varthabharthi

ಸಿನಿಮಾ

ಕಾಲೇಜ್ ರಂಗಿನ ಜೊತೆಗೆ ಅಮಾಯಕ ಗ್ಯಾಂಗು

ವಾರ್ತಾ ಭಾರತಿ : 10 Mar, 2019

ಜಗ್ಗೇಶ್ ಪುತ್ರ ಯತಿರಾಜ್ ನಾಯಕರಾಗಿರುವ ಚಿತ್ರ ಎನ್ನುವ ಕಾರಣಕ್ಕೆ ಮನಸೆಳೆದಂಥ ಸಿನೆಮಾ ಗೋಸಿಗ್ಯಾಂಗ್. ಹೆಸರಿನಲ್ಲೇ ಏನೋ ಹುಡುಗಾಟದ ಕತೆ ಎಂಬ ಸೂಚನೆಯನ್ನು ನೀಡುವಂತಿದ್ದರೂ ಅದರಲ್ಲೇ ಒಂದು ಗಂಭೀರವಾದ ಸಮಾಚಾರ ವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ.

ಅಜಯ್, ರೋಹಿತ್, ಮಂಜು ಎನ್ನುವ ಮೂರು ಮಂದಿ ಹಳ್ಳಿ ಹುಡುಗರು ಬೆಂಗಳೂರಿನ ಕಾಲೇಜ್‌ಗೆ ಬಂದಾಗ ಏನು ಘಟನೆ ನಡೆಯುತ್ತದೆ ಎನ್ನುವುದನ್ನು ಚಿತ್ರ ಸೊಗಸಾಗಿ ಹೇಳಿದೆ. ಹಳ್ಳಿಯಲ್ಲಿ ಈ ಮೂರು ಮಂದಿ ಹುಡುಗರು ಬಾಲ್ಯ ಕಾಲದಿಂದಲೇ ಮಾಡುವ ಉಪದ್ರಗಳು ಮತ್ತು ಅದರಿಂದ ರೋಸಿ ಹೋದ ಶಿಕ್ಷಕರು ಮಕ್ಕಳನ್ನು ಪುಟಗೋಸಿಯಲ್ಲಿ ನಿಲ್ಲಿಸುವುದು ಮತ್ತು ಮೇಲೆ ಈ ಮೂರು ಮಂದಿ ಹುಡುಗರ ತಂಡಕ್ಕೆ ಗೋಸಿ ಗ್ಯಾಂಗ್ ಎನ್ನುವ ಹೆಸರು ಬೀಳುವುದು ನಿರ್ದೇಶಕರು ಚಿತ್ರದ ಶೀರ್ಷಿಕೆಗೆ ನೀಡುವ ಹಿನ್ನೆಲೆಯಾಗಿರುತ್ತದೆ. ಆದರೆ ಈ ಹೆಸರನ್ನು ಇರಿಸಿಕೊಂಡು ಬೆಂಗಳೂರು ಸೇರಿದರೂ ಕೂಡ ಅಲ್ಲಿನ ವಿದ್ಯಾರ್ಥಿಗಳ ನಡುವೆ ಅಮಾಯಕರಂತೆ ಇರಬೇಕಾಗುತ್ತದೆ. ಆದರೆ ಅವರ ಅಮಾಯಕತ್ವ ಎಲ್ಲಿಯವರೆಗೆ ಕರೆದೊಯ್ಯುತ್ತದೆ ಎನ್ನುವುದನ್ನು ಚಿತ್ರ ನೋಡಿಯೇ ತಿಳಿಯಬೇಕಾಗುತ್ತದೆ.

ಸಿನೆಮಾದಲ್ಲಿ ಮಂಜುವಿನ ಪಾತ್ರಕ್ಕೆ ಜೀವ ತುಂಬಿದ ಕೀರ್ತಿ ಜಗ್ಗೇಶ ಪುತ್ರ ಯತಿರಾಜ್ ಅವರಿಗೆ ಸಲ್ಲುತ್ತದೆ. ಜೊತೆಗೆ ಇಬ್ಬರು ಸ್ನೇಹಿತರಲ್ಲಿ ಒಬ್ಬರಾಗಿ ಹೊಸ ಹೀರೋ ಪಾತ್ರವನ್ನು ಅಜಯ ಕಾರ್ತಿಕ್ ನಿರ್ವಹಿಸಿದ್ದಾರೆ. ಬೆಂಗಳೂರು ಕಾಲೇಜಲ್ಲಿ ಪರಿಚಯವಾದ ಮೂರು ಮಂದಿ ಹುಡುಗಿಯರು ಚಿತ್ರದ ನಾಯಕಿಯರಾಗುತ್ತಾರೆ. ಯತಿರಾಜ್‌ಗೆ ಜೋಡಿಯಾಗಿ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್ ಅಭಿನಯಿಸಿದ್ದಾರೆ. ಹಾಗೆ ನೋಡಿದರೆ ಚಿತ್ರದಲ್ಲಿ ಸೋನು ಸೇರಿದಂತೆ ಯಾವ ನಾಯಕಿಗೂ ಪ್ರಾಮುಖ್ಯತೆ ಇಲ್ಲ. ಆದರೆ ನಾಯಕರ ಜೋಡಿಯಾಗಿ ಆಕರ್ಷಣೆ ನೀಡುವಲ್ಲಿ ಸ್ವಲ್ಪವೂ ಹಿಂದೆ ಬಿದ್ದಿಲ್ಲ. ಒಳ್ಳೆಯ ಥೀಮ್ ಇದ್ದರೂ ಹೆಚ್ಚಿನ ಪಾತ್ರಗಳಿಗೆ ಹೊಸ ಕಲಾವಿದರನ್ನೇ ಆಯ್ಕೆ ಮಾಡಿದ್ದಾರೆ ನಿರ್ದೇಶಕ ರಾಜು ದೇವಸಂದ್ರ. ಬಹುಶಃ ಇಂಥದೊಂದು ತೀರ್ಮಾನಕ್ಕೆ ಬರು ವಲ್ಲಿ ಚಿತ್ರದ ಬಜೆಟ್ ಕೂಡ ಕಾರಣವಾಗಿದ್ದರೆ ಅಚ್ಚರಿಯಿಲ್ಲ. ಖಳನಾಗಿ ನಟಿಸಿದ ಅಪ್ಪು ವೆಂಕಟೇಶ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಅವರ ಸಹಾಯಕರಾಗಿ ಮಂಜು ಮಯೂರ್, ತುಂಟ ವಿದ್ಯಾರ್ಥಿಯಾಗಿ ಗಾಯಕ ಅನಿರುದ್ಧ ಮೊದಲಾದವರ ನಟನೆ ಕೂಡ ಗಮನಾರ್ಹ. ಈ ಎಲ್ಲ ಪಾತ್ರಗಳ ನಡುವೆ ಹುಡುಗರು ಡ್ರಗ್ಸ್ ಜಾಲಕ್ಕೆ ಎಷ್ಟು ಸುಲಭದಲ್ಲಿ ಬೀಳಬಲ್ಲರು ಎನ್ನುವುದನ್ನು ಮನದಟ್ಟಾಗುವ ರೀತಿಯಲ್ಲಿ ಹೇಳಿದ್ದಾರೆ ನಿರ್ದೇಶಕ ರಾಜು ದೇವಸಂದ್ರ. ಕಾಲೇಜ್ ಚಿತ್ರಗಳು ಎಂದೊಡನೆ ಅರ್ಥವಿಲ್ಲದ ಹಾಸ್ಯ ಮತ್ತು ಡಬಲ್ ಮೀನಿಂಗ್ ಸಂಭಾಷಣೆಗಳು ಎನ್ನುವುದರ ಆಚೆ ಹೀಗೂ ಒಂದು ಚಿತ್ರ ಮಾಡಬಹುದು ಎನ್ನುವುದನ್ನು ನಿರ್ದೇಶಕರು ತೋರಿಸಿಕೊಟ್ಟಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಹಿರಿಯ ನಟ ಉಮೇಶ್, ಬ್ಯಾಂಕ್ ಜನಾರ್ದನ್ ಮೊದಲಾದವರ ಪಾತ್ರಗಳು ಅವರ ಇಮೇಜ್ ನಲ್ಲೇ ಉಳಿದುಕೊಂಡು ಬೋರ್ ಹೊಡೆಸುತ್ತವೆ. ಮಕ್ಕಳ ಬೆಳವಣಿಗೆ ಬಗ್ಗೆ ಕಾಳಜಿ ಇರುವ ಹಿರಿಯರು ಮತ್ತು ತಮಗೇ ತಿಳಿಯದಂತೆ ತಮ್ಮನ್ನು ಬಲೆಗೆ ಕೆಡವುವಂಥ ಜಾಲಗಳ ಬಗ್ಗೆ ಎಚ್ಚರಿಕೆ ವಹಿಸಬಹುದಾದ ವಿದ್ಯಾರ್ಥಿಗಳು ನೋಡಬಹುದಾದ ಚಿತ್ರ ಇದು. ಅಂಥದೊಂದು ಎಚ್ಚರಿಕೆಯ ಜೊತೆಗೆ ಆರವ್ ರಿಷಿಕ್ ಸಂಗೀತದ ಹಾಡುಗಳು ಚಿತ್ರಮಂದಿರದಿಂದ ಹೊರಗೆ ಬಂದ ಮೇಲೆಯೂ ನಮ್ಮನ್ನು ಕಾಡುತ್ತವೆ.

►ತಾರಾಗಣ: ಯತಿರಾಜ್, ಸೋನು ಪಾಟೀಲ್

►ನಿರ್ದೇಶಕ: ರಾಜು ದೇವಸಂದ್ರ

►ನಿರ್ಮಾಪಕ: ಕೆ. ಶಿವಕುಮಾರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)