varthabharthi

ರಾಷ್ಟ್ರೀಯ

ಮೂವರು ಸಜೀವ ದಹನ

ಹೊತ್ತಿ ಉರಿದ ಕಾರು: ಹಲವರ ಪ್ರಾಣ ಉಳಿಸಿ ಪತ್ನಿ, ಪುತ್ರಿಯರನ್ನು ಕಳೆದುಕೊಂಡ ಚಾಲಕ

ವಾರ್ತಾ ಭಾರತಿ : 11 Mar, 2019

ಹೊಸದಿಲ್ಲಿ, ಮಾ.11: ಪತ್ನಿ, ಮೂವರು ಪುತ್ರಿಯರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಹಠಾತ್ತಾಗಿ ಕಾರಿಗೆ ಬೆಂಕಿ ಹಿಡಿದಿದ್ದು, ಕೂಡಲೇ ಪ್ರಸಂಗಾವಧಾನತೆ ಮೆರೆದ ಚಾಲಕ ಕಾರನ್ನು ಬದಿಗೆ ಚಲಾಯಿಸಿ ಹಲವು ಜನರ ಪ್ರಾಣ ಉಳಿಸಿದ್ದಾರೆ. ಆದರೆ ಘಟನೆಯಲ್ಲಿ ಇವರ ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ದಿಲ್ಲಿಯಲ್ಲಿ ಈ ಘಟನೆ ನಡೆದಿದೆ.

ಉಪೇಂದ್ರ ಮಿಶ್ರಾ ಎಂಬವರು ಚಲಾಯಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹಿಡಿದಿತ್ತು. ಕಾರನ್ನು ಬದಿಗೆ ಚಲಾಯಿಸಿದ ಮಿಶ್ರಾ ತಮ್ಮ ಒಬ್ಬಳು ಪುತ್ರಿಯೊಂದಿಗೆ ಕಾರಿನಿಂದ ಹೊರಜಿಗಿದಿದ್ದರೆಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಈ ದುರಂತದಲ್ಲಿ ಮಿಶ್ರಾ  ತಮ್ಮ ಪತ್ನಿ ಹಾಗೂ ಇತರ ಇಬ್ಬರು ಪುತ್ರಿಯರನ್ನು ಕಳೆದುಕೊಂಡಿದ್ದಾರೆ. ಅವರೇನಾದರೂ ಬೆಂಕಿಯುಗುಳುತ್ತಿದ್ದ ಕಾರನ್ನು ವಾಹನಗಳಿಂದ ತುಂಬಿದ್ದ ಅಕ್ಷರಧಾಮ್ ಫ್ಲೈಓವರಿನ ನಡುವೆಯೇ ನಿಲ್ಲಿಸಿದ್ದರೆ ಇತರ ವಾಹನಗಳಿಗೂ ಅಪಾಯವುಂಟಾಗುತ್ತಿತ್ತು. ಆದರೆ ಹಾಗೆ ಮಾಡದೆ ವಾಹನವನ್ನು ಬದಿಗೆ ಸರಿಸಿ ನಿಲ್ಲಿಸಲು ಯತ್ನಿಸುವಷ್ಟರ ಹೊತ್ತಿಗೆ ಅವರ ಪತ್ನಿ ಮತ್ತು ಇತರ ಇಬ್ಬರು ಪುತ್ರಿಯರು ಪ್ರಾಣ ಕಳೆದುಕೊಂಡಿದ್ದರು.

ಹಿಂದಿನ ಆಸನದಲ್ಲಿ ಕುಳಿತಿದ್ದ ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ರಕ್ಷಿಸಲು ವಾಹನದ ಹಿಂದಿನ ಬಾಗಿಲನ್ನು ಬೆಂಕಿಯ ನಡುವೆಯೂ ತೆಗೆಯಲು ಮಿಶ್ರಾ ಸತತ ಯತ್ನ ನಡೆಸಿದರೂ ವಿಫಲವಾಗಿದ್ದರು, ಬೆಂಕಿಯ ಉಷ್ಣತೆಯಿಂದ ಕಾರಿನ ಹತ್ತಿರ ಹೋಗಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮಿಶ್ರಾ ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರ ಮೃತದೇಹಗಳು ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ. ವೃತ್ತಿಯಲ್ಲಿ ಚಾಲಕರಾಗಿರುವ ಮಿಶ್ರಾ ಕಾರಿನ ಮಾಲಕರೂ ಆಗಿದ್ದು ಆನ್ಲೈನ್ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಕಂಪೆನಿಯ ತಮ್ಮ ಕೆಲಸಕ್ಕಾಗಿ ಅದನ್ನು ಉಪಯೋಗಿಸುತ್ತಿದ್ದರು. ರವಿವಾರ ತಮ್ಮ ಕುಟುಂಬದೊಂದಿಗೆ ವಿಹಾರಕ್ಕೆಂದು ಹೋಗಿದ್ದಾಗ ಈ ದುರಂತ ಸಂಭವಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)