varthabharthi

ಬೆಂಗಳೂರು

ಪಿಯುಸಿ ಮೌಲ್ಯಮಾಪನ ಬಹಿಷ್ಕಾರ ಎಚ್ಚರಿಕೆ: ಉಪನ್ಯಾಸಕರ ವಿರುದ್ಧ ಎಸ್ಮಾ ಜಾರಿಗೆ ಚಿಂತನೆ

ವಾರ್ತಾ ಭಾರತಿ : 14 Mar, 2019

ಬೆಂಗಳೂರು,ಮಾ.14: ಮುಂಭಡ್ತಿ ನೀಡಬೇಕು, ವೇತನ ತಾರತಮ್ಯವನ್ನು ನಿವಾರಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ಮಾ.21 ರಿಂದ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಬಹಿಷ್ಕರಿಸಲು ಮುಂದಾಗಿರುವ ಉಪನ್ಯಾಸಕರ ವಿರುದ್ಧ ರಾಜ್ಯ ಸರಕಾರ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ(ಎಸ್ಮಾ) ಜಾರಿಗೆ ಗಂಭೀರ ಚಿಂತನೆ ನಡೆಸಿದೆ.

ಲೋಕಸಭಾ ಚುನಾವಣೆಯ ಫಲಿತಾಂಶದ ಜತೆಗೆ ಪಿಯುಸಿ ಹಾಗೂ ಎಸೆಸ್ಸೆಲ್ಸಿ ಪರೀಕ್ಷೆಗಳ ಫಲಿತಾಂಶವನ್ನೂ ಬಿಡುಗಡೆ ಮಾಡಲು ಚಿಂತಿಸಲಾಗಿದೆ. ಹೀಗಾಗಿ, ಮಾ.22 ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿ ಅನಿರ್ದಿಷ್ಟ ಅವಧಿಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತೀರ್ಮಾನ ಕೈಗೊಂಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಉಪನ್ಯಾಸಕರ ಸಂಘದ ವತಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯನ್ನು ಭೇಟಿಯಾಗಿ ಈ ವರ್ಷವಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದ್ದರು. ಈ ಬಗ್ಗೆ ಸರಕಾರದ ಜೊತೆ ಮಾತುಕತೆ ನಡೆಸಿ ನಿಮ್ಮ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಕಾರ್ಯದರ್ಶಿಗಳು ಆಶ್ವಾಸನೆ ಕೊಟ್ಟಿದ್ದಾರೆ. ಆದರೂ, ಉಪನ್ಯಾಸಕರು ಪ್ರತಿಭಟನೆಗೆ ಕರೆ ನೀಡಿದ್ದು, ಮೌಲ್ಯಮಾಪನ ಮಾಡುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ, ಪಿಯು ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತಿಭಟನಾ ನಿರತ ಉಪನ್ಯಾಸಕರ ವಿರುದ್ಧ ಎಸ್ಮಾ ಜಾರಿಗೆ ಶಿಫಾರಸ್ಸು ಮಾಡಲಾಗಿದೆ ಎನ್ನಲಾಗಿದೆ. ಒಂದು ವೇಳೆ ಎಸ್ಮಾ ಜಾರಿ ಮಾಡಿದರೆ ಸೇವೆಯಿಂದ ಅಮಾನತು ಮಾಡುವುದು ಇಲ್ಲವೇ ಸರಕಾರದ ಸೌಲಭ್ಯಗಳನ್ನು ತಡೆಹಿಡಿಯಲು ಕಾನೂನಿನಲ್ಲಿ ಅವಕಾಶವಿದೆ. ಸರಕಾರಿ, ಖಾಸಗಿ ಸೇರಿದಂತೆ ಯಾವುದೇ ನೌಕರರು ಸಾರ್ವಜನಿಕ ಸೇವೆಗಳಿಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸುವುದು ಇಲ್ಲವೇ ಬಹಿಷ್ಕಾರ ಮಾಡುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ, ಇದೀಗ ಉಪನ್ಯಾಸಕರ ನಡೆ ನಿಗೂಢವಾಗಿದ್ದು, ಮಾ.21 ರಂದೇ ಅಂತಿಮವಾಗಲಿದೆ.

ಗಂಭೀರವಾಗಿ ಪರಿಗಣಿಸಿದ ಸರಕಾರ: ಪ್ರತಿ ವರ್ಷ ಮೌಲ್ಯಮಾಪನದ ಸಂದರ್ಭದಲ್ಲಿ ಉಪನ್ಯಾಸಕರು ಬೇಡಿಕೆಗಳನ್ನು ಮುಂದಿಟ್ಟು ಮೌಲ್ಯಮಾಪನ ಬಹಿಷ್ಕರಿಸುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿತ್ತು. ಫಲಿತಾಂಶ ತಡವಾಗಿ ಪ್ರಕಟವಾದರೆ ಸಿಇಟಿ ಪರೀಕ್ಷೆ ವಿಳಂಬವಾಗುತ್ತದೆ. ಅಲ್ಲದೆ ಸೀಟು ಹಂಚಿಕೆ ಪ್ರಕ್ರಿಯೆ ಇನ್ನಷ್ಟು ತಡವಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿದ್ದರು.

ಆದುದರಿಂದಾಗಿ, ಈ ಬಾರಿ ಉಪನ್ಯಾಸಕರ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಮೌಲ್ಯಮಾಪನ ಬಹಿಷ್ಕರಿಸಿದರೆ ಅಂಥವರ ವಿರುದ್ಧ ಎಸ್ಮಾ ಇಲ್ಲವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಚಿಂತನೆ ನಡೆಸಿದ್ದು, ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

 ಬೇಡಿಕೆಗಳೇನು:

* ಪಿಎಚ್‌ಡಿ, ಎಂಫಿಲ್ ಮಾಡಿರುವ ಪದವಿಪೂರ್ವ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಮುಂಭಡ್ತಿ ನೀಡಬೇಕು.

* ಪಿಯುಸಿ ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರ ನಡುವೆ ಇರುವ ವೇತನ ತಾರತಮ್ಯವನ್ನು ಸರಿಪಡಿಸಬೇಕು.

* ಬೇಸಿಗೆ ರಜೆ ರದ್ದುಪಡಿಸಿ ಶೈಕ್ಷಣಿಕ ಅವಧಿ ಮುನ್ನವೇ ಕಾಲೇಜುಗಳನ್ನು ಪ್ರಾರಂಭಿಸಬೇಕೆಂಬ ಪ್ರಸ್ತಾವವನ್ನು ಕೈ ಬಿಡಬೇಕು ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)