varthabharthi

ವಿಶೇಷ-ವರದಿಗಳು

ಬಿಹಾರದ ಖಾಕಿ ಕ್ರೌರ್ಯ

ಹೆಬ್ಬೆರಳು, ತೊಡೆಗಳಲ್ಲಿ ಕಬ್ಬಿಣದ ಮೊಳೆ: ಪೊಲೀಸ್ ಕಸ್ಟಡಿಯಲ್ಲಿ ಇಬ್ಬರು ಮುಸ್ಲಿಂ ಯುವಕರ ಭೀಕರ ಹತ್ಯೆ

ವಾರ್ತಾ ಭಾರತಿ : 11 Mar, 2019
newscentral24x7.com, ದೀಪಕ್ ಕುಮಾರ್

ಫೋಟೊ ಕೃಪೆ: newscentral24x7.com

ಅದು ಮಾರ್ಚ್ 8ರ ಶುಕ್ರವಾರ ಸಂಜೆ. ಪೂರ್ವ ಚಂಪರಣ ಜಿಲ್ಲೆಯ ರಾಮ್‍ದಿಹಾ ಗ್ರಾಮ. ಗುಫ್ರಾನ್ ಮೃತಪಟ್ಟು 48 ಗಂಟೆ ಕಳೆದಿತ್ತು. ಅವರ ಮನೆ ಮುಂದೆ ಸೇರಿದ್ದ ಸುಮಾರು 25 ಮಂದಿ ಗುಸು ಗುಸು ಮಾತನಾಡುತ್ತಿದ್ದರು. ಅವರ ಹತ್ತಿರಕ್ಕೆ ತೆರಳಿ ಆಲಿಸಿದಾಗ ಮರುದಿನ ಎಲ್ಲರೂ ಸೀತಾಮರ್ಹಿಗೆ ತೆರಳಲು ಯೋಜಿಸಿದ್ದು ಗೊತ್ತಾಯಿತು. ಸ್ಥಳೀಯ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಇಲ್ಲದ್ದು, ಗ್ರಾಮಸ್ಥರ ಮುನಿಸಿಗೆ ಕಾರಣವಾಗಿತ್ತು. ಇದರಿಂದಾಗಿ ಮೇಲಧಿಕಾರಿಗಳ ಮೇಲೆ ಒತ್ತಡ ಹೇರಲು ಸೀತಾಮರ್ಹಿಗೆ ಹೋಗಲು ಬಯಸಿದ್ದರು.

ಗುಫ್ರಾನ್ ನ ಸೋದರ ಸಂಬಂಧಿ ತನ್ವೀರ್ ಕೂಡಾ ಈ ಗುಂಪಿನಲ್ಲಿದ್ದರು. "ಗುಫ್ರಾನ್ ಅವರ ಮೃತದೇಹಕ್ಕೆ ಸ್ನಾನ ಮಾಡಿಸುತ್ತಿದ್ದಾಗ, ಅವರ ಎರಡೂ ಕಾಲ ಹೆಬ್ಬೆರಳುಗಳಲ್ಲಿ ಕಬ್ಬಿಣದ ಮೊಳೆ ಚುಚ್ಚಿರುವುದು ಕಂಡುಬಂತು. ತೊಡೆಯ ಭಾಗಕ್ಕೂ ಮೊಳೆ ಹೊಡೆಯಲಾಗಿತ್ತು. ಆತನನ್ನು ಕೊಲ್ಲುವ ಉದ್ದೇಶದಿಂದಲೇ ಪೊಲೀಸರು ಆತನನ್ನು ಕರೆದೊಯ್ದಿದ್ದರು. ಚಿತ್ರಹಿಂಸೆ ನೀಡಿ ಆತನನ್ನು ಸಾಯಿಸಲಾಗಿದೆ. ಆತನನ್ನು ನೇರವಾಗಿ ಗುಂಡಿಟ್ಟು ಕೊಂದಿದ್ದರೆ ಚೆನ್ನಾಗಿತ್ತು ಎನಿಸುತ್ತದೆ...ಬಹುಶಃ ಆತನನ್ನು ಖಡ್ಗದಿಂದ ಕತ್ತರಿಸಿದ್ದರೂ ಇಷ್ಟೊಂದು ನೋವಾಗುತ್ತಿರಲಿಲ್ಲ. ಆತ ಸಾಯುವವರೆಗೂ ಕ್ಷಣಕ್ಷಣವೂ ಆತನಿಗೆ ಚಿತ್ರಹಿಂಸೆ ನೀಡಲಾಗಿದೆ" ಎಂದು ಅವರು ವಿವರಿಸಿದರು.

"ಗುಫ್ರಾನ್ ಮೇಲೆ ಯಾವ ಅಪರಾಧ ಪ್ರಕರಣವೂ ಇರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಈ ವಿಚಾರ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ತಿಳಿದಿತ್ತು. ಅವರು ಯಾಕೆ ಒಯ್ದಿದ್ದಾರೆ ಮತ್ತು ಏನು ಉಳಿಸಿದ್ದಾರೆ ಎನ್ನುವುದು ವಿಚಾರವಲ್ಲ. ಇಲ್ಲಿ ಮುಖ್ಯವಾದ ಅಂಶವೆಂದರೆ, ಪೊಲೀಸ್ ಇಲಾಖೆ ಹೇಗೆ ಮಾಹಿತಿಯನ್ನು ತಿರುಚಿ ತಮಗೆ ಬೇಕಾದಂತೆ ಮಾಡುತ್ತಿದೆ ಎನ್ನುವುದು. ಇಲಾಖೆ ಸದಾ ತನ್ನ ರಕ್ಷಣೆಗೆ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತದೆ. ಮೂವರು ವೈದ್ಯರು ಮರಣೋತ್ತರ ಪರೀಕ್ಷೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಆದರೆ ವಾಸ್ತವವೆಂದರೆ, ಮರಣೋತ್ತರ ಪರೀಕ್ಷೆಗೆ ಮುನ್ನ ನಮ್ಮನ್ನು ಕೇಳಲೂ ಇಲ್ಲ. ಗುಫ್ರಾನ್ ರನ್ನು ಆಸ್ಪತ್ರೆಯಲ್ಲಿ ಹುಡುಕಲು ನಮಗೆ ಎರಡು ಗಂಟೆ ಬೇಕಾಯಿತು" ಎಂದು ಭಾರವಾದ ಹೃದಯದಿಂದ ಘಟನೆಯ ವಿವರ ನೀಡಿದರು.

(ಗುಫ್ರಾನ್ ನ ಸೋದರ ಸಂಬಂಧಿ ತನ್ವೀರ್)

ಈ ಘಟನೆಯಲ್ಲಿ ಪೊಲೀಸರ ಪಾತ್ರದ ಬಗ್ಗೆ ಯುವಕರಿಂದ ಹಿಡಿದು ವೃದ್ಧರ ವರೆಗೆ ಎಲ್ಲರಿಗೂ ಸಿಟ್ಟಿದೆ. ಎಲ್ಲರ ಒಕ್ಕೊರಲ ಆಗ್ರಹ ಒಂದೇ; "ಗುಫ್ರಾನ್ ಹಾಗೂ ತಸ್ಲೀಮ್ ಹತ್ಯೆಗೆ ನ್ಯಾಯ ಒದಗಿಸಿ"

ಮಾರ್ಚ್ 5ರಂದು ರಾತ್ರಿ ಸೀತಾಮರ್ಹಿಯಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಅಧಿಕಾರಿಗಳು ಹತ್ಯೆ ಮತ್ತು ಲೂಟಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಮ್‍ದಿಹಾ ಗ್ರಾಮದ ಮೇಲೆ ದಾಳಿ ಮಾಡಿದರು. ಈ ದಾಳಿಯ ವೇಳೆ ಗುಫ್ರಾನ್ ಅಲಾಮ್ (35) ಹಾಗೂ ಮುಹಮ್ಮದ್ ತಸ್ಲೀಂ (30) ಎಂಬವರನ್ನು ಪ್ರಶ್ನಿಸುವ ಸಲುವಾಗಿ ಕರೆದೊಯ್ದರು. ವರದಿಗಳ ಪ್ರಕಾರ ಇಬ್ಬರೂ ದುಮ್ರಾ ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದಾರೆ. ಅವರ ಕುಟುಂಬದವರು ಆಪಾದಿಸುವಂತೆ ಇಬ್ಬರಿಗೂ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ.

ಈ ಘಟನೆ ಮತ್ತು ಒತ್ತಡದ ಬಳಿಕ ಠಾಣಾಧಿಕಾರಿ ಹಾಗೂ ಎಂಟು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಸೀತಾಮರ್ಹಿ ಎಸ್ಪಿ ಡಿ.ಅಮರ್‍ಕೇಶ್ ಅವರನ್ನು ವರ್ಗಾಯಿಸಲಾಗಿದೆ. ವಿಭಾಗೀಯ ಡಿಐಜಿ ಈಗ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ ಈ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎನ್ನುವುದು ಕುಟುಂಬದವರ ವಾದ.

"ಕಾಲು ಸರಿ ಇದ್ದಿದ್ದರೆ ಮಗನನ್ನು ಉಳಿಸಿಕೊಳ್ಳುತ್ತಿದ್ದೆ"

ತಸ್ಲೀಮ್‍ ನ ತಂದೆ ಮುಲಾಝಿಮ್ ಅನ್ಸಾರಿ ಹಾಸಿಗೆ ಹಿಡಿದಿದ್ದಾರೆ. ಅವರ ಸೊಂಟದ ಎಲುಬು ಮುರಿದಿದೆ. ಪೈಜಾಮಾ ಎತ್ತಿ ಅವರು ಗಾಯ ತೋರಿಸಿದರು. "ನನ್ನ ಕಾಲುಗಳು ಸರಿ ಇದ್ದಿದ್ದರೆ ನಾನು ಹೇಗಾದರೂ ಮಾಡಿ ಮಗನನ್ನು ರಕ್ಷಿಸಿಕೊಳ್ಳುತ್ತಿದ್ದೆ. ಆದರೆ ನಾನು ಎಲ್ಲಿಗೂ ಹೋಗುವ ಸ್ಥಿತಿಯಲ್ಲಿಲ್ಲ" ಎಂದು ಹೇಳಿದರು.

ಪೊಲೀಸರು ಮಾರ್ಚ್ 5ರಂದು ನಡೆಸಿದ ದಾಳಿ ಬಗ್ಗೆ ಕೇಳಿದಾಗ, "ಮಂಗಳವಾರ ಮಧ್ಯರಾತ್ರಿ 1.30ರ ಸಮಯ. ಸುಮಾರು 20 ಮಂದಿ ಪೊಲೀಸರು ಬಂದರು. ಅವರ ಪೈಕಿ ಏಳೆಂಟು ಮಂದಿ ಬಾಗಿಲು ಒಡೆದು ಒಳಕ್ಕೆ ನುಗ್ಗಿದರು. ನಮ್ಮ ಮನೆಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದರು. ಅಕ್ಕಿ ಮತ್ತು ಬೇಳೆ ಇದ್ದ ಪಾತ್ರೆಗಳನ್ನೂ ಎಸೆದರು. ತಸ್ಲೀಂ ಆಗ ಮನೆ ಪಕ್ಕದ ಮದರಸದಲ್ಲಿ ನಿದ್ದೆ ಮಾಡುತ್ತಿದ್ದ" ಎಂದು ವಿವರ ನೀಡಿದರು.

newscentral24x7.com ಜತೆಗೆ ಮುಲಾಝಿಮ್ ಅನ್ಸಾರಿ ಮಾತನಾಡುವ ವೇಳೆ ಅವರ ಪತ್ನಿಯನ್ನೂ ಸಂದರ್ಶಿಸಲಾಗಿತ್ತು. ಭೋಜಪುರಿ ಭಾಷೆಯಲ್ಲಿ ಮಾತನಾಡಿದ ಅವರು, "ಗ್ರಾಮದ ಕೆಲವರು ಆತನನ್ನು ಔತಣಕ್ಕೆ ಆಹ್ವಾನಿಸಿದ್ದರು. ನಾವು ಚಿಲಕ ಹಾಕಿಕೊಂಡು ಆತ ಬರುವ ವೇಳೆಗೆ ನಿದ್ದೆ ಮಾಡಿದ್ದೆವು. ಆದ್ದರಿಂದ ಆತ ಮದರಸಕ್ಕೆ ಹೋಗಿ ನಿದ್ರಿಸಿದ್ದ" ಎಂದು ವಿವರಿಸಿದ್ದರು.

"ತಸ್ಲೀಂ ಮದರಸದಲ್ಲಿ ನಿದ್ದೆ ಮಾಡುತ್ತಿದ್ದಾನೆ ಎಂದು ಆಗ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆತನನ್ನು ಕರೆದೊಯ್ದರು. ತಸ್ಲೀಂ ಹಲವು ಬಾರಿ ನೀವು ಯಾರು, ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ ಎಂದು ಕೇಳಿದ. ಪೊಲೀಸರು ಅದಕ್ಕೆ ಉತ್ತರಿಸಲಿಲ್ಲ. ನನ್ನ ಮಗ ಜಾಕೆಟ್ ಧರಿಸಿಕೊಳ್ಳಲು ಕೂಡಾ ಪೊಲೀಸರು ಅವಕಾಶ ನೀಡಲಿಲ್ಲ. ಅಮಾನುಷವಾಗಿ ಆತನನ್ನು ಹೊಡೆದರು. ಆತ ಬಾಯಿ ಬಿಡುತ್ತಿಲ್ಲ ಎಂಬ ಸಿಟ್ಟಿನಿಂದ ಎಲೆಕ್ಟ್ರಿಕ್ ಶಾಕ್ ಕೊಟ್ಟರು" ಎಂದು ಅನ್ಸಾರಿ ಹೇಳಿದರು. "ಮಗನ ಕಾಲುಬೆರಳುಗಳಿಗೆ ಕಬ್ಬಿಣದ ಮೊಳೆ ಚುಚ್ಚಿದ್ದರು" ಎಂದು ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡರು.

ಮಾತುಕತೆ ವೇಳೆ ತಸ್ಲೀಂನ ಸ್ನೇಹಿತ ಕುನಾಲ್ ಸಿಂಗ್ ಅಲ್ಲಿಗೆ ಬಂದರು. "ತಸ್ಲೀಂ ಈ ಮದರಸದ ಉಸ್ತುವಾರಿ ಹೊಂದಿದ್ದ. ಇದರ ಜತೆಗೆ ಕುಟುಂಬಕ್ಕೆ ಕೃಷಿಯಲ್ಲೂ ನೆರವಾಗುತ್ತಿದ್ದ. ರಾತ್ರಿ ಪೊಲೀಸರು ಆತನನ್ನು ಕರೆದೊಯ್ದರು; ನಾನು ತಸ್ಲೀಂ ಜತೆಗಿದ್ದೆ. ಫೆಬ್ರವರಿ 20ರಂದು ನಾನು ಹಾಗೂ ತಸ್ಲೀಂ ಮಜೋರ್‍ ಗಂಜ್ ಗೆ ವಿವಾಹಕ್ಕೆ ತೆರಳಿದ್ದೆವು. ನನ್ನ ಸಂಬಂಧಿಕರ ಮನೆಯಲ್ಲಿ ವಿವಾಹ ಇತ್ತು. ನಾವು ಒಂದು ಬೊಲೆರೊ ವಾಹನದಲ್ಲಿ ತೆರಳಿದ್ದೆವು. ಈಗ ನೀವು ಹೇಳಿ; ಬೈಕ್ ದರೋಡೆ ಮಾಡಲು ಯಾರಾದರೂ, ನಾಲ್ಕು ಚಕ್ರದ ವಾಹನದಲ್ಲಿ ಹೋಗುತ್ತಾರೆಯೇ?" ಎನ್ನುವುದು ಅವರ ಪ್ರಶ್ನೆ.

"ಪೊಲೀಸರು ಮೊದಲು ತನಿಖೆ ನಡೆಸಬೇಕಿತ್ತು. ಮರುದಿನ ಬೆಳಿಗ್ಗೆ ಠಾಣಾಧಿಕಾರಿ ಕರೆ ನನಗೆ ಕರೆ ಮಾಡಿ, ನಿನ್ನ ಸ್ನೇಹಿತನನ್ನು ಹೊಡೆಯುತ್ತಿದ್ದೇನೆ ಎಂದು ಹೇಳಿದ್ದರು. ಆಗ ಮೊದಲು ತನಿಖೆ ನಡೆಸಿ ಎಂದು ಅವರನ್ನು ಕೋರಿದ್ದೆ"

(ತಸ್ಲೀಂನ ಹೆತ್ತವರು)

ಒಂದು ಹತ್ಯೆಯೊಂದಿಗೆ ಹಲವರ ಬದುಕು ನಾಶ

ಗುಫ್ರಾನ್ ಪತ್ನಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅವರು ಮಾತನಾಡುವ ಸ್ಥಿತಿಯಲ್ಲೇ ಇಲ್ಲ. ಒಂದೆರಡು ಶಬ್ಧ ಮಾತನಾಡುವ ಮುನ್ನವೇ ಕಣ್ಣೀರು ಒತ್ತರಿಸಿ ಬರುತ್ತದೆ. "ಒಬ್ಬ ಅಮಾಯಕನನ್ನು ಗೂಂಡಾಗಳು ಕರೆದೊಯ್ದರು. ಇದೀಗ ಮಕ್ಕಳು ಅನಾಥರಾಗಿದ್ದಾರೆ. ಒಂದು ಜೀವಕ್ಕೆ ಪ್ರತಿಯಾಗಿ ಮತ್ತೆ ಯಾರು ಜೀವನ ಕೊಡಲು ಸಾಧ್ಯ?, ಪ್ರತಿಯೊಬ್ಬರನ್ನೂ ಅವರು ಕೊಂದಂತೆ" ಎನ್ನುವುದು ಅವರ ಅನಿಸಿಕೆ.

ಗುಫ್ರಾನ್ ಅವರ ತಂದೆ ಮುನವ್ವರ್ ಅಲಿ ಮಾತನಾಡಿ, "ನಾಲ್ಕು ತಿಂಗಳ ಹಿಂದಷ್ಟೇ ಮಗ ಸೌದಿಯಿಂದ ಬಂದಿದ್ದ. ಸೌದಿಯಲ್ಲಿ ಆತ ಎಲೆಕ್ಟ್ರೀಶಿಯನ್ ಆಗಿದ್ದ. ಎರಡು ವರ್ಷಗಳ ಬಳಿಕ ಅಲ್ಲಿಂದ ಬಂದಿದ್ದ. ಆ ದಿನ ರಾತ್ರಿ ಏನೂ ಹೇಳದೇ, ಪೊಲೀಸರು ಕರೆದೊಯ್ದರು. ಆತನ ವಿರುದ್ಧ ಯಾವುದೇ ಪ್ರಕರಣ ಇರಲಿಲ್ಲ. ಮಗನನ್ನು ಏಕೆ ಕರೆದೊಯ್ಯುತ್ತಿದ್ದೀರಿ ಎಂದು ಕೇಳಿದಾಗ ಯಾವ ಪ್ರತಿಕ್ರಿಯೆಯೂ ಅವರಿಂದ ಬರಲಿಲ್ಲ. ಕೊನೆಯ ಬಾರಿ ಬುಧವಾರ ಮುಂಜಾನೆ ಕುಟುಂಬದ ಜತೆ ಆತ ಮಾತನಾಡಿದ್ದ. ಆತನ ಸಹೋದರ ಸನುರ್ ಅಲಿ ಆತನ ಜತೆ ಮಾತನಾಡಿದ. ಪೊಲೀಸ್ ಠಾಣೆಯಿಂದ ಆತನನ್ನು ಯಾರು ಮಾತನಾಡಿಸಿದರು ಎನ್ನುವುದು ತಿಳಿಯದು. ರೆಕಾರ್ಡಿಂಗ್ ಮಾತ್ರ ಕೇಳಿ ಬರುತ್ತಿತ್ತು.

“ಪೊಲೀಸರು ನನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ, ತೀವ್ರವಾಗಿ ಹೊಡೆಯುತ್ತಿದ್ದಾರೆ ಎಂದು ಹೇಳಿದ್ದಷ್ಟೇ ಕೇಳಿತು"

"ಚಾಕಿಯಾ ಠಾಣೆಗೆ ಆತನನ್ನು ಕರೆದೊಯ್ದದ್ದು ನಮಗೆ ಗೊತ್ತಿತ್ತು. ಆದರೆ ಅಲ್ಲಿಂದ ಆತನನ್ನು ದುಮ್ರಾ ಠಾಣೆಗೆ ಒಯ್ಯಲಾಗಿತ್ತು. ಪೊಲೀಸರು ನಮಗೆ ಏನೂ ಹೇಳುತ್ತಿಲ್ಲ. ಮರುದಿನ ಬೆಳಿಗ್ಗೆ 11 ಗಂಟೆ ವೇಳೆಗೆ ಒಂದಷ್ಟು ಮಾಹಿತಿ ಸಿಕ್ಕಿತು. ದುಮ್ರಾದಲ್ಲಿ ಒಂದು ಜೈಲಿನಲ್ಲಿ ಆತನನ್ನು ಕೂಡಿ ಹಾಕಲಾಗಿತ್ತು. ನಾವು ಅಲ್ಲಿಗೆ ಹೋದಾಗ, ಇಬ್ಬರು- ಮೂವರು ಮಹಿಳಾ ಪೊಲೀಸರು ಎದುರಾದರು. ಚಕಿಯಾ ಠಾಣೆಯಿಂದ ಯಾವ ಪ್ರಕರಣವೂ ಇಲ್ಲಿಗೆ ವರ್ಗಾವಣೆಯಾಗಿಲ್ಲ ಎಂದು ಅವರು ಹೇಳಿದರು. ವಿವರಗಳಿಗಾಗಿ ನೋಂದಣಿ ಪುಸ್ತಕ ನೋಡುವಂತೆ ಪದೇ ಪದೇ ಮನವಿ ಮಾಡಿದೆವು" ಎಂದು ಸನುರ್ ಅಲಿ ನೆನಪಿಸಿಕೊಂಡರು.

"ಸುಮಾರು ಒಂದು ಗಂಟೆ ಬಳಿಕ ಸ್ಥಳೀಯ ಪತ್ರಕರ್ತರ ಮೂಲಕ ನಮಗೆ ತಿಳಿದುಬಂದ ಅಂಶವೆಂದರೆ ಗುಫ್ರಾನ್ ಹಾಗೂ ತಸ್ಲೀಂ ಇಬ್ಬರನ್ನೂ ಚಿಂತಾಜನಕ ಸ್ಥಿತಿಯಲ್ಲಿ ಸದರ್ ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನುವುದು. ನಾವು ಅಲ್ಲಿಗೆ ಹೋಗಿ ಮಾಹಿತಿ ನೀಡುವಂತೆ ಪೊಲೀಸರನ್ನು ಕೋರಿದೆವು. ಆದರೆ ಏನೂ ನಮಗೆ ಹೇಳಲಿಲ್ಲ. ಅಷ್ಟು ಮಾತ್ರವಲ್ಲದೇ ಒಳಕ್ಕೆ ಹೋಗಲು ನಮಗೆ ಅವಕಾಶ ನೀಡಲಿಲ್ಲ. ಬಳಿಕ ಗುಫ್ರಾನ್ ಹಾಗು ತಸ್ಲೀಂ ಮೃತಪಟ್ಟಿರುವುದನ್ನು ಪತ್ರಕರ್ತರು ತಿಳಿಸಿದರು" ಎಂದವರು ಹೇಳುತ್ತಾರೆ.

ಕುಟುಂಬದ ಆಗ್ರಹ

ತಸ್ಲೀಂ ಅವರ ತಂದೆ ಮುಲಾಝಿಮ್ ಅನ್ಸಾರಿಯವರ ಪ್ರಕಾರ, ಈ ಘಟನೆಯ ಬಳಿಕ ಹಲವು ಮಂದಿ ರಾಜಕಾರಣಿಗಳು ಅಲ್ಲಿಗೆ ಭೇಟಿ ನೀಡಿ, ಯಾವ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. "ನನ್ನ ಮಗ ಮರಳಿ ಜೀವಂತ ಬರಬೇಕು ಎಂದು ನಾನು ಕೇಳಿದ್ದೇನೆ. ಆತನನ್ನು ಪೊಲೀಸರು ಒಯ್ಯುವಾಗ ಆತ ಜೀವಂತ ಇದ್ದ. ಮೃತದೇಹವನ್ನು ನಾನು ಏಕೆ ಸ್ವೀಕರಿಸಬೇಕು?, ನಾನು ಪೊಲೀಸರನ್ನು ಏಕೆ ಕ್ಷಮಿಸಬೇಕು?" ಎಂದು ಪ್ರಶ್ನೆ ಮುಂದಿಡುತ್ತಾರೆ.

ಗುಫ್ರಾನ್ ಅವರ ಸೋದರ ಸಂಬಂಧಿ ತನ್ವೀರ್ ಹೈದರ್ ಹೇಳುವಂತೆ, "ಘಟನೆಗೆ ಕಾರಣವಾದ ಪೊಲೀಸ್ ಅಧಿಕಾರಿಯನ್ನು ಶಿಕ್ಷಿಸಿದರೂ, ಅವರ ತಪ್ಪಿಗಾಗಿ ಅವರನ್ನು ಶಿಕ್ಷಿಸಲಾಗುತ್ತದೆ.  ಆದರೆ ಗುಫ್ರಾನ್ ಪತ್ನಿ ಹಾಗೂ ಮಕ್ಕಳು ಅನುಭವಿಸಿದ ಆಘಾತ ಮುಂದುವರಿಯುತ್ತದೆ. ಅದಕ್ಕೆ ಏನು ಪರಿಹಾರ?, ಒಬ್ಬನ ಜೀವಕ್ಕೆ ಯಾವ ಮೊತ್ತವನ್ನೂ ನೀಡಲಾಗದು. ಬಿಹಾರ ಸರ್ಕಾರ ಈ ಬಗ್ಗೆ ಯೋಚಿಸಬೇಕು ಎಂದು ನಾನು ಕೋರುತ್ತೇನೆ".

ಈ ಕಸ್ಟಡಿ ಸಾವಿಗೆ ಕಾರಣರಾದವರಿಗೆ ಶಿಕ್ಷೆ ವಿಧಿಸುವುದು ಮಾತ್ರವಲ್ಲದೇ, ಸಂತ್ರಸ್ತ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ಅಲ್ಲಿ ನೆರೆದಿದ್ದ ಗ್ರಾಮಸ್ಥರ ಆಗ್ರಹ.

ಪ್ರಕರಣದ ಸ್ಥಿತಿ

ಕುಟುಂಬದವರು ಆಪಾದಿಸುವ ಪ್ರಕಾರ, ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸುವ ವೇಳೆ, ದೂರುದಾರರಿಗೆ ಅದರ ಪ್ರತಿ ನೀಡಿಲ್ಲ. ಮರಣೋತ್ತರ ಪರೀಕ್ಷೆ ವರದಿಗಾಗಿ ಒತ್ತಾಯಿಸಿದಾಗ ಕೂಡಾ ಅದನ್ನು ಅಧಿಕಾರಿಗಳು ನೀಡಿಲ್ಲ.

ಗುಫ್ರಾನ್ ಮನೆ ಎದುರು ಸೇರಿದ್ದ ಗುಂಪಿನಲ್ಲಿದ್ದ ಮೌಲಾನಾ ಅಜ್ಮೀರ್ ಅಲಾಂ ಮಾತನಾಡಿ, "ತಡರಾತ್ರಿ ಪೊಲೀಸರು ದಾಳಿ ಮಾಡಿ ಯಾವುದೇ ಮಾಹಿತಿ ನೀಡದೇ ಇಬ್ಬರನ್ನು ಕರೆದೊಯ್ದಿದ್ದಾರೆ. ಬಿಹಾರದಲ್ಲಿ ಕಾನೂನು ಕೆಲಸ ಮಾಡುತ್ತದೆ ಎಂಬ ನಂಬಿಕೆ ನಮಗೆ ಹೇಗೆ ಬರಬೇಕು?, ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಕೆಲವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ಆದರೆ ಆ ಬಳಿಕ ಅವರು ಠಾಣೆಯಿಂದ ಪರಾರಿಯಾಗಿದ್ದಾರೆ. ಇದೆಲ್ಲವೂ ಪೊಲೀಸರು ಆಡುತ್ತಿರುವ ನಾಟಕ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ದುಮ್ರಾ ಠಾಣಾಧಿಕಾರಿ ಹಾಗೂ ಇತರ ಎಂಟು ಮಂದಿಯನ್ನು ಅಮಾನತು ಮಾಡಿದ್ದಾರೆ. ತಲೆ ಮರೆಸಿಕೊಂಡಿರುವ ಠಾಣಾಧಿಕಾರಿ ಮತ್ತು ಪೊಲೀಸರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆದಿದೆ. ಶನಿವಾರ ಡಿಐಜಿಯವರು ಪೊಲೀಸ್ ಮಹಾನಿರ್ದೇಶಕರಿಗೆ ತನಿಖಾ ವರದಿ ಸಲ್ಲಿಸಿದ್ದಾರೆ. ಆದರೆ ಅದು ಇನ್ನೂ ಬಹಿರಂಗವಾಗಿಲ್ಲ.

ತಪ್ಪಿಸಿಕೊಂಡಿರುವ ಪೊಲೀಸರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಅವರ ವಿರುದ್ಧದ ಪ್ರಕರಣ ತನಿಖೆಗೆ ಸಿದ್ಧತೆ ನಡೆಯುತ್ತಿದೆ ಎಂದು ಮುಜಾಫರ್‍ಪುರ ಡಿಐಜಜಿ ಅನಿಲ್ ಸಿಂಗ್ ಹೇಳಿದ್ದಾರೆ. ಆದರೆ ವಿಭಾಗೀಯ ಡಿಐಜಿಗೆ ವರದಿ ಸಲ್ಲಿಸಿರುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)