varthabharthi

ನಿಮ್ಮ ಅಂಕಣ

ಕೃಷಿ ಉತ್ಪನ್ನ ಬೆಲೆ ನಿಗದಿ ನೀತಿಗಳಲ್ಲಿ ರೈತರಿಗೆ ಅವಕಾಶವೆಲ್ಲಿದೆ?

ವಾರ್ತಾ ಭಾರತಿ : 14 Mar, 2019
ಕೃಪೆ: Economic and Political Weekly

ಕೇಂದ್ರೀಯ ಅಂಕಿಅಂಶ ಕಚೇರಿಯು 2011-12ರ ಸರಣಿಯನ್ನು ಆಧರಿಸಿದ ಒಟ್ಟಾರೆ ದೇಶೀಯ ಉತ್ಪನ್ನ (ಜಿಡಿಪಿ)ದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ 2018ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಕೃಷಿಯು ದೇಶದ ಒಟ್ಟಾರೆ ಮೌಲ್ಯ ಸಂಕಲನ (ಗ್ರಾಸ್ ವ್ಯಾಲ್ಯೂ ಆಡೆಡ್- ಜಿವಿಎ)ಕ್ಕೆ ನೀಡಿದ ಕೊಡುಗೆ ಶೇ.2.04ಕ್ಕೆ ಇಳಿದಿದೆ. ಇದು ಕಳೆದ 14 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಕೊಡುಗೆಯಾಗಿದೆ.

ಆದರೆ 2017ರ ಇದೇ ಅವಧಿಗೆ ಹೋಲಿಸಿದಲ್ಲಿ ಕೃಷಿ ಉತ್ಪನ್ನಗಳ ಪ್ರಮಾಣ ಶೇ.3ರಷ್ಟು ಹೆಚ್ಚೇ ಆಗಿದೆ. ಆದರೂ ಹಾಲಿ ದರದ ಲೆಕ್ಕಾಚಾರದಲ್ಲಿ ನೋಡಿದಲ್ಲಿ ಕೃಷಿ ಕ್ಷೇತ್ರದಲ್ಲಿ ತಲೆದೋರಿರುವ ಈ ಆತಂಕಕಾರಿ ಪರಿಸ್ಥಿತಿಯು ಎನ್‌ಡಿಎ ಸರಕಾರದ ಕೃಷಿ ಉತ್ಪನ್ನ ಬೆಲೆ ನಿಗದಿ ನೀತಿಗಳ ಬಗ್ಗೆ, ಅದರಲ್ಲೂ ಅದು ಕೊಚ್ಚಿಕೊಳ್ಳುತ್ತಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳ ಇತ್ಯಾದಿಗಳ ಬಗ್ಗೆ ಹಲವು ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಎಂಎಸ್‌ಪಿ ದರದಡಿ ಬರುವ ಕೃಷಿ ಉತ್ಪನ್ನಗಳೂ ಸಹ ನಿಗದಿಯಾದ ಬೆಲೆಗಿಂತ ಶೇ.20-30ರಷ್ಟು ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆಯೆಂದು ಹಲವಾರು ವರದಿಗಳು ಹೇಳುತ್ತಿವೆ. ಸರಕಾರವು ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಖರೀದಿಯನ್ನು ಹೆಚ್ಚಿಸಿದ ನಂತರವೂ ಸಹ ಶೇ.20ರಷ್ಟು ರೈತರಿಗೆ ಮಾತ್ರ ಎಂಎಸ್‌ಪಿಯ ಲಾಭವು ದೊರಕುತ್ತಿದೆಯೆಂದು ತಳಮಟ್ಟದಲ್ಲಿ ನಡೆಸಿರುವ ಅಂದಾಜುಗಳು ಸ್ಪಷ್ಟಪಡಿಸುತ್ತವೆ.

ಆದರೆ ಒಂದು ಅಭಿವೃದ್ಧಿಶೀಲ ದೇಶದಲ್ಲಿ ಕೃಷಿ ಉತ್ಪನ್ನಗಳ ಹಾಗೂ ಅಹಾರ ಧಾನ್ಯಗಳ ಬೆಲೆ ನಿಗದಿಯ ಸುತ್ತ ಇಂಥ ಗೊಂದಲಗಳು ನಿರಂತರವಾಗಿ ಇರುವಂಥದ್ದೇ ಎಂದು ಸರಕಾರದ ನೀತಿಗಳ ಪ್ರತಿಪಾದಕರು ವಾದಿಸಬಹುದು. ಹೆಚ್ಚು ಬೆಲೆಯ ಉತ್ತೇಜನವನ್ನು ನೀಡಿ ಉತ್ಪಾದನೆಯನ್ನು ಹೆಚ್ಚಿಸಿದರೆ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಪೆಟ್ಟುಬೀಳುತ್ತದೆ. ಮತ್ತೊಂದೆಡೆ ಬೆಲೆಯ ಕುಸಿತವು ರೈತರನ್ನು ಕಂಗಾಲು ಮಾಡಿದ್ದು ಹಲವರು ಆತ್ಮಹತ್ಯೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸ್ಥಿರ ಆದಾಯ ಮತ್ತು ಕೈಗೆಟುಕುವ ಬೆಲೆಯ ನಡುವೆ ಸಮತೋಲನ ಕಾಪಾಡಿಕೊಳ್ಳುವಂಥ ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸುವುದು ಸರಕಾರಗಳಿಗೆ ಸುಲಭದ ಕೆಲಸವೇನಲ್ಲ. ಮತ್ತು ಇತ್ತೀಚಿನ ದಿನಗಳಲ್ಲಿ ರೈತಾಪಿಯ ಆದಾಯವನ್ನು ಹೆಚ್ಚು ಮಾಡುವ ಉದ್ದೇಶದಿಂದ ಹಾಲಿ ಸರಕಾರವು ಘೋಷಿಸುತ್ತಿರುವ ಹಲವಾರು ಬೆಂಬಲ ಯೋಜನೆಗಳನ್ನು ಗಮನಿಸಿದಾಗ ಅಂಥಾ ಒಂದು ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂಬ ಸರಕಾರದ ಉದ್ದೇಶಗಳನ್ನು ಅನುಮಾನಿಸಲಾಗದು.

ಆದರೂ ಸಾಕ್ಷಾಧಾರಗಳು ಮಾತ್ರ ಸರಕಾರದ ಈ ಉತ್ಸಾಹದ ಹಿಂದೆ ಇರಬೇಕಾಗಿದ್ದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರಶ್ನಿಸುವುದನ್ನು ಕಡ್ಡಾಯ ಮಾಡುತ್ತಿದೆ. ಇದಕ್ಕೆ ‘ಪ್ರಧಾನ ಮಂತ್ರಿ ಅನ್ನದಾತ ಆಯ ಸಂರಕ್ಷಣಾ ಅಭಿಯಾನ’ (ಆಶಾ) ಯೋಜನೆಯನ್ನು ಒಂದು ಉದಾಹರಣೆಯಾಗಿ ಪರಿಶೀಲಿಸಬಹುದು. ಬೆಲೆ ಬೆಂಬಲ, ಬೆಲೆ ಕೊರತೆ ಪಾವತಿ, ಖಾಸಗಿ ಸಂಗ್ರಹ ಹಾಗೂ ದಾಸ್ತಾನು ಯೋಜನೆಗಳ ಮೂಲಕ ರೈತರಿಗೆ ಆದಾಯ ಬೆಂಬಲವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಬಿಜೆಪಿ ಸರಕಾರವಿದ್ದ ಮಧ್ಯಪ್ರದೇಶವನ್ನೂ ಒಳಗೊಂಡಂತೆ ಯಾವ ರಾಜ್ಯಗಳೂ ಈ ‘ಆಶಾ’ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲಿಲ್ಲ. ಮತ್ತೊಂದೆಡೆ ಇಂಥಾ ಮಹತ್ವಾಕಾಂಕ್ಷಿ ಮತ್ತು ಬೃಹತ್ ಪ್ರಮಾಣದ ಯೋಜನೆಗೆ ಬಜೆಟ್ಟಿನಲ್ಲಿ ನಿಗದಿ ಮಾಡಿದ್ದು ಮಾತ್ರ ಅತ್ಯಂತ ಸಣ್ಣ ಮೊತ್ತ. ಈ ದ್ವಂದ್ವ ನಡಾವಳಿಯು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ನಿಜವಾದ ಉದ್ದೇಶ ಈ ಯೋಜನೆಯನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವುದಾಗಿತ್ತೇ ವಿನಃ ರೈತರಿಗೆ ಸಹಾಯ ಮಾಡುವುದಾಗಿರಲಿಲ್ಲ ಎಂಬುದನ್ನು ಸಾಬೀತುಮಾಡುತ್ತದೆ. ಭಾರತದ ಕೃಷಿ ಮಾರುಕಟ್ಟೆಯಲ್ಲಿ ಶೇ.70ರಷ್ಟು ರೈತರು ಕೊಟ್ಟಷ್ಟು ಬೆಲೆಗೆ ಮಾರಿಕೊಳ್ಳುವವರೇ ಆಗಿದ್ದು ಅಸ್ತಿತ್ವದಲ್ಲಿರುವ ಅಸಮಾನ ಮತ್ತು ದುರ್ಬಲ ಬೆಲೆ ವರ್ಗಾವಣೆ ವಿಧಾನಗಳು ಅವರನ್ನು ಇನ್ನಷ್ಟು ಅಪಾಯಕ್ಕೆ ಈಡುಮಾಡುತ್ತದೆ.

ಭಾರತದ ಕೃಷಿ ವಲಯದಲ್ಲಿ ಕೊಟ್ಟಷ್ಟು ಬೆಲೆಗೆ ಮಾರಾಟಮಾಡುವ ಸಂಕಷ್ಟ ಮಾರಾಟಗಳು ಒಂದು ಚಾರಿತ್ರಿಕ ಸತ್ಯವೇ ಆಗಿದೆ. ಇದರ ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆಗಳು ಕುಸಿದಾಗ ರೈತಾಪಿಯು ಹೊಲದಲ್ಲೇ ತಮ್ಮ ಬೆಳೆಯನ್ನು ನಾಶಮಾಡಿದ ಉದಾಹರಣೆಗಳಿಗೇನೂ ಕೊರತೆಯಿಲ್ಲ. ಇದರ ಜೊತೆಗೆ ಆಹಾರದ ಅಭಾವ ಪರಿಸ್ಥಿತಿಯಲ್ಲಿ ಚಿಲ್ಲರೆ ವ್ಯಾಪಾರದ ದರಗಳು ಮುಗಿಲು ಮುಟ್ಟಿದರೂ ಅದರ ಲಾಭ ರೈತರಿಗೆ ಮಾತ್ರ ದಕ್ಕುವುದಿಲ್ಲ. ಈ ಘಟನೆಗಳು ಸಮರ್ಪಕ ಕೃಷಿ ಮಾರುಕಟ್ಟೆ ಸುಧಾರಣೆಗಳ ನೀತಿಗಳ ಅಗತ್ಯವನ್ನು ಎತ್ತಿತೋರಿಸುತ್ತವೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಉಸ್ತುವಾರಿಯಲ್ಲಿರುವ ಭಾರತದ ಸಾಂಪ್ರದಾಯಿಕ ಮಂಡಿ ವ್ಯವಸ್ಥೆಯು ಪ್ರಧಾನವಾಗಿ ದಲ್ಲಾಳಿಗಳ ಅಧೀನದಲ್ಲಿವೆ. ಅವರು ವಿಧಿಸುವ ಅತಿ ಹೆಚ್ಚಿನ ಕಮಿಷನ್ ಮತ್ತು ಲಾಭದ ದರಗಳು ಬೆಲೆ ವರ್ಗಾವಣೆ ವಿಧಾನವನ್ನು ಸಾಕಷ್ಟು ವಿಕೃತಗೊಳಿಸುತ್ತಿದೆ. ಎಪಿಎಂಸಿಯು ಅಧಿಕೃತವಾಗಿ ನಿಗದಿ ಪಡಿಸಿರುವ ದಲ್ಲಾಳಿ ಕಮಿಷನ್ನೇ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿದೆ. ಅದು ಪಂಜಾಬಿನಲ್ಲಿ ಶೇ.4ರಷ್ಟು ಮತ್ತು ದಿಲ್ಲಿಯಲ್ಲಿ ಶೇ.6ರಷ್ಟು ಅತ್ಯಧಿಕವಾಗಿದೆ. ಆದರೆ ರೈತರು ತಮ್ಮ ದಾಸ್ತಾನನ್ನು ಮಾರುಕಟ್ಟೆಗೆ ತಂದಾಗ ಹರಾಜು ಕೂಗುವ ಹೊತ್ತಿನಲ್ಲಿ ಈ ದರಗಳು ಇನ್ನಷ್ಟು ಏರುತ್ತಾ ಹೋಗುತ್ತವೆ. ಈಶಾನ್ಯ ಭಾರತದ ಕೆಲವು ಕಡೆಗಳಲ್ಲಂತೂ ಈ ದರವು ಶೇ.12ರಷ್ಟನ್ನು ಸಹ ಮುಟ್ಟುತ್ತದೆ.

ಇಷ್ಟೊಂದು ಮಾರುಕಟ್ಟೆ ಅದಕ್ಷತೆಗಳಿರುವ ಸಂದರ್ಭದಲ್ಲಿ ಎಷ್ಟೇ ಪ್ರಮಾಣದ ಬೆಂಬಲ ಬೆಲೆಗಳೂ ಸಹ ಯಾವುದೇ ಪರಿಣಾಮವನ್ನು ಉಂಟುಮಾಡುವುದು ಸಾಧ್ಯವಿಲ್ಲ. ವಿಪರ್ಯಾಸವೆಂದರೆ 2017ರಲ್ಲಿ ಎನ್‌ಡಿಎ ಸರಕಾರವು ತಂದ ಮಾದರಿ ಕೃಷಿ ಉತ್ಪನ್ನ ಹಾಗೂ ಜಾನುವಾರು ಮಾರುಕಟ್ಟೆ (ಪ್ರೋತ್ಸಾಹ ಮತ್ತು ನಿರ್ವಹಣೆ) ಕಾಯ್ದೆಯು ಇದೇ ಶೋಷಕ ವ್ಯವಸ್ಥೆಯನ್ನೇ ಖಾಯಂ ಗೊಳಿಸುತ್ತಿದೆ ಮತ್ತು ಈ ಶೋಷಕ ಕಮಿಷನ್ ದಲ್ಲಾಳಿಗಳನ್ನು ಎಪಿಎಂಸಿ ಆವರಣದ ಕೇಂದ್ರೀಯ ಮಾರುಕಟ್ಟೆ ಮಧ್ಯವರ್ತಿಗಳನ್ನಾಗಿ ಉಳಿಸಿಕೊಳ್ಳುತ್ತದೆ. ಭಾರತದ ಕೃಷಿಕರ ಪರಿಸ್ಥಿತಿಯ ಬಗ್ಗೆ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಮತ್ತು ಭಾರತೀಯ ಅಂತರ್‌ರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಪರಿಷತ್ತು ಜಂಟಿಯಾಗಿ 2018ರಲ್ಲಿ ಒಂದು ಅಧ್ಯಯನವನ್ನು ನಡೆಸಿವೆ.

ಅದರ ವರದಿಯ ಪ್ರಕಾರ ಗ್ರಾಹಕ ದರಗಳನ್ನು ಅಂತರ್ಗತವಾಗಿಯೇ ಅದುಮಿಡುವ ಭಾರತದ ಮಾರುಕಟ್ಟೆ ನಿಯಂತ್ರಣಾ ನೀತಿಗಳು ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟಿನ ಮೇಲಿನ ನಿರ್ಬಂಧಗಳು ಭಾರತದ ರೈತಾಪಿಯ ಆಸಕ್ತಿಗಳನ್ನು ಕಾಪಾಡುವ ಬದಲಿಗೆ ಕಳೆದೆರಡು ದಶಕಗಳಿಂದ ಅವರ ಮೇಲಿನ ಹೊರೆಯನ್ನು ಹೆಚ್ಚಿಸಿದೆ. ಒಇಸಿಡಿ ಮಾನದಂಡಗಳು ಮತ್ತು ಭಾರತದ ಉತ್ಪಾದಕರ ಬೆಂಬಲ ಅಂದಾಜುಗಳು (ಪ್ರೊಡ್ಯೂಸರ್ಸ್ ಸಪೋರ್ಟ್ ಎಸ್ಟಿಮೇಟ್- ಪಿಎಸ್‌ಇ) ವಿಧಾನಗಳನ್ನು ಅನುಸರಿಸಿ ಮಾಡಿರುವ ಲೆಕ್ಕಾಚಾರಗಳ ಪ್ರಕಾರ 2000-01 ಮತ್ತು 2016-17ರ ನಡುವೆ ಜಾಗತಿಕ ದರಗಳಿಗೆ ಹೋಲಿಸಿದಲ್ಲಿ ಭಾರತದ ರೈತರು ಪ್ರತಿ ವರ್ಷ ಶೇ.14ರಷ್ಟು ಕಡಿಮೆ ಬೆಲೆಯನ್ನು ಪಡೆದುಕೊಂಡಿದ್ದಾರೆ. ವಾಸ್ತವವಾಗಿ 2014-15 ಮತ್ತು 2016-17ರ ನಡುವೆ ಭಾರತದ ಶೇ.70ರಷ್ಟು ಪ್ರಮುಖ ಕೃಷಿ ಉತ್ಪನ್ನಗಳು ಕಡಿಮೆ ಬೆಲೆಯನ್ನು ಪಡೆದುಕೊಂಡಿದ್ದವು. ಸರಕಾರದ ನೀತಿಗಳಿಂದ ಉಂಟಾಗಿರುವ ಇಂಥಾ ವಿಕೃತಿಗಳಿಂದಾಗಿ ಸರಕಾರಗಳು ಎಷ್ಟೇ ರೈತ ಬೆಂಬಲ ಯೋಜನೆಗಳನ್ನು ಒದಗಿಸಿದರೂ ಅವು ರೈತಾಪಿಗೆ ಕನಿಷ್ಠ ಬೆಂಬಲವನ್ನು ಒದಗಿಸುವುದರಲ್ಲೂ ವಿಫಲವಾಗುತ್ತವೆ. ಬದಲಿಗೆ ಅವು ಚುನಾವಣೆಯಲ್ಲಿ ಮತಗಳಾಗಿ ಮಾತ್ರ ಪ್ರಯೋಜನಕ್ಕೆ ಬರುವ ಈ ಸಮುದಾಯಗಳು ಮಾಡುವ ಗಲಾಟೆಯನ್ನು ತಣ್ಣಗೆ ಮಾಡಲು ಅವರತ್ತ ಎಸೆಯುವ ಚೂರುಪಾರು ತುಣುಕುಗಳಾಗಿವೆ.

ಎನ್‌ಡಿಎಯ ಕೃಷಿ ನೀತಿಗಳಲ್ಲಿರುವ ಗ್ರಾಹಕ ವರ್ಗಪರವಾದ ಒತ್ತುಗಳಿಗೆ ಆ ವರ್ಗವು 2014ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮಧ್ಯಮ ವರ್ಗಕ್ಕೆ ಸನಿಹವಾಗಿರುವುದೇ ಕಾರಣವೆಂದು ವಿಶ್ಲೇಷಿಸಲಾಗಿದೆ. ಹೀಗಾಗಿ ಗ್ರಾಹಕ ದರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅದಕ್ಕೆ ರಾಜಕೀಯವಾಗಿ ಅತ್ಯಗತ್ಯವಾಗಿದೆ. ನಗರದ ಮತದಾರರೇ ಹೆಚ್ಚಾಗಿ ಅಭಿಪ್ರಾಯ ರೂಪಿಸುವ ವರ್ಗವೂ ಆಗಿರುವುದರಿಂದ ಈ ನೀತಿಗಳ ಮೂಲಕ ಎನ್‌ಡಿಎ ಸರಕಾರವು ಜನ ಸಾಮಾನ್ಯರ ಪರವಾದ ಸರಕಾರವೆಂಬ ಪ್ರಚಾರವನ್ನು ಗಿಟ್ಟಿಸಿಕೊಳ್ಳಬಹುದು. ಮತ್ತೊಂದೆಡೆ ಆತಂಕದಲ್ಲಿರುವ ಗ್ರಾಮೀಣ ಧ್ವನಿಗಳನ್ನು ಪ್ರಧಾನ ಧಾರೆ ರಾಜಕಾರಣದಿಂದ ಮತ್ತಷ್ಟು ದೂರಗೊಳಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)