varthabharthi


ವಿಶೇಷ-ವರದಿಗಳು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ

ಶೋಭಾ-ಜಯಪ್ರಕಾಶ್ ಹೆಗ್ಡೆ ನಡುವೆ ಟಿಕೆಟ್ ಫೈಟ್: ಸಂಸದೆ ವಿರುದ್ಧ ಸ್ವಪಕ್ಷದವರಿಂದಲೇ ಅಪಸ್ವರ

ವಾರ್ತಾ ಭಾರತಿ : 8 Mar, 2019
ಕೆ.ಎಲ್ ಶಿವು

ಚಿಕ್ಕಮಗಳೂರು, ಮಾ.5: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ಹೆಸರಾಗಿದೆ. ಕ್ಷೇತ್ರದಲ್ಲಿ ಈ ಪಕ್ಷಗಳಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರು ಇನ್ನೂ ಅಂತಿಮವಾಗಿಲ್ಲವಾದರೂ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯೇ ಬಿಜೆಪಿ ಅಭ್ಯರ್ಥಿ ಎಂದು ಈಗಾಗಲೇ ಕ್ಷೇತ್ರದಾದ್ಯಂತ ಪುಕಾರೆದ್ದಿದೆ. ಹಾಲಿ ಸಂಸದೆ ಶೋಭಾ ಅವರೇ ಬಿಜೆಪಿ ಅಭ್ಯರ್ಥಿ ಎಂಬುದು ನಿಜವಾದರೆ ಅವರಿಗೆ ಈ ಬಾರಿಯ ಚುನಾವಣೆ ಸುಲಭದ ತುತ್ತಾಗಲಾರದೆಂಬ ಅಭಿಪ್ರಾಯ ರಾಜಕೀಯ ವಿಶ್ಲೇಷಕರದ್ದಾಗಿದ್ದು, ಶೋಭಾ ಅವರಿಗೆ ಸ್ವಪಕ್ಷೀಯರೇ ಮಗ್ಗುಲು ಮುಳ್ಳಾಗಲಿದ್ದಾರೆಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರುತ್ತಿದೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ್ದ ಕ್ಷೇತ್ರ ಎಂಬ ಹೆಗ್ಗಳಿಕೆ ಚಿಕ್ಕಮಗಳೂರು ಜಿಲ್ಲೆಗಿದೆ. ಈ ಹಿಂದೆ ಚಿಕ್ಕಮಗಳೂರು ಕಾಂಗ್ರೆಸ್‍ನ ಭದ್ರಕೋಟೆಯಾಗಿತ್ತು. ಕ್ರಮೇಣ ಈ ಕ್ಷೇತ್ರ ಕಮಲ ಪಾಳಯದ ತೆಕ್ಕೆಗೆ ಹೊರಳಿದ್ದು, ಸದ್ಯ ಬಿಜೆಪಿಯ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಸತತ ಗೆಲುವು ಕಾಣುತ್ತಿರುವ ಬಿಜೆಪಿಗೆ ಈ ಬಾರಿ ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಗೆಲುವು ಸುಲಭದ ತುತ್ತಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ. ಈ ಕಾರಣಕ್ಕೆ ಹಾಲಿ ಸಂಸದೆ ಶೋಭಾ ಅವರನ್ನು ಈ ಬಾರಿಯೂ ಇದೇ ಕ್ಷೇತ್ರದಲ್ಲಿ ಕಣಕ್ಕಿಳಿಸಿದಲ್ಲಿ ಸೋಲು ಖಚಿತ ಎಂಬ ಅಭಿಪ್ರಾಯ ಜಿಲ್ಲೆಯ ಬಿಜೆಪಿ ಪಾಳಯದ್ದಾಗಿದೆ.  ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಹಾಗೂ ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ನೀಡಬೇಕೆಂದು ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿಯ ಒಂದು ಗುಂಪು ಬೇಡಿಕೆ ಇಟ್ಟಿದ್ದು, ಸಂಸದೆ ಶೋಭಾ ಅವರಿಗೆ ಈ ಕ್ಷೇತ್ರದಿಂದ ಟಿಕೆಟ್ ನೀಡಬಾರದೆಂದು ಬಿಜೆಪಿ ಮುಖಂಡರೇ ಬಹಿರಂಗವಾಗಿ ಕೂಗೆಬ್ಬಿಸಿದ್ದಾರೆ. ಮತ್ತೊಂದೆಡೆ ಸಂಘಪರಿವಾರದ ಕೆಲ ಕಾರ್ಯಕರ್ತರು ಶೋಭಾ ಅವರೊಂದಿಗೆ ಕೆಲ ಕಾರಣಗಳಿಂದಾಗಿ ಮುನಿಸಿಕೊಂಡಿದ್ದು, ಗೋ ಬ್ಯಾಕ್ ಶೋಭಾ ಎಂಬ ಸಾಮಾಜಿಕ ಜಾಲತಾಣಗಳ ಅಭಿಯಾನವನ್ನೂ ಆರಂಭಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಸದರಾದ ಬಳಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು ವಿರಳ. ರಾಷ್ಟ್ರ ರಾಜಕಾರಣದಲ್ಲೇ ಮುಳುಗಿದ್ದ ಅವರು, ಕ್ಷೇತ್ರ ವ್ಯಾಪ್ತಿಯ ಎರಡೂ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿಲ್ಲ. ಜನರ ಸಮಸ್ಯೆಗಳಿಗೂ ಸ್ಪಂದಿಸಿಲ್ಲ. ಸಂಘಪರಿವಾರದವರು ಪೊಲೀಸ್ ಕೇಸ್‍ಗಳಲ್ಲಿ ಸಿಲುಕಿಕೊಂಡಾಗಲೂ ಸ್ಪಂದಿಸಿಲ್ಲ ಎಂಬ ಆರೋಪ ಬಿಜೆಪಿಯ ಒಂದು ಗುಂಪಿನದ್ದಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ವ್ಯಾಪ್ತಿಯಲ್ಲಿ ಅತೀವೃಷ್ಟಿಯಿಂದಾಗಿ ಸಾಕಷ್ಟು ಪ್ರಾಣ ಹಾನಿಯಾಗಿದ್ದು, ನೂರಾರು ಮಂದಿಯ ಮನೆ, ಆಸ್ತಿ, ಜಮೀನುಗಳಿಗೆ ಹಾನಿಯಾಗಿತ್ತು. ಈ ಸಂದರ್ಭದಲ್ಲಿ ಸಂಸದೆ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಅತೀವೃಷ್ಟಿ ಹಾನಿಯಾದಾಗ ಸ್ಥಳ ಪರಿಶೀಲಿಸದೇ ದಿಲ್ಲಿ ರಾಜಕಾರಣದಲ್ಲಿ ಮುಳುಗಿದ್ದರು. ಕೇಂದ್ರದಿಂದ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಒದಗಿಸುವಲ್ಲೂ ನಿರ್ಲಕ್ಷ್ಯ ವಹಿಸಿದ್ದರೆಂಬ ಗಂಭೀರ ಆರೋಪ ಶೋಭಾ ಅವರ ಮೇಲಿದೆ.

ಇನ್ನು ಅತೀವೃಷ್ಟಿ ಸಂದರ್ಭ ಕಾಫಿ, ಕಾಳು ಮೆಣಸು, ಅಡಿಕೆ ಬೆಳೆಗಳು ನೆಲಕಚ್ಚಿದ್ದು, ಕಾಫಿ, ಅಡಿಕೆ ಬೆಳೆಗಾರರು ಕೇಂದ್ರದಿಂದ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದರು. ಆದರೆ ಕೇಂದ್ರದಿಂದ ಬಿಡಿಗಾಸು ಪರಿಹಾರ ಧಕ್ಕಿಲ್ಲ. ಇನ್ನು ಕಾಳುಮೆಣಸು ಬೆಲೆ ಪಾತಾಳಕ್ಕಿಳಿದಿದ್ದು, ವಿದೇಶಿ ಕಾಳುಮೆಣಸು ಆಮದು ನಿಯಂತ್ರಣಕ್ಕೆ ಒತ್ತಾಯಿಸಿ ಪದೇಪದೇ ಕೇಂದ್ರದ ಬಳಿ ನಿಯೋಗ ತೆರಳಿ ಒತ್ತಾಯಿಸಿದ್ದರು. ಈ ನಿಯೋಗಕ್ಕೆ ಸ್ವತಃ ಸಂಸದೆ ಶೋಭಾ ನೇತೃತ್ವ ವಹಿಸಿದ್ದರು. ಆದರೆ ಬೆಳೆಗಾರರ ಮನವಿಗೆ ಕೇಂದ್ರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಕಪ್ಪು ಚಿನ್ನ ಎಂದೇ ಕರೆಸಿಕೊಳ್ಳುತ್ತಿದ್ದ ಕಾಳು ಮೆಣಸು ಧಾರಣೆ ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸದೆ ಶೋಭಾ ವಿರುದ್ಧ ಬೆಳೆಗಾರರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಸರಕಾರವೊಂದರ ರಚನೆಯಲ್ಲಿ ಕಾಫಿ ಬೆಳೆಗಾರರ ಪಾತ್ರ ನಿರ್ಲಕ್ಷ್ಯ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಪ್ರಭಾವ ಹೊಂದಿರುವ ಬೆಳೆಗಾರರ ಕೃಪಾಕಟಾಕ್ಷ ಈ ಬಾರಿ ಬಿಜೆಪಿಗೆ ಧಕ್ಕುವುದು ಕಷ್ಟ ಎನ್ನಲಾಗುತ್ತಿದೆ.

ಈ ಹಿಂದೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು 'ಶೋಭಾ ಗೋಬ್ಯಾಕ್' ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಶೋಭಾ ಕರಂದ್ಲಾಜೆ ಅವರು ಮತ್ತೊಮ್ಮೆ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ವಿರೋಧ ವ್ಯಕ್ತಪಡಿಸಿದ್ದಾರೆ. ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಹಿರಂಗವಾಗಿ ಪ್ರತ್ಯೇಕವಾಗಿ ಸಭೆ ನಡೆಸಿ ಹಕ್ಕೊತ್ತಾಯದ ಮೂಲಕ ಬಿಜೆಪಿ ವರಿಷ್ಟರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿದೆ.

ಇದೆಲ್ಲದರ ನಡುವೆ ಸಂಸದೆ ಶೋಭಾ ಕರಂದ್ಲಾಜೆ ಇದ್ಯಾವುದಕ್ಕೂ ತಲೆ ಕಡಿಸಿಕೊಳ್ಳುತ್ತಿಲ್ಲ. ತಾನೇ ಅಭ್ಯರ್ಥಿ ಎಂಬಂತೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆಪದಲ್ಲಿ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಇದೇ ವೇಳೆ ಸಂಸದೆಯಾಗಿ ಗೆದ್ದು ಹೋದವರು ಚುನಾವಣೆ ಸಂದರ್ಭ ಕಾಣಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಕೆಲವೆಡೆ ಸಂಸದೆ ವಿರುದ್ಧ ಪ್ರತಿಭಟನೆಗಳೂ ನಡೆದಿವೆ. ಒಟ್ಟಿನಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‍ಗೆ ಹಾಲಿ ಸಂಸದೆ ಹಾಗೂ ಎರಡೂ ಜಿಲ್ಲೆಗಳಲ್ಲೂ ಜನಪ್ರಿಯರಾಗಿರುವ ಉತ್ತಮ ಸಂಸದೀಯ ಪಟು ಜಯಪ್ರಕಾಶ್ ಹೆಗ್ಡೆ ನಡುವೆ ಪೈಪೋಟಿ ಏರ್ಪಟ್ಟಿದ್ದು, ಶೋಭಾ ಅವರೇ ಅಭ್ಯರ್ಥಿ ಎನ್ನಲಾಗುತ್ತಿದೆಯಾದರೂ ಅಂತಿಮವಾಗಿ ಟಿಕೆಟ್ ಯಾರ ಪರ ವಾಲಲಿದೆ ಎಂಬುದು ಕತೂಹಲಕ್ಕೆ ಕಾರಣವಾಗಿದೆ.

ಇನ್ನು ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಮೈತ್ರಿಯೊಂದಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಜೆಡಿಎಸ್ ಮತಗಳು, ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳೊಂದಿಗೆ ಸಂಸದೆ ಶೋಭಾ ಅವರ ವಿರೋಧಿ ಅಲೆಯನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಈ ಬಾರಿ ಕ್ಷೇತ್ರ ಕಾಂಗ್ರೆಸ್‍ಗೆ ಸಲಭವಾಗಿ ತುತ್ತಾಗಲಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಇನ್ನೂ ಖಚಿತವಾಗಿಲ್ಲ. ಕಾಂಗ್ರೆಸ್‍ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಮಾಜಿ ಸಚಿವರಾದ ವಿನಯ್‍ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಬೇಗಾನೆ ರಾಮಯ್ಯ ಪುತ್ರಿ ಹಾಗೂ ಅನಿವಾಸಿ ಭಾರತೀಯರ ಸಂಘದ ಅಧ್ಯಕ್ಷೆ ಆರತಿ ಕೃಷ್ಣ ಮತ್ತು ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಎಲ್.ವಿಜಯ್‍ಕುಮಾರ್ ಟಿಕೆಟ್ ಆಕಾಂಕ್ಷಿಗಳ ರೇಸ್‍ನಲ್ಲಿದ್ದಾರೆ. ಈ ಪೈಕಿ ಇಬ್ಬರು ಚಿಕ್ಕಮಗಳೂರಿನವರಾದ ಆರತಿ ಕೃಷ್ಣ ಹಾಗೂ ಡಿ.ಎಲ್.ವಿಜಯ್‍ಕುಮಾರ್ ಯಾರೆಂಬುದೇ ಎರಡೂ ಜಿಲ್ಲೆಗಳಲ್ಲಿ ಹೆಚ್ಚು ಜನರಿಗೆ ತಿಳಿದೇ ಇಲ್ಲ. ಆರತಿ ಕೃಷ್ಣ ಬೇಗಾನೆ ರಾಮಯ್ಯ ಪುತ್ರಿ ಎಂಬ ಅರ್ಹತೆ ಮಾತ್ರ ಹೊಂದಿರುವವರಾಗಿದ್ದರೆ, ವಿಜಯ್‍ ಕುಮಾರ್ ರಾಜಕೀಯದಲ್ಲಿ ಹೆಚ್ಚು ಪಳಗಿದವರಲ್ಲ. ಅವರ ರಾಜಕಾರಣ ಚಿಕ್ಕಮಗಳೂರಿಗೆ ಮಾತ್ರ ಸೀಮಿತವಾಗಿದೆ. ಇನ್ನು ಮಾಜಿ ಸಚಿವರಾದ ಸೊರಕೆ ಹಾಗೂ ಮಧ್ವರಾಜ್ ರಾಜಕಾರಣದಲ್ಲಿ ಪಳಗಿದವರಾಗಿದ್ದು, ಎರಡೂ ಕ್ಷೇತ್ರದಲ್ಲೂ ಪರಿಚಿತರಾಗಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ತನ್ನ ರಾಜಕೀಯ ತಂತ್ರಗಾರಿಕೆಯಡಿಯಲ್ಲಿ ಮಾಜಿ ಸಚಿವರಾದ ವಿನಯ್‍ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಬೇಗಾನೆ ರಾಮಯ್ಯ ಪುತ್ರಿ ಹಾಗೂ ಅನಿವಾಸಿ ಭಾರತೀಯರ ಸಂಘದ ಅಧ್ಯಕ್ಷೆ ಆರತಿ ಕೃಷ್ಣ ಮತ್ತು ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಎಲ್.ವಿಜಯ್‍ಕುಮಾರ್ ಪೈಕಿ ಯಾರನ್ನು ಕಣಕ್ಕಿಳಿಸುತ್ತದೆ ಅಥವಾ ಹೊಸಮುಖಕ್ಕೆ ಮಣೆ ಹಾಕಲಿದೆಯೋ, ಇಲ್ಲವೇ ಬಿಜೆಪಿ ಟಿಕೆಟ್ ವಂಚಿತರಾದಲ್ಲಿ ಜಯಪ್ರಕಾಶ್ ಹೆಗ್ಡೆ ಅವರನ್ನೇ ಅಭ್ಯರ್ಥಿ ಮಾಡಲಿದೆಯೇ ಎಂಬುದು ಕ್ಷೇತ್ರದ ಮತದಾರರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಕುತೂಹಲವಾಗಿದೆ. ಕಾಂಗ್ರೆಸ್‍ಗೆ ಈ ಬಾರಿ ಜೆಡಿಎಸ್‍ನ ಸಾಥ್ ಇರುವುದರಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿದಲ್ಲಿ ನಿರಾಯಾಸ ಗೆಲುವ ನಿಶ್ಷಿತ, ಆದರೆ ಅಸಮರ್ಥ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದರೆ ಬಿಜೆಪಿ ಗೆಲುವಿಗೆ ಅಭ್ಯರ್ಥಿ ಆಯ್ಕೆ ವಿಚಾರವೇ ಪ್ಲಸ್ ಪಾಯಿಂಟ್ ಆಗಲಿದೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿದೆ.

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕ್ಷೇತ್ರಲ್ಲಿ ಅಸಮಾದಾನ ಇರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಈ ಸಂಬಂಧ ಬಿಜೆಪಿಯಲ್ಲೊಂದು ಗುಂಪು ಸಿಡಿದು ನಿಂತಿದ್ದು, ಕಾಂಗ್ರೆಸ್ಸಿನ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಈ ಬಾರಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಲು ಮಾ.1ರಂದು ಚಿಕ್ಕಮಗಳೂರಿನ ನಗರಸಭೆ ಅಧ್ಯಕ್ಷೆ ಮನೆಯಲ್ಲಿ ಪ್ರತ್ಯೇಕ ಸಭೆ ನಡೆಸಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ. ನಗರಸಭಾಧ್ಯಕ್ಷೆ ಶಿಲ್ಪಾರಾಜಶೇಖರ್ ಅವರು ಅಂದು ಸಂಜೆ ಆಯೋಜನೆಗೊಂಡಿದ್ದ, ಬಹುತೇಕ ಶಾಸಕ ಸಿ.ಟಿ.ರವಿ ಅವರ ಆಪ್ತರೇ ಇದ್ದ ಸಭೆಯಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಕೂಡ ಭಾಗಿಯಾಗಿದ್ದರು. ಅಲ್ಲದೇ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೋಭಾ ವಿರುದ್ಧ ಬಿಜೆಪಿಯಲ್ಲೇ ಅಸಮಾದಾನ ಇರುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.

ಸಭೆಯಲ್ಲಿ ನಗರಸಭಾಧ್ಯಕ್ಷೆ ಶಿಲ್ಪಾ ರಾಜಶೇಖರ್, ಮಾಜಿ ಅಧ್ಯಕ್ಷರಾದ ಎಚ್.ಡಿ.ತಮ್ಮಯ್ಯ, ಕೋಟೆಕೃಷ್ಣ, ಪುಷ್ಪರಾಜ್, ದೇವರಾಜಶೆಟ್ಟಿ, ಮುತ್ತಯ್ಯ, ಸದಸ್ಯರುಗಳಾದ ಗವನಹಳ್ಳಿ ಶ್ರೀನಿವಾಸ್, ಅಫ್ಸರ್ ಅಹ್ಮದ್, ಜಿಪಂ ಸದಸ್ಯ ಸೋಮಶೇಖರ್, ತಾಪಂ ಸದಸ್ಯರಾದ ಶಿರವಾಸೆ ರಮೇಶ್, ಹೊಸಪೇಟೆ ಸುರೇಶ್, ಜಿಪಂನ ಮಾಜಿ ಸದಸ್ಯ ನಿರಂಜನ್, ಎಪಿಎಂಸಿ ಮಾಜಿ ಅಧ್ಯಕ್ಷ ಕವೀಶ್ ಸೇರಿದಂತೆ ಸುಮಾರು ನೂರೈವತ್ತಕ್ಕೂ ಹೆಚ್ಚು ಮಂದಿ ಬಿಜೆಪಿ ಮುಖಂಡರುಗಳು ಭಾಗಿಯಾಗಿದ್ದರು. ಇವರೆಲ್ಲರೂ ಶಾಸಕ ಸಿ.ಟಿ.ರವಿ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದು, ಸಿ.ಟಿ ರವಿ ಅವರೂ ಸಂಸದೆ ಶೋಭಾ ಮತ್ತೆ ಈ ಕ್ಷೇತ್ರದಿಂದ ಅಭ್ಯರ್ಥಿಯಾಗುವುದರ ವಿರುದ್ಧ ಇದ್ದಾರೆ. ಇದನ್ನು ಬಹಿರಂಗವಾಗಿ ತೋರಿಸಿಕೊಳ್ಳುತ್ತಿಲ್ಲ ಎಂದು ಬಿಜೆಪಿ ಮೂಲಗಳೇ ತಿಳಿಸಿವೆ.

ಈ ಮುಖಂಡರೊಂದಿಗೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಸಂವಾದ ನಡೆಸಿದ್ದು, ತಮಗೆ ಬಿಜೆಪಿ ಟಿಕೆಟ್ ದೊರೆತರೆ ಗೆಲ್ಲುವ ಅವಕಾಶಗಳು ಹಾಗೂ ಮುಖಂಡರ ಸಹಕಾರ ಕುರಿತು ಅಂದಿನ ಸಭೆಯಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲಾ ಮುಖಂಡರುಗಳು ಜಯಪ್ರಕಾಶ್ ಹೆಗ್ಡೆ ಅವರು ಟಿಕೆಟ್ ಪಡೆದು ಬಂದರೆ ರಾಜ್ಯದಲ್ಲೇ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ಜಯಪ್ರಕಾಶ್ ಹೆಗ್ಡೆ ಅವರೂ ಸಂತುಷ್ಟರಾಗಿದ್ದು, ಬಿಜೆಪಿ ಟಿಕೆಟ್ ತನಗೇ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ತಾನು ಬಿಜೆಪಿ ಟಿಕೆಟ್ ಆಕಾಂಕ್ಷಿ. ಅಂತೆಯೇ ಹಾಲಿ ಸಂಸದೆ ಶೋಭಾ ಅವರೂ ಆಕಾಂಕ್ಷಿಯಾಗಿದ್ದಾರೆ. ವರಿಷ್ಠರು ಯಾರಿಗೂ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ. ಆ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ.
- ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಟಿಕೆಟ್ ಆಕಾಂಕ್ಷಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)