವೃತ್ತಿಪರರು ತಮ್ಮ ಮನೆಗಳಲ್ಲೇ ಅತಿಥಿನಟರಂತೆ ಬಂದುಹೋಗುವುದನ್ನು ಎಲ್ಲೆಡೆ ಕಾಣಬಹುದು.

ಆರಾಮಕುರ್ಚಿ ಪ್ರಯಾಣಿಕರಂತೆ ಆರಾಮಕುರ್ಚಿ ಚಿಂತಕರಿರುವಾಗ ಎಲ್ಲ ನೋವುಗಳನ್ನು ಶಮನಗೊಳಿಸುವ ಸಂಜೀವಿನೀ ಮಾತುಗಳು ಅಲಭ್ಯವಲ್ಲ. ಒಬ್ಬೊಬ್ಬರು ತಮ್ಮ ನೋವುಗಳನ್ನು ಗುಟ್ಟಾಗಿ ಹೇಳಬಹುದೇ ವಿನಾ ಇದನ್ನು ಎಲ್ಲರಿಂದ ನಿರೀಕ್ಷಿಸಲಾಗದು. ತೋರಿಕೆಯೇ ಬದುಕಾಗಿ ಪರಿಣಮಿಸಿದ ಈ ಕಾಲದಲ್ಲಿ ಶೂಲದ ಮೇಲೆ ಕುಳಿತವನೂ ತಾನು ಸುಖವಾಗಿದ್ದೇನೆಂದು ಹೇಳುವುದು ಅಚ್ಚರಿ ತರುವುದಿಲ್ಲ. ಒಳ್ಳೆಯದನ್ನೂ ಹುಡುಕುತ್ತ ಹೋಗಬಹುದು; ಹಾಗೆಯೇ ಕೆಡುಕನ್ನೂ ಅರಸುತ್ತ ಹೋಗಬಹುದು. ನಮ್ಮ ದೇವರುಗಳು ಎಲ್ಲದಕ್ಕೂ ವರಗಳನ್ನು ನೀಡುತ್ತಾರೆ. ಇದಕ್ಕೆ ಕೊನೆಯೆಂಬುದೇ ಇರಲಾರದು.

ತಲೆಮಾರುಗಳುದ್ದಕ್ಕೂ ಈ ಅನ್ವೇಷಣೆ ನಡೆಯುತ್ತಲೇ ಇರುತ್ತದೆ. ಓಡಿ ಬಸವಳಿದಾಗ ತನ್ನ ಕೈಯ ರಿಲೇ ಕೋಲನ್ನು ಮುಂದೆ ಕಾದು ನಿಂತವನಿಗೆ ವರ್ಗಾಯಿಸುವುದರ ಹೊರತು ಮನುಷ್ಯನಿಗೆ ಇನ್ನೇನೂ ಉಳಿಯುವುದಿಲ್ಲ. ಇಂದು ಆಧುನಿಕವಾಗಿ ಕಾಣುವ ಜಗತ್ತು ಇನ್ನೊಂದು ಕಾಲದಲ್ಲಿ ಪುರಾತನವಾಗಿ ಕಾಣುವಾಗ ಅಳಲೂ ಒಂದು ಸ್ಥಾಯೀಭಾವವಾಗಿ ಎಲ್ಲ ಕಾಲ, ದೇಶಗಳನ್ನೂ ಕಾಡಿದರೆ ತಪ್ಪಿಲ್ಲ; ಅಚ್ಚರಿಯಿಲ್ಲ; ವಿಶೇಷವಿಲ್ಲ; ಅದು ವಿಚಿತ್ರವೂ ಅಲ್ಲ. ಕೃತಕತೆ ಸಹಜತೆಯಾಗಿ ಪರಿಣಮಿಸುವ ಬಗೆಯೇ ಹೀಗೆ. ಆದಿಯಿಂದಲೇ ಮನುಷ್ಯ ಕೈಗಳಲ್ಲಿ ನಡೆಯುತ್ತ ಬಂದಿದ್ದರೆ ನಾವಿಂದು ಕಾಲುಗಳೆಂದು ಕರೆಯುವ ದೇಹದ ಭಾಗಗಳು ಕೈಗಳಾಗಿ, ಕೈಗಳು ಕಾಲುಗಳಾಗಿರುತ್ತಿದ್ದವಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)